ಬೂದಿ ಮುಚ್ಚಿದ ಕೆಂಡ ಓಡೀಲು- ಭಕ್ತರು ಕಂಗಾಲು!- ಹೊಸ-ಹಿಂದಿನ ವ್ಯವಸ್ಥಾಪನಾ ಸಮಿತಿ ನಡುವಿನ ಕದನದಿಟ್ಟಂ ನಿರ್ಣಯದ ಬಗ್ಗೆ ಜೋರಾದ ವಾದ/ಪ್ರತಿವಾದ

0

ಕಳೆದ ವರ್ಷದ ಬ್ರಹ್ಮ ಕಲಶೋತ್ಸವದ ಬಳಿಕ ನಳನಳಿಸುತ್ತಿರುವ ತಾಲೂಕಿನ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯುತ್ತಿದ್ದರೂ, ಇಲ್ಲಿನ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದೆ.
ಅರ್ಚಕರ ನೇಮಕಾತಿ ವಿಚಾರ, ಧಾರ್ಮಿಕ ವಿಧಿ-ವಿಧಾನಗಳು ಸೇರಿ ಹಲವು ವಿಷಯಗಳಲ್ಲಿ ಹೊಸ ಮತ್ತು ಹಿಂದಿನ ವ್ಯವಸ್ಥಾಪನಾ ಸಮಿತಿ ನಡುವಿನ ಕದನ-ಕಾಳಗ ತಾರಕಕ್ಕೇರುವ ಲಕ್ಷಣಗಳಿದ್ದು, ಜಾತ್ರೆ ನಂತರದ ಸನ್ನಿವೇಶವನ್ನು ತಹಶೀಲ್ದಾರ್ ಮತ್ತು ಇತರೆ ಆಡಳಿತಾಧಿಕಾರಿಗಳು ಹೇಗೆ ನಿರ್ವಹಿಸಲಿದ್ದಾರೆ ಎನ್ನುವುದು ಕುತೂಹಲ ಕೆರಳಿಸಿದೆ.
ಹಾಲಿ-ಹಿಂದಿನ ಸಮಿತಿಗಳ ಸಂಘರ್ಷ, ಗೊಂದಲ, ಆರೋಪ ಪ್ರತ್ಯಾರೋಪಗಳು ಭಕ್ತರಲ್ಲಿ ಅತೀವ ಬೇಸರ ತಂದಿದ್ದು, ವಾರ್ಷಿಕ ಜಾತ್ರಾ ಮಹೋತ್ಸವದಲ್ಲಿ ಸಂಭ್ರಮ ಕಾಣುತ್ತಿಲ್ಲ. ನೂರಾರು ಭಕ್ತರು ದೇಗುಲದಿಂದ ದೂರ ಉಳಿದಿದ್ದಾರೆ. ಪ್ರತಿ ವರ್ಷವೂ ಜಾತ್ರೆ ಭಾರೀ ಸಂಭ್ರಮದಿಂದ ಕಳೆ ಕಟ್ಟಿರುತ್ತಿತ್ತು. ಈ ಬಾರಿ ಅತೃಪ್ತಿ, ಅಸಮಾಧಾನ, ಆಕ್ರೋಶದ ಕರಿನೆರಳಲ್ಲಿ ಜಾತ್ರೆ ನಡೆಯುತ್ತಿದೆ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ನೊಂದ ಭಕ್ತರೊಬ್ಬರು ಸುದ್ದಿ ಬಿಡುಗಡೆ ಜತೆಗೆ ಬೇಸರ ಹಂಚಿಕೊಂಡಿದ್ದಾರೆ.
ಪಡಂಗಡಿ, ಸೋಣಂದೂರು, ಕುವೆಟ್ಟು, ಓಡಿಲ್ನಾಳ ಗ್ರಾಮಗಳ ಒಟ್ಟು ೨೨೭೨ ಮನೆಗಳು ಓಡೀಲು ದೇವಸ್ಥಾನದ ವ್ಯಾಪ್ತಿಯಲ್ಲಿವೆ. ಈ ಸಲದ ಜಾತ್ರೆಯಲ್ಲಿ ಭಕ್ತರ ಸಂಖ್ಯೆಯಲ್ಲಿ ಗಣನೀಯ ಕುಸಿತವಾಗಿದೆ ಎಂದು ಆಸ್ತಿಕ ವರ್ಗ ಮಾತನಾಡಿಕೊಳ್ಳುತ್ತಿದೆ.
ಹಿಂದಿನ ವ್ಯವಸ್ಥಾಪನಾ ಸಮಿತಿ ಪ್ರತಿ ಸೋಮವಾರದಂದು ದೇಗುಲದಲ್ಲಿ ಭಜನೆ, ರಂಗಪೂಜೆ ನಡೆಸಿ, ನಂತರ ಭಕ್ತರಿಗೆ ಭೋಜನ ವ್ಯವಸ್ಥೆಯನ್ನೂ ಮಾಡುತ್ತಾ ಬಂದಿತ್ತು. ಆದರೆ, ಹೊಸ ಸಮಿತಿ ರಂಗಪೂಜೆ ಬಳಿಕ ಉಚಿತ ಭೋಜನಕ್ಕೆ ಕಡಿವಾಣ ಹಾಕಿದ್ದು, ಭಕ್ತರ ಆಕ್ರೋಶ ಹೆಚ್ಚಳಕ್ಕೆ ಕಾರಣವಾಗಿದೆ. ಹಿಂದಿನ ವ್ಯವಸ್ಥಾಪನಾ ಸಮಿತಿಯವರು ಈಗಿನ ಸಮಿತಿ ಅಧ್ಯಕ್ಷ ದಿನೇಶ್ ಮೂಲ್ಯರನ್ನು ಈ ವಿಷಯದಲ್ಲಿ ಪ್ರಶ್ನಿಸಿದ್ದು, ರಂಗಪೂಜೆ ಬಳಿಕ ಭಕ್ತರಿಗೆ ಭೋಜನ ನೀಡಲೇಬೇಕು ಎಂದು ಪಟ್ಟುಹಿಡಿದಿದೆ. ಆದರೆ, ‘ಸಿ’ ಗ್ರೇಡ್ ದೇವಸ್ಥಾನದಲ್ಲಿ ಬಂದವರಿಗೆಲ್ಲಾ ಭೋಜನ ವ್ಯವಸ್ಥೆ ಮಾಡಿದರೆ, ಹಣ ಎಲ್ಲಿಂದ ತರುವುದು ಎನ್ನುವುದು ಹೊಸ ಸಮಿತಿಯ ಪ್ರಶ್ನೆ. ಭೋಜನ ಬೇಕೆಂದಿದ್ದರೆ, ರಂಗಪೂಜೆ ಮಾಡುವವರೇ ತಿಳಿಸಿ, ಅದಕ್ಕೆ ಹಣ ಪಾವತಿಸಬೇಕು ಎಂದು ಹೊಸ ಸಮಿತಿ ವಾದಿಸಿದೆ. ಮೇಲಾಗಿ, ಬ್ರಹ್ಮ ಕಲಶೋತ್ಸವದ ಪೂರ್ವದಲ್ಲಿ ರಂಗ ಪೂಜೆ ಬಳಿಕ ಭೋಜನ ವ್ಯವಸ್ಥೆ ಇರಬೇಕು ಎಂಬ ಲಿಖಿತ ನಿಯಮ ಇರಲಿಲ್ಲ ಎಂದು ಹೊಸ ಸಮಿತಿ ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ.
ಇದು ಹಿಂದಿನ-ಈಗಿನ ಸಮಿತಿ ಸದಸ್ಯರು, ಬೆಂಬಲಿಗರ ನಡುವಿನ ವಾಕ್ ಸಂಘರ್ಷಕ್ಕೆ ಕಾರಣವಾಗಿ, ಈ ಬಗ್ಗೆ ಚರ್ಚಿಸಲು ಕಳೆದ ಬುಧವಾರಕ್ಕೆ (ಜ.೨೯ಕ್ಕೆ) ಸಭೆ ನಡೆಸಲು ತೀರ್ಮಾನವಾಗಿತ್ತು. ಆದರೆ, ಸಭೆ ಕರೆದ ಅಧ್ಯಕ್ಷರು ಹಾಗೂ ಸಮಿತಿ ಸದಸ್ಯರೇ ಗೈರಾಗಿದ್ದು ಭಕ್ತರ ಆಕ್ರೋಶ ಹೆಚ್ಚಿಸಿದ್ದರಿಂದ, ಪರಿಸ್ಥಿತಿ ತಿಳಿಗೊಳಿಸಲು ತಹಶೀಲ್ದಾರ್ ಪೃಥ್ವಿ ಸಾನಿಕಂ ಮಧ್ಯಪ್ರವೇಶ ಮಾಡಿ, ಜಾತ್ರೆ ಸಂಘರ್ಷವಿಲ್ಲದೆ ನಡೆಯುವಂತೆ ನೋಡಿಕೊಂಡಿದ್ದಾರೆ.
ನಮಗೆ ಜೀವ ಬೆದರಿಕೆ ಇದೆ. ಸಭೆಗೆ ತೆರಳಿದ್ದರೆ, ನಮ್ಮ ಮೇಲೆ ಹಲ್ಲೆ, ದಾಳಿಯಾಗುವ ಸಾಧ್ಯತೆಗಳಿದ್ದವು. ಹೀಗಾಗಿ, ಪೊಲೀಸರಿಗೆ ತಿಳಿಸಿ ರಕ್ಷಣೆ ಪಡೆದುಕೊಂಡೆವು ಎಂದು ಸಮಿತಿ ಅಧ್ಯಕ್ಷ ದಿನೇಶ್ ಮೂಲ್ಯ ಕೊಂಡೆಮಾರು ಪತ್ರಿಕೆಗೆ ತಿಳಿಸಿದ್ದಾರೆ.
“ಓಡೀಲು ದೇಗುಲದಲ್ಲಿ ರಘುರಾಮ್ ಭಟ್ ಪ್ರಧಾನ ಅರ್ಚಕರಾಗಿದ್ದು, ಅವರ ಪುತ್ರ ರಾಘವೇಂದ್ರ ಭಟ್‌ರನ್ನು ಯಾವುದೇ ಕಾರಣಕ್ಕಾಗಿ ಪ್ರಧಾನ ಅರ್ಚಕರನ್ನಾಗಿ ನೇಮಕ ಮಾಡಬಾರದು. ಒಂದುವೇಳೆ ಅವರು ಗರ್ಭಗೃಹ ಪ್ರವೇಶಿಸಿ
ಪೂಜೆ ಮಾಡಲು ಮುಂದಾದರೆ, ನಾವೂ ಗರ್ಭಗುಡಿ ಪ್ರವೇಶಿಸಿ ದೇವರನ್ನು ಮುಟ್ಟಿ ಪೂಜೆ ಮಾಡಲಿದ್ದೇವೆ” ಎಂದು ಹಿಂದಿನ ವ್ಯವಸ್ಥಾಪನಾ ಸಮಿತಿ ಸದಸ್ಯರು ಎಚ್ಚರಿಕೆ ನೀಡಿದ್ದಾರೆ.
“ರಾಘವೇಂದ್ರ ಭಟ್ಟರ ಬಗ್ಗೆ ಭಕ್ತರಲ್ಲೇ ಆಕ್ರೋಶ, ಅತೃಪ್ತಿಯಿದೆ. ದೇಗುಲದಲ್ಲಿ ಸಹ ಅರ್ಚಕರಾಗಿರುವ ವಿಷ್ಣು ಭಟ್‌ರನ್ನು ಪ್ರಧಾನ ಅರ್ಚಕರನ್ನಾಗಿ ಮಾಡಲು ತಕರಾರಿಲ್ಲ. ಹಿಂದೊಮ್ಮೆ ತಹಶೀಲ್ದಾರ್ ಅವರು ಅನುವಂಶಿಕ ಅರ್ಚಕರ ನೇಮಕದ ಬಗ್ಗೆ ಆದೇಶ ಮಾಡಿದ್ದರು. ಆದರೆ, ನಂತರದಲ್ಲಿ ನಾವು ಸಲ್ಲಿಸಿದ ಆಕ್ಷೇಪಣೆಗಳನ್ನು ಪರಿಗಣಿಸಿ, ಆದೇಶಕ್ಕೆ ತಡೆ ಹಿಡಿದು, ೨೦೨೪ರ ಆಗಸ್ಟ್ ೧೪ರಂದು ಆದೇಶ ರದ್ದುಗೊಳಿಸಿದ್ದರು” ಎಂದು ಹಿಂದಿನ ವ್ಯವಸ್ಥಾಪನಾ ಸಮಿತಿ ವಿವರಿಸಿದೆ.
“ರಾಘವೇಂದ್ರ ಭಟ್ಟರು ಮುಂದಿನ ೧೨ ವರ್ಷಗಳ ಕಾಲ ಗರ್ಭಗುಡಿ ಪ್ರವೇಶಿಸಿ ಪೂಜೆ ಮಾಡಬಾರದು ಎನ್ನುವುದನ್ನು “ದಿಟ್ಟಂ”ನಲ್ಲಿ ತಂತ್ರಿಗಳಾದ ಉದಯ ಪಾಂಗಣ್ಣಾಯರ ಉಪಸ್ಥಿತಿಯಲ್ಲಿ ಹಿಂದಿನ ಸಮಿತಿ ತೀರ್ಮಾನ ಮಾಡಿತ್ತು. ಇದನ್ನು, ಆರಂಭದಲ್ಲಿ ಒಪ್ಪದಿದ್ದರೂ, ನಂತರದಲ್ಲಿ ರಾಘವೇಂದ್ರ ಭಟ್ಟರು ಒಪ್ಪಿಕೊಂಡಿದ್ದರು. ಆದರೆ, ಮತ್ತೆ ಪ್ರಧಾನ ಅರ್ಚಕರಾಗುವ ಪ್ರಯತ್ನವನ್ನು ಅವರು ತೆರೆಮರೆಯಲ್ಲೇ ಮಾಡುತ್ತಿದ್ದಾರೆ. ದಿಟ್ಟಂ ನಿರ್ಣಯದ ವಿರುದ್ಧ ಹೋದರೆ ನಾವು ಸುಮ್ಮನಿರಲು ಸಾಧ್ಯವೇ ಇಲ್ಲ” ಎಂದು ಹಿಂದಿನ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ಉಪ್ಪಡ್ಕ ಸುದ್ದಿ ಬಿಡುಗಡೆಗೆ ಪ್ರತಿಕ್ರಿಯೆ ನೀಡಿದ್ದಾರೆ.
“ದೇಗುಲದ ಪ್ರಧಾನ ಅರ್ಚಕರನ್ನಾಗಿ ಯಾರನ್ನು ನೇಮಕ ಮಾಡಬೇಕು ಎನ್ನುವುದನ್ನು ಹೊಸ ವ್ಯವಸ್ಥಾಪನಾ ಸಮಿತಿ ತೀರ್ಮಾನ ಮಾಡುತ್ತದೆ ಮತ್ತು ಈ ವಿಷಯದಲ್ಲಿ ನಮಗೂ ವಿವೇಚನಾಧಿಕಾರವಿದೆ. ಅಷ್ಟಕ್ಕೂ ರಾಘವೇಂದ್ರ ಭಟ್‌ರನ್ನು ಅರ್ಚಕರನ್ನಾಗಿ ಮೊದಲು ನೇಮಕ ಮಾಡಿದ್ದು ಹಿಂದಿನ ಸಮಿತಿಯೇ. ಇದಕ್ಕೆ ನಮ್ಮಲ್ಲಿ ಪೂರಕ ದಾಖಲೆಗಳಿವೆ. ಅದನ್ನು ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡಲಿದ್ದೇವೆ. ಈಗ ರಾಘವೇಂದ್ರ ಭಟ್ಟರನ್ನು ನೇಮಕ ಮಾಡಬೇಡಿ ಎಂದು ನಮಗೇಕೆ ಹೇಳುತ್ತಿದ್ದಾರೆ” ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದಿನೇಶ್ ಮೂಲ್ಯ ಮತ್ತು ಸಮಿತಿ ಸದಸ್ಯ ಹರಿಪ್ರಸಾದ್ ಇರ್ವತ್ರಾಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಜಾತ್ರಾ ಮಹೋತ್ಸವ ನಡೆಯುತ್ತಿರುವುದರಿಂದ ಇದು ಕ್ರಿಯೆ-ಪ್ರತಿಕ್ರಿಯೆ ನೀಡುವ ಸಮಯವಲ್ಲ. ಹೀಗಾಗಿ, ಜಾತ್ರೆ ಮುಗಿದ ನಂತರ ನಾವು ಎಲ್ಲಾ ದಾಖಲೆಗಳನ್ನು ಜನರ ಮುಂದಿಡಲಿದ್ದೇವೆ ಎಂಬ ನಿಲುವನ್ನು ಹೊಸ ಸಮಿತಿ ತೆಗೆದುಕೊಂಡಿದೆ.

ಸಂಘರ್ಷಕ್ಕೆ ಕಾರಣವೇನು:

*ಸೋಮವಾರದ ಭಜನೆ, ರಂಗಪೂಜೆ ಬಳಿಕ ಭೋಜನ ವ್ಯವಸ್ಥೆಗೆ ಕಡಿವಾಣ
*ಅರ್ಚಕ ರಾಘವೇಂದ್ರ ಭಟ್ಟರನ್ನು ಪ್ರಧಾನ ಅರ್ಚಕರನ್ನಾಗಿ ನೇಮಕ ಮಾಡಲೇಬಾರದು ಎಂಬ ವಾದ
*ಹೊಸ ಸಮಿತಿ ರಾಘವೇಂದ್ರ ಭಟ್ಟರನ್ನು ಬೆಂಬಲಿಸುತ್ತಿದೆ ಎಂಬ ಆಕ್ರೋಶ
*ಹೊಸ ಸಮಿತಿ ದಿಟ್ಟಂ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂಬ ಸಂಶಯ
*ದಿಟ್ಟಂಗೆ ಜಿಲ್ಲಾಧಿಕಾರಿ ಅನುಮೋದನೆ ಇರಲಿಲ್ಲ ಎಂದು ಹೊಸ ಸಮಿತಿ ವಾದ
*ವ್ಯವಸ್ಥಾಪನಾ ಸಮಿತಿ ಭಕ್ತವರ್ಗದ ಅಭಿಪ್ರಾಯ ಕೇಳದೆಯೇ ಜಾತ್ರಾ ಸಮಿತಿ ರಚನೆ ಮಾಡಿತು ಎಂಬ ಆರೋಪ

“ಸೋಮವಾರದ ರಂಗಪೂಜೆ ಬಳಿಕ ಭಕ್ತರಿಗೆ ಭೋಜನ ವ್ಯವಸ್ಥೆ ಮಾಡುವುದಾಗಿ ಸಮಿತಿ ಅಧ್ಯಕ್ಷ ದಿನೇಶ್ ಮೂಲ್ಯ ಕೊಡಿ ಮರದ ಅಡಿಯಲ್ಲಿ ನಿಂತು ಮಾತು ಕೊಟ್ಟಿದ್ದರು. ಅಲ್ಲದೆ ನಮ್ಮಿಂದ ತಪ್ಪಾಗಿದೆ ಎಂದೂ ಒಪ್ಪಿಕೊಂಡಿದ್ದರು. ಆದರೆ, ಮಾತು ಉಳಿಸಿಕೊಳ್ಳಲಿಲ್ಲ” -ಪ್ರಭಾಕರ ಶೆಟ್ಟಿ ಉಪ್ಪಡ್ಕ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ.

“ರಂಗಪೂಜೆ ದಿನ ಹತ್ತಾರು ಮಂದಿ ಸೇರಿ ನಮ್ಮಲ್ಲಿ ಭಯ ಮೂಡಿಸಿದ್ದರು, ಬೆದರಿಕೆ ಹಾಕಿದ್ದರು. ಬಂದ ಭಕ್ತರಿಗೆಲ್ಲಾ ಊಟ ನೀಡಲು ಆರ್ಥಿಕ ಸಮಸ್ಯೆಯಿದೆ ಎಂದು ತಿಳಿಸಲಾಗಿತ್ತು. ಕೊನೆಗೆ, ಒತ್ತಾಯಪೂರ್ವಕವಾಗಿ ನಮ್ಮಿಂದ ಒಪ್ಪಿಗೆ ಪಡೆದುಕೊಳ್ಳಲಾಯಿತು. ಹಿಂದಿನ ಸಮಿತಿಯರು, ಬೆಂಬಲಿಗರು ಏನೆಲ್ಲಾ ಮಾಡಿದ್ದಾರೆ ಎನ್ನುವುದಕ್ಕೆ ನಮ್ಮ ಬಳಿ ಎಲ್ಲಾ ದಾಖಲೆಗಳಿವೆ”
-ದಿನೇಶ್ ಮೂಲ್ಯ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ

“ಬ್ರಹ್ಮಕಲಶೋತ್ಸವ ನಂತರದಲ್ಲಿ ತಂತ್ರಿಗಳ ಸಮ್ಮುಖದಲ್ಲಿ ತೆಗೆದುಕೊಂಡ ನಿರ್ಣಯ ಅಂತಿಮ. ಇದರಲ್ಲಿ ಯಾವುದೇ ಗೊಂದಲ ಇಲ್ಲ. ೪ ಗ್ರಾಮಸ್ಥರ ಅಪೇಕ್ಷೆಯಂತೆ ತೀರ್ಮಾನಕ್ಕೆ ಬಂದಿzವೆ. ಮುಂದಿನ ೧೨ ವರ್ಷಗಳ ಕಾಲ ತಂತ್ರಿಯವರ ‘ದಿಟ್ಟಂ’ ನಿರ್ಣಯದಂತೆ ಎಲ್ಲವೂ ಮುಂದುವರಿಯಬೇಕು” ಶಶಿಧರ್ ಶೆಟ್ಟಿ ಬರೋಡಾ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ

ಸಮಿತಿ ಕಾರ್ಯಸೂಚಿಯಿಂತೆ ವೃತ್ತಿ ನಿಭಾಯಿಸಿದ್ದೇನೆ : ರಾಘವೇಂದ್ರ ಭಟ್

ಹಿಂದಿನ ವ್ಯವಸ್ಥಾಪನಾ ಸಮಿತಿಯಲ್ಲಿ ನನ್ನ ಬಗ್ಗೆ ಯಾವ ರೀತಿಯ ಗೊಂದಲವಿದೆ ಎಂಬ ಬಗ್ಗೆ ಅವರೇನೂ ನನಗೆ ನೇರವಾಗಿ ಹೇಳಿಲ್ಲ. ನಾನು ದೇಗುಲದಲ್ಲಿ ಕೆಲಸ ಮಾಡುವುದು ಬೇಡ ಎಂದು ಆಡಳಿತಾಧಿಕಾರಿ ಕೂಡ ಸೂಚಿಸಿಲ್ಲ. ದೇಗುಲದ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ (ಪದನಿಮಿತ್ತ) ಅಧಿಕೃತವಾಗಿ ನೇಮಕ ಮಾಡಿದ್ದಾರೆ ಎಂದು ಅರ್ಚಕ ರಾಘವೇಂದ್ರ ಭಟ್ ಸುದ್ದಿ ಬಿಡುಗಡೆಗೆ ತಿಳಿಸಿದ್ದಾರೆ.
ಕಳೆದ ೨೨ ವರ್ಷಗಳಿಂದ ನಾನು ಓಡೀಲು ದೇಗುಲದಲ್ಲಿ ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸಿಕೊಂಡು ಬರುತ್ತಿದ್ದೇನೆ. ಅದೂ ಹಿಂದಿನ ಸಮಿತಿಯವರ ಸಮಿತಿಯವರ ನಿರ್ದೇಶನದ ಕಾರ್ಯಸೂಚಿಯಂತೆ ಅರ್ಚಕ ವೃತ್ತಿ ನಿಭಾಯಿಸಿದ್ದೇನೆ. ಬ್ರ್ರಹ್ಮ ಕಲಶೋತ್ಸವದಲ್ಲೂ ಸಕ್ರಿಯರಾಗಿ ಕೆಲಸ ಮಾಡಿದ್ದೆ. ಕೊರೊನಾ ಸಮಯದಲ್ಲೂ ಆಡಳಿತಾಧಿಕಾರಿ ನಿರ್ದೇಶನದ ಮೇರೆಗೆ ಪ್ರಾಮಾಣಿಕವಾಗಿ, ಶ್ರದ್ಧಾಭಕ್ತಿಯಿಂದ ಜಾತ್ರೆ ನಿಭಾಯಿಸಿದ್ದೆ ಎಂದು ಭಟ್ ವಿವರಿಸಿದ್ದಾರೆ.
ನಾನು ಪರಿಪೂರ್ಣ ಎಂದು ಹೇಳಲಾರೆ. ಆದರೆ, ಧಾರ್ಮಿಕ ದತ್ತಿ ಕಾಯ್ದೆ ಪ್ರಕಾರ ಇಲ್ಲಿ ಅರ್ಚಕ ವೃತ್ತಿ ನಿರ್ವಹಿಸಲು ಅಗತ್ಯ ಅರ್ಹತೆಗಳು ನನ್ನಲ್ಲಿವೆ. ಪೂಜೆಗೆ ಅದರದ್ದೇ ಆದ ವಿಧಿ-ವಿಧಾನಗಳಿರುತ್ತವೆ. ಎಲ್ಲರಿಗೂ ತೃಪ್ತಿಪಡಿಸುವಂತಹ ವ್ಯವಸ್ಥೆ ಮಾಡುವುದು ಹೇಗೆ?
ಗಂಧ ದೂರದಿಂದ ನೀಡಿದರು ಎಂದ ಮಾತ್ರಕ್ಕೆ ಗಂಧವನ್ನು ಎಸೆಯುವುದು ಎಂದಲ್ಲ. ಎಷ್ಟೋ ದೇವಸ್ಥಾನಗಳಲ್ಲಿ ಈ ರೀತಿಯ ವ್ಯವಸ್ಥೆಗಳಿವೆ. ನನ್ನಿಂದಾಗುವಷ್ಟು ರೀತಿಯಲ್ಲಿ ತಾರತಮ್ಯವಿಲ್ಲದೆ ಇಲ್ಲಿನ ಪರಂಪರೆ ಉಳಿಸುವ ಯತ್ನ ಮಾಡಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದಾರೆ.
ದಿಟ್ಟಂ ನಿರ್ಣಯಗಳ ಬಗ್ಗೆ ಹೆಚ್ಚೇನೂ ಹೇಳಲಾರೆ. ದಿಟ್ಟಂ ಎಂದರೆ ದೇವಸ್ಥಾನದ ಮುಂದಿನ ಖರ್ಚುವೆಚ್ಚಗಳ, ಧಾರ್ಮಿಕ ಕ್ರಿಯೆಗಳ ಬಗ್ಗೆ ನಿರ್ಣಯ ಮಾಡುವ ಪ್ರಕ್ರಿಯೆ. ಆಗ ವ್ಯವಸ್ಥಾಪನಾ ಸಮಿತಿ, ತಂತ್ರಿಗಳು ಮತ್ತು ವ್ಯವಸ್ಥಾಪನಾ ಸಮಿತಿಯವರು ಇರುತ್ತಾರೆ. ಇಲ್ಲಿ ಆದ ನಿರ್ಣಯಗಳ ಬಗ್ಗೆ ಧಾರ್ಮಿಕ ದತ್ತಿ ಇಲಾಖೆ ಕಮಿಷನರ್ ಒಪ್ಪಿಗೆ ಇರಬೇಕಾಗುತ್ತದೆ. ಇದನ್ನು ಕ್ರಮಬದ್ಧವಾಗಿ ನಡೆಸಬೇಕಾಗುತ್ತದೆ. ನನ್ನ ತಂದೆ ಹತ್ತಾರು ವರ್ಷಗಳಿಂದ ಪ್ರಧಾನ ಅರ್ಚಕರಾಗಿದ್ದು, ಈಗ ವೃದ್ಧಾಪ್ಯದಲ್ಲಿರುವುದರಿಂದ ನನಗೆ ಜವಾಬ್ದಾರಿ ವಹಿಸಬೇಕು ಎಂದು ತಹಶೀಲ್ದಾರ್‌ಗೆ ಬ್ರಹ್ಮಕಲಶೋತ್ಸವ ನಂತರ ಮನವಿ ನೀಡಿದ್ದರು ಎಂದು ರಾಘವೇಂದ್ರ ಭಟ್ ಮಾಹಿತಿ ಹಂಚಿಕೊಂಡರು.
ಕಳೆದ ವರ್ಷ ಅಯೋಧ್ಯೆಗೆ ಹೋಗಿ ಬಂದ ನಂತರ ನನಗೆ ಶಸ್ತ್ರಚಿಕಿತ್ಸೆಯಾಗಿ ಕೆಲ ದಿನಗಳ ಕಾಲ ವಿಶ್ರಾಂತಿಯಲ್ಲಿದೆ. ಆಗ ದೇಗುಲದಲ್ಲಿ ಗೊಂದಲಗಳು ಸೃಷ್ಟಿಯಾದವು ಎಂದು ಕೇಳಲ್ಪಟ್ಟಿದ್ದೇನೆ. ನಾನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದೇನೆ ಎಂದರು.

“ದಿಟ್ಟಂ ನಮ್ಮ ನಂಬಿಕೆ. ಅರ್ಚಕರಾಗಿ ರಾಘವೇಂದ್ರ ಭಟ್ ಬೇಡ ಎಂಬ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಅವರಿಗೆ ಅರ್ಚಕರಾಗಿ ಪೂಜೆ ಮಾಡಬೇಕೆಂದಿದ್ದರೆ ದಿಟ್ಟಂ ನಡೆದ ಮಾರನೇ ದಿನವೇ ಅದನ್ನು ಮಾಡಬಹುದಿತ್ತು. ಆದರೆ, ಇದೀಗ ಹೊಸ ಸಮಿತಿ ಬಂದ ನಂತರ ಒತ್ತಡ ಹೇರುವ ಯತ್ನವೇಕೆ? ಇದು ನಮ್ಮೆಲ್ಲರಲ್ಲಿ ಅನುಮಾನ ಮೂಡಿಸುತ್ತಿದೆ”. ಚಿದಾನಂದ ಇಡ್ಯಾ, ೨೦೨೪ರ ಜಾತ್ರೋತ್ಸವ ಸಮಿತಿ ಅಧ್ಯಕ್ಷರು

LEAVE A REPLY

Please enter your comment!
Please enter your name here