ಕೊಕ್ಕಡ: ಬೆಳ್ತಂಗಡಿ ತಾಲೂಕು ಕೊಕ್ಕಡ ಗ್ರಾಮದ ಸೌತಡ್ಕ ದೇವಸ್ಥಾನದ ಸಮೀಪದ ಸ.ನಂ.215/1 ರಲ್ಲಿ ಸರಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಅಂಗಡಿ ಮಳಿಗೆ ನಿರ್ಮಾಣ ಮಾಡಿ ಲಾಭದಾಯಕವಾದ ವ್ಯಾಪಾರ ನಡೆಸುತ್ತಿರುವುದರಿಂದ ಬೆಳ್ತಂಗಡಿ ತಹಶೀಲ್ದಾರರಿಂದ ಅನಧಿಕೃತ ಅಂಗಡಿ ತೆರವಿಗೆ ನೋಟಿಸು ಜಾರಿ ಮಾಡಲಾಗಿದೆ.
ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನವು ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ಪ್ರವರ್ಗ ಎ ದೇವಸ್ಥಾನವಾಗಿದ್ದು, ಪ್ರತಿದಿನ ನೂರಾರು ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದು, ಸರಕಾರಿ ಜಮೀನನ್ನು ಅತಿಕ್ರಮಣ ಮಾಡಿ ಅನಧಿಕೃತವಾಗಿ ಅಂಗಡಿ ನಿರ್ಮಾಣ ಮಾಡಿರುವುದರಿಂದ ಬರುವ ಭಕ್ತಾದಿಗಳಿಗೆ ಮತ್ತು ಸಾರ್ವಜನಿಕರಿಗೆ, ಪಾರ್ಕಿಂಗ್ ವ್ಯವಸ್ಥೆಗೆ ವಾಹನ ಸಂಚಾರಕ್ಕೆ ಪಾದಾಚಾರಿಗಳಿಗೆ ತೊಂದರೆಯಾಗುತ್ತಿದೆ.
ಆದುದರಿಂದ ನೋಟಿಸ್ ತಲುಪಿದ 10 ದಿನಗಳ ಒಳಗೆ ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸಬೇಕು. ತೆರವುಗೊಳಿಸದೆ ಇದ್ದಲ್ಲಿ ಕಂದಾಯ ಕಾಯ್ದೆಯಂತೆ ಇಲಾಖಾ ವತಿಯಿಂದ ತೆರವುಗೊಳಿಸಲಾಗುವುದು.
ಇದರ ಸಂಪೂರ್ಣ ವೆಚ್ಚವನ್ನು ಸರ್ಕಾರಿ ಬಾಕಿ ಎಂದು ಪರಿಗಣಿಸಿ ನಿಮ್ಮಿಂದ ವಸೂಲು ಮಾಡಲಾಗುವುದು. ಅನಧಿಕೃತ ಒತ್ತುವರಿ ಮಾಡಿಕೊಂಡಿರುವುದರ ಕುರಿತಂತೆ ಕರ್ನಾಟಕ ಭೂಕಂದಾಯ ಕಾಯ್ದೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಳ್ಳಬಾರದೆನ್ನುವುದರ ಬಗ್ಗೆ ಹಾಜರಾಗಿ ಲಿಖಿತವಾಗಿ ಹೇಳಿಕೆ ನೀಡಬೇಕು.
ಇದಕ್ಕೆ ತಪ್ಪಿದಲ್ಲಿ ಸೂಕ್ತ ರೀತಿಯಲ್ಲಿ ಕಾನೂನು ಕ್ರಮವನ್ನು ಜರುಗಿಸಲಾಗುವುದು ಎಂದು ಲಿಖಿತ ನೋಟಿಸ್ ನಲ್ಲಿ ಉಲ್ಲೇಖಿಸಲಾಗಿದೆ.