ಪಜಿರಡ್ಕ ದೇವಸ್ಥಾನಕ್ಕೆ ಸಮರ್ಪಣೆಗೊಳ್ಳಲಿರುವ ನೂತನ ಪುಷ್ಪರಥ ಉಜಿರೆಯಿಂದ ಶೋಭಾಯಾತ್ರೆ

0

ಉಜಿರೆ: “ಮನುಷ್ಯರಲ್ಲಿರುವ ಉತ್ತಮ ಗುಣಗಳನ್ನು ಆಧರಿಸಿ ಮೋಕ್ಷ, ಸ್ವರ್ಗವನ್ನು ಕರುಣಿಸುವ ಶಕ್ತಿ ಶ್ರೀ ಸದಾಶಿವೇಶ್ವರ ದೇವರಿಗಿದೆ. ಲೌಕಿಕ ಜಗತ್ತಿನಲ್ಲಿ ರಥದ ಮೂಲಕ ಶೋಭಾಯಾತ್ರೆ ನಡೆಸುವುದರಿಂದ ಊರಿನ ಶ್ರೇಯೋಭಿವೃದ್ಧಿ ಉಂಟಾಗುತ್ತದೆ” ಎಂದು ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶ ಸದ್ಗುರು, ಪಂಚದಶನಾಂ ಜುನಾ ಆಖಾಡದ ಮಂಡಲೇಶ್ವರ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಅವರು ಫೆ. 3 ರಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ವಠಾರದಲ್ಲಿ ಕಲ್ಮಂಜ ಗ್ರಾಮದ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನಕ್ಕೆ ಸಮರ್ಪಣೆಗೊಳ್ಳಲಿರುವ ನೂತನ ಪುಷ್ಪರಥದ ಭವ್ಯ ಶೋಭಾಯಾತ್ರೆಯಲ್ಲಿ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಶೋಭಾಯಾತ್ರೆಗೆ ಚಾಲನೆ ನೀಡಿದ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಮಾತನಾಡಿ “ಶ್ರೀ ಜನಾರ್ದನ ಸ್ವಾಮಿ ಹಾಗೂ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನಗಳು ಸೀಮೆ ದೇವಸ್ಥಾನಗಳಾಗಿದ್ದು, ಪುಷ್ಪರಥ ಸಮರ್ಪಣೆ ಮೂಲಕ ಈ ಎರಡು ದೇವಸ್ಥಾನಗಳ ನೂರಾರು ವರ್ಷಗಳ ಸಂಬಂಧ ಮರು ಮನನ ಮಾಡಿಕೊಂಡ ಐತಿಹಾಸಿಕ ಕ್ಷಣ ಇದಾಗಿದೆ. ಸಮಾಜದಲ್ಲಿ ದೇವರ ಮೇಲಿನ ನಂಬಿಕೆಯಿಂದ ಸಮೃದ್ಧಿ ಉಂಟಾಗುತ್ತದೆ” ಎಂದರು.

ಪಜಿರಡ್ಕ ಸದಾಶಿವೇಶ್ವರ ದೇವಸ್ಥಾನದ ಆಡಳಿತಾಧಿಕಾರಿ ನಾಗಶಯನ ರಾವ್ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಕೆ. ಮೋಹನ್ ಕುಮಾರ್, ಪುಷ್ಪರಥ ದಾನಿಗಳಾದ ಸುಕನ್ಯಾ ಮತ್ತು ಡಿ. ಜಯರಾಮ ರಾವ್ ದಂಪತಿ, ರಥದ ಶಿಲ್ಪಿ ಸುಧಾಕರ ಡೋಂಗ್ರೆ ಬಜಗೋಳಿ,ಜಾತ್ರೋತ್ಸವ ಸಮಿತಿ ಅಧ್ಯಕ್ಷ ರವಿ ಕುಮಾರ್ ಭಟ್, ರತನ್ ಕುಮಾರ್ ಜೈನ್ ಹುಣಿಪಾಜೆ, ಬಾಲಚಂದ್ರ ರಾವ್ ಗುತ್ತು, ನೋಟರಿ ವಕೀಲ ಶಶಿಕಿರಣ್ ಜೈನ್, ಗೋಪಾಲಕೃಷ್ಣ ಗೌಡ, ನಿಡಿಗಲ್ ಶ್ರೀ ಸತ್ಯನಾರಾಯಣ ಭಜನಾ ಮಂಡಳಿ ಅಧ್ಯಕ್ಷ ಶಶಿಧರ ಎಂ., ಕೃಷ್ಣಪ್ಪ ಗುಡಿಗಾರ, ರವೀಂದ್ರ ಪೂಜಾರಿ, ತುಕಾರಾಂ ಸಾಲಿಯಾನ್ ಆರ್ಲ,ನವೀನ್ ಪ್ರಕಾಶ್, ಸಿ. ಜಿ. ಪ್ರಭಾಕರ ಕನ್ಯಾಡಿ, ಬಿ. ಶ್ರೀನಿವಾಸರಾವ್, ವೆಂಕಟರಮಣ ಹೆಬ್ಬಾರ್, ಪ್ರದೀಪ್ ಚಿಪ್ಲೂಣ್ಕರ್, ಕೃಷ್ಣಮೂರ್ತಿ ಹೆಬ್ಬಾರ್, ಅರವಿಂದ ಕಾರಂತ, ಕಲ್ಮಂಜ ಗ್ರಾ. ಪಂ. ಅಧ್ಯಕ್ಷೆ ವಿಮಲಾ, ಚೆನ್ನಪ್ಪ ಗೌಡ ಮತ್ತಿತರರು ಉಪಸ್ಥಿತರಿದ್ದರು.

ಉಜಿರೆಯಿಂದ ನೀರಚಿಲುಮೆ, ಕನ್ಯಾಡಿ ಮಾರ್ಗವಾಗಿ ಕ್ಷೇತ್ರಕ್ಕೆ ಪುಷ್ಪ ರಥಯಾತ್ರೆಯು ನಾನಾ ವೇಷಭೂಷಣ, ವಾದ್ಯವೃಂದ, ಭಜನೆ ತಂಡ ಹಾಗೂ ವಾಹನಗಳ ಮೆರವಣಿಗೆ ಮೂಲಕ ಸಾಗಿತು. ಬ್ರಹ್ಮಶ್ರೀ ನೀಲೇಶ್ವರ ಆಲಂಬಾಡಿ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ, ಪ್ರಧಾನ ಅರ್ಚಕ ರಾಜೇಶ್ ಹೊಳ್ಳ ಅವರ ಸಹಕಾರದಲ್ಲಿ ಸೋಮವಾರ ಆರಂಭವಾದ ಕ್ಷೇತ್ರದ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಗಣಹೋಮ, ತೋರಣ ಮುಹೂರ್ತ, ಗ್ರಾಮಸ್ಥರಿಂದ ಹೊರೆ ಕಾಣಿಕೆ ಸಮರ್ಪಣೆ, ಉಗ್ರಾಣ ಮುಹೂರ್ತ, ಶತರುದ್ರಾಭಿಷೇಕ, ವಾಸ್ತು ರಾಕ್ಷೋಘ್ನ ಹೋಮ ಹಾಗೂ ಇನ್ನಿತರ ಕಾರ್ಯಕ್ರಮಗಳು ನಡೆದವು. ಫೆ. 4 ರಂದು ನೂತನ ಪುಷ್ಪರಥ ಸಮರ್ಪಣೆ ನಡೆಯಲಿದೆ.

LEAVE A REPLY

Please enter your comment!
Please enter your name here