ಮೈಸೂರು ನ್ಯಾಯಾಲಯದಲ್ಲಿ ಸ್ವಚ್ಛತೆ, ಶಿಸ್ತು, ಸಮಯಪ್ರಜ್ಞೆಗೆ ಆದ್ಯತೆ ನೀಡುವ ಜಡ್ಜ್ – ಶ್ಲಾಘನೆಗೆ ಪಾತ್ರರಾಗುತ್ತಿರುವ ಪಡಂಗಡಿಯ ಉಷಾರಾಣಿ

0

ಬೆಳ್ತಂಗಡಿ: ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸುತ್ತಿರುವ ಬೆಳ್ತಂಗಡಿ ಮೂಲದ ಉಷಾರಾಣಿ ಅವರು ನ್ಯಾಯಾಲಯಗಳ ಆವರಣದಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಸ್ವಚ್ಛತೆ, ಶಿಸ್ತು ಹಾಗೂ ಸಮಯಪ್ರಜ್ಞೆಗೆ ಆದ್ಯತೆ ನೀಡಿ ಶ್ಲಾಘನೆಗೆ ಪಾತ್ರರಾಗಿದ್ದಾರೆ. ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾಗಿ ಉಷಾರಾಣಿ ಅವರು ಬಂದ ಬಳಿಕ ನ್ಯಾಯಾಲಯಗಳಲ್ಲಿ ಸಕಾರಾತ್ಮಕ ಬದಲಾವಣೆಗಳು ಗೋಚರಿಸುತ್ತಿದ್ದು ಸುಧಾರಣೆಯ ಗಾಳಿ ಬೀಸುತ್ತಿದೆ. ಇದಕ್ಕೆ ಕಾರಣ ಅವರು ಸ್ವಚ್ಛತೆ, ಶಿಸ್ತು ಹಾಗೂ ಸಮಯಪ್ರಜ್ಞೆಗೆ ಹೆಚ್ಚಿನ ಆದ್ಯತೆ ಕೊಡುತ್ತಿರುವುದಾಗಿದೆ ಎಂದು ಅಲ್ಲಿನ ವಕೀಲರು, ನ್ಯಾಯಾಲಯದ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಉಷಾರಾಣಿ ಅವರು ಜ.15ರಂದು ಮೈಸೂರಿನಲ್ಲಿ ಅಧಿಕಾರ ಸ್ವೀಕರಿಸಿದ್ದು ಅಂದಿನಿಂದಲೇ ನ್ಯಾಯಾಲಯದ ಸಿಬ್ಬಂದಿಯಲ್ಲಿ ಮಿಂಚಿನ ಸಂಚಾರ ಉಂಟಾಗಿದೆ. ಬೆಳಿಗ್ಗೆ 10 ಗಂಟೆಯೊಳಗೆ ಆಯಾ ನ್ಯಾಯಾಲಯಗಳಲ್ಲಿ ಕೆಲಸಕ್ಕೆ ಹಾಜರಾಗುತ್ತಿದ್ದಾರೆ. ನ್ಯಾಯಾಲಯದ ಆವರಣವನ್ನು ನಿತ್ಯವೂ ಸ್ವಚ್ಛಗೊಳಿಸಲಾಗುತ್ತಿದೆ.

ಇದರಿಂದಾಗಿ ಸ್ವಚ್ಛಮೇವ ಜಯತೇ ಎಂಬಂತಾಗಿದೆ. ಬೆಳ್ತಂಗಡಿಯಲ್ಲಿ 60 ವರ್ಷಕ್ಕಿಂತಲೂ ಅಧಿಕ ಸಮಯ ನ್ಯಾಯವಾದಿಯಾಗಿ ಕಾರ್ಯ ನಿರ್ವಹಿಸಿ ಹೆಸರುವಾಸಿಯಾಗಿದ್ದ ಪಡಂಗಡಿ ಗ್ರಾಮದ ಗಡಿಬೆಟ್ಟು ನಿವಾಸಿ ನೇಮಿರಾಜ್ ಶೆಟ್ಟಿ ಅವರ ಪುತ್ರಿಯಾಗಿರುವ ಉಷಾರಾಣಿ ಅವರು ಮಂಗಳೂರು ಎಸ್‌ಡಿಎಂ ಕಾನೂನು ಕಾಲೇಜ್‌ನಲ್ಲಿ ಕಾನೂನು ಪದವಿ ಪಡೆದ ಬಳಿಕ ಬೆಳ್ತಂಗಡಿ ನ್ಯಾಯಾಲಯದಲ್ಲಿ ನ್ಯಾಯವಾದಿಯಾಗಿ ಕಾರ್ಯ ನಿರ್ವಹಿಸಿದ್ದರು. ನಂತರ ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದರು. ಲೋಕಾಯುಕ್ತ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿದ್ದ ವೇಳೆ ಭ್ರಷ್ಠರಿಗೆ ಬಿಸಿ ಮುಟ್ಟಿಸಿದ್ದರು.
ಉಷಾರಾಣಿ ಅವರು ಮೈಸೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ೨೦೧೬ರಿಂದ ೨೦೧೮ರವರೆಗೆ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸಿದ್ದರು. ಇವರ ಪತಿ ಶಶಿಕಾಂತ್ ಹೈಕೋರ್ಟ್‌ನಲ್ಲಿ ನ್ಯಾಯವಾದಿಯಾಗಿದ್ದು ಪುತ್ರಿಯೂ ವಕೀಲರಾಗಿದ್ದಾರೆ.

LEAVE A REPLY

Please enter your comment!
Please enter your name here