ಕುತ್ಲೂರಿನ ಸುಂದರಿ ಸಹಿತ ಆರು ನಕ್ಸಲರು ಮತ್ತೆ ಜೈಲಿಗೆ

0

ಬೆಳ್ತಂಗಡಿ: ಬೆಂಗಳೂರಿನಲ್ಲಿ ಜ.೮ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎದುರು ಶರಣಾಗುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬಂದು ನ್ಯಾಯಾಂಗ ಬಂಧನದಲ್ಲಿರುವ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಕುತ್ಲೂರಿನ ಸುಂದರಿ ಸಹಿತ ಆರು ಮಂದಿ ನಕ್ಸಲರನ್ನು ಚಿಕ್ಕಮಗಳೂರು ಪೊಲೀಸರು ತಮ್ಮ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದ ಬಳಿಕ ಬೆಂಗಳೂರು ಪರಪ್ಪನ ಅಗ್ರಹಾರಕ್ಕೆ ಕಳುಹಿಸಿದ್ದಾರೆ.
ಮತ್ತೆ ಜೈಲಿಗೆ: ಮುಖ್ಯಮಂತ್ರಿ ಎದುರು ಶರಣಾಗಿ ನ್ಯಾಯಾಂಗ ಬಂಧನದಲ್ಲಿದ್ದ ಲತಾ ಮುಂಡಗಾರು, ವನಜಾಕ್ಷಿ ಬಾಳೆಹೊಳೆ, ಸುಂದರಿ ಕುತ್ಲೂರು, ಮಾರೆಪ್ಪ ಅರೋಲಿ ಕುತ್ತೂರು, ಕೆ.ವಸಂತ ತಮಿಳುನಾಡು ಮತ್ತು ಟಿ.ಎನ್.ಜಿಷಾ ಕೇರಳ ಅವರನ್ನು ಒಳಗೊಂಡ ನಕ್ಸಲರ ತಂಡವನ್ನು ವಿಚಾರಣೆಗೆ ಒಳಪಡಿಸುವುದಕ್ಕಾಗಿ ಚಿಕ್ಕಮಗಳೂರು ಪೊಲೀಸರು ಎನ್‌ಐಎ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಆರು ದಿನಗಳ ಕಾಲ ಕಸ್ಟಡಿಗೆ ಪಡೆದುಕೊಂಡಿದ್ದರು.

ಚಿಕ್ಕಮಗಳೂರು ನಗರದ ಮಲ್ಲೇಗೌಡ ಸಾರ್ವಜನಿಕ ಜಿಲ್ಲಾ ಆಸ್ಪತ್ರೆಯಲ್ಲಿ ಆರು ನಕ್ಸಲರನ್ನು ಆರೋಗ್ಯ ತಪಾಸಣೆಗೊಳಪಡಿಸಿದ ನಂತರ ಕೊಪ್ಪ ತಾಲೂಕಿನ ಜಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಗ್ರಾಮಗಳಲ್ಲಿ ಸ್ಥಳ ಮಹಜರು ನಡೆಸಲಾಗಿತ್ತು. ಶರಣಾಗತಿಗೂ ಮುನ್ನ ಮುಂಡಗಾರು ಲತಾ, ಜಯಣ್ಣ ಮತ್ತಿತರರು ಕಡೆಗುಂದಿಯ ಸುಬ್ಬೆಗೌಡ ಮನೆಗೆ ಬಂದು ರಾತ್ರಿ ಊಟ ಮಾಡಿ ತೆರಳಿದ್ದ ಸ್ಥಳದಲ್ಲಿಯೂ ಮಹಜರು ನಡೆಸಲಾಗಿದೆ. ಪೊಲೀಸ್ ಕಸ್ಟಡಿ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಮತ್ತೆ ನಕ್ಸಲರನ್ನು ಜೈಲಿಗೆ ಕಳುಹಿಸಲಾಗಿದೆ.

ನಕ್ಸಲ್ ರವೀಂದ್ರ ಶೀಘ್ರ ಮುಖ್ಯ ವಾಹಿನಿಗೆ?: ನಕ್ಸಲ್ ಚಳವಳಿಯಲ್ಲಿ ಸಕ್ರಿಯವಾಗಿದ್ದ ಶೃಂಗೇರಿ ತಾಲೂಕಿನ ಕಿಗ್ಗ ಸಮೀಪದ ಕೋಟೆಹೊಂಡ ರವೀಂದ್ರನನ್ನು ಮುಖ್ಯವಾಹಿನಿಗೆ ಕರೆ ತರಲು ಸಿದ್ಧತೆ ನಡೆದಿದೆ.
ಶರಣಾದ ನಕ್ಸಲ್ ತಂಡದಿಂದ ಬೇರ್ಪಟ್ಟಿದ್ದ ಕೋಟೆಹೊಂಡ ರವೀಂದ್ರ (38ವ) ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಅವರನ್ನು ಸಂಪರ್ಕಿಸುವ ಪ್ರಯತ್ನವನ್ನು ಶಾಂತಿಗಾಗಿ ನಾಗರಿಕ ವೇದಿಕೆ ಮತ್ತು ನಕ್ಸಲ್ ಶರಣಾಗತಿ ಸಮಿತಿ ಮಾಡಿದೆ. ಸದ್ಯ ಭೂಗತನಾಗಿರುವ ರವೀಂದ್ರ ಸದ್ಯದಲ್ಲಿ ಶರಣಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರವೀಂದ್ರನ ವಿರುದ್ಧ ಕರ್ನಾಟಕದ ವಿವಿಧ ಠಾಣೆಗಳಲ್ಲಿ ಮೂವತ್ತಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದೆ. 2007ರಲ್ಲಿ ತೀರ್ಥಹಳ್ಳಿ ಎಳ್ಳಮಾಸ್ಯೆ ಜಾತ್ರೆಗೆ ಹೋಗಿ ಬರುವುದಾಗಿ ತಿಳಿಸಿ ತೆರಳಿದ್ದ ಬಳಿಕ ರವೀಂದ್ರ ನಾಪತ್ತೆಯಾಗಿದ್ದ. ಈತನ ಸುಳಿವು ನೀಡಿದವರಿಗೆ ಪೊಲೀಸ್ ಇಲಾಖೆ ಬಹುಮಾನ ಘೋಷಿಸಿತ್ತು.

ನಕ್ಸಲರ ವಿಚಾರಣೆಗೆ ಫಾಸ್ಟ್‌ಟ್ರಾಕ್ ಕೋರ್ಟ್?: ಮುಖ್ಯಮಂತ್ರಿ ಸಿದ್ದರಾಮಯ್ಯರವರ ಎದುರು ಶರಣಾಗಿರುವ ಆರು ನಕ್ಸಲರ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳ ವಿಚಾರಣೆಗೆ ತ್ವರಿತಗತಿ ನ್ಯಾಯಾಲಯ ರಚಿಸುವ ಸಾಧ್ಯತೆಗಳಿದೆ ಎಂದು ಮಾಹಿತಿ ಲಭ್ಯವಾಗಿದೆ. ಲತಾ ಮುಂಡಗಾರು ವಿರುದ್ಧ ಕರ್ನಾಟಕದಲ್ಲಿ ದಾಖಲಾಗಿರುವ 65 ಪ್ರಕರಣಗಳ ಪೈಕಿ ೪೩ ಪ್ರಕರಣ ಚಿಕ್ಕಮಗಳೂರು ಜಿಲ್ಲೆಯಲ್ಲಿವೆ. ವನಜಾಕ್ಷಿ ವಿರುದ್ಧ ಒಟ್ಟಾರೆ 25 ಪ್ರಕರಣಗಳಿದ್ದರೆ ಚಿಕ್ಕಮಗಳೂರು ಜಿಲ್ಲೆಯಲ್ಲಿ 19 ಪ್ರಕರಣ ದಾಖಲಾಗಿವೆ. ಕುತ್ಲೂರಿನ ಸುಂದರಿ ವಿರುದ್ಧ ರಾಜ್ಯದಲ್ಲಿ 23 ಪ್ರಕರಣಗಳಿದ್ದು ಮೂರು ಪ್ರಕರಣ ಚಿಕ್ಕಮಗಳೂರು ಜಿಲ್ಲೆಯಲ್ಲಿವೆ. ಮಾರೆಪ್ಪ ಅರೋಲಿ ವಿರುದ್ಧ ರಾಜ್ಯದಲ್ಲಿ 13 ಪ್ರಕರಣಗಳಿದ್ದು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೂರು ಪ್ರಕರಣ ದಾಖಲಾಗಿವೆ. ಕೇರಳದ ಜಿಷಾ ಮತ್ತು ತಮಿಳುನಾಡಿನ ಕೆ.ವಸಂತ ವಿರುದ್ಧ ಚಿಕ್ಕಮಗಳೂರು ಜಿಲ್ಲೆಯಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ. ಶರಣಾಗತರಾಗಿರುವ ನಕ್ಸಲರ ವಿರುದ್ಧ ಬಹುತೇಕ ಪ್ರಕರಣಗಳು ಕೊಪ್ಪ ತಾಲ್ಲೂಕಿನ ಜಯಪುರ ಮತ್ತು ಶೃಂಗೇರಿ ಠಾಣೆಯಲ್ಲೇ ದಾಖಲಾಗಿದೆ. ಈ ಎಲ್ಲಾ ಪ್ರಕರಣಗಳ ತನಿಖೆಗೆ ಫಾಸ್ಟ್‌ಟ್ರಾಕ್ ಕೋರ್ಟ್ ರಚನೆಯಾಗುವ ಸಾಧ್ಯತೆ ಇದೆ.

LEAVE A REPLY

Please enter your comment!
Please enter your name here