ಬಾಲಕಿಯ ಅತ್ಯಾಚಾರ ಪ್ರಕರಣ – ಕಲ್ಕಾಜೆ ಕೇಶವ ಪೂಜಾರಿಗೆ ೨೦ ವರ್ಷ ಜೈಲು ಶಿಕ್ಷೆ

0

ಬೆಳ್ತಂಗಡಿ: ಬೆದರಿಕೆಯೊಡ್ಡಿ ಅತ್ಯಾಚಾರ ಮಾಡಿ ಅಪ್ರಾಪ್ತ ಬಾಲಕಿಯನ್ನು ಗರ್ಭಿಣಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಧರ್ಮಸ್ಥಳ ಗ್ರಾಮದ ಕಲ್ಕಾಜೆ ನಿವಾಸಿ ಕೇಶವ ಪೂಜಾರಿ(೪೩) ಎಂಬಾತನಿಗೆ ಮಂಗಳೂರು ಪೋಕ್ಸೊ ನ್ಯಾಯಾಲಯ ೨೦ ವರ್ಷ ಶಿಕ್ಷೆ ಹಾಗೂ ದಂಡ ವಿಧಿಸಿ ಜ.೨೮ರಂದು ತೀರ್ಪು ನೀಡಿದೆ.
ಘಟನೆಯ ವಿವರ: ತನ್ನ ಪಕ್ಕದ ಮನೆಯ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಬಳಿಕ ಬೆದರಿಕೆ ಒಡ್ಡಿ ಅತ್ಯಾಚಾರ ಮಾಡಿ ಆಕೆ ಗರ್ಭಿಣಿಯಾಗಲು ಕಾರಣವಾಗಿದ್ದ ಆರೋಪದಡಿ ಇಲೆಕ್ಟ್ರಿಷಿಯನ್ ವೃತ್ತಿ ಮಾಡುತ್ತಿದ್ದ ಧರ್ಮಸ್ಥಳ ಗ್ರಾಮದ ಕಲ್ಕಾಜೆ ನಿವಾಸಿ ಕೇಶವ ಪೂಜಾರಿ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ೨೦೨೩ರ ನವೆಂಬರ್ ೧೧ರಂದು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

ಆ ಬಳಿಕ ಕೇಶವ ಪೂಜಾರಿಯನ್ನು ಬಂಧಿಸಲಾಗಿದ್ದು ನಂತರ ಆತ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದ. ಇದೀಗ ವಾದ ಪ್ರತಿವಾದ ಆಲಿಸಿ ತೀರ್ಪು ಪ್ರಕಟಿಸಿರುವ ಮಂಗಳೂರಿನ ಪೋಕ್ಸೋ ನ್ಯಾಯಾಲಯ ಕೇಶವ ಪೂಜಾರಿಗೆ ೨೦ ವರ್ಷ ಕಾರಾಗೃಹ ಶಿಕ್ಷೆ ಮತ್ತು ೫೦ ಸಾವಿರ ರೂಪಾಯಿ ದಂಡ ವಿಧಿಸಿದೆ. ದಂಡ ತೆರಲು ತಪ್ಪಿದ್ದಲ್ಲಿ ೪ ತಿಂಗಳ ಸಾದಾ ಕಾರಾಗೃಹ ಶಿಕ್ಷೆ ಅನುಭವಿಸಲು ಆದೇಶ ನೀಡಲಾಗಿದೆ.
ನ್ಯಾಯಾಧೀಶ ಮನು.ಕೆ.ಎಸ್ ಅವರು ಈ ತೀರ್ಪು ನೀಡಿದ್ದಾರೆ. ಪೊಲೀಸ್ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ ಅವರು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪಿ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಮನೆಯಲ್ಲಿದ್ದ ಕೇಶವ ಬಂಧನ

ಮಂಗಳೂರು ಪೋಕ್ಸೋ ನ್ಯಾಯಾಲಯ ೨೦ ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ ಬೆನ್ನಲ್ಲಿಯೇ ಕೇಶವ ಪೂಜಾರಿಯ ಕಲ್ಕಾಜೆ ಮನೆಗೆ ಬಂದ ಪೊಲೀಸರು ಆತನನ್ನು ಬಂಧಿಸಿದ್ದಾರೆ. ನೆರೆ ಮನೆಯ ಬಾಲಕಿಯನ್ನು ಗರ್ಭಿಣಿಯನ್ನಾಗಿಸಿದ್ದ ಕೇಶವ ಪೂಜಾರಿ ಆಕೆಯನ್ನು ಗರ್ಭಪಾತ ಮಾಡಿಸಲು ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ ವೇಳೆ ಅಲ್ಲಿನ ವೈದ್ಯರು ನೀಡಿದ ಮಾಹಿತಿ ಆಧರಿಸಿ ಪ್ರಕರಣ ದಾಖಲಿಸಲಾಗಿತ್ತು. ನಂತರ ಕೇಶವ ಪೂಜಾರಿಯನ್ನು ಅತ್ಯಾಚಾರ ಆರೋಪದಡಿ ಬಂಧಿಸಲಾಗಿತ್ತು. ಬಳಿಕ ಆತ ಜಾಮೀನು ಪಡೆದು ಹೊರ ಬಂದು ಮನೆಯಲ್ಲಿದ್ದ. ಇದೀಗ ಶಿಕ್ಷೆ ಪ್ರಕಟವಾದ ತಕ್ಷಣ ಪೊಲೀಸರು ಆತನ ಮನೆಗೆ ಬಂದು ಬಂಧಿಸಿ ಜೈಲಿಗಟ್ಟಿದ್ದಾರೆ. ೧೮ ವರ್ಷಕ್ಕಿಂತ ಕೆಳಗಿನ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ವಿಚಾರಣೆ ಶೀಘ್ರ ಮುಕ್ತಾಯ ಗೊಳಿಸಿ ತೀರ್ಪು ನೀಡಬೇಕು ಎಂದು ಸುಪ್ರೀಂಕೋರ್ಟ್ ನೀಡಿದ್ದ ಆದೇಶದ ಹಿನ್ನೆಲೆಯಲ್ಲಿ ಕೇಸು ದಾಖಲಾದ ಕೆಲವೇ ಸಮಯದಲ್ಲಿ ತೀರ್ಪು ಪ್ರಕಟವಾಗಿದೆ.

LEAVE A REPLY

Please enter your comment!
Please enter your name here