ಧರ್ಮಸ್ಥಳ: ಆದಿದ್ರಾವಿಡ ಸಮಾಜ ಸೇವಾ ಸಂಘದ ಆಶ್ರಯದಲ್ಲಿ 76ನೇ ಗಣರಾಜ್ಯೋತ್ಸವ ಆಚರಣೆ

0

ಧರ್ಮಸ್ಥಳ: “ಈ ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಕೂಡಾ ಘನತೆಯಿಂದ ತಲೆಎತ್ತಿ ನಡೆಯುವಂತಹ ಅವಕಾಶ ಕಲ್ಪಿಸಿಕೊಟ್ಟದ್ದು ಬಿ. ಆರ್. ಅಂಬೇಡ್ಕರ್‌ರವರು ರಚಿಸಿದ ಭವ್ಯ ಭಾರತದ ಸಂವಿಧಾನ” ಎಂದು ಉಜಿರೆ ಶ್ರೀ ಧ. ಮಂ. ಕಾಲೇಜಿ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ನಟರಾಜ್ ಹೆಚ್. ಕೆ. ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘ ಧರ್ಮಸ್ಥಳ ವಲಯ ಘಟಕ ಅಶೋಕನಗರ ಇದರ ಆಶ್ರಯದಲ್ಲಿ ಜ. 26 ರಂದು ನಡೆದ ಗಣರಾಜ್ಯೋತ್ಸವ ಸಂಭ್ರಮಾಚರಣೆ 2025 ಇದರ ಅಂಗವಾಗಿ ‘ಭಾರತ ಸಂವಿಧಾನ ಮತ್ತು ಮಾನವ ಹಕ್ಕುಗಳು’ ಎಂಬ ಉಪನ್ಯಾಸ-ಸಂವಾದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಅಂಬೇಡ್ಕರ್‌ರವರು ಈ ಸಂವಿಧಾನವನ್ನು ಬರೆಯದೇ ಹೋಗಿದ್ದರೆ ಈ ದೇಶದ ಜನರ ಬದುಕು ಹೇಗಿರುತ್ತಿತ್ತು ಎನ್ನುವುದನ್ನು ಊಹಿಸಿಕೊಳ್ಳುವುದೂ ಕಷ್ಟದ ವಿಷಯ. ನಮ್ಮ ದೇಶ ಸ್ವತಂತ್ರವಾಗಿದ್ದು ಆ.15 ರಂದು ಆದರೂ, ನಮಗೆ ನಿಜವಾದ ಸ್ವಾತಂತ್ರ್ಯ ಬಂದದ್ದು ಈ ದೇಶ ಮುಂದೆ ಹೇಗೆ ನಡೆಯಬೇಕು, ಇಲ್ಲಿನ ಜನರ ಬದುಕು ಹೇಗಿರಬೇಕು ಎನ್ನುವ ಮಾರ್ಗಸೂಚಿಯನ್ನು ಅಂಬೇಡ್ಕರ್‌ರವರ ಸಂವಿಧಾನದ ಮೂಲಕ ತಿಳಿಸಿದ ಈ ಗಣರಾಜ್ಯೋತ್ಸವದ ದಿನದಂದು.

ಅಂಬೇಡ್ಕರ್‌ರವರು ತನ್ನ ಜೀನವನಾನುಭವ, ಅವರು ಕಂಡ ಎಲ್ಲಾ ಏರಿಳಿತಗಳನ್ನು ಸಮ್ಮಿಶ್ರಣ ಮಾಡಿ ತನ್ನ ದೇಶದ ಜನರಿಗೆ ಮುಂದಿನ ಸಾವಿರಾರು ವರ್ಷಗಳ ಕಾಲವೂ ಪ್ರಸ್ತುತವಾಗಿ ಇರಬೇಕಾದ ಸಂವಿಧಾನಕ್ಕೆ ಜೀವ ತುಂಬಿದ್ದಾರೆ. ಆಳವಾದ ಅಧ್ಯಯನ, ಕಠಿಣ ಪರಿಶ್ರಮ, ಸ್ಪಷ್ಟ ಹಾಗೂ ದೃಢ ಸಂಕಲ್ಪದ ದೂರದರ್ಶಿ ಚಿಂತನೆಗಳಿಂದ ಸುಮಾರು 3 ವರ್ಷಗಳ ಕಾಲ ಈ ಸಂವಿಧಾನ ರಚನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡರು.

1950 ಜ. 26 ರಿಂದ ಜಾರಿಗೆ ಬಂದ ಈ ಸಂವಿಧಾನ ನಮ್ಮನ್ನು ಪ್ರತಿ ಹಂತದಲ್ಲೂ ಕಾಯುತ್ತಿದೆ, ನಮ್ಮ ಬದುಕಿಗೆ ದಿಕ್ಸೂಚಿಯನ್ನು ತೋರುತ್ತದೆ. ಈ ಸಮಾಜಕ್ಕೆ ನಿಜವಾಗಿ ಬೇಕಾಗಿರುವುದು ಏನು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆತ್ಮ ಗೌರವಕ್ಕೆ ತೊಂದರೆಯಾಗದAತೆ ಬದುಕುವ ಹಕ್ಕು. ಈ ಮೂಲಭೂತ ಹಕ್ಕುಗಳೆಲ್ಲವೂ ಮಾನವ ಹಕ್ಕುಗಳೇ. ವಿವಿಧ ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ ಈ ದೇಶಕ್ಕೆ ಸರಿಹೊಂದುವ ವಿಚಾರಧಾರೆಗಳಿಗೆ ಸಂವಿಧಾನದಲ್ಲಿ ಮಹತ್ವವನ್ನು ನೀಡಿದ್ದಾರೆ. ಹಕ್ಕುಗಳ ಜೊತೆಗೆ ನಮ್ಮ ಕರ್ತವ್ಯಗಳನ್ನೂ ಕೂಡಾ ನಾವು ಮರೆಯುವಂತಿಲ್ಲ. ಈ ಸಂವಿಧಾನದ ಪಾವಿತ್ರ್ಯತೆಯನ್ನು ಕಾಪಾಡಿ ಡಾ. ಬಿ. ಆರ್. ಅಂಬೇಡ್ಕರ್‌ರವರ ಆಶಯಗಳನ್ನು ಈಡೇರಿಸಲು ಈ ಸಮಾಜದಲ್ಲಿ ನೊಂದವರ ಕಣ್ಣೀರನ್ನು ಒರೆಸುವ ಬೆಂದವರಿಗೆ ಬದುಕನ್ನು ಕಟ್ಟಿಕೊಡಲು ಸಂಘಟನೆಗಳ ಮೂಲಕ ಪ್ರಯತ್ನಿಸುವ ನಿಮ್ಮ ಕಾರ್ಯ ಶ್ಲಾಘನೀಯ ಇದು ನಿರಂತರವಾಗಿರಲಿ ಎಂದು ತಿಳಿಸಿದರು.

ಆದಿದ್ರಾವಿಡ ಸಮಾಜ ಸೇವಾ ಸಂಘದ ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷ ದಿನೇಶ್ ಕೊಕ್ಕಡ ಕಾರ್ಯಕ್ರಮವನ್ನು ದೀಪ ಬೆಳಗಿಸಿ, ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು. ವಲಯ ಘಟಕದ ಅಧ್ಯಕ್ಷ ಡಿ. ಗಣೇಶ್, ನಿಕಟಪೂರ್ವ ಅಧ್ಯಕ್ಷ ಸುರೇಶ್, ಗ್ರಾ.ಪಂ. ಸದಸ್ಯೆ ಸುನೀತಾ, ಅಶೋಕನಗರದ ಕರಿಯ ಗುರಿಕಾರ, ಸದಾಶಿವ ಗುರಿಕಾರ ವೇದಿಕೆಯಲ್ಲಿ ಉಪಸ್ಥಿತರಿದ್ದರು. 2023-24ನೇ ಸಾಲಿನಲ್ಲಿ ಎಸ್‌.ಎಸ್‌.ಎಲ್‌.ಸಿ ಹಾಗೂ ಪಿ.ಯು.ಸಿಯಲ್ಲಿ ಉತ್ತೀರ್ಣರಾದ ಅಶೋಕನಗರದ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿ ಗೌರವಿಸಲಾಯಿತು. ಸಂಘಟನೆಗೆ ಸೇರ್ಪಡೆಗೊಂಡ ನೂತನ ಸದ್ಯರನ್ನು ಗುಲಾಬಿ ಹೂ ನೀಡಿ ಸ್ವಾಗತಿಸಲಾಯಿತು. ಸುಜಾತ ಬಂದು ಬಳಗದವರು ಕ್ರಾಂತಿ ಗೀತೆ ಹಾಡಿದರು.

ಸುಪ್ರಿತಾರವರ ಭೀಮಾ ಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಸುಜಾತ ಸ್ವಾಗತಿಸಿದರು. ಶೇಖರ್ ಧರ್ಮಸ್ಥಳ ಹಾಗೂ ಸುನೀತಾ ಕಾರ್ಯಕ್ರಮ ನಿರೂಪಿಸಿದರು. ಶಶಿಕಲಾ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here