ಗ್ರಂಥಾಲಯ, ಸರಕಾರಿ ಆಸ್ಪತ್ರೆ ಕಟ್ಟಡದ ಕಾಮಗಾರಿಯಲ್ಲಿ ಗೋಲ್‌ಮಾಲ್ಟೆಂಡರ್ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ: ಜನಪ್ರತಿನಿಧಿಗಳು, ಅಧಿಕಾರಿಗಳ ಪರ್ಸಂಟೇಜ್ ವ್ಯವಹಾರ?

0

ಬೆಳ್ತಂಗಡಿ: ತಾಲೂಕು ಕೇಂದ್ರದ ಸಾರ್ವಜನಿಕ ಗ್ರಂಥಾಲಯ ಕಟ್ಟಡ ಹಾಗೂ ಸರಕಾರಿ ಆಸ್ಪತ್ರೆ ಕಟ್ಟಡದ ಮುಂದುವರಿದ ಕಾಮಗಾರಿಗಳ ಟೆಂಡರ್‌ನಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಈಗಾಗಲೇ ಅರ್ಧದಷ್ಟು ನಡೆದಿರುವ ತಾಲೂಕು ಕೇಂದ್ರದ ಸಾರ್ವಜನಿಕ ಗ್ರಂಥಾಲಯ ಕಟ್ಟಡ ಮತ್ತು ಸರಕಾರಿ ಆಸ್ಪತ್ರೆಯ ಕಟ್ಟಡದ ಕಾಮಗಾರಿಯಲ್ಲಿ

ಇಲಾಖೆಯ ನೀತಿ ನಿಯಮಗಳನ್ನು ಗಾಳಿಗೆ ತೂರಿ ಟೆಂಡರ್ ಪ್ರಕ್ರಿಯೆ ನಡೆಸಲಾಗಿದ್ದು ಇದರ ಹಿಂದೆ ಜನಪ್ರತಿನಿಧಿಗಳು ಮತ್ತು ಇಲಾಖಾಧಿಕಾರಿಗಳ ಜಂಟಿ ಪರ್ಸಂಟೇಜ್ ವ್ಯವಹಾರ ನಡೆದಿದೆ ಎಂದು ಸಾರ್ವಜನಕರಿಂದ ಶಂಕೆ ವ್ಯಕ್ತವಾಗಿದೆ.

ನೀತಿ-ನಿಯಮ ಗಾಳಿಗೆ ತೂರಿದರು: ಟೆಂಡರ್ ಆಗದೇ ಅರ್ಧಂಬರ್ಧ ನಡೆದ ತಾಲೂಕು ಕೇಂದ್ರ ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆ ಮತ್ತು ಸರಕಾರಿ ಆಸ್ಪತ್ರೆಯ ಕಟ್ಟಡದ ಮುಂದುವರಿದ ಕಾಮಗಾರಿಗೆ ಬೆಳ್ತಂಗಡಿ ತಾಲೂಕು ಪಂಚಾಯತ್ ಟೆಂಡರ್ ಆಹ್ವಾನಿಸಿತ್ತು. ಈ ಟೆಂಡರ್‌ನಲ್ಲಿ ಎಲ್ಲಾ ನೀತಿ-ನಿಯಮಗಳನ್ನು ಗಾಳಿಗೆ ತೂರಲಾಗಿತ್ತು. ದಿನಪತ್ರಿಕೆಯಲ್ಲಿ ಪ್ರಕಟವಾದ ಈ ಕಾಮಗಾರಿಗಳ ಟೆಂಡರ್ ಪ್ರಕಟಣೆಯಲ್ಲಿ ಗುತ್ತಿಗೆದಾರರಿಗೆ ಬೇಕಾದ ಅತ್ಯಗತ್ಯ ಮಾಹಿತಿಯೇ ಇಲ್ಲ. ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ವೆಬ್‌ಸೈಟ್ ನೋಡಿದರೆ ಇದರಲ್ಲಿ ಭ್ರಷ್ಟಾಚಾರ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಆರೋಪ ಕೇಳಿ ಬಂದಿದೆ.

ಲೋಕಾಯುಕ್ತ ತನಿಖೆಗೆ ಸಾರ್ವಜನಿಕರ ಆಗ್ರಹ: ಗ್ರಂಥಾಲಯ ಕಟ್ಟಡದ ನಿರ್ಮಾಣ ಕಾಮಗಾರಿ ಮತ್ತು ಸರಕಾರಿ ಆಸ್ಪತ್ರೆಯ ಕಟ್ಟಡದ ಮುಂದುವರಿದ ಕಾಮಗಾರಿಗೆ ನಿಗದಿ ಪಡಿಸಲಾಗಿರುವ ಹಣದ ಮಾಹಿತಿ ಪತ್ರಿಕೆಯಲ್ಲಿ ಪ್ರಕಟಿಸಿದ ಟೆಂಡರ್ ಪ್ರಕಟಣೆಯಲ್ಲಿ ಇಲ್ಲ. ಈ ಎರಡೂ ಕಟ್ಟಡಗಳ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ನೀಡಿದ ಗರಿಷ್ಠ ಅವಧಿ ಒಂದು ತಿಂಗಳು ಮಾತ್ರ. ಇದು ಗೋಲ್‌ಮಾಲ್ ಟೆಂಡರ್ ಎನ್ನಲು ಇಷ್ಟು ಸಾಕು ಎಂದು ಹೇಳುತ್ತಾರೆ ಸಾರ್ವಜನಿಕರು. ಸಿಮೆಂಟ್ ಬಳಸಿ ನಿರ್ಮಿಸುವ ಯಾವುದೇ ಕಟ್ಟಡ ಕಾಮಗಾರಿಯನ್ನು ಒಂದು ತಿಂಗಳ ಒಳಗೆ ಪೂರ್ಣಗೊಳಿಸಲು ಸಾಧ್ಯವಿಲ್ಲ. ಕಟ್ಟಡ ನಿರ್ಮಾಣದ ಪ್ರತೀ ಹಂತದಲ್ಲೂ ಕ್ಯೂರಿಂಗ್‌ಗೆ ಸಾಕಷ್ಟು ಕಾಲಾವಕಾಶ ನೀಡಬೇಕು.

ಒಂದು ತಿಂಗಳಲ್ಲಿ ಈ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕಾದರೆ ಇದು ಈಗಾಗಲೇ ಆದ ಕಾಮಗಾರಿ ತೋರಿಸಿ ಬಿಲ್ ಮಾಡುವ ಹುನ್ನಾರ ಆಗಿರಬಹುದು ಎಂದು ಸಂಶಯ ವ್ಯಕ್ತಪಡಿಸಿರುವ ಸಾರ್ವಜನಿಕರು ಈ ಗೋಲ್‌ಮಾಲ್ ಟೆಂಡರ್ ಹಾಗೂ ಕೋಟ್ಯಂತರ ರೂಪಾಯಿ ಅಂದಾಜು ವೆಚ್ಚದ ಎರಡೂ ಕಾಮಗಾರಿಗಳ ಅವ್ಯವಹಾರದ ತನಿಖೆಯನ್ನು ಲೋಕಾಯುಕ್ತರು ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here