ಧರ್ಮಸ್ಥಳ: ಧಾರ್ಮಿಕ ಕ್ಷೇತ್ರ ಧರ್ಮಸ್ಥಳದಲ್ಲಿ ಭಕ್ತಾದಿಗಳಿಗೆ ಸುಸಜ್ಜಿತ ಸೌಕರ್ಯಗಳನ್ನೊಳಗೊಂಡ ಆರಾಮದಾಯಕ ಸರತಿ ಸಾಲಿನ ವ್ಯವಸ್ಥೆಗಳ ನೂತನ ಸಂಕೀರ್ಣ ‘ಶ್ರೀಸಾನ್ನಿಧ್ಯ’ವನ್ನು ಉಪ ರಾಷ್ಟ್ರಪತಿ ಜಗದೀಪ್ ಧನ್ಕರ್ ಲೋಕಾರ್ಪಣೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ನನ್ನ ಅದೃಷ್ಟ ಎಂದು ಅವರು ಸಂತಸ ಹಂಚಿಕೊಂಡಿದ್ದಾರೆ. ತಿರುಪತಿ ಮಾದರಿಯಲ್ಲಿ ನಿರ್ಮಾಣಗೊಂಡಿರುವ ಕ್ಯೂ-ಕಾಂಪ್ಲೆಕ್ಸ್, ಧರ್ಮಸ್ಥಳಕ್ಕೆ ಬರುವ ಲಕ್ಷಾಂತರ ಭಕ್ತರಿಗೆ ಭಗವಂತನ ದರ್ಶನವನ್ನು ಮತ್ತಷ್ಟು ಸುಗಮಗೊಳಿಸಲಿದೆ.
ಎಲ್ಲರಿಗೂ ಒಂದೇ ಕಡೆ ಸರತಿ ಸಾಲಿನಲ್ಲಿ ನಿಲ್ಲುವ ವ್ಯವಸ್ಥೆ ಮಾಡಿರುವುದು ಸಮಾನತೆಯ ಬಿಂಬ ಎಂದ ಧನ್ಕರ್, ಉಪರಾಷ್ಟ್ರಪತಿಯಂತಹ ಉನ್ನತ ಹುದ್ದೆಯಲ್ಲಿದ್ದರೂ ತಮ್ಮ ಸರಳತೆಯ ನಡೆ ಮೂಲಕ ಗಮನಸೆಳೆದರು.
ಜ.7ರಂದು ಧರ್ಮಸ್ಥಳದ ಸಾನಿಧ್ಯ ಉದ್ಘಾಟನೆ ಮಾಡಿ,2024-25ರ ಜ್ಞಾನ ದೀಪ ಕಾರ್ಯಕ್ರಮದ ಶುಭಾರಂಭ ನೆರವೇರಿಸಿದ ರಾಜ್ಯಸಭೆ ಸಭಾಪತಿಯೂ ಆಗಿರುವ ಧನ್ಕರ್, ನಂತರ ಅಮೃತವರ್ಷಿಣಿ ಸಭಾಭವನದಲ್ಲಿ ಸಭೆ ಉದ್ದೇಶಿಸಿ ಮಾತನಾಡಿದರು.
ರಾಜ್ಯಸಭೆಯಲ್ಲಿ ಗದ್ದಲ, ಕೋಲಾಹಲಗಳನ್ನೆಬ್ಬಿಸುವ ಸಂಸದರಿಗೆ ತಮ್ಮ ವಾಗ್ಝರಿಗಳ ಮೂಲಕವೇ ಉತ್ತರ ನೀಡುತ್ತಾ ಬಂದಿರುವ ಧನ್ಕರ್, ಧರ್ಮಸ್ಥಳದಲ್ಲೂ ಜನಪ್ರತಿನಿಧಿಗಳು, ರಾಜಕಾರಣಿಗಳಿಗೆ ಕಿವಿಮಾತು ಹೇಳಿ ಗಮನಸೆಳೆದರು. ನಾವು ರಾಜಕೀಯವಾಗಿ ಇನ್ನಷ್ಟು ಪ್ರಬಲರಾಗಬೇಕು. ದೇಶವನ್ನು ಮತ್ತ? ಎತ್ತರಕ್ಕೇರಿಸಲು ಒಗ್ಗೂಡಬೇಕು. ರಾಜಕಾರಣಿಗಳಲ್ಲಿ ಭಿನ್ನ ಸಿದ್ಧಾಂತಗಳಿರಬಹುದು. ಆದರೆ, ಸಂಸ್ಕೃತಿ, ಸಂಸ್ಕಾರ ಮರೆಯಬಾರದು. ದಿನದ 24 ಗಂಟೆ ರಾಜಕಾರಣದ ಬಗ್ಗೆಯೇ ಯೋಚಿಸಬೇಕೆ
ಎಂದು ಪ್ರಶ್ನಿಸಿದ ಧನ್ಕರ್, ದೇಶ ಸೇವೆಗೆ ಎಷ್ಟು ಸಮಯ ವಿನಿಯೋಗಿಸಲಾಗುತ್ತಿದೆ? ಸಮಾಜದಲ್ಲೇಕೆ ಧ್ರುವೀಕರಣವಾಗುತ್ತಿದೆ ಎಂಬ ಬಗ್ಗೆ ಗಂಭೀರ ಚಿಂತನೆಗಳನ್ನು ನಡೆಸಬೇಕು ಎಂದು ಸಲಹೆ ಕೊಟ್ಟರು.
ಅತ್ಯುನ್ನತ ನಾಗರಿಕತೆ ನಮ್ಮದು. ದ್ವೇಷ ಎಲ್ಲದಕ್ಕೂ ಉತ್ತರ ಆಗಬಾರದು ಎಂದ ಧನ್ಕರ್, ದೇಶದಲ್ಲಿ ಸಮಗ್ರತೆ, ವೈವಿಧ್ಯತೆಯನ್ನು ಉಳಿಸಿಕೊಳ್ಳಬೇಕು. ಜನರಲ್ಲಿ ಮೂಲಭೂತ ಕರ್ತವ್ಯದ ಬಗ್ಗೆ ಜಾಗೃತಿ ಮೂಡಿಸಬೇಕು. ಭಾರತಮಾತೆ ಒಂದೇ ಎಂದು ಭಾವಿಸಿದಾಗ ಸಾಮಾಜಿಕ ಸದ್ಭಾವದ ಭಾವನೆ ಬರುತ್ತದೆ ಎಂದು ಅಭಿಪ್ರಾಯಪಟ್ಟರು.
ಮೆಸಪಟೋಮಿಯಾ, ಚೀನಾ ನಾಗರಿಕತೆ ನಾಶವಾಗಿದೆ. ನಮ್ಮ ನಾಗರಿಕತೆ ಮಾತ್ರ ಇನ್ನೂ ಬೆಳೆಯುತ್ತಿದೆ. ಬಾಹ್ಯ ಶಕ್ತಿಗಳು ನಮ್ಮನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿವೆ. ಸಾರ್ವಜನಿಕ ಸೊತ್ತುಗಳನ್ನು ನಾಶಮಾಡುವಂತಹ ವೈಪರೀತ್ಯಗಳು ಸಂಭವಿಸುತ್ತಿವೆ. ಇವುಗಳಿಗೆ ಪೂರ್ಣ ತಿಲಾಂಜಲಿ ನೀಡಬೇಕು.
2047ರ ವೇಳೆಗೆ ಪರಿಪೂರ್ಣ ಸಶಕ್ತ ಭಾರತದ ಗುರಿಯನ್ನು ತಲುಪಬೇಕು. ದೇಶ ಆಂತರಿಕವಾಗಿ ಗಟ್ಟಿಯಾಗಬೇಕಿದೆ. ದೇಶ ಸೇವೆಗಾಗಿ ಜನ ಮುಂದೆ ಬರಬೇಕು ಎಂದು ಕರೆ ನೀಡಿದರು.
ಭಾರತೀಯ ಕಾರ್ಪೊರೇಟ್ ಸಂಸ್ಥೆಗಳು ಧಾರ್ಮಿಕ ಸಂಸ್ಥೆಗಳ ಮೂಲಸೌಕರ್ಯ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಉತ್ತೇಜಿಸಲು ಸಿಎಸ್ಆರ್ ನಿಧಿಯನ್ನು ಕಾಣಿಕೆಯಾಗಿ ನೀಡುತ್ತಿವೆ. ಭೂಮಿಯನ್ನು ಪರಿಸರಸ್ನೇಹಿಯಾಗಿ ಕಾಣುವುದರ ಜೊತೆಗೆ ಎಳವೆಯಲ್ಲೇ ಮಕ್ಕಳು ಧಾರ್ಮಿಕತೆಗೆ ತೆರೆದುಕೊಳ್ಳುವಂತೆ ಮಾಡಬೇಕು. ಧಾರ್ಮಿಕ ಸಂಸ್ಥೆಗಳೇ ಗ್ರಾಮೀಣ ಪ್ರದೇಶದ ಶಕ್ತಿಯಾದರೆ, ಶಿಕ್ಷಣ ಸಮಾನತೆ ತರುವ ಮುಖ್ಯ ಸಾಧನ. ಪ್ರಜಾಪ್ರಭುತ್ವ ನಮಗೆ ಎಲ್ಲ ಸ್ವಾತಂತ್ರ್ಯ ಕೊಟ್ಟಿದೆ. ಅಭಿಪ್ರಾಯ ಹೇಳಿಕೊಳ್ಳುವ ಸಶಕ್ತ ಪ್ರಜಾಪ್ರಭುತ್ವ ನಮ್ಮದು. ಜನಾಭಿಪ್ರಾಯಕ್ಕೆ ಬೆಲೆ ಇದೆ. ಜನಪ್ರತಿನಿಧಿಗಳು ಜನರ ಆದ್ಯತೆಗೆ ಬೆಲೆ ಕೊಡಬೇಕು. ಸಂವಿಧಾನವೇ ಪರಮೋಚ್ಛ ಎಂದು ಉಪರಾಷ್ಟ್ರಪತಿ ವಿವರಿಸಿದರು
ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ,.ಡಿ.ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಿದ್ದರು. ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ, ಜ್ಞಾನವಿಕಾಸ ಮಹಿಳಾ ಸಬಲೀಕರಣ ಕಾರ್ಯಕ್ರಮಗಳ ಅಧ್ಯಕ್ಷೆ ಡಾ. ಹೇಮಾವತಿ ಹೆಗ್ಗಡೆ, ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್, ಉಪಾಧ್ಯಕ್ಷ ಡಿ. ಸುರೇಂದ್ರ ಕುಮಾರ್ ವೇದಿಕೆಯಲ್ಲಿದ್ದರು. ಉಪನ್ಯಾಸಕ ಡಾ. ಶ್ರೀಧರ ಭಟ್ ನಿರೂಪಿಸಿದರು.
ದಕ್ಷತೆ, ನಾವೀನ್ಯತೆಯ ಹೂರಣ
ನೂತನ ಸರತಿ ಸಾಲಿನ ಸಂಕೀರ್ಣದ ವಿಸ್ತೀರ್ಣ 2.75.177 ಚದರ ಅಡಿ ಆಗಿದ್ದು, ವೃತ್ತಾಕಾರದಲ್ಲಿದೆ.16 ಸಭಾಂಗಣಗಳೊಂದಿಗೆ ಎರಡು ಅಂತಸ್ತಿನ ರಚನೆಯಾಗಿದೆ. ಪ್ರತಿ ಸಭಾಂಗಣದಲ್ಲಿ 600ರಿಂದ 800ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಏಕಕಾಲಕ್ಕೆ ಒಟ್ಟು 10,000 – 12,000 ಜನರಿಗೆ ವ್ಯವಸ್ಥೆ ಮಾಡಲಾಗಿದೆ. ಈ ಸಂಕೀರ್ಣ ವಿಶಾಲ ಸಭಾಂಗಣಗಳನ್ನು ಹೊಂದಿದ್ದು, ಭಕ್ತಾದಿಗಳು ಉದ್ದನೆಯ ಸಾಲುಗಳಲ್ಲಿ ನಿಲ್ಲುವ ಬದಲು ಆರಾಮವಾಗಿ ಕಾಯಬಹುದು. ಪ್ರತಿ ಸಭಾಂಗಣ ಪ್ರವೇಶ, ನಿರ್ಗಮನ ಮತ್ತು ತುರ್ತುನಿರ್ಗಮನ ದ್ವಾರಗಳು, ಕುಡಿಯುವ ನೀರು, ಶೌಚಾಲಯ ಸೌಲಭ್ಯ, ಶಿಶುಪಾಲನಾ ಕೊಠಡಿ ಮತ್ತು ಕೆಫೆಟೇರಿಯಾಗಳನ್ನು ಹೊಂದಿದೆ. ಆಧ್ಯಾತ್ಮಿಕ ಮತ್ತು ಇತರ ವಿಷಯಗಳ ಬಗ್ಗೆ ಡಿಜಿಟಲ್ ಟಿ.ವಿ.ಗಳ ಮೂಲಕ ಮಾಹಿತಿ ನೀಡಲಾಗುತ್ತದೆ. ಕ್ಯೂ ಕಾಂಪ್ಲೆಕ್ಸ್ನ ಕಾರ್ಯಾಚರಣೆ ಸುಧಾರಿತ ತಂತ್ರಜ್ಞಾನದೊಂದಿಗೆ ಸಂಯೋಜಿಸಲ್ಪಟಿದ್ದು, ಪ್ರತಿ ಹಂತದಲ್ಲೂ ದಕ್ಷತೆ ಮತ್ತು ನಾವೀನ್ಯತೆ ಕಾಣಬಹುದಾಗಿದೆ. ಸಂಪೂರ್ಣ ತಂತ್ರಜ್ಞಾನ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. – ಡಾ.ಡಿ. ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿಗಳು, ಧರ್ಮಸ್ಥಳ
ಹರ್ಷೇಂದ್ರ ಕುಮಾರ್ ಸುದ್ದಿಯೊಂದಿಗೆ ಮಾತು
ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಮಂಜುನಾಥ ಸ್ವಾಮಿಯ ದರ್ಶನಕ್ಕಾಗಿ ಸಾವಿರಾರು ಸಂಖ್ಯೆಯಲ್ಲಿ ಬರುವ ಭಕ್ತರಿಗಾಗಿ ನಿರ್ಮಿಸಲಾಗಿರುವ ಕ್ಯೂ ಕಾಂಪ್ಲೆಕ್ಸ್ ಶ್ರೀ ಸಾನ್ನಿಧ್ಯ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರಿಂದ ಉದ್ಘಾಟನೆಗೊಂಡಿದೆ. ಈ ಕ್ಯೂ ಕಾಂಪ್ಲೆಕ್ಸ್ ಶ್ರೀ ಸಾನ್ನಿಧ್ಯದ ಸಂಪೂರ್ಣ ನಿರ್ವಹಣೆ ವಹಿಸಿದ ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಧರ್ಮಸ್ಥಳದ ಡಿ. ಹಷೇಂದ್ರ ಕುಮಾರ್ ಅವರು ಕ್ಯೂ ಕಾಂಪ್ಲೆಕ್ಸ್ ಬಗ್ಗೆ ಸುದ್ದಿಯೊಂದಿಗೆ ಮಾತನಾಡಿದ್ದು ಹಿಂದಿನ ಕ್ಯೂ ಕಾಂಪ್ಲೆಕ್ಸ್ ನಾವು ಮಾಡಿದ್ದಲ್ಲ ಅದು ಬೆಳೆದದ್ದು. ಅದರಲ್ಲಿ ಯಾತ್ರಿಕರು ಒಂದು ತಾಸು ಮೂರು ಕಾಯುವಂತಹ ನಿಲ್ಲುವಂತಹ ಪ್ರಮೇಯ ಬಂತು. ಹೀಗೆ ಜನಸಂದಣ ಜಾಸ್ತಿಯಾದಾಗ ಹೇಗೆ ಅವರನ್ನು ವ್ಯವಸ್ಥಿತ ರೀತಿಯಲ್ಲಿ ದೇವರ ದರ್ಶನಕ್ಕೆ ಕಳುಹಿಸಬಹುದು ಎಂಬುದರ ಬಗ್ಗೆ ಚಿಂತನೆ ಮಾಡಿ ಈ ಕ್ಯೂ ಕಾಂಪ್ಲೆಕ್ಸ್ನಲ್ಲಿ ಅಳವಡಿಸಿದ್ದೇವೆ. ಮೊದಲು ಎರಡು ಕಿ.ಮೀ.ವರೆಗೆ ನಡೆಯ ಬೇಕಾಗಿತ್ತು. ಈಗ ಅದು ಕಡಿಮೆ ಆಗಿ ಕೇವಲ ಅರ್ಧ ಕಿಮೀ ಅಷ್ಟೇ ನಡೆಯಲು ಸಿಗುತ್ತದೆ. ಇನ್ನು ಅರ್ಧ ತಾಸಿಗಿಂತ ಹೆಚ್ಚು ಸಮಯ ಕೂರುವ ಪ್ರಮೇಯ ಬಂದರೆ ಅಲ್ಲಿ ಕ್ಯಾಂಟೀನ್ ವ್ಯವಸ್ಥೆ, ಶೌಚಾಲಯ, ಚೈಲ್ಡ್ ಕೇರ್ ರೂಂ, ಮೆಡಿಕಲ್ ಫೆಸಿಲಿಟಿ, ನೀರಿನ ವ್ಯವಸ್ಥೆ ಇದೆ. ಇನ್ನು ಡಿಜಿಟಲ್ ವ್ಯವಸ್ಥೆ ಮಾಡಿದ್ದು ಪ್ರತಿಯೊಬ್ಬರ ಮುಖವನ್ನು ಅದು ಎಷ್ಟು ಬಾರಿ ಬಂದಿದ್ದಾರೆ ಅನ್ನುವುದನ್ನು ದಾಖಲು ಮಾಡುತ್ತದೆ. ಇನ್ನು ಮುಂದೆ ಕೂಡ ಆಧುನಿಕ ಸೌಲಭ್ಯವನ್ನು ಅಳವಡಿಕೆ ಮಾಡುತ್ತೇವೆ. ಇನ್ನು ಹೊರಗಿನ ಹವಾಮಾನ 38ರಿಂದ 40ಡಿಗ್ರಿ ತಾಪಮಾನ ಇದ್ದ ಸಂದಭದಲ್ಲಿ ಈ ಕ್ಯೂ ಕಾಂಪ್ಲೆಕ್ಸ್ನಲ್ಲಿ 27 ಡಿಗ್ರಿ ತಾಪಮಾನ ಇರುತ್ತದೆ. ಹಾಗಾಗಿ ಯಾರಿಗೂ ಯಾವುದೇ ರೀತಿಯ ಸೆಕೆ ಅಥವಾ ಸುಸ್ತು ಆಗವುದಿಲ್ಲ. ಇನ್ನು ನಮಗೆ ಸವಾಲಿರುವುದು ಇದನ್ನು ಹೇಗೆ ಕಾರ್ಯಗತಗೊಳಿಸುವುದು. ಭಕ್ತರನ್ನು ಹೇಗೆ ವ್ಯವಸ್ಥಿತವಾಗಿ ನೋಡಿಕೊಳ್ಳುವುದು ಅನ್ನುವ ಬಗ್ಗೆ. ಒಂದು ತಿಂಗಳಲ್ಲಿ ಎಲ್ಲವನ್ನೂ ಸರಿ ಮಾಡಿಕೊಡುತ್ತೇವೆ ಎಂದು ಹೇಳಿದರು.
ಕಲಾವಿದರೊಂದಿಗೆ ಸಂಭ್ರಮಿಸಿದ ಧನ್ಕರ್
ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಮತ್ತು ಪತ್ನಿ ಸುಧೇಶ್ ಧನಕರ್ ಅವರು ಮಧ್ಯಾಹ್ನ ೧.೩೦ರ ಸುಮಾರಿಗೆ ಧರ್ಮಸ್ಥಳ ಹೆಲಿಪ್ಯಾಡ್ನಲ್ಲಿ ಬಂದಿಳಿದರು. ನೀಲಿಬಣ್ಣದ ಕೋಟ್ ಧರಿಸಿದ್ದ ಅವರು, ಧರ್ಮಸ್ಥಳದ ಸಂಪ್ರದಾಯದಂತೆ ದೇವರ ದರ್ಶನದ ವೇಳೆ ಬಿಳಿ ಶಲ್ಯ ಧರಿಸಿ, ಪೂಜೆ ಪ್ರಾರ್ಥನೆ ನೆರವೇರಿಸಿದರು. ಕ್ಯೂ ಕಾಂಪ್ಲೆಕ್ಸ್ ಉದ್ಘಾಟನೆ ಬಳಿಕ ಅಮೃತವರ್ಷಿಣಿ ಸಭಾಂಗಣಕ್ಕೆ ಸ್ವಾಗತಿಸುವ ವೇಳೆ ಧನ್ಕರ್ ದಂಪತಿಗೆ ಕರಾವಳಿ ಸಂಸ್ಕೃತಿ ಪರಿಚಯ ಮಾಡುತ್ತಾ ಬರಮಾಡಿಕೊಳ್ಳಲಾಯಿತು. ಕೇರಳ ಚೆಂಡೆ ಅಬ್ಬರ, ಕೊಂಬು ಕಹಳೆ, ಬ್ಯಾಂಡ್ ವಾದ್ಯಗಳ ನಿನಾದ ಧನಕರ್ಗೆ ಮತ್ತಷ್ಟು ಖುಷಿಕೊಟ್ಟಿತು. ಕಲಾವಿದರು ನುಡಿಸುತ್ತಿದ್ದ ಚಕ್ರತಾಳ ಕಂಡು ಉಲ್ಲಸಿತಗೊಂಡ ಧನಕರ್, ತಾವೆ ವಾದಕರ ಬಳಿ ತೆರಳಿ ಚಕ್ರತಾಳ ಪಡೆದು ಬಾರಿಸಿ ಅವರೊಂದಿಗೆ ಸಂಭ್ರಮಿಸಿದರು. ನಂತರ ಬಾಲಗೋಪಾಲ ಮತ್ತು ರಾಜ ಧಿರಿಸಿನ ಅವಳಿ ಯಕ್ಷ ವೇಷಗಳು ಸ್ವಾಗತ ನಾಟ್ಯ ಕಂಡು ಪುಳಕಿತರಾದ ಉಪರಾಷ್ಟ್ರಪತಿ, ಕಲಾವಿದರ ಬಳಿ ತೆರಳಿ ಮಧ್ಯದಲ್ಲಿ ನಿಂತು ಯಕ್ಷಗಾನ ವೇಷಧಾರಿಗಳಿಗೆ ಕೈ ಮುಗಿದರು. ವೇದಿಕೆಯಲ್ಲಿ ಕುಳಿತ ನಂತರ ವಿದ್ಯಾರ್ಥಿನಿಯರು ಮಂಜುನಾಥ ಸ್ವಾಮಿಯ ಸ್ತುತಿಗೀತೆ ಹಾಡಿದಾಗ ಭಕ್ತಿಯಿಂದ ಕೈಮುಗಿದರು. ಡಾ. ಹೆಗ್ಗಡೆಯವರು ಭಾಷಣ ಮುಗಿಸಿ ಬಂದಾಗ ಎದ್ದುನಿಂತ ಉಪ ರಾಷ್ಟ್ರಪತಿ ಶಿರಸಾವಂದಿಸಿ ಗೌರವ ಸಲ್ಲಿಸಿದರು.
ಧರ್ಮಾಧಿಕಾರಿ ಡಾ. ಹೆಗ್ಗಡೆಯವರು ನವಿಲಿನ ಸುಂದರ ಪ್ರತಿಮೆಯನ್ನು ಉಪ ರಾಷ್ಟ್ರಪತಿಗೆ ನೀಡಿ ಗೌರವಿಸಿದರು. ಹೇಮಾವತಿ ಹೆಗ್ಗಡೆಯವರು ಸುಧೇಶ್ ಧನಕರ್ ಅವರನ್ನು ಗೌರವಿಸಿದರು. ಶ್ರೇಯಸ್ ಕುಮಾರ್ ಅವರು ದ.ಕ. ಸಂಸದ ಕ್ಯಾ. ಬೃಜೇಶ್ ಚೌಟರನ್ನು ಗೌರವಿಸಿದರು.
ಸಮುದಾಯ ಅಭಿವೃದ್ಧಿಗೆ ಜ್ಞಾನದೀಪ
ಧರ್ಮಸ್ಥಳ: ಗ್ರಾಮೀಣ ಶಿಕ್ಷಣ ಬಲಪಡಿಸುವುದು ಗ್ರಾಮೀಣ ಅಭಿವೃದ್ಧಿಯ ಪ್ರಮುಖ ಅಂಶಗಳಲ್ಲಿ ಒಂದು. ಅದರಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸರ್ಕಾರಿ ಶಾಲೆಗಳ ಮೂಲಕ ಗುಣಮಟ್ಟದ ಗ್ರಾಮೀಣ ಶಿಕ್ಷಣ ನೀಡಲು ಪ್ರಯತ್ನಿಸುತ್ತಿವೆ. ನಾನಾ ಕಾರಣಗಳಿಂದ ಸರ್ಕಾರಿ ಶಾಲೆಗಳಿಗೆ ಹೋಗುವ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ಶಿಕ್ಷಕರ ಕೊರತೆ, ಮೂಲಭೂತ ಸೌಕರ್ಯಗಳ ಕೊರತೆ, ಆಟದ ಮೈದಾನ, ಶೌಚಾಲಯ ಮತ್ತು ಇತರೆ ಸೌಲಭ್ಯಗಳ ಕೊರತೆಗಳನ್ನು ಗಮನಿಸಿ ಕರ್ನಾಟಕದಲ್ಲಿ ಗ್ರಾಮೀಣ ಶಿಕ್ಷಣವನ್ನು ಬಲಪಡಿಸಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದ ಮೂಲಕ ಜ್ಞಾನದೀಪ ಶಿಕ್ಷಣ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ ಎಂದು ಡಾ. ವೀರೇಂದ್ರ ಹೆಗ್ಗಡೆ ವಿವರಿಸಿದರು.
2024-25ರ ಜ್ಞಾನದೀಪ ಕಾರ್ಯಕ್ರಮ ಕುರಿತು ಉಪ ರಾಷ್ಟ್ರಪತಿ ಜಗದೀಪ್ ಧನ್ಕರ್ ಉಪಸ್ಥಿತಿಯಲ್ಲಿ ಮಾಹಿತಿ ಹಂಚಿಕೊಂಡ ಅವರು, ಪ್ರಸ್ತುತ ಸಾಲಿನಲ್ಲಿ ನಮ್ಮ ಸ್ವಸಹಾಯ ಗುಂಪುಗಳ ಸದಸ್ಯರ ಮಕ್ಕಳ ಪೈಕಿ ಸುಮಾರು 65,000 ಗ್ರಾಮೀಣ ವಿದ್ಯಾರ್ಥಿಗಳಿಗೆ ಮಾಸಿಕ ವಿದ್ಯಾರ್ಥಿವೇತನ ನೀಡಲು ಬಜೆಟ್ ನಿಗದಿಪಡಿಸಲಾಗಿದೆ. ಗ್ರಾಮೀಣ ಶಾಲೆಗಳಿಗೆ 1,028 ಶಿಕ್ಷಕರನ್ನು ನೇಮಿಸಲಾಗಿದೆ. ಇದುವರೆಗೆ 9,278 ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಗ್ರಾಮೀಣ ಶಾಲೆಗಳಿಗೆ 4,000 ಬೆಂಚ್-ಡೆಸ್ಕ್ಗಳ ವಿತರಣೆಯಾಗಿದೆ. ಇದುವರೆಗೆ ಒಟ್ಟು 71,454 ಬೆಂಚ್-ಡೆಸ್ಕ್ಗಳನ್ನು ಹಂಚಲಾಗಿದೆ. ಪೀಠೋಪಕರಣಗಳ ಕೊರತೆ ಇರುವ ಪ್ರತೀ ಶಾಲೆಗೆ 8-10 ಜೊತೆ ಬೆಂಚ್ ಡೆಸ್ಕ್ಗಳನ್ನು ಒದಗಿಸಲಾಗುತ್ತಿದೆ ಎಂದರು.
ಇದುವರೆಗೆ 6,821 ಪ್ರಾಥಮಿಕ ಶಾಲೆಗಳು, 1,019 ಅಂಗನವಾಡಿಗಳು/ಬಾಲವಾಡಿಗಳು, 4982 ಆಟ ಮೈದಾನಗಳು, 787 ಶೌಚಾಲಯಗಳು ಇತ್ಯಾದಿಗಳ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಲಾಗಿದೆ. ಜ್ಞಾನವಿಕಾಸ ಕಾರ್ಯಕ್ರಮದ ಮೂಲಕ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ ಮಕ್ಕಳ ಶಿಕ್ಷಣದ ಮಹತ್ವ ಬಗ್ಗೆ ಮಾಹಿತಿ, ಮಾರ್ಗದರ್ಶನ ನೀಡಲಾಗುತ್ತದೆ ಹಾಗೂ ಅವರ ಮಕ್ಕಳು ಶಿಕ್ಷಣದಿಂದ ವಂಚಿತರಾಗಂತೆ ನೋಡಿಕೊಳ್ಳಲಾಗುತ್ತದೆ ಎಂದು ಡಾ. ಹೆಗ್ಗಡೆ ತಿಳಿಸಿದರು.
ಸಮಾನತೆಯ ದರ್ಶನ
“ಮಂಜುನಾಥ ದೇವರ ದರ್ಶನಕ್ಕೆ ಭಕ್ತರಿಗಾಗಿ ಕ್ಯೂ ಕಾಂಪ್ಲೆಕ್ಸ್ ಮಾಡಲಾಗಿದೆ. ಇದು ಕೇವಲ ಕಟ್ಟಡವಲ್ಲ. ವೈದ್ಯಕೀಯ ಸೇರಿ ಸಕಲ ಸೌಲಭ್ಯಗಳನ್ನೊಳಗೊಂಡ ಕೇಂದ್ರ. ಎಲ್ಲರಿಗೂ ಒಂದೇ ಕಡೆ ನಿಲ್ಲುವ ವ್ಯವಸ್ಥೆ ಮಾಡಿರುವುದು ಸಮಾನತೆಯ ಬಿಂಬ. ಧಾರ್ಮಿಕ ಸ್ಥಳಗಳಲ್ಲಿ ವಿಐಪಿ ಸಂಸ್ಕೃತಿಗೆ ಹೆಚ್ಚಿನ ಸ್ಥಾನವಿರಬಾರದು. ಇದು ದೈವತ್ವಕ್ಕೆ ವಿರುದ್ಧ. ಧಾರ್ಮಿಕ ಸಂಸ್ಥೆಗಳು ಸಮುದಾಯ ಸೇವೆಯ ಕೇಂದ್ರಗಳಾಗಿವೆ. ಧರ್ಮಸ್ಥಳ ಗ್ರಾಮೀಣ ಭಾರತಕ್ಕೆ ಸೇವೆ ಸಲ್ಲಿಸುತ್ತಿದೆ. ಸಮಾಜದ ಅಸಮಾನತೆ ಹೋಗಲಾಡಿಸಿ, ಸಮಾನತೆಯನ್ನು ತರಬೇಕು. ಈ ಕಾರ್ಯದಲ್ಲಿ ಧರ್ಮಸ್ಥಳ ಮುನ್ನುಗ್ಗುತ್ತಿದೆ. ಡಾ. ಹೆಗ್ಗಡೆಯವರು ಸದಸ್ಯರಾಗಿರುವ ರಾಜ್ಯಸಭೆಯಲ್ಲಿ ನಾನು ಸಭಾಪತಿಯಾಗಿರುವುದು ನನ್ನ ಪಾಲಿನ ಹೆಮ್ಮೆ ವಿಷಯ”
- ಜಗದೀಪ್ ಧನ್ಕರ್ ಉಪರಾಷ್ಟ್ರಪತಿ
ಸುಧಾರಿತ ಸೌಲಭ್ಯದ ಸಾನಿಧ್ಯ : ಡಾ. ಹೆಗ್ಗಡೆ
ಶ್ರೀ ಕ್ಷೇತ್ರ ಧರ್ಮಸ್ಥಳ 800 ವರ್ಷಗಳ ಇತಿಹಾಸ ಹೊಂದಿದೆ. ಅನ್ನದಾನ, ವಿದ್ಯಾದಾನ, ಔಷಧದಾನ ಹಾಗೂ ಅಭಯದಾನ ಸೇರಿ ನಾಲ್ಕು ವಿಧದ ದಾನಗಳಿಗೆ ಪ್ರಸಿದ್ಧಿ ಪಡೆದಿದೆ. ಪ್ರತಿಯೊಬ್ಬ ಭಕ್ತರನ್ನು ದೇವರಂತೆ ಕಾಣಲಾಗುತ್ತಿದೆ. ಸರತಿ ಸಾಲಿನಲ್ಲಿ ಕಾಯುವ ಅವಧಿಯಲ್ಲಿ ಭಕ್ತರಿಗೆ ಇನ್ನೂ ಹೆಚ್ಚಿನ ಸುಧಾರಿತ ಸೌಲಭ್ಯಗಳನ್ನು ಒದಗಿಸುವ ದೃಷ್ಟಿಯಿಂದ ವಿಶೇಷ ವೈಶಿಷ್ಟ್ಯಗಳೊಂದಿಗೆ ಹೊಸ ಸರತಿ ಸಾಲಿನ ಸಂಕೀರ್ಣ ‘ಶ್ರೀ ಸಾನ್ನಿಧ್ಯ’ ನಿರ್ಮಿಸಲಾಗಿದೆ ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ತಿಳಿಸಿದರು.