ಮಡಂತ್ಯಾರು: ನಾವು ಯಾವ ಕುಟುಂಬದಲ್ಲಿ ಜನಿಸಿದ್ದೇವೆ, ಎಷ್ಟು ಬಡತನ ಇದೆ ಅದು ಮುಖ್ಯವಲ್ಲ, ಬರೀ ಹಣ ಮಾಡುವುದು ಮಾತ್ರ ಯಶಸ್ಸು ಅಲ್ಲ. ಸಂತೋಷದಿಂದ ಬದುಕಲು ಕಲಿಯುವುದೇ ನಿಜವಾದ ಯಶಸ್ಸು. ದೊಡ್ಡ ದೊಡ್ಡ ಪದವಿಗಳಿದ್ದರೂ ಗುರಿಯಿಲ್ಲದ ಜೀವನ ವ್ಯರ್ಥ.
ನಮಗೆ ನಾವೇ ಆಸ್ತಿಗಳಾಗಬೇಕು. ಸಮಯಕ್ಕೆ ಸರಿಯಾಗಿ ಕೆಲಸ ಮಾಡಿದಾಗ ಸಮಯ ಯಾವತ್ತೂ ನಮ್ಮ ಜೊತೆಗೇ ಇರುತ್ತದೆ. ಕಠಿಣ ಪರಿಶ್ರಮದಿಂದ ಯಶಸ್ಸು ಗಳಿಸಲು ಸಾಧ್ಯ ಎಂದು ಮೂಡುಬಿದಿರೆ ಲೆಕ್ಸಾ ಲೈಟಿಂಗ್ ಟೆಕ್ನಾಲಜಿ ಲಿಮಿಟೆಡ್ ನ ಸಂಸ್ಥಾಪಕ ಮತ್ತು ಕಾರ್ಯನಿರ್ವಾಹಕ, ನಿರ್ದೇಶಕ ರೊನಾಲ್ಡ್ ಸಿಲ್ವನ್ ಡಿಸೋಜ ಹೇಳಿದರು.
ಅವರು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ವಿದ್ಯಾರ್ಥಿಗಳು ಚಿಕ್ಕ ಚಿಕ್ಕ ಕೆಲಸಗಳಲ್ಲಿ ಭಾಗಿಯಾಗ ಬೇಕು. ದುರಭ್ಯಾಸಗಳಿಗೆ ಬಲಿಯಾಗದೆ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಸವಾಲನ್ನು ಮೆಟ್ಟಿ ನಿಂತು ಮುಂದೆ ಸಾಗುವನು ಜೀವನದಲ್ಲಿ ಸಫಲನಾಗುತ್ತಾನೆ. ಎಂದು ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹೇಳಿದರು.
ಸೇಕ್ರೆಡ್ ಹಾರ್ಟ್ ವಿದ್ಯಾ ಸಂಸ್ಥೆಗಳ ಜೊತೆ ಕಾರ್ಯದರ್ಶಿ ವಂ. ಡಾ. ಸ್ಟ್ಯಾನಿ ಗೋವಿಯಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸೇಕ್ರೆಡ್ ಹಾರ್ಟ್ ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷ ಜೆರಾಲ್ಡ್ ಮೋರಸ್ ಗೌರವ ಅತಿಥಿಗಳಾಗಿ ಪಾಲ್ಗೊಂಡರು.
ಸೇಕ್ರೆಡ್ ಹಾರ್ಟ್ ಪ್ರೌಢ ಶಾಲಾ ಹಾಗೂ ಕಾಲೇಜು ವಿಭಾಗದ ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷ ಐವನ್ ಸಿಕ್ವೇರಾ, ವಿಲಿಯಂ ಪಿಂಟೋ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜಶೇಖರ ಶೆಟ್ಟಿ, ಕಾಲೇಜು ವಿಭಾಗದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗ್ಲೆನ್ ಪ್ರೀತಂ ರೊಡ್ರಿಗಸ್, ಪ್ರೌಢಶಾಲಾ ವಿಭಾಗದ ಮಹಮ್ಮದ್ ಸಫ್ವಾನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸೇಕ್ರೆಡ್ ಹಾರ್ಟ್ ವಿದ್ಯಾ ಸಂಸ್ಥೆಯ ಹಿರಿಯ ವಿದ್ಯಾರ್ಥಿಯಾಗಿರುವ ರೊನಾಲ್ಡ್ ಸಿಲ್ವನ್ ಡಿಸೋಜ ಅವರು ಲೈಟಿಂಗ್ ಕ್ಷೇತ್ರದಲ್ಲಿ ಮಾಡಿರುವ ಅಭೂತಪೂರ್ವ ಸಾಧನೆಗಾಗಿ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಸೂರಜ್ ಚಾರ್ಲ್ಸ್ ನ್ಯೂನೆಸ್ ವಾರ್ಷಿಕ ವರದಿ ವಾಚಿಸಿದರು. ಸೇಕ್ರೆಡ್ ಹಾರ್ಟ್ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶಾಂತಿ ಮೇರಿ ಡಿಸೋಜ ಸ್ವಾಗತಿಸಿದರು. ಉಪನ್ಯಾಸಕ ವಿನ್ಸೆಂಟ್ ರೊಡ್ರಿಗಸ್, ಸಂಸ್ಥಾಪಕ ದಿ. ವಂ. ಲಿಗೋರಿ ಡಿಸೋಜ ರವರಿಗೆ ನುಡಿನಮನ ಸಲ್ಲಿಸಿದರು. ಸರಿತಾ ಶರಲ್ ಅಲ್ಮೇಡಾ ಹಾಗೂ ಜೊಯಿಲಿನ್ ಅಂದ್ರಾದೆ ಕಾರ್ಯಕ್ರಮ ನಿರೂಪಿಸಿದರು. ಹೇಮಲತಾ ಎಂ. ವಂದಿಸಿದರು.