ಬೆಳ್ತಂಗಡಿ: ದರೋಡೆ ಕೃತ್ಯದ ಆರೋಪ ಎದುರಿಸುತ್ತಿರುವ ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಭರತ್ ಕುಮಾರ್ ಶೆಟ್ಟಿ ಮತ್ತು ಮಂಗಳೂರು ಉಳ್ಳಾಲದ ಮಾಸ್ತಿಕಟ್ಟೆ ನಿವಾಸಿ ಫಾರೂಕ್ ಸಿ.ಕೆ. ಬಾವಾ ಎಂಬವವರ ಕಾಲಿಗೆ ಗುಂಡು ಹೊಡೆದು ಹುಬ್ಬಳ್ಳಿ ಸಿಸಿಬಿ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ದರೋಡೆ ಕೃತ್ಯ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರಿನಲ್ಲಿ ಬಂಧಿಸಿ ಹುಬ್ಬಳ್ಳಿಯ ಹಳೇಗಬ್ಬರದಲ್ಲಿ ಸ್ಥಳ ಮಹಜರಿಗೆ ಒಯ್ದಿದ್ದ ವೇಳೆ ಪೊಲೀಸರಿಗೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಮಂಗಳೂರಿನ ಉಳ್ಳಾಲ ಮಾಸ್ತಿಕಟ್ಟೆ ನಿವಾಸಿ ಫಾರೂಕ್ ಸಿ.ಕೆ ಬಾವ ಹಾಗೂ ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಭರತ್ ಕುಮಾರ್ ಶೆಟ್ಟಿ ಎಂಬವರಿಗೆ ಸಿಸಿಬಿಯ ಪೊಲೀಸ್ ಇನ್ಸ್‌ಪೆಕ್ಟರ್ ಮಾರುತಿ ಗುಳ್ಳಾರಿ ಹಾಗೂ ಧಾರವಾಡ ಶಹರ ಠಾಣೆ ಎಸ್‌ಐ ಸ್ವಾತಿ ಮುರಾರಿ ಅವರು ಗುಂಡು ಹಾರಿಸಿ ಬಂಧಿಸಿದ್ದಾರೆ. ಗಾಯಗೊಂಡಿರುವ ಎಸ್‌ಐ ಸ್ವಾತಿ ಮುರಾರಿ, ಸಿಸಿಬಿಯ ಮಹಾಂತೇಶ ಮಾದರ, ಶ್ರೀಕಾಂತ ತಲ್ಲೂರ ಹಾಗೂ ಆರೋಪಿಗಳಾದ ಫಾರೂಕ್ ಮತ್ತು ಭರತ್ ಕುಮಾರ್ ಶೆಟ್ಟಿಯನ್ನು ಹುಬ್ಬಳ್ಳಿ ಕೆಎಂಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ನ.೮ರಂದು ನಸುಕಿನಲ್ಲಿ 3.30ರ ವೇಳೆಗೆ ಹುಬ್ಬಳ್ಳಿ ರೈಲು ನಿಲ್ದಾಣ ಬಳಿಯಲ್ಲಿ ಸಾಂಗ್ಲಿ ಮೂಲದ ರಾಹುಲ್ ಸುರ್ವೆ ಎಂಬವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ೧೨ ಜನರಿದ್ದ ತಂಡ ಅಡ್ಡಗಟ್ಟಿ 6.50 ಲಕ್ಷ ರೂ. ನಗದು, ಮೊಬೈಲ್ ಫೋನ್ ಹಾಗೂ ಇತರ ವಸ್ತುಗಳನ್ನು ದರೋಡೆಗೈದು ಪರಾರಿಯಾಗಿತ್ತು. ಈ ಕುರಿತು ಹುಬ್ಬಳ್ಳಿ ಶಹರ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಲು ಹುಬ್ಬಳ್ಳಿ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ನೇತೃತ್ವದಲ್ಲಿ ಸಿಸಿಬಿ ಪೊಲೀಸರ ತಂಡವನ್ನು ನಿಯೋಜನೆ ಮಾಡಲಾಗಿತ್ತು. ಆರೋಪಿಗಳಾದ ಫಾರೂಕ್ ಸಿ.ಕೆ. ಬಾವಾ ಮತ್ತು ಭರತ್ ಕುಮಾರ್ ಶೆಟ್ಟಿಯನ್ನು ಮಂಗಳೂರಿನಲ್ಲಿ ಬಂಧಿಸಿ ದರೋಡೆ ಘಟನೆ ನಡೆದ ಹಳೇಗಟ್ಟೂರು ಎಂಬಲ್ಲಿಗೆ ಮಹಜರಿಗೆ ಕರೆದೊಯ್ಯಲಾಗಿತ್ತು. ಈ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ಪರಾರಿಯಾಗಲು ಪ್ರಯತ್ನಿಸಿದಾಗ ಕಾಲಿಗೆ ಗುಂಡು ಹೊಡೆದು ಬಂಧಿಸಲಾಗಿದೆ. ಬಂಧಿತ ಆರೋಪಿಗಳಿಬ್ಬರ ವಿರುದ್ಧ ಈಗಾಗಲೇ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವಾರು ಕೇಸು ದಾಖಲಾಗಿದೆ. ದರೋಡೆ ತಂಡದಲ್ಲಿ ಮಂಗಳೂರು ಮತ್ತು ಕಾಸರಗೋಡುನವರು ಇದ್ದಾರೆ ಎಂಬ ಮಾಹಿತಿ ಕಲೆ ಹಾಕಿರುವ ಹುಬ್ಬಳ್ಳಿ ಪೊಲೀಸರು ಕಾರ್ಯಾಚರಣೆ ಮುಂದುವರಿಸುತ್ತಿದ್ದಾರೆ.