

ಬೆಳ್ತಂಗಡಿ: ಸುದ್ದಿ ಅರಿವು ಕೇಂದ್ರ, ಸುದ್ದಿ ಬಿಡುಗಡೆ ಪತ್ರಿಕೆ ಮತ್ತು ಸುದ್ದಿ ನ್ಯೂಸ್ ಚಾನಲ್ ಬಳಗದ ನೇತೃತ್ವದಲ್ಲಿ ಪ್ರತೀ ಗ್ರಾಮದಲ್ಲಿರುವ ಶಾಲೆ, ಸೊಸೈಟಿ, ಪಂಚಾಯತ್, ದೇವಸ್ಥಾನ, ದೈವಸ್ಥಾನ, ಪ್ರಾರ್ಥನಾಲಯ, ಉದ್ದಿಮೆ, ಪ್ರೇಕ್ಷಣೀಯ ಸ್ಥಳ ಮತ್ತು ದೇಶವಿದೇಶ ಸಹಿತ ಪರವೂರಿನಲ್ಲಿರುವವರ ಮಾಹಿತಿ ಸಂಗ್ರಹಿಸಿ ಜಗತ್ತಿಗೆ ಒದಗಿಸುವ ನಮ್ಮೂರು-ನಮ್ಮ ಹೆಮ್ಮೆ ಅರಿವು ಅಭಿಯಾನದ ಪ್ರಥಮ ಸಭೆ ಬೆಳ್ತಂಗಡಿ ತಾಲೂಕಿನ ಬಳಂಜ ಗ್ರಾಮದಲ್ಲಿ ಡಿ.೬ರಂದು ನಡೆಯಿತು.
ಗ್ರಾಮದಲ್ಲಿ ಸಂಗ್ರಹಿಸಿರುವ ಮಾಹಿತಿಗಳನ್ನು ಸಭೆಯಲ್ಲಿ ಪ್ರದರ್ಶಿಸಲಾಯಿತಲ್ಲದೆ ಗ್ರಾಮಸ್ಥರಿಂದ ಮಾಹಿತಿ ಮತ್ತು ಅಭಿಪ್ರಾಯ ಪಡೆದುಕೊಳ್ಳಲಾಯಿತು. ಗ್ರಾ.ಪಂ. ಸಭಾಂಗಣದಲ್ಲಿ ಗ್ರಾ.ಪಂ. ಅಧ್ಯಕ್ಷೆ ಶೋಭಾ ಕುಲಾಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಜಾಗೃತಿ ವೇದಿಕೆ ಸ್ಥಾಪಕಾಧ್ಯಕ್ಷ ವಸಂತ ಸಾಲ್ಯಾನ್ ದೀಪ ಬೆಳಗಿಸಿ ಉದ್ಘಾಟಿಸಿದರು. ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ. ಶಿವಾನಂದ ಅವರು ಮಾಹಿತಿ ನೀಡಿದರು.
ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಲು ಪತ್ರಿಕೆಯವರಿಗೆ ಎದೆಗಾರಿಕೆ ಬೇಕು-ವಸಂತ ಸಾಲ್ಯಾನ್: ಸಭೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಜಾಗೃತಿ ವೇದಿಕೆ ಸ್ಥಾಪಕಾಧ್ಯಕ್ಷರೂ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರೂ ಬಳಂಜ ಮಂಡಲ ಪಂಚಾಯತ್‌ನ ಮಾಜಿ ಪ್ರಧಾನರೂ, ಪ್ರಗತಿಪರ ಕೃಷಿಕರೂ ಆಗಿರುವ ವಸಂತ ಸಾಲಿಯಾನ್ ಕಾಪಿನಡ್ಕ ಅವರು ಮಾತನಾಡಿ ಸುದ್ದಿ ಬಳಗದವರು ಹಮ್ಮಿಕೊಂಡಿರುವ ನಮ್ಮ ಊರು ನಮ್ಮ ಹೆಮ್ಮೆ ಯೋಜನೆ ಉತ್ತಮ ಕಾರ್ಯಕ್ರಮ ಎಂದರು. ವೈದ್ಯರಾಗಿದ್ದ ಡಾ.ಯುಪಿ ಶಿವಾನಂದ ಅವರು ಸಮಾಜ ಸೇವೆ ಮಾಡುತ್ತಾ ಬಂದವರು. ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಲೇ ಪತ್ರಿಕೆ ಆರಂಭಿಸಿದವರು. ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಲೂ ಪತ್ರಿಕೆಯವರಿಗೆ ಎದೆಗಾರಿಕೆ ಬೇಕು. ೪೦ ವರ್ಷಗಳಿಂದ ಪುತ್ತೂರು, ಸುಳ್ಯ ಮತ್ತು ಬೆಳ್ತಂಗಡಿಯಲ್ಲಿ ಸುದ್ದಿ ಬಿಡುಗಡೆ ಪತ್ರಿಕೆಯವರು ಒಳ್ಳೆಯ ಕಾರ್ಯಕ್ರಮ ಮಾಡುತ್ತಿದ್ದಾರೆ. ಪತ್ರಿಕೆ ಮಾತ್ರವಲ್ಲದೆ ಮಾಹಿತಿ ನೀಡುವ ಕೆಲಸವನ್ನು ಸುದ್ದಿಯವರು ಮಾಡುತ್ತಿದ್ದಾರೆ. ಇದರಿಂದ ಎಷ್ಟೋ ಮಂದಿಗೆ ಪ್ರಯೋಜನವಾಗಿದೆ ಎಂದು ಹೇಳಿದ ವಸಂತ ಸಾಲ್ಯಾನ್ ಅವರು ಬಳಂಜ ಗ್ರಾಮ ಪಂಚಾಯತ್ ಅಭಿವೃದ್ಧಿಗೆ ನಾವೆಲ್ಲರೂ ಸಹಕಾರ ನೀಡುವ ಎಂದರು. ನಮ್ಮ ಊರು ನಮ್ಮ ಹೆಮ್ಮೆ ಯೋಜನೆಯ ಮೊದಲ ಕಾರ್ಯಕ್ರಮವನ್ನು ಬಳಂಜದಲ್ಲಿ ಆರಂಭ ಮಾಡಿರುವುದು ಅತ್ಯಂತ ಖುಷಿಯಾಗಿದೆ ಎಂದರು.
ಉತ್ತಮ ಕಾರ್ಯಕ್ರಮ -ಶೋಭಾ ಕುಲಾಲ್: ಅಧ್ಯಕ್ಷತೆ ವಹಿಸಿದ್ದ ಬಳಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶೋಭಾ ಕುಲಾಲ್ ಮಾತನಾಡಿ ನಮ್ಮ ಊರು ನಮ್ಮ ಹೆಮ್ಮೆ ಮೊದಲ ಕಾರ್ಯಕ್ರಮ ಬಳಂಜದಲ್ಲಿ ನಡೆದಿರುವುದು ಖುಷಿ ತಂದಿದೆ. ಇದು ಉತ್ತಮ ಯೋಜನೆಯಾಗಿದೆ ಈ ಕಾರ್ಯಕ್ರಮ ಯಶಸ್ವಿಯಾಗಿ ಮುಂದುವರಿಯಲಿ. ತಾಲೂಕಿನ ಎಲ್ಲಾ ಮನೆಗಳ ಜನರಿಗೆ ಮಾಹಿತಿ ಒದಗಿಸುವ ಕಾರ್ಯ ಆಗಬೇಕು. ನಮ್ಮ ಊರು ನಮ್ಮ ಹೆಮ್ಮೆ ಕಾರ್ಯಕ್ರಮ ಎಲ್ಲಾ ಗ್ರಾಮಗಳಲ್ಲಿಯೂ ನಡೆಯುವಂತಾಗಲಿ ಎಂದರು.
ನಾವು ಕೈಜೋಡಿಸ ಬೇಕು-ಧರ್ಣಪ್ಪ ಪೂಜಾರಿ: ಮುಖ್ಯ ಅತಿಥಿಯಾಗಿದ್ದ ತಾಲೂಕು ಪಂಚಾಯತ್ ಮಾಜಿ ಸದಸ್ಯರೂ ಬೆಳ್ತಂಗಡಿ ಶ್ರೀ ನಾರಾಯಣ ಸೇವಾ ಸಂಘದ ಮಾಜಿ ಕಾರ್ಯದರ್ಶಿ, ಶ್ರೀ ಗುರುದೇವ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕ ಎಚ್. ಧರ್ಣಪ್ಪ ಪೂಜಾರಿ ಮಾತನಾಡಿ ನಮ್ಮ ಊರು ನಮ್ಮ ಹೆಮ್ಮೆ ಅತ್ಯುತ್ತಮ ಕಾರ್ಯಕ್ರಮವಾಗಿದೆ. ಸ್ವಚ್ಛ ಭಾರತ ಆಗಬೇಕಾದರೆ ನಾವು ಸ್ವಚ್ಛ ಆಗಬೇಕು. ಮನೆ ಸ್ವಚ್ಛ ಆಗಬೇಕು. ಆಗ ಮಾತ್ರ ಸ್ವಚ್ಛ ದೇಶ ಮಾಡಲು ಸಾಧ್ಯ ಎಂದರು. ಡಾ.ಯು.ಪಿ. ಶಿವಾನಂದರು ಭ್ರಷ್ಟಾಚಾರದ ಬಗ್ಗೆ ಬರೆಯುತ್ತಿದ್ದರು. ಅದನ್ನು ಯಾವಾಗಲೂ ಓದುತ್ತೇನೆ. ಡಾ. ಶಿವಾನಂದರವರು ಯಾವುದೇ ಯೋಜನೆಗಳು ತರಬಹುದು. ಯಾವುದೇ ಪ್ರಯತ್ನ ಮಾಡಬಹುದು. ಅದು ಯಶಸ್ವಿ ಆಗಬೇಕಾದರೆ ನಾವು ಅವರೊಟ್ಟಿಗೆ ಕೈ ಜೋಡಿಸಬೇಕು ಎಂದು ಅವರು ಹೇಳಿದರು.
ಅರ್ಥಪೂರ್ಣ ಕಾರ್ಯಕ್ರಮಕ್ಕೆ ಸಂಪೂರ್ಣ ಬೆಂಬಲ ಇದೆ-ಗಣೇಶ್ ಶೆಟ್ಟಿ: ಕಾರ್ಯಕ್ರಮ ಸಂಯೋಜಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಬಳಂಜ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ ಅವರು ನಮ್ಮ ಊರು ನಮ್ಮ ಹೆಮ್ಮೆ ಕಾರ್ಯಕ್ರಮ ಒಳ್ಳೆಯ ಕಾರ್ಯಕ್ರಮ. ಈ ಅರ್ಥಪೂಣ ಕಾರ್ಯಕ್ರಮಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ. ಯಾವುದೇ ಕೆಲಸ ಮಾಡುವಾಗ ಅದು ನಮ್ಮದು ಎನ್ನುವ ರೀತಿಯಲ್ಲಿ ಕೆಲಸ ಮಾಡಬೇಕು. ನಮ್ಮ ಊರು ನಮ್ಮ ಹೆಮ್ಮೆ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರೂ ಇದರಲ್ಲಿ ಭಾಗವಹಿಸಬೇಕು ಎಂದರು. ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯು.ಪಿ. ಶಿವಾನಂದ ಅವರು ದೂರದೃಷ್ಠಿ ಯೋಜನೆ ಹೊಂದಿರುವವರು. ಪ್ರತೀ ಕಾರ್ಯಕ್ರಮವನ್ನು ವೈಜ್ಞಾನಿಕವಾಗಿ ಮಾಡುವವರು ಎಂದು ಹೇಳಿದ ಗಣೇಶ್ ಶೆಟ್ಟಿ ಅವರು ಸುದ್ದಿ ಬಿಡುಗಡೆಯವರು ಒಳ್ಳೆಯ ರೀತಿಯ ಕಾರ್ಯಕ್ರಮ ಮಾಡುತ್ತಿದ್ದಾರೆ ಎಂದರು.
ಏನು ಆಗಬೇಕು ಎಂಬುದನ್ನು ನಾವು ಮೊದಲು ಪಟ್ಟಿ ಮಾಡಬೇಕು-ಹರೀಶ್ ಬಂಟ್ವಾಳ್: ಸುಳ್ಯ ಸುದ್ದಿ ಬಿಡುಗಡೆ ಪತ್ರಿಕೆಯ ಸಂಪಾದಕ ಹರೀಶ್ ಬಂಟ್ವಾಳ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಡಾ.ಯು.ಪಿ ಶಿವಾನಂದರವರು ಪ್ರತಿಕೆಗಿಂತ ಜಾಸ್ತಿ ಮಾಹಿತಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಿದ್ದಾರೆ. ಅವರು ಪ್ರತಿ ಗ್ರಾಮಗಳಲ್ಲಿ ಈ ಹಿಂದೆ ಮಾಹಿತಿ ಕೇಂದ್ರವನ್ನು ಆರಂಭಿಸಿದ್ದರು. ಸುದ್ದಿ ಬಿಡುಗಡೆ ಪ್ರತಿಕೆ ಸಮುದಾಯ ಪತ್ರಿಕೆ. ಯಾರದೇ ಮನೆಯಲ್ಲಿ ಹುಟ್ಟಲಿ, ಮದುವೆಯಾಗಲಿ, ತೀರಿಕೊಂಡರೂ ಪ್ರತಿಕೆ ಮೂಲಕ ಜನರಿಗೆ ಗೊತ್ತಾಗುತ್ತಿದೆ. ೨೦೦೦ ಇಸವಿಯಲ್ಲಿ ಯಾರೆಲ್ಲಾ ಗ್ರಾಮದಲ್ಲಿ ಇದ್ದಾರೆ, ಯಾವ ಯಾವ ಕೆಲಸ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಸಂಗ್ರಹಣೆ ಮಾಡಿದ್ದೆವು. ಈಗ ಮಾಹಿತಿ ಕೇಂದ್ರದ ಬದಲು ಅರಿವು ಕೃಷಿ ಕೇಂದ್ರ ಪ್ರಾರಂಭ ಮಾಡಿzವೆ ಎಂದರು. ನಮ್ಮ ಊರು ನಮ್ಮ ಹೆಮ್ಮೆ ಕಾರ್ಯಕ್ರಮ ಯಶಸ್ವಿ ಆಗಬೇಕಾದರೆ ನಮ್ಮ ಊರಿನಲ್ಲಿ ಈಗ ಏನು ಇದೆ. ಮುಂದೆ ಏನು ಆಗಬೇಕು ಎಂಬುದನ್ನು ನಾವು ಮೊದಲು ಪಟ್ಟಿ ಮಾಡಬೇಕು ಎಂದು ಹೇಳಿದ ಅವರು ೧೯೮೯ರಿಂದ ೧೯೯೧ರವರಗೆ ಬೆಳ್ತಂಗಡಿ ಸುದ್ದಿ ಬಿಡುಗಡೆಯಲ್ಲಿ ವರದಿಗಾರನಾಗಿದ್ದೆ. ಆ ಸಂದರ್ಭದಲ್ಲಿ ಬಳಂಜಕ್ಕೆ ಬರುತ್ತಿದ್ದೆ ಮತ್ತು ತಾಲೂಕಿನ ೮೧ ಗ್ರಾಮಕ್ಕೂ ಕೂಡ ಹೋಗುತ್ತಿದ್ದೆ ಎಂದು ಸ್ಮರಿಸಿದರು.
ಸುದ್ದಿ ಬಿಡುಗಡೆಯವರಿಗೆ ಪತ್ರಿಕೆ ಎಂದರೆ ಧರ್ಮ-ಸಂತೋಷ್ ಕಾಪಿನಡ್ಕ: ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿರುವ ಆರ್‌ಎಸ್‌ಎಸ್ ಮುಂದಾಳು ಸಂತೋಷ್ ಕುಮಾರ್ ಕಾಪಿನಡ್ಕ ಅವರು ಮಾತನಾಡಿ ಪ್ರತಿಕೆ ಎನ್ನುವಂತಹದ್ದು ಧರ್ಮವಾಗಿ ಉಳಿಯದೆ ಉದ್ಯಮವಾಗಿ ಬದಲಾಗುತ್ತಿದೆ. ಡಾ. ಯು.ಪಿ. ಶಿವಾನಂದರು ಮತ್ತು ಅವರ ತಂಡಕ್ಕೆ ಪ್ರತಿಕೆ ಎಂದರೆ ಅದು ಧರ್ಮ ಎಂಬಂತಾಗಿದೆ. ನಮ್ಮ ಊರು ನಮ್ಮ ಹೆಮ್ಮೆ ಕಾರ್ಯಕ್ರಮಕ್ಕೆ ಪ್ರಥಮವಾಗಿ ನಮ್ಮ ಬಳಂಜವನ್ನು ಆಯ್ಕೆ ಮಾಡಿರುದಕ್ಕೆ ನಾನು ಸುದ್ದಿ ಬಿಡುಗಡೆ ಬಳಗವನ್ನು ಅಭಿನಂದಿಸುತ್ತೇನೆ. ಈ ಕಾರ್ಯಕ್ರಮ ಪಂಚಾಯತ್‌ನ ಅಭಿವೃದ್ಧಿಗೆ ಪೂರಕವಾಗಿ ಇದೆ ಎಂದು ಹೇಳಿದರು. ವ್ಯಕ್ತಿ ನಿರ್ಮಾಣವಾದರೆ ದೇಶ ನಿರ್ಮಾಣವಾಗುತ್ತದೆ ಎಂಬುದು ಡಾ. ಶಿವಾನಂದರ ಕಲ್ಪನೆ ಎಂದು ಅವರು ಈಗಾಗಲೇ ತಿಳಿಸಿದ್ದಾರೆ. ಅದೇ ಚಿಂತನೆಯಲ್ಲಿ ರಾಷ್ಟ್ರ ಕಟ್ಟುವ ಕಾರ್ಯವನ್ನು ನಾವು ಸದಾ ಮಾಡುತ್ತಿದ್ದೇವೆ ಎಂದು ಸಂತೋಷ್ ಕಾಪಿನಡ್ಕ ಹೇಳಿದರು.
ಒಳ್ಳೆಯ ಕಾರ್ಯಕ್ರಮ -ವಿಶ್ವನಾಥ ಹೊಳ್ಳ: ಗ್ರಾಮಸ್ಥ ವಿಶ್ವನಾಥ ಹೊಳ್ಳ ಮಾತನಾಡಿ ನಮ್ಮ ಊರು ನಮ್ಮ ಹೆಮ್ಮೆ ಒಳ್ಳೆಯ ಕಾರ್ಯಕ್ರಮ. ನಾನು ವೃತ್ತಿ ಜೀವನವನ್ನು ಸುದ್ದಿ ಬಿಡುಗಡೆಯಲ್ಲಿ ಆರಂಭಿಸಿದ್ದೆ. ಸುದ್ದಿಯ ಮಾಹಿತಿ ವಿಭಾಗದಲ್ಲಿ ಕೆಲಸ ಮಾಡಿದ್ದೆ. ನಾನು ಅವರ ಎಲ್ಲಾ ಅನುಭವಗಳನ್ನು ತೆಗೆದುಕೊಂಡಿದ್ದೇನೆ. ಸಮಾಜದಲ್ಲಿ ದೊಡ್ಡ ಸ್ಥಾನದಲ್ಲಿ ಇzನೆ ಎಂದರೆ ಅದಕ್ಕೆ ಸುದ್ದಿಯೇ ಕಾರಣ. ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಎಂದರು.
ಸುದ್ದಿ ಬಿಡುಗಡೆ ನಿಷ್ಪಕ್ಷ ಪಾತವಾಗಿ ಬರೆಯುತ್ತದೆ -ಸಂದೀಪ್: ಅಳದಂಗಡಿಯ ಸಾಮಾಜಿಕ ಕಾರ್ಯಕರ್ತ ಸಂದೀಪ್ ಮಾತನಾಡಿ ನಮ್ಮ ಊರು ನಮ್ಮ ಹೆಮ್ಮೆ ಹೆಸರಿಗೆ ಆಕರ್ಷಿತನಾಗಿ ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಬಳಂಜ ಗ್ರಾಮ ಒಳ್ಳೆಯ ಗ್ರಾಮ. ಬಳಂಜ ಗ್ರಾಮದಲ್ಲಿ ಏನೇ ಕಾರ್ಯಕ್ರಮಯಾದರೂ ಕರೆ ಇಲ್ಲದಿದ್ದರೂ ನಾವು ಬರುತ್ತೇವೆ. ಸುದ್ದಿ ಬಿಡುಗಡೆ ಪ್ರತಿಕೆ ನಿಷ್ಪಕ್ಷಪಾತವಾಗಿ ಬರೆಯುತ್ತದೆ. ಈ ಕಾರ್ಯಕ್ರಮ ಒಳ್ಳೆಯ ರೀತಿಯಲ್ಲಿ ನಡೆಯಲಿ ಎಂದು ಹೇಳಿದರು.
ತುಂಬಾ ಖುಷಿ ತಂದಿದೆ-ರವೀಂದ್ರ ಅಮೀನ್: ಬಳಂಜ ಗ್ರಾಮ ಪಂಚಾಯತ್ ಸದಸ್ಯ ರವೀಂದ್ರ ಬಿ.ಅಮಿನ್ ಮಾತನಾಡಿ ನಮ್ಮ ಊರು ನಮ್ಮ ಹೆಮ್ಮೆ ಅಭಿಯಾನದ ಸಭೆ ನಮಗೆ ತುಂಬಾ ಖುಷಿ ತಂದಿದೆ. ನಾನು ಸುದ್ದಿ ಬಿಡುಗಡೆ ಪತ್ರಿಕೆಯನ್ನು ೩೮ ವರ್ಷಗಳಿಂದ ಓದುತ್ತಿದ್ದೇನೆ. ನಾನು ಬೆಂಗಳೂರುನಲ್ಲಿ ಇರುವಾಗ ಅಲ್ಲಿಗೆ ಪೇಪರನ್ನು ತರಿಸಿ ಓದುತ್ತಿದ್ದೆ. ನಾನು ಸುದ್ದಿ ಬಿಡುಗಡೆಯ ಅಭಿಮಾನಿ ಎಂದು ಹೇಳಲು ಖುಷಿಯಾಗುತ್ತದೆ. ಮತ್ತೆ ನೀವು ನಿಷ್ಕ್ಷಪಾತವಾಗಿ ಬರೆಯುತ್ತೀರಿ. ಅದು ನಮಗೆ ತುಂಬಾ ಖುಷಿಯಾಗುತ್ತದೆ ಎಂದು ಹೇಳಿದರು.
ಅಳಂದಂಗಡಿ ಸಹಕಾರ ಸಂಘದ ನಿರ್ದೇಶಕರಾದ ದೇಜಪ್ಪ ಪೂಜಾರಿ, ನಿತ್ಯಾನಂದ ಹೆಗ್ಡೆ, ಸುಬ್ರಹ್ಮಣ್ಯ ಭಟ್, ಜಯ ಶೆಟ್ಟಿ, ದಿನೇಶ್ ಪಿ.ಕೆ, ಪದ್ಮಾವತಿ, ಪಂಚಾಯತ್ ಸದಸ್ಯ ಯಕ್ಷತಾ, ಆನಂದ ನಾಯಕ್, ಶಶಿಕಲಾ, ಸೌಮ್ಯ, ಆನಂದ ಕೆ, ಭಾರತಿ, ವಿನೋದ ಮತ್ತಿತರರು ಅನಿಸಿಕೆ ವ್ಯಕ್ತಪಡಿಸಿ ಕಾರ್ಯಕ್ರಮಕ್ಕೆ ಬೆಂಬಲ ಘೋಷಿಸಿದರು.
ಸುದ್ದಿ ಬಿಡುಗಡೆ ಪತ್ರಿಕೆಯ ಸಿಇಓ ಸಿಂಚನ ಊರುಬೈಲು, ಸಂಪಾದಕ ಸಂತೋಷ ಕುಮಾರ್ ಶಾಂತಿನಗರ, ವ್ಯವಸ್ಥಾಪಕ ಮಂಜುನಾಥ್ ರೈ, ಸುದ್ದಿ ಬಳಗದ ಜಾರಪ್ಪ ಪೂಜಾರಿ ಬೆಳಾಲು, ಸಂದೀಪ್ ಶೆಟ್ಟಿ, ನಿಶಾನ್ ಬಂಗೇರ, ಪುಷ್ಪರಾಜ್ ಶೆಟ್ಟಿ, ಸುವಿರ್ ಜೈನ್, ಆದಿತ್ಯ ಶೆಟ್ಟಿ, ವನೀಶ್ ಬಂಗೇರ, ಬಳಂಜದ ಸುದ್ದಿ ಪ್ರತಿನಿಧಿ ಸದಾನಂದ ಸಾಲಿಯಾನ್, ಹಿರಿಯ ಪ್ರತಿನಿಧಿ ಕೃಷ್ಣಪ್ಪ ಪೂಜಾರಿ, ಸಂಜೀವಿನಿ ಒಕ್ಕೂಟದವರು, ಸ್ವಸಹಾಯ ಸಂಘದವರು, ಆಶಾ ಕಾರ್ಯಕರ್ತೆಯರು, ಸಂಘ ಸಂಸ್ಥೆಗಳ ಪ್ರಮುಖರು, ಪಂಚಾಯತ್ ಸಿಬ್ಬಂದಿಗಳು ಭಾಗವಹಿಸಿದ್ದರು. ಸುದ್ದಿ ನ್ಯೂಸ್ ಚಾನೆಲ್ ನಿರೂಪಕಿ ಶ್ರೇಯಾ ಪಿ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ಚಾನಲ್ ಮುಖ್ಯಸ್ಥ ದಾಮೋದರ ದೊಂಡೋಲೆ ವಂದಿಸಿದರು.
ನಮ್ಮ ಊರು ನಮ್ಮ ಹೆಮ್ಮೆ ಊರಿನವರ ಕಾರ್ಯಕ್ರಮ: ಡಾ.ಯು.ಪಿ. ಶಿವಾನಂದ
ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯು.ಪಿ. ಶಿವಾನಂದ ಅವರು ಕಾರ್ಯಕ್ರಮದಲ್ಲಿ ಮಾತನಾಡಿ ೩೯ ವರ್ಷಗಳ ಹಿಂದೆಯೇ ಬೆಳ್ತಂಗಡಿ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಬಳಂಜ ಗ್ರಾಮದ ಬಹಳಷ್ಟು ವರದಿ ಪ್ರಕಟ ಆಗಿದೆ. ಇಷ್ಟು ವರ್ಷದ ಅವಧಿಯಲ್ಲಿ ಬಳಂಜದಲ್ಲಿ ಏನೆಲ್ಲಾ ಅಭಿವೃದ್ಧಿ ಆಗಿದೆ ಎಂಬ ಮಾಹಿತಿ ನಮ್ಮ ಪತ್ರಿಕೆಯಲ್ಲಿ ಇದೆ. ನಮ್ಮ ಊರು ನಮ್ಮ ಹೆಮ್ಮೆ ಕಾರ್ಯಕ್ರಮ ಕೇವಲ ಸುದ್ದಿ ಬಿಡುಗಡೆಯ ಕಾರ್ಯಕ್ರಮ ಅಲ್ಲ. ಇದು ಗ್ರಾಮದ ಜನರ ಕಾರ್ಯಕ್ರಮ ಎಂದರು. ಬೆಳ್ತಂಗಡಿಯಲ್ಲಿ ಸುದ್ದಿ ಬಿಡುಗಡೆ ಪತ್ರಿಕೆ ಪ್ರಾರಂಭ ಮಾಡುವಾಗ ನಮಗೆ ವಸಂತ ಸಾಲಿಯಾನ್ ಅವರು ಅತ್ಯಂತ ಹೆಚ್ಚಿನ ಸಹಕಾರ ನೀಡಿದ್ದಾರೆ. ನಿಷ್ಪಕ್ಷಪಾತವಾದ ಹೆಮ್ಮೆಯ ರಾಜಕಾರಣಿ ವಸಂತ ಸಾಲಿಯಾನ್ ಅವರು ಪತ್ರಿಕೆಗೂ ಊರಿನ ಅಭಿವೃದ್ಧಿಗೂ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅದೇ ರೀತಿ ಪ್ರತಿಕೆಯ ಪ್ರಾರಂಭದಲ್ಲಿ ಶಾಸಕ ವಸಂತ ಬಂಗೇರ ಅವರೂ ಬಹಳ ಬೆಂಬಲ ಕೊಟ್ಟಿದ್ದಾರೆ. ತಾಲೂಕು ಪಂಚಾಯತ್ ಸದಸ್ಯರು, ಜಿಲ್ಲಾ ಪಂಚಾಯತ್ ಸದಸ್ಯರೂ ಉತ್ತಮ ಬೆಂಬಲ ಕೊಟ್ಟಿದ್ದಾರೆ ಎಂದು ಡಾ. ಶಿವಾನಂದರು ಸ್ಮರಿಸಿದರು. ಮೊದಲು ನನ್ನ ಮನೆ, ನನ್ನ ಪರಿಸರ, ನನ್ನ ಊರು, ನನ್ನ ಪಂಚಾಯತ್, ನನ್ನ ತಾಲೂಕು ಎಂಬ ಚಿಂತನೆ ಬೆಳೆಸಿಕೊಂಡಾಗ ನಮ್ಮ ದೇಶ, ನಮ್ಮ ಜಗತ್ತು ಎಂಬ ಚಿಂತನೆ ಬೆಳೆಯಲು ಸಾಧ್ಯ ಎಂದು ಹೇಳಿದ ಡಾ. ಯು.ಪಿ. ಶಿವಾನಂದ ಅವರು ನಮ್ಮ ಊರಿನಿಂದ ಪರವೂರಿಗೆ ಕಲಿಯಲು ಹೋದ ಮಕ್ಕಳು ಮತ್ತೆ ನಮ್ಮ ಊರಿನ ಬಗ್ಗೆ ಹೆಮ್ಮೆಯಿಂದ ಬರುವಂತಾಗಬೇಕು. ಹಾಗಾಗಿ ಇಲ್ಲಿ ಅವಶ್ಯಕ ವ್ಯವಸ್ಥೆಗಳನ್ನು ನಾವು ಮಾಡಿಕೊಳ್ಳಬೇಕು. ಒಂದು ಫ್ಲ್ಯಾಟ್‌ನೊಳಗೆ ಎಲ್ಲಾ ಸೌಕರ್ಯಗಳನ್ನು ಮಾಡುವುದಾದರೆ ಬಳಂಜ ಗ್ರಾಮದ ಜನರಿಗೆ, ಮಕ್ಕಳಿಗೆ ಇಲ್ಲಿ ಬೇಕಾದ ವ್ಯವಸ್ಥೆಗಳನ್ನು ನಾವು ಮಾಡಬೇಕು. ನಮ್ಮ ಊರಿನ ಸಣ್ಣ ಸಣ್ಣ ವ್ಯಾಪಾರ ಉದ್ದಿಮೆಗಳು ಬೆಳೆದು ದೊಡ್ಡ ಉದ್ದಿಮೆಯಾಗುವಂತಾಗಬೇಕು. ನಮ್ಮ ಹಳ್ಳಿಯ ಉತ್ಪನ್ನಗಳು ನಮ್ಮ ಹಳ್ಳಿ, ತಾಲೂಕು, ಜಿಲ್ಲೆ ರಾಜ್ಯಕ್ಕೆ ಹೋದಾಗ ನಮ್ಮ ಊರು ನಮಗೆ ಹೆಮ್ಮೆಯಾಗುತ್ತದೆ. ಅಲ್ಲದೆ ನಮ್ಮ ಊರಿನಲ್ಲಿ ಏನೆಲ್ಲಾ ಸವಲತ್ತು ಇಲ್ಲವೋ ಅವುಗಳನ್ನು ನಮ್ಮೂರಿನಲ್ಲಿ ಮಾಡುವಂತಾಗಬೇಕೇ ಹೊರತು ಅದಕ್ಕಾಗಿ ಪರವೂರಿಗೆ ಹೋಗುವಂತಾಗಬಾರದು ಎಂದು ಹೇಳಿದರಲ್ಲದೆ ನಮ್ಮ ಊರು ನಮ್ಮ ಹೆಮ್ಮೆ ಕಾರ್ಯಕ್ರಮವನ್ನು ಬಳಂಜ ಗ್ರಾಮದಲ್ಲಿ ಮುಂದುವರಿಸಲಾಗುವುದು. ಮಾಹಿತಿ ಸಂಗ್ರಹಿಸುವ ಕಾರ್ಯ ಮಾಡಲಾಗುವುದು. ಎಲ್ಲರೂ ಸಹಕಾರ ನೀಡಬೇಕು ಎಂದರು.
ವಾರಕ್ಕೊಂದು ದಿನ ಕಾರ್ಯಕ್ರಮ
ಸುದ್ದಿ ಅರಿವು ಕೃಷಿ ಕೇಂದ್ರದ ವತಿಯಿಂದ ಡಿ.೬ರಂದು ಬಳಂಜದಲ್ಲಿ ನಡೆದ ನಮ್ಮ ಊರು ನಮ್ಮ ಹೆಮ್ಮೆ ಅಭಿಯಾನದ ಸಭೆಯ ಮುಂದುವರಿದ ಭಾಗವಾಗಿ ಸಭೆಯಲ್ಲಿ ಪ್ರಸ್ತಾಪಿಸಲಾದ ವಿಷಯಗಳನ್ನು ಕಾರ್ಯಾರಂಭ ಮಾಡಲಾಗುತ್ತಿದೆ. ಬಳಂಜ ಗ್ರಾಮದ ಪ್ರತಿ ಮನೆಯವರ ಕಸುಬು, ದೂರವಾಣಿ ಸಂಖ್ಯೆಗಳ ಸಂಗ್ರಹ ಕಾರ್ಯ, ಕಾಲೋನಿ, ಶಾಲೆಗಳಿಗೆ ಸುದ್ದಿ ಬಿಡುಗಡೆ ಪ್ರತಿಕೆ ಕೊಡುಗೆಯಾಗಿ ಕಳುಹಿಸುವ ವ್ಯವಸ್ಥೆ ನಡೆಯಲಿದ್ದು ಗ್ರಾಮದ ಪ್ರತಿ ಮನೆಯವರು ಪತ್ರಿಕೆ ಖರೀದಿಸಿ ಓದುವ ಗುರಿ ಇರಿಸಲಾಗಿದೆ. ಅಲ್ಲದೆ ಪರ ಊರಿನಲ್ಲಿರುವ ಬಳಂಜದಲ್ಲಿರುವ ಮಾಹಿತಿ ಕಲೆ ಹಾಕಲಾಗುತ್ತಿದೆ. ವಿವಿಧ ಶಾಲೆಗಳ ಬೇಡಿಕೆಗೆ ಅನುಗುಣವಾಗಿ ದಾನಿಗಳ ಮುಖಾಂತರ ಕೆಲವು ವಸ್ತುಗಳನ್ನು ಕೊಡುಗೆಯಾಗಿ ನೀಡುವ ಬಗ್ಗೆಯೂ ವಿವಿಧ ಸಂಸ್ಥೆಗಳೊಡನೆ ಮಾತುಕತೆ ನಡೆಸಲಾಗುತ್ತಿದೆ. ವಾರದಲ್ಲಿ ಒಂದು ದಿನ ಬಳಂಜ ಪರಿಸರದಲ್ಲಿ ಮಾಹಿತಿ ಸಂಗ್ರಹ ಕಾರ್ಯ ನಡೆಯಲಿದೆ.