ಉಜಿರೆ: ಡಿ. 5 ರಂದು “ಹೆಸರೇ ಸೂಚಿಸುವಂತೆ ರಾಷ್ಟ್ರೀಯ ಸೇವಾ ಯೋಜನೆ ಎಂದರೆ, ನಮ್ಮನ್ನು ನಾವು ಸೇವೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದು. ಎನ್. ಎಸ್. ಎಸ್ ಎಂದರೆ ನನಗೆ ಮೊದಲು ನೆನಪಾಗುವುದು ಎಸ್. ಡಿ. ಎಂ ನ ಎನ್. ಎಸ್. ಎಸ್ ಘಟಕ. ನನ್ನ ಮತ್ತು ಶ್ರೀ ಧ. ಮಂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ನಂಟು ಬಹಳ ಆತ್ಮೀಯವಾದುದು” ಎಂದು ಉಜಿರೆಯ ಕನಸಿನ ಮನೆ ಲಕ್ಷ್ಮೀ ಇಂಡಸ್ಟ್ರೀಸ್ ಮಾಲಕ ಮತ್ತು ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್ ಹೇಳಿದರು.
ಬಂಗಾಡಿಯ ಇಂದಬೆಟ್ಟು (ಕಲ್ಲಾಜೆ) ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾದ ಉಜಿರೆ ಶ್ರೀ ಧ. ಮಂ. ಕಾಲೇಜಿನ ಒಂದು ವಾರದ ಎನ್.ಎಸ್. ಎಸ್ ವಾರ್ಷಿಕ ವಿಶೇಷ ಶಿಬಿರ 2024-25 ‘ಯೂತ್ ಫಾರ್ ಮೈ ಭಾರತ್ – ಯೂತ್ ಫಾರ್ ಡಿಜಿಟಲ್ ಲಿಟರಸಿ’ ಎಂಬ ಶೀರ್ಷಿಕೆಯಡಿಯಲ್ಲಿ ಡಿ. 5 ಠಂದು ಚಾಲನೆ ನೀಡಿ ಅವರು ಮಾತನಾಡಿದರು.
“ಶಿಕ್ಷಣ ಮಾತ್ರವಲ್ಲ, ಜೀವನ ಮೌಲ್ಯವೂ ಅಗತ್ಯ. ಹಾಗಿದ್ದರೆ ಮಾತ್ರ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ. ವಿದ್ಯಾರ್ಥಿಗಳ ಜೀವನಲ್ಲಿ ಆತ್ಮವಿಶ್ವಾಸ ತುಂಬಿ, ಜೀವನ ಮೌಲ್ಯಗಳನ್ನು ಕಲಿಸುವುದು ಎನ್.ಎಸ್. ಎಸ್. ಎಸ್. ಡಿ. ಎಂ ಕಾಲೇಜಿನ ಎನ್. ಎಸ್. ಎಸ್ ಘಟಕಗಳು ನಮ್ಮ ತಂಡದ ಜೊತೆಗೆ ಸೇರಿ ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ಕೈ ಜೋಡಿಸಿದೆ. ಮುಂದೆಯೂ ಕೂಡ ಸಮಾಜಕಾರ್ಯಕ್ಕೆ ನಮ್ಮ ತಂಡಕ್ಕೆ ನಿಮ್ಮ ಸಹಕಾರ ಹೀಗೇ ಇರಲಿ” ಎಂದು ಅವರು ಹೇಳಿದರು.
ಶಿಬಿರದ ಭಿತ್ತಿಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಮುಖ್ಯ ಅತಿಥ, ಎಸ್. ಡಿ. ಎಂ ಕಾಲೇಜಿನ ಆಡಳಿತಾಂಗ ಕುಲಸಚಿವೆ ಡಾ. ಶಲೀಪ್ ಕುಮಾರಿ, “ಸಮಾಜದೊಂದಿಗೆ ಬೆರೆಯುವುದು, ಹೊಸ ಊರಿನ ಜನರ ಜೊತೆ ಸೇರಿ ಅವರ ಸಮಸ್ಯೆಗಳನ್ನು ಅರಿಯುವುದು, ಅದಕ್ಕೆ ಬೇಕಾದಂತಹ ಪರಿಹಾರಗಳನ್ನು ಹುಡುಕುವುದು ಇದೆಲ್ಲದಕ್ಕೂ ಸರಿಹೊಂದುವಂತೆ ವಿದ್ಯಾರ್ಥಿಗಳನ್ನು ತಯಾರು ಮಾಡುವ ವಿಭಾಗವೇ ರಾಷ್ಟ್ರೀಯ ಸೇವಾ ಯೋಜನೆ ಎಂದು ಅಭಿಪ್ರಾಯಪಟ್ಟರು.
ಎನ್. ಎಸ್. ಎಸ್ ಎಂಬುದು ಸಂಬಂಧವನ್ನು, ಗೆಳೆತನವನ್ನು ಗಟ್ಟಿ ಮಾಡುತ್ತದೆ. ಎನ್. ಎಸ್. ಎಸ್ ನಿಂದ ಪಡೆದುಕೊಂಡ ಸ್ನೇಹ ಸಂಬಂಧಗಳು ಎಂದಿಗೂ ಜೊತೆಯಿರುತ್ತವೆ ಎಂದರು.
ಇನ್ನೋರ್ವ ಅತಿಥಿ ‘ಬೆಳ್ತಂಗಡಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕ ರಕ್ಷಕ ಸಂಘ (ರಿ.)’ದ ಅಧ್ಯಕ್ಷ ಕಿಶೋರ್ ಕುಮಾರ್, “ವಿದ್ಯಾರ್ಥಿ ಜೀವನದಲ್ಲಿ ನಾನು ಪಡೆದುಕೊಂಡಿದ್ದ ಎನ್. ಎಸ್. ಎಸ್ ಶಿಬಿರದ ಅನುಭವಗಳು ಈಗ ಮತ್ತೆ ಈ ಸಂದರ್ಭದಲ್ಲಿ ನನಗೆ ನೆನಪಾಗುತ್ತಿವೆ. ಪಠ್ಯವನ್ನು ಹೊರತುಪಡಿಸಿ ನಾವು ಏನೇ ಕಲಿತರೂ ಅದು ಒಂದು ಜೀವನ ಪಾಠ. ಜೀವನವು ಮುಂದೆ ಒಡ್ಡುವ ವಿವಿಧ ಸವಾಲುಗಳನ್ನು ಎದುರಿಸಲು ನಿಮಗೆಲ್ಲರಿಗೂ ಎನ್. ಎಸ್. ಎಸ್ ಧೈರ್ಯ ನೀಡಲಿ” ಎಂದರು. ರಾಷ್ಟ್ರ, ರಾಜ್ಯ ಮಟ್ಟದ ಪ್ರಶಸ್ತಿಯನ್ನು ಪಡೆದುಕೊಂಡದ್ದಕ್ಕಾಗಿ ಎನ್. ಎಸ್. ಎಸ್ ಘಟಕವನ್ನು ಅಭಿನಂದಿಸಿದರು.
ಇಂದಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ದೀಪಾ ಕಿರಣ್ ಕುಮಾರ್ ಶೆಟ್ಟಿ ಮಾತನಾಡಿದರು. “ಇಂದು ಇಲ್ಲಿ ನಡೆಯುತ್ತಿರುವ ಶಿಬಿರದಿಂದಾಗಿ ನಮ್ಮ ಊರಲ್ಲಿ, ನಮ್ಮ ಊರಿನ ಶಾಲೆಯಲ್ಲಿ ಹಬ್ಬದ ವಾತಾವರಣ ಉಂಟಾಗಿದೆ. ಏಳು ವರ್ಷಗಳ ಹಿಂದೆ ಇಲ್ಲಿ ಇದೇ ಶಾಲೆಯಲ್ಲಿ ಇದೇ ಉಜಿರೆ ಎಸ್. ಡಿ. ಎಂ ಕಾಲೇಜಿನ ಎನ್. ಎಸ್. ಎಸ್ ಶಿಬಿರ ನಡೆದಿದ್ದು, ಊರಿನವರು ಶಿಬಿರದ ಸಿಹಿ ಅನುಭವಿಸಿದ್ದಾರೆ. ಪ್ರಸ್ತುತ ಮತ್ತೊಮ್ಮೆ ಈ ಶಾಲೆಯು ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಅಂತಹ ಶಿಬಿರಕ್ಕೆ ಸಾಕ್ಷಿಯಾಗುತ್ತಿದೆ” ಎಂದು ಸಂತಸ ವ್ಯಕ್ತಪಡಿಸಿದರು.
“ಜ್ಞಾನವು ಕೇವಲ ಪುಸ್ತಕದಿಂದ ಸಿಗುವುದಲ್ಲ. ನಾಲ್ಕು ಜನರ ಜೊತೆ ಸೇರಿದಾಗ ಸಿಗುವಂತಹ ಅನುಭವ ಕೂಡ ಜ್ಞಾನವೇ. ಜ್ಞಾನದಿಂದ ಎಂದಿಗೂ ನಮಲ್ಲಿ ಅಹಂಕಾರ ತುಂಬಬಾರದು. ಜ್ಞಾನಕ್ಕೆ ಅಹಂಕಾರ ಎಂದಿಗೂ ಅಡ್ಡಿಯಾಗಬಾರದು. ಜ್ಞಾನ ಎಂಬುವುದು ವಜ್ರದಂತೆ ಎಂದಿಗೂ ನಮ್ಮಲ್ಲಿ ಹೊಳೆಯುತ್ತಾ ಇರಬೇಕು” ಎಂದರು.
ಅತಿಥಿ ಎಸ್. ಡಿ. ಎಂ ಕಾಲೇಜಿನ ಲೆಕ್ಕಪತ್ರ ವಿಭಾಗದ ಮುಖ್ಯಸ್ಥ ದಿವಾಕರ ಪಟವರ್ಧನ್ ಮಾತನಾಡಿದರು. “ನಾವು ಕಾಲೇಜಿನಲ್ಲಿ ವ್ಯಾಸಂಗ ಮಾಡುವ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಎನ್. ಎಸ್. ಎಸ್ ಎಂದರೆ ಏನೋ ಒಂದು ರೀತಿಯ ಭಯ ಇತ್ತು. ಆ ಭಯಕ್ಕೆ ಕಾರಣ ಎನ್. ಎಸ್. ಎನ್ ನಲ್ಲಿ ಪಡಬೇಕಾದ ಕಠಿಣ ಪರಿಶ್ರಮ ಮತ್ತು ಅಲ್ಲಿ ನಾವು ತೊಡಗಿಕೊಳ್ಳಬೇಕಾಗಿದ್ದ ಕೆಲಸಗಳು. ಆದರೆ ಇಂದು ಹಾಗಲ್ಲ. ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ಎನ್. ಎಸ್. ಎಸ್ ಗೆ ಸೇರಿಕೊಳ್ಳುತ್ತಿದ್ದಾರೆ ” ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಎ. ಕುಮಾರ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೇವಲ ಶಾಲೆ ಅಥವಾ ಕಾಲೇಜು ಶಿಕ್ಷಣ ವಿದ್ಯಾರ್ಥಿಗಳನ್ನು ಪರಿಪೂರ್ಣರನ್ನಾಗಿಸದು. ಎನ್. ಎಸ್. ಎಸ್ ಶಿಬಿರಗಳಂತಹ ಚಟುವಟಿಕೆಗಳು ವಿದ್ಯಾರ್ಥಿಗಳನ್ನು ಪರಿಪೂರ್ಣರನ್ನಾಗಿಸುತ್ತವೆ ಎಂದು ಅಭಿಪ್ರಾಯಪಟ್ಟರು. ಶಿಬಿರಕ್ಕೆ ವ್ಯವಸ್ಥೆ ಕಲ್ಪಿಸಿದ ಶಾಲೆ, ಗ್ರಾಮಸ್ಥರು ಹಾಗೂ ಶಿಬಿರ ಉದ್ಘಾಟಕರಿಗೆ ಕೃತಜ್ಞತೆ ಸಲ್ಲಿಸಿದರು.
ಸುಮಾರು 50 ವರ್ಷಗಳ ಹಿಂದೆ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರೂ ಗ್ರಾಮ ಜೀವನವನ್ನು ಅನುಭವಿಸುವ ಇಚ್ಛೆಯಿಂದ ಕುಂದಾಪುರದ ಭಂಡಾರ್ಕರ್ ಕಾಲೇಜಿನಲ್ಲಿ ಎನ್. ಎಸ್. ಎಸ್ ಶಿಬಿರವೊಂದರಲ್ಲಿ ಭಾಗವಹಿಸಿದ ಬೆಂಗಳೂರಿನ ಹುಡುಗಿ ಲಕ್ಷ್ಮಿಯ ಕತೆಯನ್ನು ಹಂಚಿಕೊಂಡರು.
ಡಿ. 8 ರಂದು ನಡೆಯಲಿರುವ ಆರೋಗ್ಯ ಶಿಬಿರದ ಭಿತ್ತಿಪತ್ರವನ್ನು ಇದೇ ಸಂದರ್ಭದಲ್ಲಿ ಅವರು ಬಿಡುಗಡೆಗೊಳಿಸಿದರು.
ಎಸ್. ಡಿ. ಎಂ ಕಾಲೇಜಿನ ನಿಕಟಪೂರ್ವ ಎನ್. ಎಸ್. ಎಸ್ ಯೋಜನಾಧಿಕಾರಿ ಲಕ್ಷ್ಮೀನಾರಾಯಣ ಕೆ. ಎಸ್., ಅಧ್ಯಾಪಕ ಗಣರಾಜ್ ಕೆ., ನಟರಾಜ್ ಹೆಚ್., ಭಾಗ್ಯಶ್ರೀ, ದೀಕ್ಷಿತ್ ರೈ , ಅಭಿಲಾಷ್ ಕೆ. ಎಸ್., ಇಂದಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಆನಂದ ಕೊಪ್ಪದಕೋಡಿ, ಶಿಬಿರದ ಸ್ವಾಗತ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಕಲ್ಲಾಜೆ, ಶಿಬಿರಾಧಿಕಾರಿಗಳಾದ ಶೃತಿ ಮಣಕೀಕರ್ ಮತ್ತು ಅಮಿತ್ ಕುಮಾರ್, ಪ್ರಗತಿಪರ ಕೃಷಿಕ ಇನಾಸ್ ಮೋನಿಸ್ ಮತ್ತಿತರರು ಉಪಸ್ಥಿತರಿದ್ದರು.
ರಾ. ಸೇ. ಯೋಜನಾಧಿಕಾರಿ ಡಾ. ಮಹೇಶ್ ಕುಮಾರ್ ಶೆಟ್ಟಿ ಹೆಚ್. ಸ್ವಾಗತಿಸಿ, ಪ್ರಸ್ತಾವಿಸಿದರು. ಇನ್ನೋರ್ವ ಯೋಜನಾಧಿಕಾರಿ ಪ್ರೊ. ದೀಪಾ ಆರ್. ಪಿ. ವಂದಿಸಿದರು. ಸ್ವಯಂಸೇವಕಿಯರಾದ ಶ್ವೇತ ಕೆ. ಜಿ ಮತ್ತು ವರ್ಷ ವಿ ಕಾರ್ಯಕ್ರಮ ನಿರೂಪಿಸಿದರು.