ಕುಪ್ಪೆಟ್ಟಿಯ ಶೋಭಾರಿಂದ ಆಪರೇಷನ್ ರಾಕ್ ಪೈಥಾನ್- 900 ಹಾವು ಹಿಡಿದ ಮಹಿಳೆಗೆ ಸೋಷಿಯಲ್ ಮೀಡಿಯಾದಲ್ಲಿ ಧೀರ ಮಹಿಳೆ ಬಿರುದು

0

ಬೆಳ್ತಂಗಡಿ: ಹೆಬ್ಬಾವನ್ನು ಸೆರೆ ಹಿಡಿದ ಮಹಿಳೆಯ ಸಾಹಸಮಯ ವಿಡಿಯೋ ನ.೪ರಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿತ್ತು. ಬಹುತೇಕ ಮಾಧ್ಯಮಗಳು ಮಹಿಳೆ ಯಾರೆಂದು ತಿಳಿಯದೆ, ಆ ಊರಿನವರು ಇರಬಹುದು, ಈ ಊರಿನವರು ಇರಬಹುದು ಎಂದೇ ಬರೆದಿದ್ದವು. ಆ ಮಹಿಳೆ ಬೇರೆ ಯಾರೂ ಅಲ್ಲ, ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ಕುಪ್ಪೆಟ್ಟಿಯ ಶೋಭಾ!
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗುರುವಾಯನಕೆರೆ ಕಚೇರಿ ವ್ಯಾಪ್ತಿಯ ತಣ್ಣೀರುಪಂತ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕಿ ಶೋಭಾ ಐದು ವರ್ಷಗಳಿಂದ ತಮ್ಮ ಊರಿನ ಸುತ್ತಮುತ್ತಲಿನ ಪ್ರದೇಶದಲ್ಲಿ ೯೦೦ಕ್ಕೂ ಅಧಿಕ ಹಾವುಗಳನ್ನು ಹಿಡಿದು ರಕ್ಷಿಸಿದವರು. ಇವರ ಕುರಿತು ಸುದ್ದಿ ಬಿಡುಗಡೆ ಪತ್ರಿಕೆ ಇದೇ ವರ್ಷದ ಜುಲೈ ತಿಂಗಳಲ್ಲಿ ವಿಶೇಷ ವರದಿ ಪ್ರಕಟಿಸಿತ್ತು.

ಮಹಿಳೆಯ ಸಾಹಸಕ್ಕೆ ಪ್ರಶಂಸೆ: ಉರುವಾಲು ಗ್ರಾಮದ ಕುಪೆಟ್ಟಿ ಸಮೀಪದ ನೆಕ್ಕಿಲು ಜಾರಿಗೆದಡಿ ಎಂಬಲ್ಲಿ ನ.೩ರಂದು ಬೆಕ್ಕೊಂದನ್ನು ಹೆಬ್ಬಾವು ಹಿಡಿದು ನುಂಗಲು ಯತ್ನಿಸುತ್ತಿತ್ತು. ಈ ವೇಳೆ ಬಂದ ಕರೆಗೆ ಸ್ಪಂದಿಸಿದ ಶೋಭಾ ಸ್ಥಳಕ್ಕೆ ಧಾವಿಸಿ, ಹೆಬ್ಬಾವಿನ ಹಿಡಿತದಿಂದ ಬೆಕ್ಕನ್ನು ರಕ್ಷಿಸಿದ್ದಲ್ಲದೆ, ಹೆಬ್ಬಾವನ್ನು ಸೆರೆ ಹಿಡಿದು ಗೋಣಿಚೀಲಕ್ಕೆ ತುಂಬಿಸಿದ್ದರು. ಇದನ್ನು ಸ್ಥಳದಲ್ಲಿದ್ದವರು ಯಾರೋ ವಿಡಿಯೋ ಮಾಡಿದ್ದರು. ಈ ಐದು ನಿಮಿಷದ ವಿಡಿಯೋ ಒಂದೇ ದಿನದಲ್ಲಿ ಭಾರಿ ವೈರಲ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಶೋಭಾ ದೊಡ್ಡ ಅಲೆ ಎಬ್ಬಿಸಿದ್ದಾರೆ. ಸ್ಥಳದಲ್ಲಿ ಪುರುಷರ ಸಹಿತ ಹಲವರಿದ್ದರೂ, ಯಾರೊಬ್ಬರೂ ಹಾವಿನ ಹತ್ತಿರ ಸುಳಿಯುತ್ತಿರಲಿಲ್ಲ. ಹೀಗಿರುವಾಗ ಶೋಭಾ ಹೆಬ್ಬಾವನ್ನು ಹಿಡಿಯುತ್ತಿರುವುದು, ಅವರ ಸಾಹಸ, ಧೈರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ.

ವೈರಲ್ ವಿಡಿಯೋದಲ್ಲಿ ಏನಿದೆ?: ತೆಂಗಿನ ತೋಟದಲ್ಲಿ ಬೆಕ್ಕನ್ನು ಹಿಡಿದಿದ್ದ ಹೆಬ್ಬಾವು ನುಂಗಲು ಯತ್ನಿಸುತ್ತಿತ್ತು. ಈ ವೇಳೆ ಸ್ಥಳಕ್ಕೆ ಬಶೀರ್ ಅವರೊಂದಿಗೆ ಧಾವಿಸಿದ ಶೋಭಾ, ಹೆಬ್ಬಾವಿನ ಬಾಲದಲ್ಲಿ ಹಿಡಿದು ಎಳೆದು ಬೆಕ್ಕನ್ನು ಬಿಡಿಸಿದ್ದಾರೆ. ನಂತರ ಹೆಬ್ಬಾವನ್ನು ಸೆರೆ ಹಿಡಿಯಲು ಮಹಿಳೆ ತುಂಬಾ ಶ್ರಮ ವಹಿಸುತ್ತಾರೆ. ಸುತ್ತ ಇದ್ದವರನ್ನು ಗೋಣಿ ತರುವಂತೆ, ಗೋಣಿ ಹಿಡಿಯುವಂತೆ, ಹಾವಿನ ಬಾಲ ಹಿಡಿಯುವಂತೆ ಹೇಳಿದಾಗ ಯಾರೂ ಮುಂದೆ ಬಾರದೆ ಇದ್ದಾಗ ಅವರನ್ನು ತರಾಟೆಗೂ ತೆಗೆದುಕೊಳ್ಳುತ್ತಾರೆ. ನಿಮ್ಮಷ್ಟು ಧೈರ್ಯ ನಮಗೆ ಬೇಕಲ್ವ ಅಕ್ಕಾ ಎಂದು ಒಬ್ಬರು ಹೇಳುವುದೂ ಕೇಳಿಸುತ್ತದೆ. ಕೊನೆಗೆ ಪುರುಷರೊಬ್ಬರು ಹಾವಿನ ತಲೆಯ ಮೇಲೆ ಕೋಲು ಅದುಮಿ ಹಿಡಿದ ನಂತರ ಶೋಭಾ ಹಾವಿನ ತಲೆಯಲ್ಲಿ ಹಿಡಿದು, ಗೋಣಿಚೀಲಕ್ಕೆ ತುಂಬಿಸುವುದರೊಂದಿಗೆ ಆಪರೇಶನ್ ರಾಕ್ ಪೈಥಾನ್ ಕಾರ್ಯಾಚರಣೆ ಕೊನೆಗೊಳ್ಳುತ್ತದೆ. ಹೆಬ್ಬಾವು ಹಿಡಿದ ಶೋಭಕ್ಕನಿಗೆ ಶೌರ್ಯ ಪ್ರಶಸ್ತಿ ನೀಡಬೇಕೆಂದು ಇಬ್ಬರು ಮುಸ್ಲಿಂ ವ್ಯಕ್ತಿಗಳು ದೂರವಾಣಿ ಸಂಭಾಷಣೆಯಲ್ಲಿ ಹೇಳುವ ಮಾತುಗಳೂ ವೈರಲ್ ಆಗಿವೆ. ಮಹಿಳೆ ಹೆಬ್ಬಾವನ್ನು ಕೋರಿ ಮಲ್ಲೆ ಎಂದು ಕರೆದಿರುವುದು ವಿಡಿಯೋದಲ್ಲಿದೆ. ಕೋರಿ ಮಲ್ಲೆ, ಕೋರಿ ಕಲುವೆ ಎಂದೂ ಹೆಬ್ಬಾವಿಗೆ ಕರೆಯುತ್ತಾರೆ ಎಂದು ಪುತ್ತೂರಿನ ಉರಗ ತಜ್ಞ ತೇಜಸ್ ತಿಳಿಸಿದ್ದಾರೆ.

ಬಾಲ್ಯದಲ್ಲೇ ಹಾವು ಪ್ರೀತಿ: ಶೋಭಾ ಎಳೆಯ ವಯಸ್ಸಿನಲ್ಲೇ ಸಣ್ಣಪುಟ್ಟ ಹಾವುಗಳನ್ನು ಹಿಡಿಯುತ್ತಿದ್ದರು. ವಿದ್ಯಾರ್ಥಿನಿಯಾಗಿದ್ದಾಗ ಕನ್ನಡಿ, ಹೆಬ್ಬಾವುಗಳನ್ನೂ ರಕ್ಷಿಸಿದ್ದಾರೆ. ಇದನ್ನು ಗಮನಿಸಿದ ಮನೆಯವರು, ಹಾವು ವಿಷಕಾರಿ, ಹಿಡಿಯಬಾರದು ಎಂದು ಬುದ್ಧಿಮಾತು ಹೇಳಿದರೂ ಶೋಭಾ ಕೇಳಿರಲಿಲ್ಲ. ೨೦೧೪ರಲ್ಲಿ ಎಂ.ಪ್ರಶಾಂತ್ ಜತೆ ಶೋಭಾರಿಗೆ ಮದುವೆಯಾಗಿದ್ದು, ಪತಿಯೂ ಶೋಭಾರಿಗೆ ಹಾವು ಹಿಡಿಯಲು ಪ್ರೇರಣೆ ನೀಡಿದರು. ಪ್ರಶಾಂತ್ ಹೆಬ್ಬಾವು ಸಹಿತ ಇನ್ನಿತರ ಹಾವುಗಳನ್ನು ಮೊದಲಿನಿಂದಲೂ ಹಿಡಿಯುತ್ತಿದ್ದರು. ಶೋಭಾರ ಉರಗ ಪ್ರೇಮಕ್ಕೆ ಇದು ಪುಷ್ಟಿ ದೊರೆಯಿತು.

ಎನ್‌ಡಿಆರ್‌ಎಫ್ ತರಬೇತಿ: ಶೋಭಾ ಹಾವು ರಕ್ಷಿಸುತ್ತಿರುವ ವಿಚಾರ ಆಗಿನ ಒಕ್ಕೂಟದ ಅಧ್ಯಕ್ಷ ರಾಮಣ್ಣ ಗೌಡ ವಲಯ ಮೇಲ್ವಿಚಾರಕಿಯಾಗಿದ್ದ ವಿದ್ಯಾ ಬಿ.ಎಚ್. ಬಳಿ ತಿಳಿಸಿದ ನಂತರ ಶೋಭಾರನ್ನು ಶೌರ್ಯ ವಿಪತ್ತು ನಿರ್ವಹಣಾ ಘಟಕಕ್ಕೆ ಸೇರಿಸಲಾಯಿತು. ಬಳಿಕ ಲಾಯಿಲದಲ್ಲಿ ನಡೆದ ಎನ್‌ಡಿಆರ್‌ಎಫ್‌ನ ಮೂರು ದಿನಗಳ ತರಬೇತಿಯಲ್ಲಿ ಭಾಗವಹಿಸಿ ಸ್ನೇಕ್ ಜಾಯ್‌ರಿಂದ ಮಾರ್ಗದರ್ಶನವನ್ನೂ ಪಡೆದರು ಶೋಭಾ. ಕುಪ್ಪೆಟ್ಟಿ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ಹಾಗೂ ಅದೇ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿರುವ ಶೋಭಾರ ಸಾಧನೆಗೆ ಗಾಂಧಿ ಜಯಂತಿ ಸಂದರ್ಭ ಯೋಜನೆ ವತಿಯಿಂದ ಸನ್ಮಾನಿಸಲಾಗಿದೆ. ತಣ್ಣೀರುಪಂತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಗೌರವಿಸಿದೆ. ಉಪ್ಪಿನಂಗಡಿ ಮಾದರಿ ಶಾಲೆಯಲ್ಲಿ ಗೌರವಾರ್ಪಣೆ, ಧರ್ಮಸ್ಥಳದ ಧರ್ಮಾಧಿಕಾರಿ ಡಾ||ಡಿ.ವೀರೇಂದ್ರ ಹೆಗ್ಗಡೆಯವರು ಆಶೀರ್ವದಿಸಿದ್ದಾರೆ.

ಹಾವಿನ ಆರೈಕೆ: ಪ್ರತಿಯೊಂದು ಜೀವಿಗಳಿಗೂ ಬದುಕುವ ಹಕ್ಕಿದೆ. ಹಾವನ್ನು ಕಂಡರೆ ಹೆಚ್ಚು ಧೈರ್ಯ ಬರುತ್ತದೆ, ಆಗ ಹಿಡಿಯುವುದು ಸುಲಭ. ಉಪ್ಪಿನಂಗಡಿಯ ನೆಕ್ಕಿಲಾಡಿ ಸಮೀಪ ವಾಹನದ ಅಡಿಗೆ ಬಿದ್ದು ಗಾಯಗೊಂಡಿದ್ದ ನಾಗರಹಾವನ್ನು ಅರಣ್ಯ ಇಲಾಖೆ ಜತೆಗೂಡಿ ಶೋಭಾ ಉಪಚರಿಸಿದ್ದಾರೆ. ಆಹಾರ ಹುಡುಕಿಕೊಂಡು ಬಂದು ಬಲೆಯಲ್ಲಿ ಸಿಲುಕಿಕೊಂಡ ಅದೆಷ್ಟೋ ಹಾವುಗಳನ್ನು ರಕ್ಷಿಸಿದ್ದಾರೆ. ಕಲ್ಪನೆ ಎಂಬಲ್ಲಿ ಜನವಸತಿ ಪ್ರದೇಶದಲ್ಲಿದ್ದ ಕಾಳಿಂಗ ಹಾವನ್ನು ಸೆರೆ ಹಿಡಿದು, ಸುರಕ್ಷಿತ ಜಾಗದಲ್ಲಿ ಬಿಟ್ಟಿದ್ದಾರೆ. ಪೆಲತ್ತಡಿ ಎಂಬಲ್ಲಿ ರಾತ್ರೋರಾತ್ರಿ ನಾಗರಹಾವು ಹಾಗೂ ಕನ್ನಡಿ ಹಾವು ಜಗಳವಾಡುತ್ತಿದ್ದುದನ್ನು ಬಿಡಿಸಿ ರಕ್ಷಿಸಿದ್ದಾರೆ. ತಣ್ಣೀರುಪಂತ, ಬಾರ್ಯ, ಕರಾಯ, ಇಳಂತಿಲ, ಮಚ್ಚಿನ ಪದ್ಮುಂಜ, ಬಂದಾರು, ತೆಕ್ಕಾರು ಸಹಿತ ಹಲವು ಪ್ರದೇಶಗಳಲ್ಲಿ ಹಗಲು ರಾತ್ರಿ ಎನ್ನದೆ ಹಾವು ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸುತ್ತಿದ್ದಾರೆ. ಪತಿಯೊಂದಿಗೂ ತೆರಳಿ ಹಾವು ರಕ್ಷಿಸಿದ್ದಿದೆ. ಇದುವರೆಗೆ ೯೮ ಹೆಬ್ಬಾವು, ೩೨ ನಾಗರಹಾವು, ಅದೆಷ್ಟೋ ಕನ್ನಡಿಹಾವುಗಳನ್ನು ಹಿಡಿದಿರುವ ಶೋಭಾ, ಇದುವರೆಗೆ ರಕ್ಷಿಸಿರುವ ಹಾವುಗಳ ಸಂಖ್ಯೆ ೯೦೦ಕ್ಕೂ ಅಧಿಕ. ಹಾವು ಹಿಡಿಯುವಾಗ ಯಾವುದೇ ಸಲಕರಣೆಗಳನ್ನು ಬಳಸುತ್ತಿಲ್ಲ ಎಂಬುದು ವಿಶೇಷ.

ಹಲವರಿಂದ ಮೆಚ್ಚುಗೆ
ಭಾನುವಾರ ಮಧ್ಯಾಹ್ನದ ವೇಳೆ ಹಾವು ಹಿಡಿಯಲು ಬಶೀರ್ ದೂರವಾಣಿ ಕರೆ ಮಾಡಿದ್ದರು. ತೋಟದ ನಡುವೆ ಪೊದೆಯಲ್ಲಿ ಹೆಬ್ಬಾವು ಬೆಕ್ಕನ್ನು ಸುತ್ತುವರಿದಿತ್ತು. ಸುಮಾರು ೧೫ ನಿಮಿಷಗಳ ಕಾರ್ಯಾಚರಣೆ ನಡೆಸಿ ಬೆಕ್ಕನ್ನು ರಕ್ಷಿಸಿzನೆ. ಕಾರ್ಯಾಚರಣೆಗೆ ಯಾರೊಬ್ಬರೂ ಮುಂದೆ ಬರಲಿಲ್ಲ, ಬಂದವರು ಹಿಂದೇಟು ಹಾಕಿದ್ದಾರೆ. ಹೆಬ್ಬಾವು ಸುಮಾರು ೬.೫ ಉದ್ದ, ಎಂಟು ಮುಕ್ಕಾಲು ಕೆ.ಜಿ. ತೂಕವಿತ್ತು. ಹೆಬ್ಬಾವನ್ನು ಸೆರೆ ಹಿಡಿದು ಅರಣ್ಯ ಇಲಾಖೆಯ ರವಿಯವರಿಗೆ ಒಪ್ಪಿಸಿzನೆ. ಕಾರ್ಯಾಚರಣೆಯ ವಿಡಿಯೋ ಮಾಡಿದ್ದು ಯಾರೆಂದು ತಿಳಿದಿಲ್ಲ. ದೂರವಾಣಿ ಕರೆಯ ಮೂಲಕ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

– ಶೋಭಾ ಕುಪ್ಪೆಟ್ಟಿ, ಉರಗ ರಕ್ಷಕಿ

ನೇತ್ರಾವತಿ ಅಟೋ ರಿಕ್ಷಾ ಚಾಲಕ- ಮಾಲಕ ಸಂಘದಿಂದ ಸನ್ಮಾನ
ಬೃಹದಾಕಾರದ ಹೆಬ್ಬಾವೊಂದನ್ನು ಸೆರೆ ಹಿಡಿದು ಸಾಹಸ ಮೆರೆದ ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ಕುಪ್ಪೆಟ್ಟಿಯ ಕಲ್ಪಣೆ ನಿವಾಸಿ ಶೋಭಾ ಅವರನ್ನು ಉಪ್ಪಿನಂಗಡಿಯ ನೇತ್ರಾವತಿ ಅಟೋ ರಿಕ್ಷಾ- ಚಾಲಕ ಮಾಲಕ ಸಂಘದವರು ನ.೫ರಂದು ಸನ್ಮಾನಿಸಿ ಗೌರವಿಸಿದರು.
ನ.೩ರಂದು ಕುಪ್ಪೆಟ್ಟಿ ಸಮೀಪದ ನೆಕ್ಕಿಲು ಜಾರಿಗೆದಡಿ ಎಂಬಲ್ಲಿ ಬೆಕ್ಕೊಂದನ್ನು ಹೆಬ್ಬಾವು ಹಿಡಿದು ನುಂಗಲು ಯತ್ನಿಸುತ್ತಿತ್ತು. ಈ ವೇಳೆ ಬಂದ ಕರೆಗೆ ಸ್ಪಂದಿಸಿದ ಶೋಭಾ ಸ್ಥಳಕ್ಕೆ ತೆರಳಿ ಹೆಬ್ಬಾವಿನ ಹಿಡಿತದಿಂದ ಬೆಕ್ಕನ್ನು ರಕ್ಷಿಸಿದ್ದಲ್ಲದೆ, ಹೆಬ್ಬಾವನ್ನು ಸೆರೆ ಹಿಡಿದು ಗೋಣಿಗೆ ತುಂಬಿಸಿದ್ದರು. ಇದನ್ನು ಸ್ಥಳದಲ್ಲಿದ್ದವರು ವಿಡಿಯೋ ಮಾಡಿದ್ದು, ನ.೪ರಂದು ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಇವರ ಈ ದಿಟ್ಟತನಕ್ಕೆ ಎಲ್ಲೆಡೆಯಿಂದ ಪ್ರಶಂಸೆಯ ಮಾತುಗಳು ಕೇಳಿ ಬರತೊಡಗಿದವು. ಆದರೆ ಶೋಭಾ ಎಲ್ಲಿಯವರೆಂಬ ಬಗ್ಗೆ ಮಾತ್ರ ನಿಖರತೆ ಇರದೇ, ಅವರು ಅಲ್ಲಿಯವರು, ಇಲ್ಲಿಯವರು ಎಂದು ಸುದ್ದಿಯಾಗಿತ್ತು. ಇವರು ಕುಪ್ಪೆಟ್ಟಿಯ ಕಲ್ಪಣೆ ನಿವಾಸಿಯಾಗಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗುರುವಾಯನಕೆರೆ ಕಚೇರಿ ವ್ಯಾಪ್ತಿಯ ತಣ್ಣೀರುಪಂತ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕಿ. ಶೋಭಾ ಅವರು ಐದು ವರ್ಷಗಳಿಂದ ತಮ್ಮ ಊರಿನ ಸುತ್ತಮುತ್ತಲಿನ ಪ್ರದೇಶದಲ್ಲಿ ೯೦೦ಕ್ಕೂ ಅಧಿಕ ಹಾವುಗಳನ್ನು ಹಿಡಿದು ರಕ್ಷಿಸಿದ್ದಾರೆ. ಇವರ ಈ ಸಾಹಸವನ್ನು ಮೆಚ್ಚಿ ನೇತ್ರಾವತಿ ಅಟೋ ರಿಕ್ಷಾ- ಚಾಲಕ ಮಾಲಕ ಸಂಘದವರು ಇವರನ್ನು ಸನ್ಮಾನಿಸಿ, ಗೌರವಿಸಿದ್ದಾರೆ.
ಈ ಸಂದರ್ಭ ಉಪ್ಪಿನಂಗಡಿ ಗ್ರಾ.ಪಂ. ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ರಿಕ್ಷಾ- ಚಾಲಕ ಮಾಲಕ ಸಂಘದ ಗೌರವಾಧ್ಯಕ್ಷ ಶಬೀರ್ ಕೆಂಪಿ, ಸಲಹಾ ಸಮಿತಿಯ ಸದಸ್ಯ ಅಬ್ದುರ್ರಹ್ಮಾನ್ ಯುನಿಕ್, ಅಧ್ಯಕ್ಷ ಫಾರೂಕ್ ಜಿಂದಗಿ, ಪ್ರಧಾನ ಕಾರ್ಯದರ್ಶಿ ಅಶೋಕ್ ಬಂಡಾಡಿ, ಕೋಶಾಧಿಕಾರಿ ಕಲಂದರ್ ಶಾಫಿ ನೆಕ್ಕಿಲಾಡಿ, ಉಪಾಧ್ಯಕ್ಷ ಅಣ್ಣಿ ಮಲ್ಲಕಲ್ಲು, ಸಂಘಟನಾ ಕಾರ್ಯದರ್ಶಿ ಅಬ್ದುಲ್ ಮಜೀದ್, ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

p>

LEAVE A REPLY

Please enter your comment!
Please enter your name here