ವಿಧಾನ ಪರಿಷತ್ ಉಪ ಚುನಾವಣೆಗೆ ಶಾಂತಿಯುತ ತೆರೆ- ತಾಲೂಕಿನಲ್ಲಿ ಶೇ.98.82 ಮತದಾನ- ಪ.ಪಂ. ಸಹಿತ 42 ಮತಗಟ್ಟೆಗಳಲ್ಲಿ ಶೇ.100 ಮತದಾನ | ಏಳು ಗ್ರಾ.ಪಂ.ಗಳ ಒಟ್ಟು ಎಂಟು ಸದಸ್ಯರು ಗೈರು

0

ಬೆಳ್ತಂಗಡಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ವ್ಯಾಪ್ತಿಯ ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರದಿಂದ ವಿಧಾನ ಪರಿಷತ್‌ಗೆ ಅ.21ರಂದು ನಡೆದ ಉಪಚುನಾವಣೆಯಲ್ಲಿ ಶೇ.97.91 ಮತದಾನವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.98.84 ಹಾಗೂ ಉಡುಪಿ ಜಿಲ್ಲೆಯಲ್ಲಿ ಶೇ.96.97 ಮತ ಚಲಾವಣೆಯಾಗಿದ್ದು, ಬೆಳ್ತಂಗಡಿ ತಾಲೂಕು ವ್ಯಾಪ್ತಿಯಲ್ಲಿ ಶೇ.98.82 ಮತದಾನ ದಾಖಲಾಗಿದೆ.

ಬೆಳ್ತಂಗಡಿ ತಾಲೂಕಿನ 49 ಮತಗಟ್ಟೆಗಳ ಪೈಕಿ, ಪುದುವೆಟ್ಟು, ಸುಲ್ಕೇರಿ, ಮಲವಂತಿಗೆ, ಮೇಲಂತಬೆಟ್ಟು, ಬಳಂಜ, ಪಡಂಗಡಿ ಹಾಗೂ ಲಾಯಿಲ ಗ್ರಾಮ ಪಂಚಾಯತ್‌ಗಳನ್ನು ಹೊರತುಪಡಿಸಿ ಉಳಿದ 42 ಮತಕೇಂದ್ರಗಳಲ್ಲಿ ಶೇ.100 ಮತದಾನವಾಗಿದೆ. ಬೆಳಗ್ಗೆ 8ರಿಂದ ಸಂಜೆ 4ಗಂಟೆಯವರೆಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಮತ ಕೇಂದ್ರದ 100 ಮೀಟರ್ ವ್ಯಾಪ್ತಿಯಲ್ಲಿ ವಾಹನ ಸಂಚಾರ ಹಾಗೂ ರಾಜಕೀಯ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿತ್ತು. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದ್ದು, ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ಮುಕ್ತಾಯ ಕಂಡಿದೆ. ಅ.24ರಂದು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದ್ದು, ಮಧ್ಯಾಹ್ನದ ವೇಳೆ ಫಲಿತಾಂಶ ಘೋಷಣೆಯಾಗಲಿದೆ.

668 ಮಂದಿ ಮತ ಚಲಾವಣೆ: ತಾಲೂಕಿನ 48 ಗ್ರಾಮ ಪಂಚಾಯತ್ ಕಚೇರಿಗಳು ಹಾಗೂ ಬೆಳ್ತಂಗಡಿ ಪಟ್ಟಣ ಪಂಚಾಯತ್ ಕಚೇರಿಯ ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಿತು. ಶಾಸಕ ಹರೀಶ್ ಪೂಂಜ, 48 ಗ್ರಾ.ಪಂ.ಗಳ 656 ಮಂದಿ ಸದಸ್ಯರು ಹಾಗೂ 1 ಪ.ಪಂ.ನ 12 ಸದಸ್ಯರ ಸಹಿತ ಒಟ್ಟು 668 ಮಂದಿ ಮತ ಚಲಾಯಿಸಿದ್ದು, ಶೇ.98.82 ಮತದಾನವಾಗಿದೆ. ಶಾಸಕ ಹರೀಶ್ ಪೂಂಜ ಪ.ಪಂ. ಕಚೇರಿಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಗ್ರಾ.ಪಂ ಸದಸ್ಯರು ಆಯಾ ಪಂಚಾಯತ್ ಕಚೇರಿಯ ಮತಗಟ್ಟೆಗಳು ಹಾಗೂ ಪಟ್ಟಣ ಪಂಚಾಯತ್ ಸದಸ್ಯರು ಪ.ಪಂ. ಕಚೇರಿಯಲ್ಲಿ ಮತ ಚಲಾಯಿಸಿದರು.

42 ಮತಗಟ್ಟೆಗಳಲ್ಲಿ ಶೇ.100 ಮತದಾನ: ತಾಲೂಕಿನ ಉಜಿರೆ ಗ್ರಾಮ ಪಂಚಾಯತ್‌ನ ಮತಗಟ್ಟೆಯನ್ನು ಸೂಕ್ಷ್ಮ ಮತಗಟ್ಟೆ ಎಂದು ಗುರುತಿಸಲಾಗಿತ್ತು. ನಾರಾವಿ, ಮರೋಡಿ, ಹೊಸಂಗಡಿ, ಕಾಶಿಪಟ್ಣ, ವೇಣೂರು, ಆರಂಬೋಡಿ, ಅಂಡಿಂಜೆ, ಅಳದಂಗಡಿ, ಶಿರ್ಲಾಲು, ಕುಕ್ಕೇಡಿ, ಮಲಾಡಿ, ಕುವೆಟ್ಟು, ನಡ, ನಾವೂರು, ಇಂದಬೆಟ್ಟು, ಮಿತ್ತಬಾಗಿಲು, ಕಡಿರುದ್ಯಾವರ, ನೆರಿಯ, ಚಾರ್ಮಾಡಿ, ಮುಂಡಾಜೆ, ಕಲ್ಮಂಜ, ಉಜಿರೆ, ಕೊಯ್ಯೂರು, ಕಳಿಯ, ಮಡಂತ್ಯಾರು, ಮಚ್ಚಿನ, ತಣ್ಣೀರುಪಂತ, ಬಾರ್ಯ, ತೆಕ್ಕಾರು, ಇಳಂತಿಲ, ಕಣಿಯೂರು, ಬಂದಾರು, ಬೆಳಾಲು, ಧರ್ಮಸ್ಥಳ, ಪಟ್ರಮೆ, ಕೊಕ್ಕಡ, ಕಳೆಂಜ, ನಿಡ್ಲೆ, ಶಿಶಿಲ, ಶಿಬಾಜೆ, ಅರಸಿನಮಕ್ಕಿ ಗ್ರಾಮ ಪಂಚಾಯತ್‌ಗಳ 41 ಮತಗಟ್ಟೆಗಳು ಹಾಗೂ ಬೆಳ್ತಂಗಡಿ ಪಟ್ಟಣ ಪಂಚಾಯತ್‌ನಲ್ಲಿ ಶೇ.100 ಮತದಾನ ನಡೆದಿದೆ.

ಅ.24ರಂದು ಫಲಿತಾಂಶ: ಅ.20ರಂದು ಮಸ್ಟರಿಂಗ್ ಹಾಗೂ ಅ.21ರ ಸಂಜೆ ತಾಲೂಕು ಆಡಳಿತ ಸೌಧದ ಒಂದನೇ ಮಹಡಿಯಲ್ಲಿ ಡಿ-ಮಸ್ಟರಿಂಗ್ ಕಾರ್ಯಗಳು ನಡೆದಿದ್ದು, ಮತ ಪೆಟ್ಟಿಗೆಗಳನ್ನು ಪೊಲೀಸ್ ಭದ್ರತೆಯೊಂದಿಗೆ ಮತ ಎಣಿಕೆ ನಡೆಯಲಿರುವ ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ ಭದ್ರತಾ ಕೊಠಡಿಗೆ ಕಳುಹಿಸಲಾಗಿದೆ. ಅ.24ರಂದು ಮತ ಎಣಿಕೆ ಕಾರ್ಯ ನಡೆಯಲಿದ್ದು, ಮಧ್ಯಾಹ್ನದ ವೇಳೆ ಫಲಿತಾಂಶ ಘೋಷಣೆಯಾಗುವ ನಿರೀಕ್ಷೆ ಇದೆ.

ಯಾರೆಲ್ಲ ಕಣದಲ್ಲಿದ್ದಾರೆ?:
ದ್ವಿ ಸದಸ್ಯ ಕ್ಷೇತ್ರವಾಗಿರುವ ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಕ್ಷೇತ್ರದಿಂದ ಈ ಹಿಂದೆ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಮತ್ತು ಕಾಂಗ್ರೆಸ್‌ನ ಮಂಜುನಾಥ ಭಂಡಾರಿ ವಿಧಾನ ಪರಿಷತ್ ಸದಸ್ಯರಾಗಿ ಚುನಾಯಿತರಾಗಿದ್ದರು. ಈ ಪೈಕಿ ಕೋಟ ಶ್ರೀನಿವಾಸ ಪೂಜಾರಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಲೋಕಸಭೆಗೆ ಚುನಾಯಿತರಾದ ಬಳಿಕ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿರುವುರಿಂದ ತೆರವಾಗಿರುವ ಒಂದು ಸ್ಥಾನಕ್ಕೆ ಈಗ ಉಪಚುನಾವಣೆ ನಡೆದಿದೆ. ಬಿಜೆಪಿಯಿಂದ ಕಿಶೋರ್ ಕುಮಾರ್ ಪುತ್ತೂರು, ಕಾಂಗ್ರೆಸ್‌ನಿಂದ ರಾಜು ಎಸ್. ಪೂಜಾರಿ ಬೈಂದೂರು, ಎಸ್‌ಡಿಪಿಐಯಿಂದ ಅನ್ವರ್ ಸಾದತ್ ಬಜತ್ತೂರು ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ದಿನಕರ ಉಳ್ಳಾಲ್ ಕಣದಲ್ಲಿದ್ದಾರೆ. ದ.ಕ. ಮತ್ತು ಉಡುಪಿ ಜಿಲ್ಲೆಯ ಗ್ರಾ.ಪಂ., ಪಟ್ಟಣ ಪಂಚಾಯತ್, ಪುರಸಭೆ, ನಗರಸಭೆ, ನಗರಪಾಲಿಕೆ ಸಹಿತ ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರು, ಸಂಸದರು, ವಿಧಾನಸಭೆ ಮತ್ತು ವಿಧಾನ ಪರಿಷತ್ ಸದಸ್ಯರು ಮತದಾನ ಮಾಡಿದ್ದಾರೆ.

ಮತದಾನದಿಂದ ದೂರ ಉಳಿದವರು:
ತಾಲೂಕಿನ ಪುದುವೆಟ್ಟಿನಲ್ಲಿ ಇಬ್ಬರು ಹಾಗೂ ಸುಲ್ಕೇರಿ, ಮಲವಂತಿಗೆ, ಮೇಲಂತಬೆಟ್ಟು, ಬಳಂಜ, ಪಡಂಗಡಿ ಹಾಗೂ ಲಾಯಿಲ ಗ್ರಾಮ ಪಂಚಾಯತ್‌ಗಳ ತಲಾ ಒಬ್ಬೊಬ್ಬರ ಸಹಿತ ಒಟ್ಟು 8 ಮಂದಿ ಮತದಾನಕ್ಕೆ ಗೈರಾಗಿರುವುದರಿಂದ ಒಟ್ಟು 7 ಗ್ರಾಮ ಪಂಚಾಯತ್‌ಗಳಲ್ಲಿ ಶೇ.100 ಮತದಾನ ಸಾಧ್ಯವಾಗಿಲ್ಲ.

ಪುದುವೆಟ್ಟಿನಲ್ಲಿ ಅಧ್ಯಕ್ಷರೇ ಗೈರು: 9 ಸದಸ್ಯರನ್ನು ಹೊಂದಿರುವ ಪುದುವೆಟ್ಟು ಗ್ರಾಮ ಪಂಚಾಯತ್‌ನಲ್ಲಿ ಮತದಾನ ಮಾಡಿದವರು 7 ಮಂದಿ ಮಾತ್ರ. ಅದರಲ್ಲೂ ಗ್ರಾಪಂ ಅಧ್ಯಕ್ಷೆ ಅನಿತಾ ಕುಮಾರಿ ಮತದಾನದಿಂದ ದೂರು ಉಳಿದಿದ್ದಾರೆ. ಇನ್ನೋರ್ವ ಸದಸ್ಯ ರಾಮೇಂದ್ರ ಕೂಡ ಮತದಾನ ಮಾಡಿಲ್ಲ. ಇದರಿಂದಾಗಿ ತಾಲೂಕಿನಲ್ಲೇ ಅತ್ಯಂತ ಕಡಿಮೆ ಮತದಾನ (ಶೇ.77.78) ನಡೆದ ಗ್ರಾಪಂ ಎಂಬ ಪಟ್ಟ ಲಭಿಸಿದೆ. ಇಬ್ಬರೂ ಬಿಜೆಪಿ ಬೆಂಬಲಿತರಾಗಿದ್ದು, ಪಕ್ಷದ ವೇದಿಕೆಗಳಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿದೆ.

ಪಡಂಗಡಿ: ಪಡಂಗಡಿ ಗ್ರಾಮ ಪಂಚಾಯತ್‌ನ 12 ಸದಸ್ಯರ ಪೈಕಿ 16 ಮಂದಿ ಮತ (ಶೇ.94.12 ಮತದಾನ) ಚಲಾಯಿಸಿದ್ದಾರೆ. ಸಂಬಂಧಿಕರೊಬ್ಬರ ಅಗಲಿಕೆ ಹಿನ್ನೆಲೆಯಲ್ಲಿ ಕೇರಳಕ್ಕೆ ತೆರಳಿರುವುದರಿಂದ ಬಿಜೆಪಿ ಬೆಂಬಲಿತ ಸದಸ್ಯೆ ವನಜಾಕ್ಷಿ ಮತ ಚಲಾಯಿಸುವುದು ಸಾಧ್ಯವಾಗಿಲ್ಲ.

ಲಾಯಿಲ: ಲಾಯಿಲ ಗ್ರಾಮ ಪಂಚಾಯತ್‌ನ 20 ಸದಸ್ಯರ ಪೈಕಿ 19 ಮಂದಿ ಮತ (ಶೇ.95) ಚಲಾಯಿಸಿದ್ದಾರೆ. ಬಿಜೆಪಿ ಬೆಂಬಲಿತ ಓರ್ವ ಸದಸ್ಯೆ ಸವಿತಾ ವಿದೇಶದಲ್ಲಿರುವ ಕಾರಣ ಮತದಾನದಲ್ಲಿ ಭಾಗವಹಿಸಿಲ್ಲ.

ಸುಲ್ಕೇರಿ: ಸುಲ್ಕೇರಿ ಗ್ರಾಮ ಪಂಚಾಯತ್‌ನ 7 ಸದಸ್ಯರ ಪೈಕಿ 6 ಮಂದಿ ಮತ (ಶೇ.85.71) ಚಲಾಯಿಸಿದ್ದಾರೆ. ಬಿಜೆಪಿ ಬೆಂಬಲಿತರಾಗಿರುವ ಉಪಾಧ್ಯಕ್ಷ ಶುಭಕರ ಪೂಜಾರಿ ಕೇರಳಕ್ಕೆ ಹೋಗಿದ್ದ ಕಾರಣ ಅನಿವಾರ್ಯ ಕಾರಣಗಳಿಂದ ಮತ ಚಲಾಯಿಸುವುದು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.

ಮೇಲಂತಬೆಟ್ಟು: ಮೇಲಂತಬೆಟ್ಟು ಗ್ರಾಮ ಪಂಚಾಯತ್‌ನ 12 ಸದಸ್ಯರ ಪೈಕಿ 11 ಮಂದಿ ಮತದಾನ (ಶೇ.91.67) ಮಾಡಿದ್ದಾರೆ. ಸಹೋದರನ ಮದುವೆಯ ಕಾರಣದಿಂದ ಮತದಾನ ಸಾಧ್ಯವಾಗಿಲ್ಲ ಎಂದು ಸದಸ್ಯೆ ದೀಪಿಕಾ ತಿಳಿಸಿದ್ದಾರೆ.

ಮಲವಂತಿಗೆ: ಬಿಜೆಪಿ ಬೆಂಬಲಿತರು ಅಧಿಕಾರದಲ್ಲಿರುವ ಮಲವಂತಿಗೆ ಗ್ರಾಮ ಪಂಚಾಯತ್‌ನ 8 ಸದಸ್ಯರ ಪೈಕಿ 7 ಮಂದಿ ಮತ (ಶೇ.87.50) ಚಲಾಯಿಸಿದ್ದಾರೆ. ಬಿಜೆಪಿ ಬೆಂಬಲಿತ ಸದಸ್ಯೆ ಅನಿತಾ ಕೆ. ಮತ ಚಲಾಯಿಸಿಲ್ಲ. ಎಳನೀರಿನಿಂದ ಬರಬೇಕಾಗಿರುವ ಕಾರಣ ಸಂಪರ್ಕ ಸಮಸ್ಯೆಯಾಗಿರಬಹುದು, ಅವರಿಗೆ ಅನಾರೋಗ್ಯವೂ ಇತ್ತು, ನೆಟ್‌ವರ್ಕ್ ಸಮಸ್ಯೆಯಿಂದ ದೂರವಾಣಿ ಸಂಪರ್ಕಕ್ಕೂ ಲಭ್ಯರಾಗಿಲ್ಲ ಎಂದು ಅಧ್ಯಕ್ಷ ಪ್ರಕಾಶ್ ಜೈನ್ ತಿಳಿಸಿದ್ದಾರೆ.

ಬಳಂಜ: ಒಟ್ಟು 13 ಸದಸ್ಯರನ್ನು ಹೊಂದಿರುವ ಬಳಂಜ ಗ್ರಾಮ ಪಂಚಾಯತ್‌ನಲ್ಲಿ ಓರ್ವ ಸದಸ್ಯ ಮತದಾನದಿಂದ ದೂರ ಉಳಿದ ಕಾರಣ ಶೇ.92.31 ಮತದಾನವಾಗಿದೆ. ಬಿಜೆಪಿ ಬೆಂಬಲಿತ ಸದಸ್ಯೆ ಪ್ರಸನ್ನ ಕುಮಾರಿ ಅನಾರೋಗ್ಯದ ಕಾರಣ ಮತದಾನ ಮಾಡಿಲ್ಲ.

ಗೆದ್ದಾಗಿದೆ, ಗೆಲುವಿನ ಅಂತರವಷ್ಟೇ ಬಾಕಿ: ಕಿಶೋರ್
ಸ್ಥಳೀಯಾಡಳಿತ ಸಂಸ್ಥೆಗಳ ಪ್ರತಿನಿಧಿಗಳ ಭಾವನೆಗಳನ್ನು ಅರಿತು ಕೊಂಡು ಅವರ ಕಷ್ಟ ಪರಿಹರಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ನಾನು ಈಗಾಗಲೇ ಗೆದ್ದಾಗಿದೆ. ಗೆಲುವಿನ
ಅಂತರ ಜಾಸ್ತಿಯಾಗಬೇಕೆನ್ನುವುದು ನಮ್ಮ ಪ್ರಯತ್ನ. ರಾಜ್ಯದಲ್ಲಿ ಕಾಂಗ್ರೆಸ್‌ನ ಭ್ರಷ್ಟ ಆಡಳಿತವಿದ್ದು, ಸ್ಥಳೀಯ ಪ್ರಾಧಿಕಾರಕ್ಕೆ ಜನರಿಂದ ಆಯ್ಕೆಯಾಗಿರುವ ಪ್ರತಿನಿಧಿಗಳು ಹೆಚ್ಚಿನ ಅಂತರದಿಂದ ನನ್ನನ್ನು ಗೆಲ್ಲಿಸುವ ಮೂಲಕ ಭ್ರಷ್ಟ ಕಾಂಗ್ರೆಸ್ ಸರಕಾರವನ್ನು ಜನತೆ ತಿರಸ್ಕರಿಸಿದ್ದಾರೆ ಎಂಬ ಸ್ಪಷ್ಟ ಸಂದೇಶ ನೀಡಬೇಕಿದೆ.
ಕೋಟ ಶ್ರೀನಿವಾಸ ಪೂಜಾರಿಯವರ ಹಾಗೂ ಪಕ್ಷದ ಹಿರಿಯರ ಮಾರ್ಗದರ್ಶನದಂತೆ ನನಗೆ ಕೊಟ್ಟಿರುವ ಜವಾಬ್ದಾರಿಯನ್ನು ಚೆನ್ನಾಗಿ ನಿಭಾಯಿಸುತ್ತೇನೆ.
ಬಿಜೆಪಿ ನನಗೆ ತಾಯಿಯಿದ್ದ ಹಾಗೆ. ನನ್ನ ಈ ಗೆಲುವಿಗೆ ಪಕ್ಷದ ಎಲ್ಲ ಹಿರಿ-ಕಿರಿಯರ ಶ್ರಮ ಇರಲಿದ್ದು, ಅವರು ನನ್ನ ಮೇಲೆ ಇಟ್ಟ ನಂಬಿಕೆಗೆ ಎಳ್ಳಷ್ಟೂ ಚ್ಯುತಿ ಬಾರದಂತೆ ಕೆಲಸ ನಿರ್ವಹಿಸಿ, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಕೊಡಿಸಲು ಪ್ರಯತ್ನಿಸುತ್ತೇನೆ.

– ಕಿಶೋರ್ ಕುಮಾರ್ ಬೊಟ್ಯಾಡಿ, ಬಿಜೆಪಿ ಅಭ್ಯರ್ಥಿ

ಕೊಕ್ಕಡದಲ್ಲಿ ಮದುಮಗನಿಂದ ಮತದಾನ

ಕೊಕ್ಕಡ: ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ ಮದುಮಗ ಅ.21ರಂದು ಬೆಳಗ್ಗೆ ಮತ ಚಲಾಯಿಸಿದ್ದಾರೆ. ಕೊಕ್ಕಡ ಗ್ರಾಮ ಪಂಚಾಯತ್ ಸದಸ್ಯ ಶರತ್ ಕುಮಾರ್ ಮದುವೆಯ ದಿನ ಬೆಳಗ್ಗೆ ಇತರ ಪಂಚಾಯತ್ ಸದಸ್ಯರೊಂದಿಗೆ ಆಗಮಿಸಿ ಮತದಾನ ಮಾಡಿ, ಮದುವೆ ಮಂಟಪಕ್ಕೆ ತೆರಳಿದ್ದಾರೆ.

ಹರೀಶ್ ಪೂಂಜ ಮತ ಚಲಾವಣೆ

ಬೆಳ್ತಂಗಡಿ ಪಟ್ಟಣ ಪಂಚಾಯತ್‌ನಲ್ಲಿ ಅ.೨೧ರಂದು ಬೆಳಗ್ಗೆ ಶಾಸಕ ಹರೀಶ್ ಪೂಂಜ ಮತ ಚಲಾವಣೆ ಮಾಡಿದರು. ಪಟ್ಟಣ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡ ಟಿ. ಹಾಗೂ ಸದಸ್ಯರು ಕೂಡ ಮತ ಚಲಾಯಿಸಿದರು.

ಸ್ಪೀಕರ್ ಯು.ಟಿ. ಖಾದರ್ ಮತದಾನ

ಬೆಳ್ತಂಗಡಿ: ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಉಪಚುನಾವಣೆಯಲ್ಲಿ ಸ್ಪೀಕರ್ ಯು.ಟಿ. ಖಾದರ್ ಉಳ್ಳಾಲ ನಗರಸಭೆಯಲ್ಲಿ ಮತ ಚಲಾಯಿಸಿದರು.

ಸಂಸದ ಕ್ಯಾ. ಬೃಜೇಶ್ ಚೌಟ ಮತದಾನ

ಬೆಳ್ತಂಗಡಿ: ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಉಪಚುನಾವಣೆಯಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಂಗಳೂರು ಮಹಾನಗರ ಪಾಲಿಕೆಯ ಮತದಾನ ಕೇಂದ್ರದಲ್ಲಿ ಮತ ಚಲಾಯಿಸಿದರು.

p>

LEAVE A REPLY

Please enter your comment!
Please enter your name here