ಬೆಳ್ತಂಗಡಿ: ಪೋಂಡಣ್ಣ ಸೋಂಟ ಪೋಂಡು.. ಅಣ್ಣಾ.. ಈ ರೋಡುಡು ಪೋದು ಪೋದು ಬೆರಿ ಬೇನೆಡ್ ಆಸ್ಪತ್ರೆ ಸೇರ್ದೆ.. ಎಂಕ್ಲೆನ ಗಾಡಿ ವಾರೊಡ್ ಮೂಜಿ ಸರ್ತಿ ರಿಪೇರಿಗ್ ದೀವೋಡು.. ರಿಕ್ಷಾದಲ್ಲಿ ಬಾಡಿಗೆ ಮಾಡುವ ನಾವು ಉಪ್ಪಿನಂಗಡಿ ಅಂದ್ರೆ ಹೋಗಲು ಹಿಂದೇಟು ಹಾಕ್ತೇವೆ. ನಮ್ಮ ಶಾಸಕರಿಗೆ, ಸಂಸದರಿಗೆ ಈ ರಸ್ತೆ ಕಾಣೋದಿಲ್ವ? ಇದು ನಿಜಕ್ಕೂ ರಸ್ತೆಯಲ್ಲ, ಗುಂಡಿಯಲ್ಲ, ಗುಂಡಿಯಲ್ಲೇ ಅಲ್ಲಲ್ಲಿ ರಸ್ತೆ ಇದೆ ಎಂದೇ ಬರೆಯಿರಿ..
ಇದು ಸಾರ್ವಜನಿಕರು ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಹಾಕುತ್ತಿರುವ ಹಿಡಿಶಾಪ. ಇದಕ್ಕೆ ಕಾರಣ ಉಪ್ಪಿನಂಗಡಿ-ಗುರುವಾಯನಕೆರೆ ರಸ್ತೆಯಲ್ಲಿರುವ 1422 ಗುಂಡಿಗಳು!
ಗುಂಡಿ ಲೆಕ್ಕ ಮಾಡಿದ ಸುದ್ದಿ ಟೀಮ್: ಸುದ್ದಿ ನ್ಯೂಸ್ ತಂಡ ಅ.22ರಂದು ಗುರುವಾಯನಕೆರೆಯಿಂದ ಉಪ್ಪಿನಂಗಡಿಯವರೆಗೆ ರಸ್ತೆ ಗುಂಡಿಗಳನ್ನು ಲೆಕ್ಕ ಹಾಕುತ್ತಾ ವರದಿಗೆ ಮುಂದಾಯಿತು. ಸಣ್ಣ ಮತ್ತು ಬೃಹತ್ ಗುಂಡಿಗಳನ್ನು ಒಂದೆಂದು ಸೇರಿಸಿ ಲೆಕ್ಕ ಹಾಕಿದ್ದು, ಅತಿ ಸಣ್ಣ, ಕೆಲವೆಡೆ ಉದ್ದವಾಗಿ ಡಾಂಬರು ರಸ್ತೆಯ ಸಿಪ್ಪೆ ಹೋಗಿರುವುದನ್ನು ಲೆಕ್ಕ ಹಾಕದೆ ಬಿಡಲಾಯಿತು. ಆದರೂ, ಸಿಕ್ಕಿರುವ ಹೊಂಡಗುಂಡಿಗಳ ಲೆಕ್ಕ 1422. ಇದರಲ್ಲಿ ಬೃಹತ್ ಹೊಂಡಗಳ ಸಂಖ್ಯೆ 250ಕ್ಕೂ ಹೆಚ್ಚು.
ರಸ್ತೆ ಗುಂಡಿಗಳಿಂದ ಹಲವು ಅಪಘಾತ: ಉಪ್ಪಿನಂಗಡಿ-ಗುರುವಾಯನಕೆರೆ ರಾಜ್ಯ ಹೆದ್ದಾರಿ-118ರಲ್ಲಿ ದ್ವಿಚಕ್ರ ವಾಹನ ಸವಾರರು ಬೀಳುತ್ತಲೇ ಇರುತ್ತಾರೆ. ಅದರಲ್ಲಿ ರಸ್ತೆಯ ಹೊಂಡಕ್ಕೆ ಬಿದ್ದ ಪ್ರಕರಣಗಳೇ ಹೆಚ್ಚು. ಹೊಂಡ ತಪ್ಪಿಸಲು ಹೋಗಿ ಮತ್ತೊಂದು ಹೊಂಡಕ್ಕೆ ಬೀಳುವುದು, ಹೊಂಡ ತಪ್ಪಿಸಲು ಹೋಗಿ ನಡೆದ ಅಪಘಾತಗಳು 50ಕ್ಕೂ ಅಧಿಕ. ಸುದ್ದಿ ಟೀಮ್ ರಸ್ತೆ ಹೊಂಡದ ವರದಿಗೆಂದು ತೆರಳಿದಾಗ ಸಾರ್ವಜನಿಕರು ಹಲವಾರು ಅಪಘಾತದ ಘಟನೆಗಳನ್ನು ಕಂಠಪಾಠದಂತೆ ಒಂದೇ ಉಸಿರಿನಲ್ಲಿ ಹೇಳುತ್ತಾರೆ.
ಮುಂಜಾಗ್ರತೆ ವಹಿಸದೆ ಹದಗೆಟ್ಟ ರಸ್ತೆ: ಉಪ್ಪಿನಂಗಡಿ – ಗುರುವಾಯನಕೆರೆ ರಸ್ತೆ ಎರಡು ತಾಲೂಕುಗಳನ್ನು ಬೆಸೆಯುವ ರಾಜ್ಯ ಹೆದ್ದಾರಿ. ಈ ಹಿಂದಿನ ಸರ್ಕಾರ ಇದ್ದಾಗ ರಸ್ತೆ ತೀರಾ ಹದಗೆಟ್ಟಿರಲಿಲ್ಲ. ಆದರೂ ಮರು ಡಾಂಬರೀಕರಣ ಆಗಬೇಕೆಂಬ ಕೂಗು ಇತ್ತು. ಆದರೆ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ನಂತರ ರಸ್ತೆಯ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಇದಕ್ಕೆ ಮುಖ್ಯ ಕಾರಣ ಮಳೆಗಾಲಕ್ಕೂ ಮೊದಲು ಮುಂಜಾಗ್ರತಾ ಕ್ರಮ ಕೈಗೊಳ್ಳದಿರುವುದು. ಚರಂಡಿ ರಿಪೇರಿಯಾಗದೆ ನೀರು ರಸ್ತೆಯಲ್ಲೇ ಹರಿದಿದೆ. ಇದರಿಂದಾಗಿ ರಸ್ತೆ ಹದಗೆಟ್ಟಿರುವುದು ವಾಸ್ತವ.
ಈ ರಸ್ತೆ ಸ್ಥಿತಿ ದ.ಕ. ಜಿಲ್ಲೆಗೆ ಅವಮಾನ: ಉಪ್ಪಿನಂಗಡಿ – ಗುರುವಾಯನಕೆರೆ ರಾಜ್ಯ ಹೆದ್ದಾರಿ ಕ್ರಮ ಸಂಖ್ಯೆ 118ರಲ್ಲಿ ಪ್ರತಿದಿನ ಸಾವಿರಾರು ವಾಹನಗಳು ಸಾಗುತ್ತವೆ. ನಿತ್ಯದ ಕೆಲಸಗಳಿಗಾಗಿ, ವ್ಯವಹಾರಗಳಿಗಾಗಿ ಪ್ರಯಾಣಿಸುವವರ ಸಂಖ್ಯೆ 5000ಕ್ಕೂ ಅಧಿಕ. ಪ್ರವಾಸಿಗರು, ವಿವಿಧ ಕೆಲಸ ಕಾರ್ಯಗಳಿಗೆ ಹೋಗುವವರೂ ಇದ್ದಾರೆ. ನಿತ್ಯ ಓಡಾಡುವವರ ಗೋಳು ಕೇಳುವವರಿಲ್ಲ. ಗ್ರಾಮೀಣ ಪ್ರದೇಶಗಳ ರಸ್ತೆಗಳ ಪರಿಸ್ಥಿತಿ ದೇವರಿಗೆ ಪ್ರೀತಿ ಎಂಬಂತಿದೆಯಾದರೂ, ಈ ಉಪ್ಪಿನಂಗಡಿ – ಗುರುವಾಯನಕೆರೆ ರಾಜ್ಯ ಹೆದ್ದಾರಿಯ ಪರಿಸ್ಥಿತಿ ದಕ್ಷಿಣ ಕನ್ನಡಿಗರು ತಲೆತಗ್ಗಿಸುವಂತೆ ಮಾಡುತ್ತದೆ. ಸಂಸದರು, ಶಾಸಕರು, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಇತ್ತ ಯಾಕೆ ಗಮನ ಹರಿಸುತ್ತಿಲ್ಲ? ಕನಿಷ್ಠ ಗುಂಡಿ ಮುಚ್ಚುವ ಕಾರ್ಯವನ್ನೂ ಯಾಕೆ ಮಾಡುತ್ತಿಲ್ಲ ಎಂಬುದು ಸಾರ್ವಜನಿಕರ ಉತ್ತರ ಸಿಗದ ಪ್ರಶ್ನೆಯಾಗಿದೆ.
ಎಲ್ಲಿ ನೋಡಿದರೂ ಗುಂಡಿ ಸರ್!: ಗುರುವಾಯನಕೆರೆಯಿಂದ ಉಪ್ಪಿನಂಗಡಿಗೆ ಕ್ರಾಸ್ ಆಗುವ ಸ್ಥಳದಿಂದ 20 ಮೀಟರ್ ದೂರದಲ್ಲಿ 10ಕ್ಕೂ ಹೆಚ್ಚು ಗುಂಡಿಗಳಿವೆ. ಕುಲಾಲ ಮಂದಿರಕ್ಕಿಂತ ಸ್ವಲ್ಪ ಹಿಂದಿನಿಂದಲೇ ಬೃಹತ್ ಮತ್ತು ಅಪಾಯಕಾರಿ ಗುಂಡಿಗಳ ದರ್ಶನವಾಗುತ್ತದೆ. ಪಣೆಜಾಲು, ರೇಷ್ಮೆ ರೋಡು, ಗೇರುಕಟ್ಟೆ ತಲುಪುವಾಗ 269 ಹೊಂಡಗಳು ಸಿಕ್ಕಿವೆ. ಗೇರುಕಟ್ಟೆಯಿಂದ ಕುಪ್ಪೆಟ್ಟಿ ತನಕ ಸಾಗಿದಾಗ ಸಿಗುವ ಒಟ್ಟು ಹೊಂಡಗಳ ಸಂಖ್ಯೆ 558. ಇಲ್ಲಿಂದ ಮುಂದೆ ಕಲ್ಲೇರಿಗೆ ಸಾಗುವಾಗ ಸಿಗುವ ಹೊಂಡಗಳು 78. ಕಲ್ಲೇರಿಯಿಂದ ಉಪ್ಪಿನಂಗಡಿ ತನಕ ಸಾಗುವಾಗ ನಮಗೆ ಸಿಗುವ ಹೊಂಡಗಳ ಸಂಖ್ಯೆ 517. ಹೀಗೆ ಒಟ್ಟು ಗುರುವಾಯನಕೆರೆಯಿಂದ ಉಪ್ಪಿನಂಗಡಿ ತನಕ 1422 ಹೊಂಡಗಳು ಅಪಾಯಕಾರಿಯಾಗಿ ದರ್ಶನ ನೀಡುತ್ತವೆ.
ಇವು ಮರಣ ಗುಂಡಿಗಳು: ಗುರುವಾಯನಕೆರೆಯಿಂದಲೇ ಬೃಹದಾಕಾರದ ಗುಂಡಿಗಳು ಮರಣ ಗುಂಡಿಗಳಂತೆ ಬಾಯ್ತೆರೆದು ನಿಂತಿವೆ. ಅದರಲ್ಲೂ ಕುಪ್ಪೆಟ್ಟಿಯ ಪೇಟೆ ಭಾಗದಲ್ಲಿರುವ ಕೆಲವು ಗುಂಡಿಗಳಿಗೆ ಆಗಾಗ ಗಾಡಿಗಳು ಬೀಳುತ್ತಲೇ ಇರುತ್ತವೆ. ಕಲ್ಲೇರಿಯ ಪೇಟೆಯಲ್ಲೇ ಬೃಹತ್ ಗುಂಡಿಗಳಿವೆ. ಸ್ವಲ್ಪ ರೋಡ್ ಚೆನ್ನಾಗಿದೆ ಅಂತ ವೇಗವಾಗಿ ಬಂದವರು ಶಿವಗಿರಿ ಬಸ್ ಸ್ಟ್ಯಾಂಡ್ ಮುಂಭಾಗ ಏಕಾಏಕಿ ಎದುರಾಗುವ ಬೃಹತ್ ಹೊಂಡಗಳಿಗೆ ಬೀಳುತ್ತಾರೆ. ಅತೀ ಡೇಂಜರಸ್ ಹೊಂಡವಾಗಿ ಮರಿಪ್ಪಾದೆ ಗರಿಡಿ ಸಮೀಪದ ಹೊಂಡ ಕುಖ್ಯಾತಿ. ನೇಜಿಕಾರು, ಪದಮಲೆ, ಕಡವಿನ ಬಾಗಿಲು ಕ್ರಾಸ್ ಸಮೀಪ ಇರುವ ಹೊಂಡಗಳಲ್ಲಿ ಬೀಳದವರೇ ಕಡಿಮೆ.
ರಸ್ತೆ ಕುಸಿದರೂ ಫಲಕಗಳಿಲ್ಲ: ಗೋವಿಂದೂರು ದಾಟಿ ಮಾವಿನಕಟ್ಟೆ ಕಡೆಗೆ ಹೋಗುವಾಗ ಯಂತ್ರಡ್ಕ ಸಮೀಪ ರಸ್ತೆ ಕುಸಿದಿದೆ. ಇಲ್ಲಿ ಒಂದು ಟೇಪ್ ಹಾಕಿರುವುದು ಬಿಟ್ಟರೆ ಯಾವುದೇ ಎಚ್ಚರಿಕೆ ಫಲಕಗಳಿಲ್ಲ. ಕೊಂಚ ಎಡವಿದರೂ ಇಲ್ಲಿ ವಾಹನ ಸವಾರರು ಕುಸಿದು ಬೀಳುವುದು ಗ್ಯಾರಂಟಿ.
ವರದಿ ಪ್ರಕಟವಾಗುವಾಗ ಮತ್ತೆ 50 ಹೊಂಡ!: ಉಪ್ಪಿನಂಗಡಿ – ಗುರುವಾಯನಕೆರೆ ರಸ್ತೆಯಲ್ಲಿ ದಿನಕ್ಕೆ 50ರಷ್ಟು ಗುಂಡಿಗಳು ಹೊಸದಾಗಿ ಸೃಷ್ಟಿಯಾಗುತ್ತಿವೆ. ಸುದ್ದಿ ವರದಿ ಮಾಡುವ ವೇಳೆ ಬಳಿ ಬಂದ ಸಾರ್ವಜನಿಕರು, ನೀವೀಗ ಒಂದು ಲೆಕ್ಕ ಹೇಳುತ್ತಿದ್ದೀರಿ. ಅದು ನಿಮ್ಮ ವರದಿ ಪ್ರಕಟವಾಗುವಾಗ 50ಕ್ಕೂ ಹೆಚ್ಚಾಗಬಹುದು ಅಂದರು. ನಮ್ಮ ಜನಪ್ರತಿನಿಧಿಗಳು, ಅಧಿಕಾರಿಗಳ ಮೇಲೆ ಸಾರ್ವಜನಿಕರು ಯಾವ ರೀತಿ ನಂಬಿಕೆ ಕಳೆದುಕೊಂಡಿದ್ದಾರೆ ಎಂಬುದಕ್ಕೆ ಈ ಮಾತುಗಳು ಉದಾಹರಣೆ. ಇನ್ನಾದರೂ ಈ ರಸ್ತೆಯನ್ನು ವಾಹನ ಸಂಚಾರಕ್ಕೆ ಯೋಗ್ಯಗೊಳಿಸಲು ದುರಸ್ತಿಗೆ ಮುಂದಾಗುವರೇ ನಮ್ಮ ಜನಪ್ರತಿನಿಧಿಗಳು, ಅಧಿಕಾರಿಗಳು?
ರಸ್ತೆಯಲ್ಲಿ ಸಾಗಿದರೆ ಕೈಕಾಲು ನೋವು:
ಉಪ್ಪಿನಂಗಡಿಯಿಂದ ಕಲ್ಲೇರಿಗೆ ಬರಬೇಕಾದರೆ ಮೂಕ್ಕಾಲು ಗಂಟೆ ಬೇಕಾಗುತ್ತಾದೆ. ಬರುವಾಗ ಕೈ ಕಾಲು ನೋವಾಗುತ್ತದೆ. ದೊಡ್ಡ ದೊಡ್ಡ ಹೊಂಡಗಳು ಬಿದ್ದಿದ್ದು, ಹಲವು ಬೈಕ್, ಸ್ಕೂಟರ್‌ನವರು ಬಿದ್ದಿದ್ದಾರೆ. ನಾಲ್ಕು ದಿನಕ್ಕೊಮ್ಮೆ ಶಾಕ್ ಅಬ್ಸಾರ್ಬರ್ ಹೋಗುತ್ತದೆ. ಯಾರಾರದೂ ಇದಕ್ಕೆ ಮುಕ್ತಿ ಕೊಡಿ
– ಶ್ರೀನಿವಾಸ್, ಕಲ್ಲೇರಿ
ನಾವು ತೆರಿಗೆ ಕಟ್ಟುತ್ತೇವಲ್ಲ?:
ಸ್ಕೂಟರ್‌ನಲ್ಲಿ ಬೆಳಗ್ಗೆ ಡೇರಿಗೆ ಹಾಲು ತೆಗೆದುಕೊಂಡು ಹೋಗಲು ಆಗುವುದಿಲ್ಲ. ಡೇರಿ ತಲುಪುವಾಗ ಹಾಲು ಚೆಲ್ಲಿ ಹೋಗುತ್ತದೆ. ಏನು ಮಾಡುವುದು? ಇಷ್ಟು ಟ್ಯಾಕ್ಸ್ ಕಟ್ಟುತ್ತೇವೆ, ನಾವು ಹೇಳಿದರೆ ಯಾರು ಕೇಳುತ್ತಾರೆ? ನಾವು ಈ ರಸ್ತೆಯಲ್ಲಿ ತುಂಬಾ ಸಲ ಬಿದ್ದಿದ್ದೇವೆ.
– ಪ್ರೇಮಾ, ಕರಾಯ
ಮಹಿಳೆ ಬಿದ್ದು ಹಲ್ಲು ಉದುರಿದೆ!
ಒಂದು ದಿನ ಬಾಡಿಗೆ ಮಾಡಿದರೆ ಮೂರು ದಿನ ಮಲಗಬೇಕು. ಎದೆ, ಕೈಕಾಲು ನೋವಾಗುತ್ತದೆ. ರಸ್ತೆ ದುಸ್ಥಿತಿಗೆ ಬಂದು ಆರು ತಿಂಗಳಾದರೂ ಪ್ಯಾಚ್ ವರ್ಕ್ ಕೂಡ ಮಾಡಿಲ್ಲ. ಗುರುವಾಯನಕೆರೆಯಿಂದ ಗೇರುಕಟ್ಟೆಗೆ 500 ಗುಂಡಿಗಳಿವೆ. ಮೊನ್ನೆ ಮಹಿಳೆಯೊಬ್ಬರು ಬಿದ್ದು ಹಲ್ಲು ಕೂಡ ಹೋಗಿದೆ.
– ಅಬ್ಬೂಬ್ಬಕರ್, ಗೇರುಕಟ್ಟೆ
ಅಪಘಾತಗಳ ಮಾರ್ಗ:
ರಸ್ತೆಯ ಪರಿಸ್ಥಿತಿ ಹೇಳಿ ಸುಖ ಇಲ್ಲ. ಅಪಘಾತಗಳು ನಡೆಯುವ ಜಂಕ್ಷನ್‌ನಂತಾಗಿದೆ. ವಾಹನಗಳಲ್ಲಿ ಸಾಗುವಾಗ ಹೆದರಿಕೆಯಾಗುತ್ತದೆ. ಪಾದಚಾರಿಗಳು ನಡೆದುಕೊಂಡು ಹೋಗುವಂತೆಯೂ ಇಲ್ಲ. ಗುಂಡಿ ತಪ್ಪಿಸಲು ಹೋಗಿ ಅನೇಕ ಅಪಘಾತಗಳು ನಡೆದಿವೆ. ಈ ರಸ್ತೆಯದ್ದು ಸಾಮಾನ್ಯ ಸಮಸ್ಯೆಯಲ್ಲ. ಸಂಬಂಧಪಟ್ಟ ಇಲಾಖೆ, ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು.
– ವಿಶ್ವೇಶ್ ಕಿಣಿ, ಗುರುವಾಯನಕೆರೆ
ದುಡಿದದ್ದೆಲ್ಲ ಗ್ಯಾರೇಜಿಗೆ:
ಅನಾರೋಗ್ಯ ಪೀಡಿತರನ್ನು ಕರೆದುಕೊಂಡು ಹೋಗುವುದೂ ಕಷ್ಟ. ಗುಂಡಿಗಳಲ್ಲಿ ನೀರು ನಿಂತಾಗ ವಾಹನ ಚಾಲನೆ ಕಷ್ಟ. ವಾರದಲ್ಲಿ ಎರಡು ಸಲ ಆಟೋ ರಿಪೇರಿಗೆ ಇಡಬೇಕಾಗುತ್ತದೆ. ದುಡಿದದ್ದು ಗ್ಯಾರೇಜಿಗೆ ಹೋಗುತ್ತದೆ. ಉಪ್ಪಿನಂಗಡಿಗೆ ಹೋಗಲು ಆಗದಷ್ಟು ಗುಂಡಿಗಳಿವೆ.
– ಕೀರ್ತಿ, ಗೇರುಕಟ್ಟೆ
ಗುಂಡಿಗಳನ್ನು ಮುಚ್ಚಿ:
ರಸ್ತೆಯಲ್ಲಿ ಗುಂಡಿಗಳೇ ಇವೆ. ಅದಷ್ಟು ಬೇಗ ಮುಚ್ಚಬೇಕು. ಹೋಗಲು ಕಷ್ಟವಾಗುತ್ತದೆ. ವಾಹನಗಳಿಗೂ ಹೋಗಲಾಗುತ್ತಿಲ್ಲ. ಪದೇಪದೆ ವಾಹನಗಳನ್ನು ರಿಪೇರಿ ಮಾಡ ಬೇಕಾಗುತ್ತಾದೆ.
-ಚಂದ್ರ ಕಲ್ಲೇರಿ