ಧರ್ಮಸ್ಥಳ: ಸುತ್ತಮುತ್ತ ಅನಧಿಕೃತ ಹೋಂ ಸ್ಟೇ, ಲಾಡ್ಜ್- ಏಜೆಂಟರ ಮೂಲಕ ಯಾತ್ರಾರ್ಥಿಗಳಿಗೆ ವಂಚನೆ- ಕಾನೂನು ಕ್ರಮಕ್ಕೆ ಒತ್ತಾಯಿಸಿ ಪಂಚಾಯತ್, ಪೊಲೀಸ್ ಇಲಾಖೆಗೆ ಖಾಸಗಿ ವಸತಿಗೃಹ ಮಾಲಕರ ಸಂಘದ‌ ಮನವಿ

0

ಧರ್ಮಸ್ಥಳ: ಇಲ್ಲಿನ ನೇತ್ರಾವತಿ ಸ್ನಾನಘಟ್ಟ, ಕನ್ಯಾಡಿ ಸುತ್ತಮುತ್ತ ಪಂಚಾಯತ್ ಪರವಾನಗಿ ಪಡೆದು, ಅಧಿಕೃತ ನೋಂದಾವಣೆ ಮಾಡಿಕೊಂಡಿರುವ ಖಾಸಗಿ ಹೋಂ ಸ್ಟೇ ಮತ್ತು ವಸತಿಗೃಹಗಳ ಮಾಲಕರು ಕೆಲ ಅನಧಿಕೃತ ಹೋಂ ಸ್ಟೇ, ವಸತಿಗೃಹಗಳ ಏಜೆಂಟರ ಹಾವಳಿ ತಡೆಗಟ್ಟಬೇಕು ಎಂದು ಒತ್ತಾಯಿಸಿ ಧರ್ಮಸ್ಥಳ ಪೊಲೀಸ್ ಠಾಣೆಗೆ ಹಾಗೂ ಧರ್ಮಸ್ಥಳ ಗ್ರಾಮ ಪಂಚಾಯತ್ ಗೆ ಖಾಸಗಿ ವಸತಿಗೃಹ ಮಾಲಕರ ಸಂಘ ಮನವಿ ಮಾಡಿಕೊಂಡಿದೆ‌.

ಮನವಿಯಲ್ಲಿ ಏನಿದೆ? ವಿವರ: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಲಕ್ಷಾಂತರ ಭಕ್ತರು, ಮಂಜುನಾಥ ಸ್ವಾಮಿಯ ದರ್ಶನಕ್ಕೆ ಬರುತ್ತಿದ್ದು, ಆಗಮಿಸಿದ ಹೆಚ್ಚಿನ ಭಕ್ತರಿಗೆ ದೇವಳದ ವತಿಯಿಂದ ವಸತಿ ಸೌಲಭ್ಯ ಕಲ್ಪಿಸಲಾಗಿದ್ದು, ಉಳಿದ ಯಾತ್ರಾರ್ಥಿಗಳು ಪರಿಸರದಲ್ಲಿರುವ ಖಾಸಗಿ ಹೋಟೆಲ್ ಹಾಗೂ ವಸತಿ ಗೃಹಗಳನ್ನು ಆಶ್ರಯಿಸುತ್ತಾರೆ. ಈ ಪರಿಸರದಲ್ಲಿ ವಸತಿ ಗೃಹಗಳು ಹಾಗೂ ಹೋಂ ಸ್ಟೇಗಳು ಅಧಿಕೃತವಾಗಿ ನೋಂದಾಯಿಸಿಕೊಂಡು, ಸ್ಥಳೀಯ ಪಂಚಾಯತ್‌ನಿಂದ ಪರವಾನಗಿಯನ್ನು ಪಡಕೊಂಡು ಕಾನೂನುಬದ್ಧವಾಗಿ ವ್ಯವಹಾರ ನಡೆಸಿಕೊಂಡು ಬರುತ್ತಿರುವ ವಸತಿಗೃಹಗಳ ನಡುವೆ ಕೆಲ ಅನಧಿಕೃತ ವಸತಿಗೃಹಗಳು ತಲೆಎತ್ತಿದ್ದು, ಇದು ವಿವಿಧ ಅವ್ಯವಹಾರಗಳಿಗೆ ಕಾರಣವಾಗಬಹುದು.

ಯಾವುದೇ ಪರವಾನಗಿಯನ್ನು ಪಡೆಯದೇ, ಮೂಲಭೂತ ಸೌಕರ್ಯಗಳನ್ನು ಹೊಂದಿರದ, ಅನಧಿಕೃತ ಕಟ್ಟಡಗಳಿಗೆ ವಸತಿ ಗೃಹಗಳ ನಾಮಫಲಕವನ್ನು ಹಾಕಿ ಯಾತ್ರಾರ್ಥಿಗಳಿಗೆ ತಪ್ಪು ಮಾಹಿತಿ ನೀಡಿ ಅವರಿಂದ ಹಣ ವಸೂಲು ಮಾಡಿ ವಂಚಿಸಿ ಅನ್ಯಾಯವೆಸಗುವ ದಂಧೆಗೆ ಬ್ರೇಕ್ ಹಾಕಬೇಕು. ಈ ದಂಧೆಯನ್ನು ಅನಧಿಕೃತ ವಸತಿಗೃಹಗಳ ಮತ್ತು ಹೋಂ ಸ್ಟೇಗಳ ಮಾಲೀಕರುಗಳು ಏಜೆಂಟರ ಮೂಲಕ ಕಾರ್ಯಾಚರಿಸುತ್ತಿದ್ದು, ಯಾತ್ರಾರ್ಥಿಗಳ ವಾಹನವನ್ನು ಬಸ್‌ಸ್ಟ್ಯಾಂಡ್ ಹಾಗೂ ಮಾರ್ಗ ಮಧ್ಯದಲ್ಲಿ ನಿಲ್ಲಿಸಿ, ಏಜೆಂಟ್‌ಗಳು, ಅನಧಿಕೃತ ವಸತಿ ಗೃಹಗಳನ್ನು ಅಧಿಕೃತವಾದುದೆಂದು ಬಿಂಬಿಸಿ ಎಲ್ಲಾ ಸೌಲಭ್ಯಗಳು ಅಲ್ಲಿ ದೊರೆಯುತ್ತದೆಂದು ನಂಬಿಸಿ, ಅಲ್ಲಿಂದಲೇ ಅನಧಿಕೃತ ಲಾಡ್ಜ್‌ಗಳಿಗೆ ಕರೆದೊಯ್ದು, ಅಲ್ಲಿಯ ಮಧ್ಯಸ್ಥರೊಂದಿಗೆ ಮಾತನಾಡಿ ಕಮೀಶನ್ ಹಣವನ್ನು ಪಡಕೊಂಡು, ಯಾತ್ರಾರ್ಥಿಗಳಿಗೆ ಕೊಠಡಿ ತೋರಿಸುವುದಕ್ಕೆ ಮುಂಚೆಯೇ ಏಜೆಂಟ್‌ಗಳು ಅಲ್ಲಿಂದ ಹೊರಟು ಬಿಡುತ್ತಾರೆ. ನಂತರ ಮಾಲೀಕರು ತೋರಿಸಿದ ಬಾಡಿಗೆ ಕೋಣೆಯನ್ನು ತೋರಿಸಿದಾಗ ಅದರಲ್ಲಿರುವ ನ್ಯೂನತೆ ಹಾಗೂ ಬಾಡಿಗೆಯ ಬಗ್ಗೆ ಗ್ರಾಹಕರು ತಗಾದೆ ತೆಗೆದಾಗ, ಪ್ರತಿಯೊಂದು ವ್ಯವಸ್ಥೆಗೂ ಪ್ರತ್ಯೇಕ ಶುಲ್ಕವನ್ನು ತೆರುವಂತೆ ಒತ್ತಾಯಿಸಲಾಗುತ್ತದೆ. ಯಾತ್ರಾರ್ಥಿಗಳನ್ನು ಬೆದರಿಸಲಾಗುತ್ತದೆ ಹಾಗೂ ರಾತ್ರಿಯಲ್ಲಿ ಈ ಪ್ರದೇಶ ಅಪಾಯಕಾರಿಯಾಗಿದ್ದು, ಬೇರೆಲ್ಲೂ ಇನ್ನು ನಿಮಗೆ ವಸತಿ ಸಿಗುವುದಿಲ್ಲವೆಂದು ಸುಳ್ಳು ಬೆದರಿಕೆಯನ್ನು ನೀಡಿ ಶೋಷಣೆಗೊಳಪಡಿಸಲಾಗುತ್ತದೆ ಈ ಬಗ್ಗೆ ಭಾರಿ ಗಲಾಟೆಗಳು ನಿರಂತರವಾಗಿ ಆಗುತ್ತಿರುತ್ತದೆ.

ಈ ದಂಧೆಯಲ್ಲಿ ತೊಡಗಿದಂತಹ ಏಜೆಂಟ್‌ಗಳು, ಅಧಿಕೃತ ವಸತಿ ಗೃಹಗಳ, ದೇವಳದ ವಸತಿ ಗೃಹಗಳ ಪಕ್ಕದಲ್ಲೇ ನಿಂತುಕೊಂಡು, ಯಾತ್ರಾರ್ಥಿಗಳಿಗೆ ಸುಳ್ಳು ಮಾಹಿತಿ ಹಾಗೂ ಅಪಪ್ರಚಾರ ಮೂಲಕ ಯಾತ್ರಾರ್ಥಿಗಳನ್ನು ಪುಸಲಾಯಿಸಿ ವ್ಯವಹಾರ ಕುದುರಿಸಿಕೊಳ್ಳುವ ಪ್ರವೃತ್ತಿಯು ಇತ್ತೀಚೆಗೆ ಹೆಚ್ಚಾಗಿದೆ. ಕೇವಲ ಈ ದಂಧೆಯಲ್ಲಿ ಒಳಗೊಂಡಿರುವ ವ್ಯಕ್ತಿಗಳ ಕುಕೃತ್ಯಕ್ಕೊಳಗಾಗಿ, ಕಾನೂನು ಬದ್ಧವಾಗಿ ವ್ಯವಹಾರ ನಡೆಸಿಕೊಂಡು ಬರುತ್ತಿರುವ ವಸತಿ ವ್ಯವಹಾರಸ್ಥರಿಗೂ ಕೆಟ್ಟ ಹೆಸರು ಬರುತ್ತಿದ್ದು, ನಿಯಮಾವಳಿಗಳನ್ನು ಅನುಸರಿಸಿ, ಸರಕಾರದ ತೆರಿಗೆಗಳನ್ನು ಪಂಚಾಯತ್ ಶುಲ್ಕಗಳನ್ನು ಕಟ್ಟಿ ವ್ಯವಹಾರ ನಡೆಸುತ್ತಿರುವವರ ವ್ಯವಹಾರಕ್ಕೆ ಈ ದಂಧೆಕೋರರು ಬೆದರಿಕೆಯೊಡ್ಡುತ್ತಿದ್ದು ಕ್ಷೇತ್ರದ ಪಾವಿತ್ರತೆಗೂ, ಇಲ್ಲಿಯ ನಾಗರಿಕರ ಹಾಗೂ ಸ್ಥಳೀಯ ಸಂಸ್ಥೆಗಳ ವಿಶ್ವಾಸಾರ್ಹತೆಯನ್ನೇ ಯಾತ್ರಾರ್ಥಿಗಳು ಪ್ರಶ್ನಿಸುವ ಮಟ್ಟಕ್ಕೆ ತಲುಪಿರುತ್ತದೆ.
ಈ ಅಕ್ರಮ ಚಟುವಟಿಕೆಗಳ ವಿರುದ್ಧ, ಇದರಲ್ಲಿ ತೊಡಗಿಸಿಕೊಂಡವರ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ಕೈಗೊಂಡು ಈ ದಂಧೆಯನ್ನು ಕೊನೆಗೊಳಿಸಬೇಕೆಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.

ಧರ್ಮಸ್ಥಳದ ಖಾಸಗಿ ವಸತಿಗೃಹಗಳ ಮಾಲಕರ ಸಂಘದ ಅಧ್ಯಕ್ಷ ಸಂದೇಶ್ ರಾವ್, ಉಪಾಧ್ಯಕ್ಷ ಅಖಿಲೇಶ್ ಕುಮಾರ್ ಎಂ., ಕಾರ್ಯದರ್ಶಿ ಉದಯ್ ಡಿ., ಕೋಶಾಧಿಕಾರಿ ಸುರೇಂದ್ರ ಪ್ರಭು, ಸದಸ್ಯರಾದ ರಾಘವೇಂದ್ರ ಬೈಪಡಿತ್ತಾಯ, ರವಿ ಆರ್ಲ, ಅರುಣ್ ರಾವ್ ಮತ್ತಿಲ, ಪ್ರಭಾಕರ ಬೊಳ್ಮ, ಆಶೀಶ್ ಗೌಡ, ಅವಿನಾಶ್ ಶೆಟ್ಟಿ, ಚಂದ್ರಶೇಖರ್, ಪದ್ಮಪ್ರಸಾದ್ ಜೈನ್, ರಕ್ಷಿತ್ ಶೆಟ್ಟಿ, ಶಶಿಧರ್ ರಾವ್, ಶ್ರೇಯಸ್ ಗೌಡ, ಸುಶೀಲ್, ಉಮೇಶ್ ಪ್ರಭು, ರಾಮಣ್ಣ ಗೌಡ, ಸುಬೋಧ್ ರಾವ್, ಕೊರಗಪ್ಪ ನಾಯ್ಕ, ಉದಯ್ ರಾವ್ ಮುಂತಾದವರು ಉಪಸ್ಥಿತರಿದ್ದರು.

p>

LEAVE A REPLY

Please enter your comment!
Please enter your name here