ಕಲ್ಮಂಜ: ಸರಕಾರಿ ಪ್ರೌಢಶಾಲೆ ಕಲ್ಮಂಜದಲ್ಲಿ ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ 2024- 25 ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭವು ಜ್ಞಾನಾಮೃತ ಸಭಾಂಗಣದಲ್ಲಿ ಅ.22ರಂದು ಅದ್ದೂರಿಯಿಂದ ನೆರವೇರಿತು.
ಈ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಗುರುದೇವ ಎಜುಕೇಶನ್ ಟ್ರಸ್ಟ್ ನ ಸದಸ್ಯೆ ಪ್ರೀತಿತಾ ಧರ್ಮ ವಿಜೇತ್ ವಹಿಸಿಕೊಂಡಿದ್ದು, ಅಧ್ಯಕ್ಷೀಯ ನುಡಿಗಳೊಂದಿಗೆ ಸ್ವಯಂಸೇವಕರ ಶ್ರಮದಾನ, ಸಾಂಸ್ಕೃತಿಕ, ಶೈಕ್ಷಣಿಕ ವಿಚಾರದ ಕುರಿತಾಗಿ ಅದ್ಭುತ ಮಾತುಗಳನ್ನಾಡಿ, ವಿದ್ಯಾರ್ಥಿಗಳು ಏಳು ದಿನದ ಶಿಬಿರವನ್ನು ಸದ್ಬಳಕೆ ಮಾಡಿಕೊಂಡಿದ್ದಾರೆ ಎಂದು ಶಿಬಿರದ ಕುರಿತು ಗೌರವ ಮಾತುಗಳನ್ನಾಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿ ಸ್ಥಾನವನ್ನು ವಹಿಸಿಕೊಂಡಿದ್ದ ಸರಕಾರಿ ಪ್ರೌಢಶಾಲೆ ಕಲ್ಮಂಜದ ಮುಖ್ಯೋಪಾಧ್ಯಾಯಿನಿ ಪೂರ್ಣಿಮಾ ವಿದ್ಯಾರ್ಥಿಗಳ ಹಾಗೂ ಸ್ವಯಂಸೇವಕರ ಹಾಗೂ ಗುರುದೇವ ಶಿಕ್ಷಣ ಸಂಸ್ಥೆಯ ಕುರಿತಾಗಿ, ರಾಷ್ಟ್ರೀಯ ಸೇವಾ ಯೋಜನೆಯ ಕುರಿತಾಗಿ ಹಿತ ನುಡಿಗಳನ್ನಾಡಿದರು.
ಅಲ್ಲದೆ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತಿಯನ್ನು ವಹಿಸಿಕೊಂಡಿದ್ದ ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ಸವಿತಾ ಅಭಿನಂದನಾ ಮಾತುಗಳನ್ನಾಡಿದರು, ಜೊತೆಗೆ ಕಲ್ಮಂಜ ಸರಕಾರಿ ಪ್ರೌಢಶಾಲೆ ಶಿಕ್ಷಣಕ್ಕೆ ಉತ್ತಮ ಕೊಡುಗೆಯನ್ನು ನೀಡುತ್ತಾ ಇದ್ದು, ಗುರುದೇವ ಕಾಲೇಜಿನ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರವನ್ನು ಆಯೋಜಿಸಿದ್ದಕ್ಕೆ ಅವಕಾಶ ಮಾಡಿಕೊಟ್ಟಂತಹ ಸರಕಾರಿ ಪ್ರೌಢಶಾಲೆ ಕಲ್ಮಂಜದ ಮುಖ್ಯೋಪಾಧ್ಯಾಯಿನಿ ಹಾಗೂ ಶಾಲೆಯ ಶಿಕ್ಷಕ, ಶಿಕ್ಷಕೇತರ ವೃಂದವನ್ನು ಜೊತೆಗೆ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಶಿಬಿರಾರ್ಥಿಗಳನ್ನು, ಯೋಜನಾಧಿಕಾರಿಗಳನ್ನು, ಸಹ ಯೋಜನಾಧಿಕಾರಿಗಳನ್ನು ಅಭಿನಂದಿಸಿದರು.
ಸರಕಾರಿ ಪ್ರೌಢಶಾಲೆ ಕಲ್ಮಂಜದ ಎಸ್.ಡಿ. ಎಂ.ಸಿ. ಕಾರ್ಯಾಧ್ಯಕ್ಷ ಮಂಜುನಾಥ್ ಶೆಟ್ಟಿ ಶಿಬಿರಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಗುರು ನಾರಾಯಣ ಸೇವಾ ಸಂಘದ ಅಧ್ಯಕ್ಷ ಜಯ ವಿಕ್ರಮ ಕಲ್ಲಾಪು, ಸರಕಾರಿ ಪ್ರೌಢಶಾಲೆ ಕಲ್ಮಂಜ ಎಸ್.ಡಿ. ಎಂ.ಸಿ. ಮಾಜಿ ಅಧ್ಯಕ್ಷ ಕರುಣಾಕ ಆಚಾರ್ಯ, ಹಾಗೆಯೇ ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ 2024- 25 ನೇ ಸಾಲಿನ ನಾಯಕಿ ಚಂದನ ನಾಯಕ, ಮಿಥುನ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶಿಬಿರಾರ್ಥಿಗಳು ಅನಿಸಿಕೆಯನ್ನು ವ್ಯಕ್ತಪಡಿಸಿದ್ದಲ್ಲದೆ, ಏಳು ದಿನದ ಶಿಬಿರದಲ್ಲಿ ಮಾಡಿದ ಸಾಧನೆಗಾಗಿ ಬಹುಮಾನವನ್ನು ಹಾಗೂ ಸ್ಮರಣಿಕೆಯನ್ನು ಪಡೆದುಕೊಂಡರು.
ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಬಿಎ ಶಮಿವುಲ್ಲಾ ತಮ್ಮ ಸ್ವಾಗತ ಭಾಷಣದೊಂದಿಗೆ ಶಿಬಿರದ ಏಳು ದಿನದ ಸಾಧನೆಯನ್ನು ವ್ಯಕ್ತಪಡಿಸಿದರು. ಸಹಯೋಜನಾಧಿಕಾರಿ ಸತೀಶ್ ಸಾಲಿಯಾನ್ ಹಾಗೂ ಶ್ವೇತಾ ಇವರ ಸಹಕಾರದೊಂದಿಗೆ ಶಿಬಿರದ ಯಶಸ್ಸು ನೆರವೇರಿತು ಎಂದು ಅದ್ಭುತ ಮಾತುಗಳನ್ನಾಡಿದರು. ಸಹಯೋಜನಾಧಿಕಾರಿ ಶ್ವೇತಾ ವರದಿಯನ್ನು ವಾಚಿಸಿದರು. ಕಾರ್ಯಕ್ರಮದಲ್ಲಿ ಗುರುದೇವಾ ಪ್ರಥಮ ದರ್ಜೆ ಕಾಲೇಜಿನ ಆಡಳಿತ ಮಂಡಳಿ ಉಪನ್ಯಾಸಕವೃಂದ, ಕಛೇರಿ ಸಿಬ್ಬಂದಿಗಳು, ಹಿರಿಯ ಶಿಬಿರಾರ್ಥಿಗಳು ಹಾಗೂ ಸರಕಾರಿ ಪ್ರೌಢಶಾಲೆ ಕಲ್ಮಂಜದ ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಶಿಬಿರಾರ್ಥಿಗಳಾದ ದೀಕ್ಷಿತ್ ಹಾಗೂ ಸುಶ್ಮಿತಾ ನೆರೆವೇರಿಸಿಕೊಟ್ಟರು. ಶಿಬಿರಾರ್ಥಿ ದೀಕ್ಷಿತ ವಂದಿಸಿದರು. ಏಳು ದಿನದ ವಾರ್ಷಿಕ ವಿಶೇಷ ಶಿಬಿರ ನಡೆಯುವುದಕ್ಕೆ ಅನುವು ಮಾಡಿಕೊಟ್ಟ ಸರಕಾರಿ ಪ್ರೌಢಶಾಲೆ ಕಲ್ಮಂಜದ ಮುಖ್ಯೋಪಾಧ್ಯಾಯಿನಿ ಪೂರ್ಣಿಮಾ ಇವರಿಗೆ ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಕಿರುಕಾಣಿಕೆಯನ್ನು ಪ್ರೀತಿತಾ ಧರ್ಮವಿಜೇತ್ ಇವರಿಂದ ಹಸ್ತಾಂತರಿಸಲಾಯಿತು. ಹಿರಿಯ ಶಿಬಿರಾರ್ಥಿಗಳಿಂದ ಸರಕಾರಿ ಪ್ರೌಢಶಾಲೆ ಕಲ್ಮಂಜದ ವಿದ್ಯಾರ್ಥಿಗಳಿಗೆ ವಿವಿಧ ಮನರಂಜನಾ ಚಟುವಟಿಕೆ ಹಮ್ಮಿಕೊಂಡಿದ್ದರು.ಮಧ್ಯಾಹ್ನದ ಭೋಜನದೊಂದಿಗೆ, ಕಾರ್ಯಕ್ರಮ ಸಂಪನ್ನಗೊಂಡಿತು.