ವಿಧಾನಪರಿಷತ್ ಉಪಚುನಾವಣೆ- ನಾಲ್ವರು ಅಂತಿಮ ಕಣದಲ್ಲಿ- ತಾಲೂಕಿನಲ್ಲಿ ೪೯ ಮತಗಟ್ಟೆಗಳು ಎಂಎಲ್‌ಎ ಹರೀಶ್ ಪೂಂಜ ಸಹಿತ ಒಟ್ಟು ೬೭೬ ಮತದಾರರು

0

ಬೆಳ್ತಂಗಡಿ: ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಕ್ಷೇತ್ರದಿಂದ ವಿಧಾನಪರಿಷತ್‌ಗೆ ನೂತನ ಸದಸ್ಯರೋರ್ವರ ಆಯ್ಕೆಗಾಗಿ ಅಕ್ಟೋಬರ್ ೨೧ರಂದು ನಡೆಯಲಿರುವ ಉಪಚುನಾವಣೆಗೆ ಸಂಬಂಧಿಸಿ ಬಿಜೆಪಿಯ ಕಿಶೋರ್ ಕುಮಾರ್ ಪುತ್ತೂರು, ಕಾಂಗ್ರೆಸ್‌ನ ರಾಜು ಎಸ್. ಪೂಜಾರಿ ಬೈಂದೂರು, ಎಸ್‌ಡಿಪಿಐಯ ಅನ್ವರ್ ಸಾದತ್ ಬಜತ್ತೂರು ಹಾಗೂ ಪಕ್ಷೇತರ ಅಭ್ಯರ್ಥಿ ದಿನಕರ ಉಳ್ಳಾಲ್ ಅವರು ಅಂತಿಮ ಕಣದಲ್ಲಿದ್ದಾರೆ. ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ ಎಸ್‌ಡಿಪಿಐನ ಮುಹಮ್ಮದ್ ರಿಯಾರh ಅವರು ನಾಮಪತ್ರ ವಾಪಸ್ ಪಡೆಯಲು ಕೊನೇಯ ದಿನವಾಗಿದ್ದ ಅ.೭ರಂದು ತಮ್ಮ ನಾಮಪತ್ರ ಹಿಂಪಡೆದಿದ್ದಾರೆ.
ದ್ವಿಸದಸ್ಯ ಕ್ಷೇತ್ರವಾಗಿರುವ ದ.ಕ.ಸ್ಥಳೀಯ ಪ್ರಾಧಿಕಾರ ಕ್ಷೇತ್ರದಿಂದ ಈ ಹಿಂದೆ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಮತ್ತು ಕಾಂಗ್ರೆಸ್‌ನ ಮಂಜುನಾಥ ಭಂಡಾರಿಯವರು ವಿಧಾನ ಪರಿಷತ್ ಸದಸ್ಯರಾಗಿ ಚುನಾಯಿತರಾಗಿದ್ದರು. ಈ ಪೈಕಿ ಕೋಟ ಶ್ರೀನಿವಾಸ ಪೂಜಾರಿಯವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಲೋಕಸಭೆಗೆ ಚುನಾಯಿತರಾದ ಬಳಿಕ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರಿಂದ ತೆರವಾಗಿರುವ ಒಂದು ಸ್ಥಾನಕ್ಕೆ ಉಪಚುನಾವಣೆ ನಡೆಯುತ್ತಿದೆ.
೩೯೨ ಮತಗಟ್ಟೆಗಳು: ೬೦೩೨ ಮತದಾರರು: ಅ.೨೧ರಂದು ಬೆಳಿಗ್ಗೆ ೮ ಗಂಟೆಯಿಂದ ಸಂಜೆ ೪ ಗಂಟೆ ತನಕ ಮತದಾನ ನಡೆಯಲಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಒಟ್ಟು ೩೯೨ ಮತಗಟ್ಟೆಗಳಿದ್ದು ೬೦೩೨ ಮತದಾರರಿದ್ದಾರೆ. ಈ ಪೈಕಿ ೩೧೨೭ ಮಹಿಳಾ ಮತದಾರರು ಹಾಗೂ ೨೯೦೫ ಪುರುಷ ಮತದಾರರು ಇದ್ದಾರೆ. ಅ.೨೪ರಂದು ಮಂಗಳೂರು ಸಂತ ಅಲೋಷಿಯಸ್ ಪದವಿ ಪೂರ್ವ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ.
ತಾಲೂಕಿನಲ್ಲಿ ೪೯ ಮತಗಟ್ಟೆಗಳು: ಎಂಎಲ್‌ಎ ಹರೀಶ್ ಪೂಂಜ ಸಹಿತ ಒಟ್ಟು ೬೭೬ ಮತದಾರರು: ವಿಧಾನಪರಿಷತ್ ಉಪಚುನಾವಣೆಗೆ ಸಂಬಂಧಿಸಿ ಬೆಳ್ತಂಗಡಿ ತಾಲೂಕಿನಲ್ಲಿ ೪೮ ಗ್ರಾಮ ಪಂಚಾಯತ್ ಮತ್ತು ಒಂದು ಪಟ್ಟಣ ಪಂಚಾಯತ್‌ನ ಮತಗಟ್ಟೆಯಲ್ಲಿ ಮತದಾನ ನಡೆಯಲಿದೆ. ಶಾಸಕ ಹರೀಶ್ ಪೂಂಜ ಸಹಿತ ಒಟ್ಟು ೬೭೬ ಮತದಾರರು ಹಕ್ಕು ಚಲಾಯಿಸಲು ಅರ್ಹತೆ ಹೊಂದಿದ್ದಾರೆ. ಇದರಲ್ಲಿ ೪೮ ಗ್ರಾಮ ಪಂಚಾಯತ್‌ಗಳ ೬೬೦ ಸದಸ್ಯರು ಹಾಗೂ ಬೆಳ್ತಂಗಡಿ ಪಟ್ಟಣ ಪಂಚಾಯತ್‌ನ ೧೨ ಸದಸ್ಯರು ಒಳಗೊಂಡಿದ್ದಾರೆ.

ಬಿಜೆಪಿ-ಕಾಂಗ್ರೆಸ್ ಅಭ್ಯರ್ಥಿ ಮುಖಾಮುಖಿ !

ಉಡುಪಿ-ದ.ಕ. ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಗಳ ವಿಧಾನಪರಿಷತ್ ಉಪ ಚುನಾವಣೆಯ ಮತಯಾಚನೆ ಬಿರುಸಿನಿಂದ ನಡೆಯುತ್ತಿದೆ. ಉಭಯ ಪಕ್ಷಗಳ ಅಭ್ಯರ್ಥಿಗಳು ಉಭಯ ಜಿಲ್ಲೆಗಳ ಮುಖ್ಯವಾಗಿ ಪ್ರಸ್ತುತ ನವರಾತ್ರಿಯಾದ್ದರಿಂದ ದೇವಿ ದೇವಾಲಯಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಭಾನುವಾರ ರಾತ್ರಿ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಉಡುಪಿಯ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದರು. ಈ ಸಂದರ್ಭ ಮಹಾಲಕ್ಷ್ಮಿ ಕೋ-ಆಪರೇಟಿವ್ ಸೊಸೈಟಿ ವತಿಯಿಂದ ನಡೆಯುತ್ತಿದ್ದ ಪೊಣ್ಣು ಪಿಲಿ ನಲಿಕೆ ಕಾರ್ಯಕ್ರಮ ವೀಕ್ಷಿಸಿದರು. ಇದೇ ವೇಳೆ ದೇವಾಲಯಕ್ಕೆ ಬಂದ ಕಾಂಗ್ರೆಸ್ ಅಭ್ಯರ್ಥಿ ರಾಜು ಎಸ್. ಪೂಜಾರಿ ಅವರು ದೇವಿ ದರ್ಶನ ಪಡೆದು ಪೂಜೆ ಸಲ್ಲಿಸಿ ಪಿಲಿ ನಲಿಕೆ ಕಾರ್ಯಕ್ರಮದೆಡೆಗೆ ಬಂದರು. ಆಗ ಪರಸ್ಪರ ಬಿಜೆಪಿಯ ಕಿಶೋರ್ ಕುಮಾರ್ ಮತ್ತು ಕಾಂಗ್ರೆಸ್‌ನ ರಾಜು ಎಸ್. ಪೂಜಾರಿ ಮುಖಾಮುಖಿ ಭೇಟಿಯಾಯಿತು. ಇಬ್ಬರೂ ಪರಸ್ಪರ ಹಸ್ತಲಾಘವ ಮಾಡಿಕೊಂಡು ಲಘುಚಟಾಕಿ ಹಾರಿಸಿ ನಕ್ಕು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ಚುನಾವಣಾ ವೀಕ್ಷಕ ಪಂಕಜ್ ಕುಮಾರ್ ಪಾಂಡೆ ಪರಿಶೀಲನೆ

ವಿಧಾನಪರಿಷತ್ ಉಪಚುನಾವಣೆಗೆ ಸಂಬಂಧಿಸಿ ಚುನಾವಣಾ ಆಯೋಗದಿಂದ ವೀಕ್ಷಕರಾಗಿ ನೇಮಕಗೊಂಡಿರುವ ಐಎಎಸ್ ಅಧಿಕಾರಿ ಪಂಕಜ್ ಕುಮಾರ್ ಪಾಂಡೆ ಅವರು ಅ.೭ರಂದು ಮಂಗಳೂರಿಗೆ ಆಗಮಿಸಿ ಚುನಾವಣಾ ಸಿದ್ಧತೆಗಳನ್ನು ಪರಿಶೀಲಿಸಿದರು. ಚುನಾವಣಾಧಿಕಾರಿಯೂ ಆಗಿರುವ ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದ ವೀಕ್ಷಕ ಪಂಕಜ್ ಕುಮಾರ್ ಪಾಂಡೆ ಅವರು ಮತಗಟ್ಟೆಗಳ ಸಿದ್ಧತೆ, ಚುನಾವಣಾ ಸಿಬ್ಬಂದಿಗಳ ನೇಮಕ, ಮತ ಪತ್ರಗಳ ಮುದ್ರಣ, ಮತದಾರರ ಪಟ್ಟಿ ಹಾಗೂ ಇತರ ಚುನಾವಣೆ ಸಿದ್ಧತೆಗಳ ಮಾಹಿತಿ ಪಡೆದರು. ಮತಗಟ್ಟೆ ಸಿಬ್ಬಂದಿಗಳಿಗೆ ತರಬೇತಿ ಹಾಗೂ ಮತ ಎಣಿಕೆ ಕೇಂದ್ರದಲ್ಲಿ ಕೈಗೊಳ್ಳಬೇಕಾದ ವ್ಯವಸ್ಥೆಗಳ ಬಗ್ಗೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಎಂ.ಪಿ ಅವರು ಚುನಾವಣಾ ವೀಕ್ಷಕರಿಗೆ ಸಿದ್ಧತೆಗಳ ಮಾಹಿತಿ ನೀಡಿದರು.
ಉಡುಪಿ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್, ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ್ ಕೆ., ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ಯತೀಶ್ ಎನ್, ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅರುಣ್, ದ.ಕ.ಅಪರ ಜಿಲ್ಲಾಧಿಕಾರಿ ಡಾ.ಜಿ ಸಂತೋಷ್ ಕುಮಾರ್, ಉಡುಪಿ ಅಪರ ಜಿಲ್ಲಾಧಿಕಾರಿ ಮಮತಾದೇವಿ ಸಭೆಯಲ್ಲಿ ಉಪಸ್ಥಿತರಿದ್ದರು.

p>

LEAVE A REPLY

Please enter your comment!
Please enter your name here