ಕಾಶಿಪಟ್ಣ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯು ಗಾಂಧಿ ಜಯಂತಿಯಂದು ರಾಜ್ಯದ ಅತ್ಯುತ್ತಮ ಗ್ರಾಮ ಪಂಚಾಯತ್‌ಗಳಿಗೆ ನೀಡುವ ೨೦೨೩-೨೦೨೪ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಬೆಳ್ತಂಗಡಿ ತಾಲೂಕಿನಿಂದ ಕಾಶಿಪಟ್ಣ ಗ್ರಾಮ ಪಂಚಾಯತ್ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
ದ.ಕ. ಜಿಲ್ಲೆಯ ೯ ತಾಲೂಕುಗಳಿಂದ ಒಂದೊಂದು ಗ್ರಾಮಗಳನ್ನು ಅಂತಿಮಗೊಳಿಸಲಾಗಿದ್ದು, ಈ ಕುರಿತ ತಾತ್ಕಾಲಿಕ ಪಟ್ಟಿಯನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿಡುಗಡೆಗೊಳಿಸಿದ್ದಾರೆ. ಅದರಲ್ಲಿ ಬೆಳ್ತಂಗಡಿ ತಾಲೂಕಿನಿಂದ ಕಾಶಿಪಟ್ಣ ಗ್ರಾಮ ಪಂಚಾಯತ್ ಸ್ಥಾನ ಪಡೆದಿದೆ. ಈ ಬಗ್ಗೆ ಸಾರ್ವಜನಿಕರ ಆಕ್ಷೇಪಣೆಗಳಿದ್ದಲ್ಲಿ ಸೆ.೨೯ರಂದು ಬೆಳಗ್ಗೆ ೧೧ರ ಮೊದಲು ಸಲ್ಲಿಸುವಂತೆ ಸೂಚಿಸಲಾಗಿದೆ.
ಅ.೨ರಂದು ಪ್ರಶಸ್ತಿ ಪ್ರದಾನ: ಗಾಂಧಿ ಗ್ರಾಮ ಪುರಸ್ಕಾರವನ್ನು ಅ.೨ರಂದು ಬೆಂಗಳೂರಿನಲ್ಲಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯಲಿರುವ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿಯು ಪ್ರಶಸ್ತಿ ಪತ್ರ, ಫಲಕ ಹಾಗೂ ೫ ಲಕ್ಷ ರೂಪಾಯಿ ಪ್ರೋತ್ಸಾಹ ಧನವನ್ನು ಒಳಗೊಂಡಿದೆ.
ಕಾಶಿಪಟ್ಣದ ಸಾಧನೆ ಏನು?: ಕಾಶಿಪಟ್ಣ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮನೆಗೊಂದು ಬಾವಿ ರಚನೆ, ಶಾಲೆಗಳಲ್ಲಿ ಶೌಚಾಲಯದ ನಿರ್ಮಾಣ, ಉದ್ಯೋಗ ಖಾತರಿ ಯೋಜನೆಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ, ಚರಂಡಿ ವ್ಯವಸ್ಥೆ, ಕೆರೆ ಅಭಿವೃದ್ಧಿ, ಹೈಮಾಸ್ಟ್ ಲೈಟ್ ಅಳವಡಿಕೆ, ಬಸ್ ಪ್ರಯಾಣಿಕರ ತಂಗುದಾಣದಲ್ಲಿ ಪುಸ್ತಕ ಗೂಡು ನಿರ್ಮಾಣ, ಶಾಲೆಯಲ್ಲಿ ಮಳೆ ನೀರು ಕೊಯ್ಲು ಯೋಜನೆ ಹಾಗೂ ಸ್ಯಾನಿಟರಿ ಪ್ಯಾಡ್ ಸುಡುವ ಯಂತ್ರ ಅಳವಡಿಕೆ, ಅಂಗಡಿಗಳಿಗೆ ಹಾಗೂ ಸಂಘ ಸಂಸ್ಥೆಗಳಿಗೆ ಕಸ ಸಂಗ್ರಹಣೆಗೆ ಬಕೆಟ್ ವಿತರಣೆ ಮುಂತಾದ ಉತ್ತಮ ಕಾರ್ಯಗಳನ್ನು ಅನುಷ್ಠಾನ ಮಾಡಿರುವುದನ್ನು ಪರಿಗಣಿಸಲಾಗಿದೆ.
ಅಭಿವೃದ್ಧಿಗೆ ಪ್ರೇರಣೆ:
ಗ್ರಾಮಸ್ಥರ, ಆಡಳಿತ ಮಂಡಳಿಯವರ ಹಾಗೂ ಸಿಬ್ಬಂದಿಯ ಸಹಕಾರದಿಂದ ಪ್ರಶಸ್ತಿಯ ಹಂತಕ್ಕೆ ತಲುಪಲು ಸಾಧ್ಯವಾಗಿದೆ. ಪ್ರಶಸ್ತಿ ಲಭಿಸಿದರೆ ಗ್ರಾಮದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲು ಪ್ರೇರಣೆಯಾಗಲಿದೆ.
- ಆಶಾಲತಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ