ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಬೆದರಿಸಿ ನಿಂದಿಸಿದ ಆರೋಪದ ಪ್ರಕರಣ: ಶಾಸಕ ಹರೀಶ್ ಪೂಂಜರನ್ನು ಪೊಲೀಸರು ಬಂಧಿಸಿಲ್ಲ, ಜಾಮೀನು ಪಡೆದಿಲ್ಲ

0

ಬೆಳ್ತಂಗಡಿ: ಅಕ್ರಮ ಗಣಿಗಾರಿಕೆ ಮತ್ತು ಸ್ಫೋಟಕ ಕಾಯ್ದೆಯಡಿ ಬಂಧಿತರಾಗಿದ್ದ ತಾಲೂಕು ಬಿಜೆಪಿ ಯುವಮೋರ್ಚಾದ ಅಧ್ಯಕ್ಷ ಶಶಿರಾಜ್ ಶೆಟ್ಟಿಯವರನ್ನು ಬಂಧಿಸಿರುವ ಕ್ರಮವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದ ಶಾಸಕ ಹರೀಶ್ ಪೂಂಜ ಅವರನ್ನು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಬಂಧಿಸಿ ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಅವರು ನೀಡಿದ್ದ ಹೇಳಿಕೆ ಸತ್ಯಕ್ಕೆ ದೂರವಾದದ್ದು ಎಂಬುದು ಬಹಿರಂಗವಾಗಿದೆ.
ಬೆಳ್ತಂಗಡಿ ಸುದ್ದಿ ಬಿಡುಗಡೆ ಪತ್ರಿಕೆಯ ಸಂಪಾದಕ ಸಂತೋಷ್ ಕುಮಾರ್ ಶಾಂತಿನಗರ ಅವರು ಪೊಲೀಸ್ ಠಾಣೆಯಿಂದ ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದುಕೊಂಡಿರುವ ಮಾಹಿತಿಯಲ್ಲಿ ಈ ವಿಚಾರ ಖಚಿತವಾಗಿದ್ದು ಹರೀಶ್ ಪೂಂಜ ಅವರನ್ನು ಪೊಲೀಸ್ ಠಾಣೆಯಲ್ಲಿ ಬಂಧಿಸಿದ್ದಾಗಲೀ, ಅವರನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸಿದ್ದಾಗಲೀ ನಡೆದೇ ಇಲ್ಲ ಎಂಬುದು ಗೊತ್ತಾಗಿದೆ.
ಶಾಸಕರನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಗಿದೆ ಎಂದು ಮಾಹಿತಿ ನೀಡಿದ್ದ ಎಸ್.ಪಿ.: ಅಕ್ರಮ ಗಣಿಗಾರಿಕೆ ಮತ್ತು ಸ್ಫೋಟಕ ಕಾಯ್ದೆಯಡಿ ಬಂಧಿತರಾಗಿದ್ದ ಬಿಜೆಪಿ ಯುವಮೋರ್ಚಾದ ತಾಲೂಕು ಅಧ್ಯಕ್ಷ ಶಶಿರಾಜ್ ಶೆಟ್ಟಿಯವರನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಮೇ ೧೬ರಂದು ರಾತ್ರಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರತಿಭಟನೆ ನಡೆಸಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಬೆದರಿಸಿ ನಿಂದಿಸಿದ ಮತ್ತು ಶಶಿರಾಜ್ ಶೆಟ್ಟಿ ಬಂಧನ ಖಂಡಿಸಿ ಆಡಳಿತ ಸೌಧದಲ್ಲಿ ಮೇ ೧೮ರಂದು ಪ್ರತಿಭಟನೆ ನಡೆಸಿ ಪೊಲೀಸರನ್ನು ನಿಂದಿಸಿ ಬೆದರಿಸಿದ ಆರೋದಡಿ ಕೇಸ್ ದಾಖಲಾಗಿದ್ದ ಶಾಸಕ ಹರೀಶ್ ಪೂಂಜ ಅವರ ಗರ್ಡಾಡಿಯಲ್ಲಿರುವ ಮನೆಗೆ ಪೊಲೀಸ್ ಅಧಿಕಾರಿಗಳ ತಂಡ ಮೇ ೨೨ರಂದು ತೆರಳಿದ್ದ ವೇಳೆ ಭಾರೀ ಹೈಡ್ರಾಮ ನಡೆದಿತ್ತು. ಹರೀಶ್ ಪೂಂಜ ಅವರನ್ನು ಪೊಲೀಸ್ ಅಧಿಕಾರಿಗಳು ಬಂಧಿಸಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದ ಬೃಹತ್ ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರು ಶಾಸಕರ ಬಂಧನಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಹರೀಶ್ ಪೂಂಜ ಪರ ವಕೀಲರೂ ಪ್ರಬಲವಾಗಿ ವಾದ ಮಂಡಿಸಿ ಪೂಂಜ ಅವರನ್ನು ಪೊಲೀಸರು ವಶಕ್ಕೆ ಪಡೆಯದಂತೆ ಮಾಡಿದ್ದರು. ಈ ವೇಳೆ ಮುನ್ನೆಚ್ಚರಿಕಾ ಕ್ರಮವಾಗಿ ಪೂಂಜ ಅವರ ಮನೆಯ ಸುತ್ತ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಅಂದು ವಿಚಾರಣೆಗೆ ಹಾಜರಾಗಲು ನೊಟೀಸ್ ಪಡೆದಿದ್ದ ಹರೀಶ್ ಪೂಂಜ ಅವರು ರಾತ್ರಿ ವೇಳೆಗೆ ಬಿಜೆಪಿ ಮುಖಂಡರು ಮತ್ತು ವಕೀಲರೊಂದಿಗೆ ಪೊಲೀಸ್ ಠಾಣೆಗೆ ಹಾಜರಾಗಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಹರೀಶ್ ಪೂಂಜರನ್ನು ವಶಕ್ಕೆ ಪಡೆಯುತ್ತಾರೆ ಎಂದು ವ್ಯಾಪಕ ಸುದ್ದಿಯಾಗಿತ್ತು. ಆದರೆ, ಠಾಣೆಗೆ ಬಂದ ಒಂದು ಗಂಟೆಯ ಅವಧಿಯೊಳಗೆ ಹರೀಶ್ ಪೂಂಜ ಅವರು ಠಾಣೆಯಿಂದ ಹೊರ ಬಂದಿದ್ದರು. ಠಾಣೆಯೊಳಗೆ ಏನೆಲ್ಲಾ ಪ್ರಕ್ರಿಯೆ ನಡೆಯಿತು ಎಂಬ ಮಾಹಿತಿ ಮಾಧ್ಯಮದವರಿಗೆ ಗೊತ್ತಾಗಿರಲಿಲ್ಲ. ರಾತ್ರಿ ೧೦.೪೩ಕ್ಕೆ ಎಸ್‌ಪಿ ರಿಷ್ಯಂತ್ ಅವರು ಪೊಲೀಸರು ಮತ್ತು ಮಾಧ್ಯಮ ಪ್ರತಿನಿಧಿಗಳು ಇರುವ ವಾಟ್ಸಾಪ್ ಗ್ರೂಪ್‌ನಲ್ಲಿ ಸಂದೇಶ ರವಾನಿಸಿ ಬೆಳ್ತಂಗಡಿ ಠಾಣಾ ೫೮/೨೦೨೪ ಕಲಂ ೧೪೩, ೧೪೭, ೩೪೧, ೫೦೪, ೫೦೬ ಜತೆಗೆ ೧೪೯ ಐಪಿಸಿ ಪ್ರಕರಣಕ್ಕೆ ಸಂಬಂಧಿಸಿ ಆರೋಪಿತ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾರನ್ನು ಬೆಳ್ತಂಗಡಿ ಠಾಣೆಯಲ್ಲಿ ವಿಚಾರಣೆ ನಡೆಸಿ ಸ್ಟೇಶನ್ ಜಾಮೀನಿನಲ್ಲಿ ಬಿಡುಗಡೆ ಮಾಡಲಾಗಿರುತ್ತದೆ ಎಂದು ತಿಳಿಸಿದ್ದರು. ಪತ್ರಕರ್ತರೊಂದಿಗೆ ದೂರವಾಣಿ ಮೂಲಕ ಮಾತನಾಡುವಾಗಲೂ ಇದೇ ರೀತಿ ತಿಳಿಸಿದ್ದರು. ಈ ಮಾಹಿತಿಯನ್ನಾಧರಿಸಿ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿತ್ತು.
ಇದಾದ ಕೆಲವು ದಿನಗಳ ಬಳಿಕ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣವೊಂದರ ಮಾಹಿತಿ ನೀಡಲು ಪತ್ರಿಕಾಗೋಷ್ಠಿಯನ್ನುzಶಿಸಿ ಮಾತನಾಡಿದ್ದ ಎಸ್.ಪಿ. ರಿಷ್ಯಂತ್ ಸಿ.ಬಿ. ಅವರು ಶಾಸಕ ಹರೀಶ್ ಪೂಂಜ ಅವರನ್ನು ಪೊಲೀಸ್ ಠಾಣೆಯಲ್ಲಿ ಬಂಧಿಸಿ ಸ್ಟೇಷನ್ ಬೇಲ್‌ನಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ಪುನರುಚ್ಛರಿಸಿದ್ದರು. ಇದಾದ ಕೆಲವು ದಿನಗಳ ಬಳಿಕ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಶಾಸಕ ಹರೀಶ್ ಪೂಂಜ ಮತ್ತು ಅವರ ಪರ ವಕೀಲ ಶಂಭು ಶರ್ಮಾ ಅವರು ಎಸ್‌ಪಿಯವರ ಹೇಳಿಕೆಯನ್ನು ಅಲ್ಲಗಳೆದಿದ್ದರು. ಪೊಲೀಸ್ ಠಾಣೆಯಲ್ಲಿ ಬಂಧಿಸಿದ್ದಾಗಲೀ, ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾಗಲೀ ನಡೆದಿಲ್ಲ ಎಂದು ಹರೀಶ್ ಪೂಂಜ ಮತ್ತು ಶಂಭು ಶರ್ಮ ಹೇಳಿದ್ದರು. ಇವರ ಪರ ವಿರೋಧ ಹೇಳಿಕೆಯಿಂದಾಗಿ ಯಾರು ಹೇಳುತ್ತಿರುವುದು ಸರಿ, ಯಾರು ಹೇಳುತ್ತಿರುವುದು ತಪ್ಪು ಎಂದು ಗೊಂದಲ ಉಂಟಾಗಿತ್ತು.
ಶಾಸಕರ ಬಂಧನವೂ ಆಗಿಲ್ಲ, ಜಾಮೀನೂ ಪಡೆದಿಲ್ಲ – ಮಾಹಿತಿ ಹಕ್ಕು ಕಾಯ್ದೆಯಲ್ಲಿ ಬಹಿರಂಗ: ಈ ಗೊಂದಲದ ಹಿನ್ನೆಲೆಯಲ್ಲಿ ಸುದ್ದಿ ಬಿಡುಗಡೆ ಪತ್ರಿಕೆಯ ಸಂಪಾದಕ ಸಂತೋಷ್ ಕುಮಾರ್ ಶಾಂತಿನಗರ ಅವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿ ಮಾಹಿತಿ ಕೇಳಿದ್ದರು. ಇದೀಗ ಠಾಣೆಯ ಮಾಹಿತಿ ಹಕ್ಕು ಅಧಿಕಾರಿಯವರು ಸಂತೋಷ್ ಅವರಿಗೆ ಮಾಹಿತಿ ನೀಡಿದ್ದು ಬೆಳ್ತಂಗಡಿ ಪೊಲೀಸ್ ಠಾಣೆಯ ಅ.ಕ್ರ. ೫೮/೨೦೨೪ ಕಲಂ: ೧೪೩, ೧೪೭, ೩೪೧, ೫೦೪, ೫೦೬ ಜೊತೆಗೆ ೧೪೯ ಐಪಿಸಿ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿರುವುದಿಲ್ಲ. ಆದುದರಿಂದ ಸ್ಟೇಷನ್ ಬೇಲ್, ಜಾಮೀನು ಮುಚ್ಚಳಿಕೆಯನ್ನು ಪಡೆಯುವ ಪ್ರಮೇಯ ಬರುವುದಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೆ ಹರೀಶ್ ಪೂಂಜ ಅವರ ವಿರುದ್ಧ ದಾಖಲಾಗಿರುವ ಬೆಳ್ತಂಗಡಿ ಪೊಲೀಸ್ ಠಾಣೆಯ ಅ.ಕ್ರ. ೫೭-೨೦೨೪ ಕಲಂ ೫೦೪, ೩೫೩ ಪ್ರಕರಣದಲ್ಲಿಯೂ ಆರೋಪಿಯನ್ನು ಬಂಧಿಸಿರುವುದಿಲ್ಲ. ಆದುದರಿಂದ ಸ್ಟೇಷನ್ ಬೇಲ್, ಜಾಮೀನು ಮುಚ್ಚಳಿಕೆಯನ್ನು ಪಡೆಯುವ ಪ್ರಮೇಯ ಬರುವುದಿಲ್ಲ ಎಂದು ಮಾಹಿತಿ ಹಕ್ಕು ಅಧಿಕಾರಿಯವರು ಸಂತೋಷ್ ಕುಮಾರ್ ಅವರಿಗೆ ಮಾಹಿತಿ ಒದಗಿಸಿದ್ದಾರೆ. ಎರಡೂ ಪ್ರಕರಣಗಳಲ್ಲಿಯೂ ಶಾಸಕ ಹರೀಶ್ ಪೂಂಜ ಅವರನ್ನು ಪೊಲೀಸ್ ಠಾಣೆಯಲ್ಲಿ ಬಂಧಿಸಿದ್ದಾಗಲೀ, ಜಾಮೀನಿನಲ್ಲಿ ಬಿಡುಗಡೆಗೊಳಿಸಿದ್ದಾಗಲೀ ನಡೆದಿಲ್ಲ ಎಂದಾದರೆ ಎಸ್.ಪಿ.ಯವರು ಯಾಕಾಗಿ ಆ ರೀತಿ ಸಂದೇಶ ರವಾನಿಸಿದ್ದರು ಎಂಬುದು ಸ್ಪಷ್ಟವಾಗಿಲ್ಲ.

ಮಾಹಿತಿ ಹಕ್ಕು ಕಾಯ್ದೆಯಡಿ ಬಹಿರಂಗ: ಸುದ್ದಿ ಬಿಡುಗಡೆಯಲ್ಲಿ ಮಾತ್ರ ಪ್ರಕಟ !
ಶಾಸಕ ಹರೀಶ್ ಪೂಂಜ ಅವರನ್ನು ಬಂಧಿಸಿಲ್ಲ ಮತ್ತು ಅವರು ಜಾಮೀನು ಪಡೆದುಕೊಂಡಿಲ್ಲ ಎಂಬ ನೈಜ ವರದಿ ಸುದ್ದಿ ಬಿಡುಗಡೆಯಲ್ಲಿ ಮಾತ್ರ ಪ್ರಕಟಗೊಂಡಿದೆ. ಹರೀಶ್ ಪೂಂಜ ಅವರನ್ನು ಬಂಧಿಸಲಾಗಿತ್ತು ಮತ್ತು ಅವರನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಗಿತ್ತು ಎಂದು ವ್ಯಾಪಕ ಸುದ್ದಿಯಾಗಿತ್ತು. ಇದನ್ನು ಹರೀಶ್ ಪೂಂಜ ಮತ್ತು ಅವರ ಪರ ವಕೀಲರು ನಿರಾಕರಿಸಿದ್ದರು. ಆದರೂ ಪರ ವಿರೋಧ ಚರ್ಚೆ ಮುಂದುವರಿದಿತ್ತು. ಸತ್ಯಾಂಶವನ್ನು ಯಾರೂ ಬಯಲು ಮಾಡಿರಲಿಲ್ಲ. ಹರೀಶ್ ಪೂಂಜ ಅವರ ಬೆಂಬಲಿಗರಾಗಲೀ ಅವರ ಪರ ವರದಿ ಪ್ರಕಟಿಸುವ ಪತ್ರಿಕಾ ಮಾಧ್ಯಮಗಳಾಗಲೀ ಈ ಕುರಿತು ಬೆಳಕು ಚೆಲ್ಲಿರಲಿಲ್ಲ. ಆದರೆ, ಸುದ್ದಿ ಬಿಡುಗಡೆ ಈ ಕುರಿತು ವಾಸ್ತವ ವರದಿ ಪ್ರಕಟಿಸಿ ತನ್ನ ಪಾಸಿಟಿವ್ ಪತ್ರಿಕೋದ್ಯಮದ ಹೆಜ್ಜೆಯನ್ನು ಮುಂದುವರಿಸಿದೆ.

ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ: ಪೊಲೀಸ್ ಠಾಣೆಯಲ್ಲಿ ಪ್ರತಿಭಟಿಸಿದ ಶಾಸಕ ಹರೀಶ್ ಪೂಂಜ ಮತ್ತು ೨೭ ಮಂದಿ ಮತ್ತು ಆಡಳಿತ ಸೌಧದಲ್ಲಿ ಪ್ರತಿಭಟಿಸಿದ ಶಾಸಕ ಹರೀಶ್ ಪೂಂಜ ಮತ್ತು ೩೬ ಮಂದಿಯ ವಿರುದ್ಧ ಪ್ರಕರಣದ ತನಿಖಾಧಿಕಾರಿಯಾಗಿದ್ದ ಪುತ್ತೂರು ನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸತೀಶ್ ಅವರು ಬೆಂಗಳೂರಿನಲ್ಲಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಈಗಾಗಲೇ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ತಮ್ಮ ಮೇಲಿನ ಪ್ರಕರಣ ರದ್ದು ಪಡಿಸುವಂತೆ ಆಗ್ರಹಿಸಿ ಶಾಸಕ ಹರೀಶ್ ಪೂಂಜ ಅವರು ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದ್ದ ನ್ಯಾಯಮೂರ್ತಿಗಳು ಪೊಲೀಸರ ತನಿಖಾ ಕ್ರಮ ಸರಿಯಾಗಿಲ್ಲವಾದರೆ ವಿಚಾರಣಾ ನ್ಯಾಯಾಲಯಕ್ಕೆ ಡಿಸ್ಜಾರ್ಜ್ ಅರ್ಜಿ ಸಲ್ಲಿಸುವಂತೆ ಸೂಚಿಸಿದ್ದರು. ಆ ನಂತರ ಹರೀಶ್ ಪೂಂಜ ಅಥವಾ ಇತರ ಆರೋಪಿಗಳು ವಿಚಾರಣಾ ನ್ಯಾಯಾಲಯಕ್ಕೆ ಡಿಸ್ಜಾರ್ಜ್ ಅಪ್ಲಿಕೇಶನ್ ಸಲ್ಲಿಸಿದ್ದಾರೆಯೇ ಇಲ್ಲವೇ ಎಂದು ಮಾಹಿತಿ ಲಭ್ಯವಾಗಿಲ್ಲ.

LEAVE A REPLY

Please enter your comment!
Please enter your name here