ಬೆಳ್ತಂಗಡಿ: ಮೊದಲ ವರ್ಷದ ಪ್ರಯತ್ನದಲ್ಲಿ ಫಲ ಸಿಗದೇ ಇದ್ದಾಗ, ಎರಡನೇ ವರ್ಷ ಮತ್ತೆ ತಯಾರಿ ನಡೆಸಿದ ಯುವಕರ ಶ್ರಮಕ್ಕೆ ಸೂಕ್ತ ಪ್ರತಿಫಲ ಸಿಕ್ಕಿದೆ. ರಾಜ್ಯದ ಕುಗ್ರಾಮ, ನಕ್ಸಲ್ ಪೀಡಿತ ಗ್ರಾಮವೆಂದೇ ಗುರುತಿಸಲ್ಪಟ್ಟಿದ್ದ ಕುತ್ಲೂರು ಈಗ ದೇಶದ ಪ್ರವಾಸೋದ್ಯಮ ಕ್ಷೇತ್ರದ ಭೂಪಟದಲ್ಲಿ ಹೊಸ ಗೆರೆ ಎಳೆದಿದೆ.
ಸಾಂಸ್ಕೃತಿಕ ಪರಂಪರೆ ಮತ್ತು ಪ್ರವಾಸೋದ್ಯಮ ಮೂಲಕ ಸುಸ್ಥಿರ ಅಭಿವೃದ್ಧಿ ಹೊಂದುತ್ತಿರುವ ಹಳ್ಳಿ-ಗ್ರಾಮಗಳನ್ನು ಗುರುತಿಸುವ ಸಂಬಂಧ ಕೇಂದ್ರ ಪ್ರವಾಸೋದ್ಯಮ ಸಚಿವಾಲಯವು ಅತ್ಯುತ್ತಮ ಪ್ರವಾಸೋದ್ಯಮ ಹಳ್ಳಿ ಸ್ಪರ್ಧೆ -2024ನ್ನು ಏರ್ಪಡಿಸಿದ್ದು, ಇದರ ಸಾಹಸಮಯ ಪ್ರವಾಸಿ ತಾಣ (ಅಡ್ವೆಂಚರ್ ಟೂರಿಸಂ) ವಿಭಾಗದಲ್ಲಿ ರಾಷ್ಟ್ರೀಯ ಪ್ರಶಸ್ತಿಗೆ ಬೆಳ್ತಂಗಡಿ ತಾಲೂಕಿನ ನಾರಾವಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುತ್ಲೂರು ಗ್ರಾಮ ಆಯ್ಕೆಯಾಗಿದೆ. ಸೆ.27ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಲಿರುವ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಪಟ್ಟು ಬಿಡದ ಯುವಕರು: ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಗ್ರಾಮದ ಹರೀಶ್, ಡಾಕಯ್ಯ ಪೂಜಾರಿ ಹಾಗೂ ಕತಾರ್ ಉದ್ಯೋಗಿ ಸಂದೀಪ್ ಪೂಜಾರಿ ಕುತ್ಲೂರು ಈ ಸಾಧನೆಯ ಹಿಂದಿನ ರೂವಾರಿಗಳು. ಇವರಿಗೆ ಶಿವರಾಜ್ ಅಂಚನ್ ಎಂಬುವವರೂ ಸಹಕರಿಸಿದ್ದಾರೆ. ನಾರಾವಿ ಗ್ರಾಮ ಪಂಚಾಯತ್ ಸಹಕಾರದೊಂದಿಗೆ ಈ ಮೂವರು ಸೇರಿಕೊಂಡು ಗ್ರಾಮದ ಪ್ರವಾಸೋದ್ಯಮ ಅವಕಾಶಗಳ ಕುರಿತು ಸಮಗ್ರ ವಿವರಗಳನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಿದ್ದರು. ಸುದೀರ್ಘವಾದ ಈ ಪ್ರಕ್ರಿಯೆಯು ವಿಡಿಯೋ, ಫೋಟೋ, ಪಿಪಿಟಿ ಸಹಿತ ಹಲವು ಸುತ್ತುಗಳನ್ನು ಒಳಗೊಂಡಿತ್ತು. ಆನ್‌ಲೈನ್ ಮೂಲಕವೇ ಎಲ್ಲ ಪ್ರಕ್ರಿಯೆಗಳು ನಡೆದಿದ್ದವು.
ಕಳೆದ ವರ್ಷವೂ ಇದೇ ತಂಡ ಸ್ಪರ್ಧಿಸಿ ರಾಷ್ಟ್ರಮಟ್ಟದವರೆಗೆ ಹೋಗಿದ್ದರೂ, ಅಂತಿಮವಾಗಿ ಹಂಪಿ ಗ್ರಾಮ ಆಯ್ಕೆಯಾಗಿದ್ದರಿಂದ ನಿರಾಸೆಯಾಗಿತ್ತು. ಈ ಬಾರಿ ತಂಡವು ಮತ್ತಷ್ಟು ಶ್ರಮವಹಿಸಿ, ರಾಷ್ಟ್ರಮಟ್ಟದಲ್ಲಿ ಕುತ್ಲೂರು ಗ್ರಾಮಕ್ಕೆ ಪ್ರವಾಸೋದ್ಯಮದ ಕಿರೀಟ ತೊಡಿಸುವಲ್ಲಿ ಯಶಸ್ವಿಯಾಗಿದೆ.