

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಕ್ಷೇಮ ಪಾಲನಾ ಸಮಿತಿಯ ಉದ್ಘಾಟನೆ ಸೆ.19ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದ ಮಹಾವೀರ ಕಾಲೇಜು ಪ್ರಾಂಶುಪಾಲ ಡಾ.ರಾಧಾಕೃಷ್ಣ, ವಿದ್ಯಾರ್ಥಿ ವಿದ್ಯಾರ್ಥಿನಿಯರು, ಜೀವನದಲ್ಲಿ ಸಕಾರಾತ್ಮಕ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು ಹಾಗೆಯೇ ಸತತ ಪರಿಶ್ರಮ, ತಾಳ್ಮೆ, ಸಿಸ್ತು, ಬದ್ಧತೆ ಜೀವನದ ಯಶಸ್ವಿಗೆ ಅಗತ್ಯವಾದುದು ಎಂದು ಒತ್ತಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸೇಕ್ರೆಡ್ ಹಾರ್ಟ್ ಸಮೂಹ ಸಂಸ್ಥೆಗಳ ಸಂಚಾಲಕ ರೆ.ಡಾ.ಸ್ಟ್ಯಾನಿ ಗೋವಿಯಸ್ ರವರು ವಿದ್ಯಾರ್ಥಿ ಕ್ಷೇಮ ಪಾಲನಾ ಸಮಿತಿಯ ಪದಾಧಿಕಾರಿಗಳಿಗೆ ಶುಭ ಕೋರಿ ಆಶೀರ್ವಚಿಸಿದರು.

ಕಾಲೇಜಿನ ಪ್ರಾಂಶುಪಾಲ ಪ್ರೊಫೆಸರ್ ಅಲೆಕ್ಸ್ ಐವನ್ ಸಿಕ್ವೇರಾ ರವರು ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಭೋಧಿಸಿದರು.
ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜೆರಾಲ್ಡ್ ಮೋರಸ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಶೈಲ ಜಾರ್ಜ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಲ್ಸನ್ ರೂಪೇಶ್ ಮೋರಸ್, ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊಫೆಸರ್ ಈಶ್ವರಗೌಡ ಉಪಸ್ಥಿತರಿದ್ದು ಸಮಿತಿಯ ಸದಸ್ಯರುಗಳಿಗೆ ಶುಭಕೋರಿದರು.
ಈ ಸಂದರ್ಭದಲ್ಲಿ ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ.ಈಶ್ವರ ಗೌಡರವರು ಬರೆದ ಪ್ರಥಮ ಬಿ.ಕಾಂ ಪದವಿ ಪಠ್ಯಪುಸ್ತಕ ಫೈನಾನ್ಸಿಯಲ್ ಅಕೌಂಟ್ಸ್ ಅನ್ನು ರೆ.ಡಾ.ಸ್ಟ್ಯಾನಿ ಗೋವಿಯಸ್ ರವರು ಲೋಕಾರ್ಪಣೆ ಮಾಡಿದರು.
ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿ ಪ್ರೋ .ಪ್ರಕಾಶ್ ಕ್ರಮಾಧಾರಿ ರವರು ಕಾರ್ಯಕ್ರಮವನ್ನು ಸಂಘಟಿಸಿ ಸ್ವಾಗತಿಸಿದರು. ವಿದ್ಯಾರ್ಥಿನಿ ಕುಮಾರಿ ಧನಲಕ್ಷ್ಮಿ ವಂದಿಸಿದರು.