ಬೆಳ್ತಂಗಡಿ: ವಿದ್ಯಾರ್ಥಿ ಮೇಲೆ ಶಿಕ್ಷಕನೊಬ್ಬ ಸತತ ಮೂರು ದಿನಗಳಿಂದ ಬೆತ್ತದಿಂದ ಹಲ್ಲೆ ನಡೆಸಿರುವ ಘಟನೆ ಭೆಳಕಿಗೆ ಬಂದಿದೆ. ವಿದ್ಯಾರ್ಥಿ ಮೇಲೆ ದ್ವೇಷ ಸಾಧಿಸುವ ಕಾರಣದಿಂದ ಈ ರೀತಿ ಹಲ್ಲೆ ನಡೆಸಲಾಗಿದೆ ಅನ್ನುವ ಆರೋಪ ವ್ಯಕ್ತವಾಗಿದೆ. ಹಲ್ಲೆಗೆ ಒಳಗಾದ ವಿದ್ಯಾರ್ಥಿ ಬೆಳ್ತಂಗಡಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ, ಆರೋಪಿ ಶಿಕ್ಷಕನ ವಿರುದ್ದ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯಾರ್ಥಿಯು ಬೆಳ್ತಂಗಡಿ ತಾಲೂಕಿನ ಉರುವಾಲು ನಿವಾಸಿಯಾಗಿದ್ದು, ಪದ್ದುಂಜ ಸರಕಾರಿ ಪ್ರೌಢ ಶಾಲೆಯ 9ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದ. ಈತನ ಮೇಲೆ ಇಂಗ್ಲೀಷ್ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದ ಅನಂತ ಕುಮಾರ್ ಹಲ್ಲೆ ನಡಿಸಿದ್ದಾರೆ ಎಂದು ಆಪಾದಿಸಲಾಗಿದೆ. ಆರೋಪಿ ಶಿಕ್ಷಕ ವಿದ್ಯಾರ್ಥಿಗೆ ಸೆ.9,10,11 ಹೀಗೆ 3 ದಿನವೂ ಬೆತ್ತದಿಂದ ಹಲ್ಲೆ ನಡೆಸಿದ್ದು, ಈ ವಿಚಾರವನ್ನು ವಿದ್ಯಾರ್ಥಿ ಯಾರಿಗೂ ತಿಳಿಸದೆ ಸುಮ್ಮನಿದ್ದು, ಆ ಬಳಿಕ ನೋವು ಹೆಚ್ಚಾದ ಕಾರಣ ಮನೆಯವರಿಗೆ ಘಟನೆ ಬಗ್ಗೆ ತಿಳಿಸಿದ್ದ ಎನ್ನಲಾಗಿದೆ. ತಕ್ಷಣ ಮನೆಯವರು ಹಲ್ಲೆಗೊಳಗಾದ ವಿದ್ಯಾರ್ಥಿಯನ್ನು ಬೆಳ್ತಂಗಡಿ ಆಸ್ಪತ್ರೆಗೆ ದಾಖಲಿಸಿ, ಶಿಕ್ಷಕನ ವಿರುದ್ಧ ದೂರು ಸಲ್ಲಿಸಿದ್ದಾರೆ.
ತನ್ನ ಮೇಲೆ ದೌರ್ಜನ್ಯ-ಶಿಕ್ಷಕನ ಆರೋಪ: ಈ ಮಧ್ಯೆ ತನ್ನ ಮೇಲೆ ದೌರ್ಜನ್ಯವೆಸಗಲಾಗಿದೆ ಎಂದು ಆರೋಪಿಸಿ ಶಿಕ್ಷಕ ಅನಂತ ಕುಮಾರ್ ಆಸ್ಪತ್ರೆಗೆ ದಾಖಲಾಗಿದ್ದಾರೆಂದು ಪೊಲೀಸರಿಗೆ ಮಾಹಿತಿ ಬಂದಿದ್ದು, ತನಿಖೆಯಿಂದಷ್ಟೇ ಒಟ್ಟು ಪ್ರಕರಣದ ಒಳಗಿನ ನೈಜ ಸತ್ಯ ಅನಾವರಣಗೊಳ್ಳಬೇಕಾಗಿದೆ.