ಮಡಂತ್ಯಾರು: ದ.ಕ ಮಂಗಳೂರು ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಪ.ಪೂ ಕಾಲೇಜಿನ ಆಶ್ರಯದಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ ಬಾಲಕ-ಬಾಲಕಿಯರ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟವು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ಒಳಾಂಗಣ ಕ್ರೀಡಾಂಗಣದಲ್ಲಿ ಜರಗಿತು.
ಸೇಕ್ರೆಡ್ ಹಾರ್ಟ್ ಪದವಿಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜಶೇಖರ ಶೆಟ್ಟಿ ಪಂದ್ಯಾಟವನ್ನು ಉದ್ಘಾಟಿಸಿ ಬಳಿಕ ಮಾತನಾಡಿದ ಅವರು ವಿದ್ಯಾರ್ಥಿಗಳ ಮನಸ್ಸು ಹಸಿ ಮಣ್ಣಿನಂತೆ ಕೆಟ್ಟದ್ದನ್ನು ತ್ಯಜಿಸಿ ಒಳ್ಳೆಯದನ್ನು ಸ್ವೀಕರಿಸಬೇಕು ಇದು ಉತ್ತಮ ಕ್ರೀಡಾಪಟುವಿನ ಲಕ್ಷಣವಾಗಿದೆ. ಕ್ರೀಡೆಯಿಂದ ದೈಹಿಕ ಆರೋಗ್ಯದ ಜೊತೆಗೆ ಸ್ಪರ್ಧಾ ಮನೋಭಾವ ವೃದ್ಧಿಯಾಗಲು ಸಾಧ್ಯ.
ಕ್ರೀಡೆಯಲ್ಲಿ ತೊಡಗಿದವನು ನಕಾರಾತ್ಮಕ ವಿಚಾರಗಳ ಕಡೆಗೆ ಗಮನವನ್ನು ನೀಡುವುದಿಲ್ಲ. ಸೋಲು ಗೆಲುವು ಸಾಮಾನ್ಯ ಎರಡನ್ನು ಸ್ವೀಕರಿಸುವ ಮನೋಭಾವವನ್ನು ಕ್ರೀಡಾ ಪಟುಗಳು ಬೆಳೆಸಿಕೊಳ್ಳಬೇಕು.ಸೋತಾಗ ನಿರಾಶರಾಗುವುದು, ಗೆದ್ದಾಗ ಗರ್ವಪಡುವಂತಾಗ ಬಾರದು ಎಂದು ಹೇಳಿದರು.ಸೇಕ್ರೆಡ್ ಹಾರ್ಟ್ ಕಾಲೇಜು ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷ ವಿಲಿಯಂ ಪಿಂಟೋ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡರು.
ಕಾಲೇಜಿನ ಪ್ರಭಾರ ಪ್ರಾಂಶುಪಾಲ ಸೂರಜ್ ಚಾರ್ಲ್ಸ್ ನ್ಯೂನೆಸ್ ಸ್ವಾಗತಿಸಿ, ಉಪನ್ಯಾಸಕರಾದ ವಸಂತ್ ಶೆಟ್ಟಿ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.
ಫಲಿತಾಂಶ: ಬಾಲಕರ ವಿಭಾಗದಲ್ಲಿ ಎಸ್.ಡಿ.ಎಂ ಪ.ಪೂ ಕಾಲೇಜು ಪ್ರಥಮ, ವಾಣಿ ಪ.ಪೂ ಕಾಲೇಜು ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ಎಸ್.ಡಿ.ಎಂ ಪ.ಪೂ ಕಾಲೇಜು ಪ್ರಥಮ, ವಾಣಿ ಪ.ಪೂ ಕಾಲೇಜು ದ್ವಿತೀಯ ಸ್ಥಾನ ಪಡೆಯಿತು.ಸಮಾರೋಪ ಕಾರ್ಯಕ್ರಮದಲ್ಲಿ ರಾಜಶೇಖರ ಶೆಟ್ಟಿ, ಕಾಲೇಜಿನ ಪ್ರಭಾರ ಪ್ರಾಂಶುಪಾಲ ಸೂರಜ್ ಚಾರ್ಲ್ಸ್, ಸೇಕ್ರೆಡ್ ಹಾರ್ಟ್ ಒಳಾಂಗಣ ಕ್ರೀಡಾಂಗಣದ ಮೇಲ್ವಿಚಾರಕ ಜೆ.ಪಿ ಪಾಯ್ಸ್ ಬಹುಮಾನ ವಿತರಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಡೆನ್ನಿಸ್ ಫೆರ್ನಾಂಡಿಸ್, ಸಂಜಿತ್ ಕುಮಾರ್ ಶೆಟ್ಟಿ ಪಂದ್ಯಾಟದ ಯಶಸ್ಸಿಗೆ ಸಹಕರಿಸಿದರು.