

ಉಜಿರೆ: ಆಟಿ ಕಳೆಂಜ ಶಿವನ ಪ್ರತಿರೂಪ ಎಂಬ ನಂಬಿಕೆ ತುಳುನಾಡಿನಲ್ಲಿದೆ. ಆಟಿಕಳೆಂಜನ ವಿಶೇಷ ವೇಶಭೂಷಣ ತುಂಬಾ ಸರಳ ಮತ್ತು ಅರ್ಥಪೂರ್ಣವಾಗಿದ್ದು ಆಟಿ ಕಳೆಂಜ ಮನೆಮನೆಗೆ ಬಂದರೆ ದುಷ್ಟಶಕ್ತಿಗಳು ಹಾಗೂ ರೋಗರುಜಿನನಗಳು ದೂರವಾಗುತ್ತವೆ ಎಂದು ಮೂಡಬಿದ್ರೆಯ ಆಳ್ವಾಸ್ ಕಾಲೇಜಿನ ಕನ್ನಡ ಮುಖ್ಯಸ್ಥ ಪ್ರೊ.ಯೋಗೀಶ್ ಕೈರೋಡಿ ಹೇಳಿದರು.ಅವರು ಆ.10ರಂದು ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ಇತಿಹಾಸ ವಿಭಾಗ ಮತ್ತು ತುಳು ಸಂಘದ ಆಶ್ರಯದಲ್ಲಿ ಆಯೋಜಿಸಿದ ತುಳುವೆರೆ ಆಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಮ್ಮ ಪೂರ್ವಜರಿಗೆ ಓದಲು, ಬರೆಯಲು ಬಾರದಿರುವುದರಿಂದ ಅವರನ್ನು ಅಜ್ಞಾನಿಗಳು ಎಂದು ಭಾವಿಸಬಾರದು. ಅನಿವಾರ್ಯತೆಯಿಂದ ಅವರು ಆಹಾರ ಪದಾರ್ಥಗಳನ್ನು ಅವರು ಸಂಶೋಧಿಸಿದರು. ಆದರೆ ಈಗ ಜನರು ಅಕ್ಷರಸ್ಥರಾದರು ತೀವ್ರ ಪೈಪೋಟಿ, ಧನದಾಹ, ಸುಖ-ಭೋಗಗಳ ಲಾಲಾಸೆ, ಹೋಲಿಕೆ, ಅಸೂಯೆ, ದ್ವೇಷಭಾವನೆಯಿಂದ ಪರಸ್ಪರ ನಂಬಿಕೆ, ಪ್ರೀತಿ-ವಿಶ್ವಾಸ ಮಾಯವಾಗಿದೆ ಯಾರಲ್ಲಿಯೂ ಆತ್ಮೀಯ ಸಂಬಂಧವಿಲ್ಲ ಎಂದು ಅವರು ಹೇಳಿದರು.
“ಮರಿ ತುಚ್ಚಿಂಡ ಮರ್ದುಂಡು, ಅರಿ ತುಚ್ಚಿಂಡ ಮರ್ದಿಜ್ಜಿ” ಎಂಬ ಮಾತಿದೆ. ಆದರೆ ಆಹಾರವಿಲ್ಲದೆ ಬದುಕಲು ಸಾಧ್ಯವಿಲ್ಲ. ಹಿಂದೆ ಆಹಾರವೇ ಔಷಧಿಯಾಗಿದ್ದರೆ ಇಂದು ಹೆಚ್ಚಿನವರಿಗೆ ಔಷದಿಯೇ ಆಹಾರವಾಗಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲ ಪ್ರೊ.ಬಿ.ಎ. ಕುಮಾರ ಹೆಗ್ಡೆ ಮಾತನಾಡಿ ಆಧುನಿಕ ಜನತೆಗೆ ಆಟಿ ಅಡಂಬರವಾಗಿದೆ. ಮಾಲ್, ಹೋಟೆಲ್ಗಳಲ್ಲಿ ಹಬ್ಬಗಳನ್ನು ಆಚರಿಸುವಂತಾಗಿದೆ. ಇಂತಹ ಕಾರ್ಯಕ್ರಮಗಳಿಂದ ನಮ್ಮ ತುಳುನಾಡಿನ ಭವ್ಯ ಇತಿಹಾಸ ಮತ್ತು ಪರಂಪರೆ ಹಾಗೂ ಆಹಾರ ಔಷಧಿಗಳ ಬಗ್ಗೆ ಅರಿವು ಜಾಗೃತಿ ಉಂಟಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕೊಯೂರಿನ ಅಮ್ಮಿ ನಲಿಕೆ ಮತ್ತು ಬಳಗದವರ ಆಟಿಕಳೆಂಜ ವೇಷ ಸಮಾರಂಭಕ್ಕೆ ವಿಶೇಷ ಮೆರುಗನ್ನು ನೀಡಿತು.
ತುಳುನಾಡಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಪ್ರಾಚೀನ ವಸ್ತುಗಳ ವಸ್ತುಪ್ರದರ್ಶನ ಆಯೋಜಿಸಲಾಗಿತ್ತು . ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ. ಸನ್ಮತಿಕುಮಾರ್ ಸ್ವಾಗತಿಸಿದರು. ಉಪನ್ಯಾಸಕಿ ಅಭಿಜ್ಞಾ ಉಪಾಧ್ಯಾಯ ಧನ್ಯವಾದವಿತ್ತರು.ವಿದ್ಯಾರ್ಥಿನಿಯರಾದ ಕುಮಾರಿ ಶ್ರದ್ದಾ ಮತ್ತು ಕುಮಾರಿ ಸೃಷ್ಟಿ ಕಾರ್ಯಕ್ರಮ ನಿರ್ವಹಿಸಿದರು.