ಬೆಳ್ತಂಗಡಿ: ಪ್ರತಿಯೊಬ್ಬರೂ ಕೂಡ ತಾವು ಮಾಡುವ ಕರ್ತವ್ಯವನ್ನು ಸಂತೋಷದಿಂದ ಮಾಡಿದರೆ ಖಂಡಿತವಾಗಿಯೂ ಸಂತೃಪ್ತಿ ಸಿಕ್ಕೇ ಸಿಗುತ್ತದೆ. ಅಂತಹ ಸಂತೃಪ್ತಿಯು ಶಿಕ್ಷಣ ಕ್ಷೇತ್ರದಲ್ಲಿ ನಾನು ಮಾಡಿರುವ ಕರ್ತವ್ಯದ ಅವಧಿಯಲ್ಲಿ ನನಗೆ ದೊರಕಿದೆ ಎಂದು ತುಂಬ ಮನದಿಂದ ಹೇಳ ಬಯಸುತ್ತೇನೆ. ಪ್ರತಿಯೊಬ್ಬರೂ ಕೂಡ ತಾವು ಮಾಡುವ ಕರ್ತವ್ಯವನ್ನು ಮನ ಸಂತೋಷದಿಂದ ಮಾಡಿದಾಗ ಮಾತ್ರ ಅದರಲ್ಲಿ ಆ ತೃಪ್ತಿ ಸಿಗಲು ಸಾಧ್ಯ. ಶಿಕ್ಷಣ ಕ್ಷೇತ್ರದಲ್ಲಿ ಕಳೆದ 28 ವರ್ಷಗಳ ಕರ್ತವ್ಯದ ಅವಧಿಯು ಅಂತಹ ಸಂತೃಪ್ತಿಯನ್ನು ನೀಡಿದೆ. ನಮ್ಮೆಲ್ಲರ ಬದುಕು ಮಕ್ಕಳೊಂದಿಗೆ ನಡೆಯುತ್ತದೆ. ಯಾವುದೇ ಸಮಸ್ಯೆ ಇದ್ದರೂ ಕೂಡ ಮಕ್ಕಳ ಮುಂದೆ ಬಂದಾಗ ಆ ಎಲ್ಲಾ ಸಮಸ್ಯೆಗಳು ಮಾಯವಾಗಿ ಸಂತೋಷದ ಕ್ಷಣ ಹೊರಹೊಮ್ಮುತ್ತದೆ. ನಾನು ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ, ಸಂಘಟನೆಗಳಲ್ಲಿ ತೊಡಗಿ, ಶಾಲೆಗಳಲ್ಲಿ ಮಾಡಿರುವ ಪ್ರತಿಕ್ಷಣವೂ ಕೂಡ ನನ್ನ ಕಲಿಕೆಗೆ ಪೂರಕವಾದ ವಾತಾವರಣವನ್ನು ನಿರ್ಮಿಸಿ ಕೊಟ್ಟಿದೆ. ಇಂದು ಈ ಶಿಕ್ಷಣ ಕ್ಷೇತ್ರದಿಂದ ನಿವೃತ್ತಿಯಾದರು ಕೂಡ ಸದಾ ಸಂತೋಷದ ಕ್ಷಣವನ್ನು ನಾನು ಪಡೆದಿದ್ದೇನೆ ಎನ್ನುವ ಧನ್ಯತಾಭಾವ ನನ್ನಲ್ಲಿದೆ ಎಂದು ಜುಲೈ 31ರಂದು ಶಿಕ್ಷಣ ಕ್ಷೇತ್ರದಿಂದ ನಿವೃತ್ತಿಗೊಂಡಿರುವ ರಘುಪತಿ ಕೆ ರಾವ್ ಇವರು ಮಾತನಾಡಿದರು.
ಅವರು ಪುಂಜಾಲಕಟ್ಟೆಯ ಸಮೂಹ ಸಂಪನ್ಮೂಲ ಕೇಂದ್ರದ ವತಿಯಿಂದ ಅಗಸ್ಟ್ 10ರಂದು ಕರ್ನಾಟಕ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆಯ ಪ್ರೌಢಶಾಲಾ ವಿಭಾಗದ ಸಭಾಭವನದಲ್ಲಿ ಹಮ್ಮಿಕೊಂಡಿರುವ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.
ಈ ಸಭೆಯ ಅಧ್ಯಕ್ಷತೆಯನ್ನು ಕನ್ನಡ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆಯ ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲ ಉದಯಕುಮಾರ್ ಬಿ ವಹಿಸಿಕೊಂಡು ಸಭೆಯನ್ನು ಮುನ್ನಡೆಸುತ್ತಾ ರಘುಪತಿ ಕೆ.ರಾವ್ ಅವರ ಬಗ್ಗೆ ಏಳೆ ಎಳೆಯಾಗಿ ಸಭೆಯ ಮುಂದೆ ವಿಚಾರಗಳನ್ನು ಹಂಚಿಕೊಂಡರು.
ವೇದಿಕೆಯಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರ ಸಂಘ ಬೆಳ್ತಂಗಡಿ ಶಾಖೆಯ ಅಧ್ಯಕ್ಷ ಜಯರಾಜ್ ಜೈನ್, ಕೆಪಿಎಸ್. ಪುಂಜಾಲಕಟ್ಟೆಯ ಪ್ರಾಥಮಿಕ ಶಾಲೆ ವಿಭಾಗದ ಪ್ರಭಾರ ಮುಖ್ಯೋಪಾಧ್ಯಾಯ ಕರುಣಾಕರ್, ಮಾಲಾಡಿ ಶಾಲಾ ಮುಖ್ಯೋಪಾಧ್ಯಾಯನಿ ಲತಾ ನಾಯಕ್, ಮಚ್ಚಿನ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಪ್ರಕಾಶ್ ನಾಯಕ್, ಸನ್ಮಾನ ಸ್ವೀಕರಿಸಿರುವ ರಘುಪತಿ ಕೆ ರಾವ್ ದಂಪತಿಗಳು, ಪುಂಜಾಲಕಟ್ಟೆಯ ಸಮೂಹ ಸಂಪನ್ಮೂಲ ವ್ಯಕ್ತಿ ಚೇತನ ಉಪಸ್ಥಿತರಿದ್ದು ಸಂದರ್ಭೋಚಿತವಾಗಿ ವಿಚಾರಗಳನ್ನು ಸಭೆಯ ಮುಂದಿಟ್ಟರು.
ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಸಭೆ ಆರಂಭಗೊಂಡು, ಜಯರಾಜ್ ಜೈನ್ ಮಾಲಾಡಿ ಸ್ವಾಗತಿಸಿ, ಪೂಂಜಾಲಕಟ್ಟೆ ಸುರೇಶ್ ಶೆಟ್ಟಿ ಧನ್ಯವಾದ ಸಲ್ಲಿಸಿ, ಪುಂಜಾಲಕಟ್ಟೆ ಪ್ರೌಢಶಾಲಾ ವಿಭಾಗದ ಸಮಾಜ ವಿಜ್ಞಾನ ಶಿಕ್ಷಕ ಧರಣೇಂದ್ರ ಕೆ ಕಾರ್ಯಕ್ರಮ ನಿರೂಪಿಸಿದರು.