ಬೆಳ್ತಂಗಡಿ: ಸಂಜಯ್ ಗ್ಲೋಬಲ್ ಫೌಂಡೇಶನ್ ವತಿಯಿಂದ ಮಳೆಲ್ ಓರ್ ನಾಲ್ ಕ್ರೀಡಾಕೂಟ

0

ಬೆಳ್ತಂಗಡಿ: ಸಂಜಯ್ ಗ್ಲೋಬಲ್ ಫೌಂಡೇಶನ್ ಬೆಳ್ತಂಗಡಿ ಇದರ ವತಿಯಿಂದ ಮಳೆಲ್ ಓರ್ ನಾಲ್ ಕ್ರೀಡಾಕೂಟ ಬೆಳ್ತಂಗಡಿ ತಾಲೂಕು ಕ್ರೀಡಾಂಗಣದಲ್ಲಿ ಆ.04ರಂದು ಆಯೋಜಿಸಲಾಗಿತ್ತು.ವಿಭಿನ್ನವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮ ಬೆಳ್ತಂಗಡಿ ನಗರ ವ್ಯಾಪ್ತಿಯ ಸಂಜಯ ನಗರ, ಉದಯ ನಗರ, ಸುದೆಮುಗೇರು ನಾಗರಿಕರಿಗೆ ರಸದೌತಣ ನೀಡುವಲ್ಲಿ ಯಶಸ್ವಿಯಾಯಿತು.

ಬೆಳ್ತಂಗಡಿ ಸಂಜಯ್ ಗ್ಲೋಬಲ್ ಫೌಂಡೇಶನ್ ಇದರ ಅಧ್ಯಕ್ಷ ರಶೀದ್ ಸಂಜಯನಗರ ಕ್ರೀಡಾಕೂಟ ಉದ್ಘಾಟನೆ ಮಾಡಿದರು.ಬಳಿಕ ಮಾತನಾಡಿದ ಅವರು, ಆಧುನಿಕ ಕಾಲಘಟ್ಟದಲ್ಲಿ ನಮ್ಮ ಪರಂಪರೆ, ಸಂಸ್ಕೃತಿ ಮರೆಯಾಗುತ್ತಿದೆ. ಅತಿಯಾದ ನಾಗರೀಕತೆಯಿಂದ ನಶಿಸುತ್ತಿರುವ ಸಂಸ್ಕೃತಿಯನ್ನು ಉಳಿಸುವ ಕೆಲಸ ಮಾಡಬೇಕಿದ್ದು, ಆ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳ ಆಯೋಜನೆ ಶ್ಲಾಘನೀಯ ಎಂದರು. ಕ್ರೀಡೆ, ಕಲೆ, ಸಂಸ್ಕೃತಿ ಸಮೂಹ ಸಂಬಂಧಗಳನ್ನೂ ಬೆಸೆಯುತ್ತದೆ. ಮೊಬೈಲ್‌ ಆಟಗಳ ಬದಲಾಗಿ ಇಂತಹ ಕ್ರೀಡೆಗಳು ಮನೋವಿಕಾಸ, ದೈಹಿಕ ವಿಕಾಸಕ್ಕೆ ಸಹಕಾರಿಯಾಗಿದೆ. ಮನುಷ್ಯ ಒಂಟಿಯಾಗುತ್ತಿದ್ದು, ಸಮುದಾಯದೊಂದಿಗೆ ಬದುಕುವುದನ್ನು ರೂಢಿ ಮಾಡಿಕೊಳ್ಳಬೇಕಿದೆ. ಆ ನಿಟ್ಟಿನಲ್ಲಿ ಮನುಷ್ಯ ಸಂಬಂಧ ಉಳಿಸುವ ಇಂತಹ ಕ್ರೀಡಾಕೂಟ ಉತ್ತಮ ಬೆಳವಣಿಗೆ ಎಂದರು.

ಪುರುಷರು, ಮಕ್ಕಳಿಗೆ ಲಿಂಬೆ ಚಮಚ ಓಟ, ಒಂಟಿ ಕಾಲಿನ ಓಟ, ಹಾಳೆ ಓಟ, ಕೆಸರು ಗದ್ದೆ ಓಟ, ಹಗ್ಗಜಗ್ಗಾಟ ಈ ಮೊದಲಾದ ಗ್ರಾಮೀಣ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಉಪಾಧ್ಯಕ್ಷ ರಿಯಾಝ್ ಸಂಜಯ ನಗರ ಪಂದ್ಯಾಟವನ್ನು ನಡೆಸಿಕೊಟ್ಟರು. ವಯಸ್ಸಿನ ಮಿತಿಯನ್ನು ಲೆಕ್ಕಿಸದೆ ಕ್ರೀಡಾಕೂಟದಲ್ಲಿ ಪಾಲ್ಗೊಂಡ ಹಿರಿಯರು, ಕಿರಿಯರು ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಸಂಜಯ್ ಗ್ಲೋಬಲ್ ಫೌಂಡೇಶನ್ ಇದರ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಕುದ್ರಡ್ಕ, ಜೊತೆ ಕಾರ್ಯದರ್ಶಿ ಶೈರೋಜ್ ಉದಯ ನಗರ, ಕೋಶಾಧಿಕಾರಿಯಾಗಿ ಇಸ್ಮಾಲಿ ಹೊಸಬೆಟ್ಟು ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಅಕ್ಬರ್ ಬೆಳ್ತಂಗಡಿ, ಹನೀಫ್ ವರ್ಷಾ, ಶಫೀರ್ ಸಂಜಯ ನಗರ, ಶಾಯಿದ್ ಉದಯ ನಗರ ಕ್ರೀಡಾಕೂಟವನ್ನು ನಡೆಸಿಕೊಟ್ಟರು.ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು.

LEAVE A REPLY

Please enter your comment!
Please enter your name here