ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಬೆಳ್ತಂಗಡಿ ತಾಲೂಕು ಇದರ ವತಿಯಿಂದ ಅರಣ್ಯ ಇಲಾಖೆ ಬೆಳ್ತಂಗಡಿ ಇದರ ಸಯೋಗದೊಂದಿಗೆ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ವಿ.ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ ನೆಲಜಲ, ಪ್ರಾಣಿ ಸಂಕುಲ ಮತ್ತು ವನ ಸಂರಕ್ಷಣೆಯ ಪ್ರಯುಕ್ತ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮದಡಿ ಬೆಳ್ತಂಗಡಿ ತಾಲೂಕಿನ 5,000 ಗಿಡಗಳ ವಿತರಣಾ ಕಾರ್ಯಕ್ರಮ ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ನಡೆಯಿತು.
ಉಜಿರೆ ಜನಾರ್ಧನ ದೇವಸ್ಥಾನದ ಆಡಳಿತ ಮುಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯರು ದೀಪಪ್ರಜ್ವಲಿಸಿ ಕಾರ್ಯಕ್ರಮದ ಉದ್ಘಾಟನೆಗೆ ಗೈದು ಪ್ರತಿ ಪ್ರಾಣಿ ಪಕ್ಷಿಗಳಿಗೆ ನಾವು ದೇವರ ಸ್ಥಾನವನ್ನು ನೀಡುತ್ತಾ ಬಂದಿದ್ದೇವೆ.ಇತ್ತೀಚಿನ ದಿನಗಳಲ್ಲಿ ಅರಳಿ ಮರಗಳು ಮಾಯವಾಗುತ್ತಾ ಇದೆ.ನಾಲ್ಕು ವರ್ಷಗಳ ಹಿಂದೆ ನಮ್ಮ ಹತ್ತಿರದ ಗ್ರಾಮದಲ್ಲಿಯೇ ಪ್ರಕೃತಿ ವಿಕೋಪ ಸಂಭವಿಸಿದ್ದು ಇದಕ್ಕೆ ಕಾರಣ ಪರಿಸರ ನಾಶ.ಪ್ರಕೃತಿಯನ್ನು ಕಾಪಾಡುವುದಕ್ಕೋಸ್ಕರ ನಮ್ಮ ಜನ ಜೀವನವನ್ನು ಹಿಂದಿನ ಶೈಲಿಯಲ್ಲಿಯೇ ಅಳವಡಿಸಿಕೊಳ್ಳಬೇಕು.ಪ್ರಕೃತಿಯನ್ನು ನಾಶ ಮಾಡದೆ ನಾವು ಪ್ರಕೃತಿಯನ್ನು ಪೂಜಿಸಬೇಕು ಮಾಡಬೇಕು.ಒಂದು ಗಿಡ ಕಡಿದರೇ 100ಗಿಡ ನೆಡಬೇಕು, ಬೇಸಿಗೆಯಲ್ಲಿ ವಿಪರೀತ ಬಿಸಿ ಮಳೆಗಾಲದಲ್ಲಿ ಅತಿ ಹೆಚ್ಚು ಮಳೆ ಬರಲು ಪ್ರಕೃತಿಯ ಅಸಮತೋಲನವೇ ಇದಕ್ಕೆ ಬಹು ಮುಖ್ಯವಾದ ಕಾರಣವಾಗಿದೆ, ಇದನ್ನು ಅರಿತುಕೊಂಡು ನಾವು ಪರಿಸರವನ್ನು ಉಳಿಸಿ, ಗಿಡಗಳನ್ನು ನಾಟಿ ಮಾಡಿ ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಆಶಯದಂತೆ ಈ ಕಾರ್ಯಕ್ರಮವು ರಾಜ್ಯದ್ಯಂತ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಕೃಷಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಮನೋಜ್ ಮಿನೆಜಸ್ ರವರು ಭಾರಿ ಮಳೆಯಿಂದಾಗಿ ಕೇರಳ ರಾಜ್ಯದ ವಯನಾಡಿನಲ್ಲಿ ನಡೆದ ಪ್ರಕೃತಿ ವಿಕೋಪದಿಂದ ಸಂಭವಿಸಿದ 400ಕ್ಕೂ ಹೆಚ್ಚು ಜನ ಸಾವನ್ನಪ್ಪಿದವರಿಗೆ 1ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಿದರು.ಗಿಡಗಳನ್ನು ಬೆಳೆಸುವುದರಿಂದ ನಮ್ಮ ಪರಿಸರವನ್ನು ಸಂರಕ್ಷಣೆ ಮಾಡಿದಂತಾಗುತ್ತದೆ.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕರ್ನಾಟಕ ರಾಜ್ಯದಲ್ಲಿ ಸುಮಾರು 80 ಲಕ್ಷ ಅನುದಾನವನ್ನು ಯೋಜನೆಯ ಮೂಲಕವಾಗಿ ದಶಲಕ್ಷಗಿಡ ಗಿಡನಾಟಿ ಮಾಡಲು ವಿನಿಯೋಗಿಸಲಾಗುತ್ತಿದೆ.ಪ್ರತಿ ತಾಲೂಕಿನಲ್ಲಿಯೂ ಪರಿಸರ ಬಗ್ಗೆ ಕಾಳಜಿಯನ್ನು ಮೂಡಿಸುವ ದೃಷ್ಟಿಯಿಂದ 10 ತರಬೇತಿಯನ್ನು ಆಯೋಜಿಸಿ, ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮಾತಿನಂತೆ ಭೂಮಿತಾಯಿಯನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ವರ್ಗಾಯಿಸಿ ಜವಾಬ್ದಾರಿ ಎನ್ನುವ ಮಾತಿನಂತೆ ಒಂದು ಮರವನ್ನು ಕಡಿದಾಗ ನೂರು ಮರವನ್ನು ನಾಟಿ ಮಾಡಿದರೆ ನಮ್ಮ ಬದುಕು ಸಾರ್ಥಕತೆಯನ್ನು ಪಡೆಯುತ್ತದೆ ಎಂದರು.ಮಾನವ ನಾಡಿನಲ್ಲಿದ್ದು ಪ್ರಾಣಿಗಳು ಕಾಡಿನಲ್ಲಿ ಇರಬೇಕಿತ್ತು,ಆದರೆ ಮಾನವ ಕಾಡಿನ ಜಾಗವನ್ನು ಆಕ್ರಮಿಸಿ, ಪ್ರಾಣಿಗಳು ವಾಸ ಮಾಡುವ ಜಾಗದಲ್ಲಿ ಮಾನವ ಮನೆಗಳನ್ನು ನಿರ್ಮಿಸಿ ವಾಸಿಸುತ್ತಿರುವಾಗ ಪ್ರಾಣಿಗಳಿಗೆ ವಾಸಿಸಲು ಎಲ್ಲಿದೆ ಜಾಗ, ಅಭಿವೃದ್ಧಿ ಎಂದಾಗ ಅದು ಆಗಲೇಬೇಕು ಆದರೆ ಪರಿಸರವನ್ನು ನಾಶ ಮಾಡಿ ಎಂದಿಗೂ ಅಭಿವೃದ್ಧಿ ಸರಿಯಲ್ಲ ಎನ್ನುವ ಮಾತುಗೈದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ವಿನ್ಸೆಂಟ್ ಪಾಯಸ್ ರವರು ಪ್ರತಿ ತಾಲೂಕಿನಲ್ಲಿಯೂ ಕೂಡ ಅರಣ್ಯೀಕರಣ ಕಾರ್ಯಕ್ರಮವನ್ನು ಆಯೋಜಿಸಿ ಒಂದು ತಾಲೂಕಿನಲ್ಲಿ 5000 ಗಿಡಗಳನ್ನು ಯೋಜನೆಯ ವತಿಯಿಂದ ವಿತರಣೆ ಮಾಡಲಾಗುತ್ತಿದೆ,ಈ ವರ್ಷ ದಶಲಕ್ಷ ಗಿಡನಾಟಿ ಕಾರ್ಯಕ್ರಮಕ್ಕೆ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಬಂಟ್ವಾಳ ತಾಲೂಕಿನಲ್ಲಿ ಕರ್ನಾಟಕ ಘನ ಸರಕಾರದ ಅರಣ್ಯ ಸಚಿವ ಈಶ್ವರ ಕಂಡ್ರೆ ಇವರ ಉಪಸ್ಥಿತಿಯಲ್ಲಿ ಚಾಲನೆಯನ್ನು ನೀಡಿದ್ದು, ರಾಜ್ಯದ್ಯಂತ ಈ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಆಯೋಜಿಸಲು ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ಘಟಕದ ರಾಜ್ಯದಲ್ಲಿರುವ 10300 ಸ್ವಯಂಸೇವಕರು ಗಿಡನಾಟಿ ಕಾರ್ಯಕ್ರಮದಲ್ಲಿ ನಿರಂತರವಾಗಿ ಭಾಗವಹಿಸಿ ವ್ಯವಸ್ಥಿತವಾಗಿ ಯೋಜನೆಯ ವತಿಯಿಂದ ಗಿಡ ನಾಟಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.ದೇವರು ಸೃಷ್ಟಿಸಿದ ಈ ಪರಿಸರವನ್ನು ಇದ್ದ ಹಾಗೆ ಉಳಿಸಿ ಕೊಡುವುದು ನಮ್ಮ ಮಹತ್ತರವಾದ ಜವಾಬ್ದಾರಿಯಾಗಿದೆ.ಪರಿಸರದ ಉಳಿವಿನ ಸಂರಕ್ಷಣೆಯಲ್ಲಿ ಮಾನವನ ಪಾತ್ರ ಪ್ರಮುಖವಾಗಿದೆ ಎನ್ನುವ ಮಾತುಗೈದರು.ನಮ್ಮ ಮನೆಗಳಲ್ಲಿ ಗಿಡಗಳನ್ನು ಯಾವ ಭಾಗದಲ್ಲಿ ನೆಡಬೇಕು, ಎಂಬುದರ ಬಗ್ಗೆ ಸಂಪೂರ್ಣ ಜ್ಞಾನ ನಮಗೆ ತಿಳಿದಿರಬೇಕು.ಹಸಿರು ಉಳಿದರೆ, ನಮ್ಮೆಲ್ಲರ ಜೀವ ಉಳಿಯುತ್ತದೆ.ಗಿಡಗಳನ್ನು ಬೆಳೆಸಿದರೆ ಮನುಷ್ಯರು ಮಾತ್ರ ಅಲ್ಲ ಪ್ರಾಣಿ ಪಕ್ಷಿಗಳಿಗೆ ಆಶ್ರಯ ಧಾಮವಾಗಿರುತ್ತದೆ.ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಶ್ರಮಿಸಿದ, ಶೌರ್ಯ ತಂಡಕ್ಕೆ ಅಭಿನಂದನೆಯನ್ನು ಸಲ್ಲಿಸಿದರು. ಶೌರ್ಯ ತಂಡದ ಸದಸ್ಯರು ಯಾವುದೇ ಭತ್ಯೆಯ ನಿರೀಕ್ಷೆಯಿಲ್ಲದೆ, ಸ್ವ ಇಚ್ಛೆಯಿಂದ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ.ಯೋಜನೆಯಲ್ಲಿ ಧರ್ಮಗಳ ಭೇದವಿಲ್ಲ ಇದು ಯೋಜನೆಯ ವಿಶಿಷ್ಟತೆ ಎಂದು ಹೇಳಿದರು.
ಕೇಂದ್ರ ಒಕ್ಕೂಟದ ಅಧ್ಯಕ್ಷ ಸೀತಾರಾಮ್ ರವರರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮತ್ತು ಹೇಮಾವತಿ ವಿ.ಹೆಗ್ಗಡೆಯವರ ದೂರ ದೃಷ್ಟಿಯಿಂದ ಈ ಕಾರ್ಯಕ್ರಮವನ್ನು ಮಾಡಲು ಸಾಧ್ಯವಾಗಿದೆ.ಡಾ.ಡಿ.ವೀರೇಂದ್ರ ಹೆಗ್ಗಡೆಯವರು ದಶಲಕ್ಷ ಗಿಡಗಳನ್ನು ರಾಜ್ಯಾದ್ಯಂತ ಕಾರ್ಯಕ್ರಮವನ್ನು ಆಯೋಜಿಸಿ ಗಿಡಗಳನ್ನು ನಾಟಿ ಮಾಡಿಸುವ ಮೂಲಕ ಪರಿಸರದ ಸಂರಕ್ಷಣೆಯ ಬಗ್ಗೆ ಒಂದು ಕ್ರಾಂತಿಯನ್ನೇ ಮೂಡಿಸಿದ್ದಾರೆ.ಅರಣ್ಯಗಳಲ್ಲಿ ಪ್ರಾಣಿಗಳಿಗೆ ಗಿಡಮರಗಳಿಂದ ಆಹಾರ ಸಿಗದೇ ಇರುವುದರಿಂದ ಕಾಡಿನ ಪ್ರಾಣಿಗಳು ನಾಡಿನತ್ತ ಬರುತಿದೆ. ಇದಕ್ಕೆ ಮೂಲ ಕಾರಣ ಪರಿಸರ ನಾಶ.ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮತ್ತು ಹೇಮಾವತಿ ವಿ.ಹೆಗ್ಗಡೆಯವರ ಕನಸನ್ನು ನಾವೆಲ್ಲ ಸೇರಿ ನನಸು ಮಾಡಬೇಕು ಎಂದು ತಿಳಿಸಿದರು.
ಸಂಕೇತಿಕವಾಗಿ ಶರತ್ ಕೃಷ್ಣ ಪಡುವೆಟ್ನಾಯರು ಒಕ್ಕೂಟದ ಪದಾಧಿಕಾರಿಗಳಿಗೆ ಹಾಗೂ ಶೌರ್ಯ ಘಟಕದ ಸದಸ್ಯರಿಗೆ ಗಿಡಗಳನ್ನು ವಿತರಿಸಿದರು.
ವೇದಿಕೆಯಲ್ಲಿ ಬೆಳ್ತಂಗಡಿ ತಾಲೂಕು ಯೋಜನಾಧಿಕಾರಿ ಸುರೇಂದ್ರ, ಬೆಳ್ತಂಗಡಿ ತಾಲೂಕು ಶೌರ್ಯ ವಿಪತ್ತು ನಿರ್ವಹಣೆ ಘಟಕದ ಸಂತೋಷ್ ಕ್ಯಾಪ್ಟನ್, ಪ್ರಗತಿ ಬಂದು ಒಕ್ಕೂಟ ಉಜಿರೆ ವಲಯದ ವಲಯಧ್ಯಕ್ಷ ಉಮಾರಾಬ್ಬ, ವಿಜಯ್ ಮಾಜಿ ವಲಯಧ್ಯಕ್ಷರು ವಲಯ, ಉಜಿರೆ ಒಕ್ಕೂಟದ ಅಧ್ಯಕ್ಷೆ ಶೀಲಾವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉಜಿರೆಯ ಜನಾರ್ದನ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಗಿಡ ನಾಟಿ ಕಾರ್ಯಕ್ರಮವನ್ನು ಮಾಡಲಾಯಿತು.ಯೋಜನೆಯ ಕೃಷಿ ಅಧಿಕಾರಿ ರಾಮ್ ಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿ, ಮಧುರ ಜ್ಞಾನವಿಕಾಸದ ಸಮನ್ವಯ ಅಧಿಕಾರಿ ಸ್ವಾಗತಿಸಿ, ಉಜಿರೆ ವಲಯದ ಮೇಲ್ವಿಚಾರಕಿ ವನಿತ ಧನ್ಯವಾದಗೈದರು.ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲರಿಗೂ ಕೂಡ ಗಿಡಗಳನ್ನು ಯೋಜನೆಯ ವತಿಯಿಂದ ಉಚಿತವಾಗಿ ವಿತರಿಸಲಾಯಿತು.
ಒಕ್ಕೂಟದ ಪದಾಧಿಕಾರಿಗಳು, ಒಕ್ಕೂಟದ ಸದಸ್ಯರು, ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ಘಟಕದ ಸ್ವಯಂಸೇವಕರು, ಜನಜಾಗೃತಿ ವೇದಿಕೆಯ ಸದಸ್ಯರು ಹಾಗೂ ನವಜೀವನ ಸಮಿತಿಯ ಸದಸ್ಯರು, ಜ್ಞಾನವಿಕಾಸ ಕೇಂದ್ರದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.