ನಡ: ನಡ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಲ್ಪನಾ ಚಾವ್ಲಾ ರೇಂಜರ್ಸ್ ಘಟಕ, ಜೂನಿಯರ್ ರೆಡ್ ಕ್ರಾಸ್ ಘಟಕ, ಮತದಾರರ ಸಾಕ್ಷರತಾ ಕ್ಲಬ್ ವತಿಯಿಂದ ಕಾcರ್ಗಿಲ್ ವಿಜಯೋತ್ಸವ -25ನ್ನು ಕಾಲೇಜು ಸಭಾಂಗಣದಲ್ಲಿ ಆಚರಿಸಲಾಯಿತು.
ಮುಖ್ಯ ಅಭ್ಯಾಗತರಾಗಿ ನಿವೃತ್ತ ಯೋಧ ಡಾ.ಗೋಪಾಲ ಕೃಷ್ಣ ಭಟ್ ಕಾಂಚೋಡು ಇವರು “ಸೈನಿಕನ ಜೀವನ ಕಷ್ಟ. ಆದರೆ ಇಷ್ಟ ಪಟ್ಟು ಹೋದಾಗ ಅದು ಕಷ್ಟವಾಗಲಾರದು. ಅಲ್ಲಿ ಸಿಗುವ ಜೀವನ ತರಬೇತಿ ಇನ್ನೆಲ್ಲೂ ಸಿಗಲಾರದು.ರಿಯಲ್ ಹೀರೋ ಮತ್ತು ರೀಲ್ ಹೀರೋಗಳ ನಡುವಿನ ವ್ಯತ್ಯಾಸವನ್ನು ಮನಗಂಡು ರಾಷ್ಟ್ರ ಪ್ರೇಮವನ್ನು ಎಲ್ಲರೂ ಮೈ ಗೂಡಿಸಿಕೊಳ್ಳಬೇಕು” ಎಂದು ಕರೆನೀಡುತ್ತಾ ತಂದೆಯ ಮರಣದ ಸಂದರ್ಭದಲ್ಲೂ ದೇಶದ ಕರೆಗೆ ಓಗೊಟ್ಟು ಕರ್ತವ್ಯ ಪ್ರಜ್ಞೆಯನ್ನು ಮೆರೆದ ಸಂದರ್ಭವನ್ನು ನೆನಪಿಸಿಕೊಂಡರು.
ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್ ಸಭಾಧ್ಯಕ್ಷತೆಯನ್ನು ವಹಿಸಿದ್ದರು.ರೇಂಜರ್ ಲೀಡರ್ ವಸಂತಿ ಪಿ. ಇವರು ಕಾರ್ಗಿಲ್ ವೀರರನ್ನು ನೆನಪಿಸುತ್ತಾ ಪ್ರಸ್ತಾವನೆಗೈದರು. ರೇಂಜರ್ ವಿಕ್ಷಿತಾ ಮುಖ್ಯ ಅಭ್ಯಾಗತರನ್ನು ಸಭೆಗೆ ಪರಿಚಯಿಸಿದಳು.ರೇಂಜರ್ ಶ್ವೇತಾ ಪರಮವೀರ ಚಕ್ರ ಪುರಸ್ಕೃತ ಕ್ಯಾಪ್ಟನ್ ವಿಕ್ರಂ ಭಾತ್ರನ ಸಾಹಸಗಾಥೆಯನ್ನು ವಿವರಿಸಿದಳು.
ರೇಂಜರ್ ಸುದಿಶಾ ನಿರೂಪಿಸಿದ ಈ ಕಾರ್ಯಕ್ರಮದಲ್ಲಿ ಕಾಲೇಜು ನಾಯಕ ರಕ್ಷಿತ್ ಸ್ವಾಗತಿಸಿ, ಮತದಾರರ ಸಾಕ್ಷರತಾ ಕ್ಲಬ್ ನ ಕಾರ್ಯದರ್ಶಿ ಫಾತಿಮತ್ ರಸೀನಾ ವಂದಿಸಿದಳು.ಜೂನಿಯರ್ ರೆಡ್ ಕ್ರಾಸ್ ಘಟಕದ ನಿರ್ದೇಶಕರಾದ ಲಿಲ್ಲಿ ಪಿ.ವಿ. ಹಾಗೂ ಮತದಾರರ ಸಾಕ್ಷರತಾ ಕ್ಲಬ್ ನ ನಿರ್ದೇಶಕರಾದ ಶಿಲ್ಪಾ ಡಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು.