ಬೆಳ್ತಂಗಡಿ: ದ.ಕ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕುಂಠಿತವಾಗುತ್ತಿರುವ ಹೈನುಗಾರಿಕೆಯನ್ನು ಉತ್ತೇಜಿಸಲು ಹಾಲು ಉತ್ಪಾದಕರಿಗೆ 5 ರೂ. ಪ್ರೋತ್ಸಾಹಧನ ನೀಡಲು ಒಪ್ಪಿಗೆ ಸೂಚಿಸುವಂತೆ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಅಧ್ಯಕ್ಷ ಸುಚರಿತ ಶೆಟ್ಟಿ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಹೈನುಗಾರರಿಗೆ ಲೀಟರ್‌ಗೆ ಕನಿಷ್ಠ 35 ರೂ. ಹಾಗೂ ರಾಜ್ಯ ಸರಕಾರದ ಸಬ್ಸಿಡಿ ಮೊತ್ತ 5 ರೂ. ಸೇರಿ ಒಟ್ಟು 40 ರೂ. ನೀಡಲಾಗುತ್ತಿದೆ ಎಂದರು.
ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ದಿನಕ್ಕೆ ಸರಾಸರಿ 3,91,367 ಲೀ. ಹಾಲು ಉತ್ಪಾದನೆಯಾಗುತ್ತಿದ್ದು ಕೊರತೆ ಸರಿದೂಗಿಸಲು ಹೊರ ಜಿಲ್ಲೆಗಳಿಂದ 1 ಲಕ್ಷ ಲೀಟರ್ ಹಾಲು ಖರೀದಿಸಲಾಗುತ್ತಿದೆ. ಇತರ ಜಿಲ್ಲೆಗೆ ಹೋಲಿಸಿದರೆ ನಮ್ಮಲ್ಲಿ ಉತ್ಪಾದನ ವೆಚ್ಚವೂ ಅಧಿಕ. ಅದಕ್ಕಾಗಿ ಮತ್ತೆ 5 ರೂ. ಮೊತ್ತವನ್ನು ಹೆಚ್ಚುವರಿಯಾಗಿ ಹೈನುಗಾರರಿಗೆ ನೀಡಿದರೆ ಮಾತ್ರ ಹಾಲು ಉತ್ಪಾದನೆ ಹೆಚ್ಚಳ ನಿರೀಕ್ಷಿಸಬಹುದಾಗಿದೆ.
ನಂದಿನಿ ಪಶು ಆಹಾರ ಚೀಲಕ್ಕೆ 1,350 ರೂ. ದರವಿದ್ದು, ಆಗಸ್ಟ್ 1ರಿಂದ ಹೈನುಗಾರರಿಗೆ ಪ್ರತಿ ಚೀಲಕ್ಕೆ 25 ರೂ. ಸಬ್ಸಿಡಿ ನೀಡಲಿದೆ. ಇದರಿಂದಾಗಿ ಒಕ್ಕೂಟಕ್ಕೆ 30 ಲಕ್ಷ ರೂ. ಹೊರೆಯಾಗಲಿದೆ. ಇದಲ್ಲದೆ ಪಶು ಸಾಕಣೆ, ಮೇವು ಮುಂತಾದವುಗಳಿಗೆ ಸಬ್ಸಿಡಿ ಯೋಜನೆ, ಎಸ್‌ಸಿಡಿಸಿಸಿ ಬ್ಯಾಂಕ್‌ನಿಂದ ಶೂನ್ಯಬಡ್ಡಿ ಸಾಲ ಒದಗಿಸಲಾಗುತ್ತಿದೆ ಎಂದ ಅವರು,ಪುತ್ತೂರಿನ ಕೊಟೆಚಾ ಹಾಲ್ ಬಳಿ 15 ಎಕ್ರೆ ಜಾಗ ವನ್ನು ಒಕ್ಕೂಟದ ಚಟುವಟಿಕೆಗೆ ಕಾದಿರಿಸಲಾಗುತ್ತಿದೆ. ಇದರಲ್ಲಿ ಹಾಲಿನ ಮಿನಿ ಡೇರಿ, ಗೋದಾಮು ನಿರ್ಮಾಣ, ಹಸುರು ಹುಲ್ಲು ಬೆಳೆಸಲು ಅವಕಾಶ ಇದೆ. ಕೊಯ್ದ ಪಶು ಸಂಗೋಪನೆ ಕ್ಷೇತ್ರದಲ್ಲಿ 20 ಎಕ್ರೆಯನ್ನು ಹಾಲು ಒಕ್ಕೂಟಕ್ಕೆ ಹಸುರು ಹುಲ್ಲು ಬೆಳೆಸಲು ನೀಡುವ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.