ಗುರುವಾಯನಕೆರೆ: ಇನ್ಫಿನಿಟಿ ಲರ್ನಿಂಗ್ ಫೌಂಡೇಶನ್ ನಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಕ್ಸೆಲ್ ಪದವಿ ಪೂರ್ವ ವಿದ್ಯಾಲಯದ ವಾಣಿಜ್ಯ ವಿಭಾಗದಲ್ಲಿ ಸಿ.ಎ ಮತ್ತು ಸಿ.ಎಸ್. ತರಬೇತಿ ತರಗತಿಗಳ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಎಕ್ಸೆಲ್ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸುಮಂತ್ ಕುಮಾರ್ ಜೈನ್ ರವರು ಗಿಡಗಳಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ನಂತರ ಮಾತನಾಡಿದ ಅವರು ವಿದ್ಯಾರ್ಥಿ ಜೀವನವು ಕ್ರಮಬದ್ಧವಾಗಿದ್ದಾಗ ಶೈಕ್ಷಣಿಕ ಸಾಧನೆ , ಅಧ್ಯಯನ ಬಲು ಸುಲಭ. ಕೇವಲ ವಿಜ್ಞಾನ ವಿಭಾಗದಲ್ಲಿ ಮಾತ್ರವಲ್ಲದೆ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ವಾಣಿಜ್ಯ ವಿಭಾಗದಲ್ಲೂ ಎಕ್ಸೆಲ್ ಸಾಧನೆಯ ಶಕೆಯನ್ನು ಆರಂಭಿಸಿದೆ. ಈ ನಿಟ್ಟಿನಲ್ಲಿ ವಾಣಿಜ್ಯ ವಿಭಾಗದ ಮಕ್ಕಳಿಗೆ ಪೂರಕವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯನ್ನು ನೀಡುವ ಗುರಿ ಹೊಂದಿದ್ದೇವೆ. ಅತ್ಯಂತ ನುರಿತ, ಅನುಭವಿ ಶಿಕ್ಷಕ ವರ್ಗದೊಂದಿಗೆ ಈ ಹೊಸ ಹೆಜ್ಜೆಯನ್ನು ಇಡುತ್ತಿದ್ದೇವೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ತಂತ್ರಜ್ಞಾನದ ಬೆಳವಣಿಗೆಯ ಜೊತೆಗೆ ವ್ಯಾವಹಾರಿಕ ಬದುಕು ಬೆಸೆಯಬೇಕಿದೆ. ಇಲ್ಲಿನ ವಿದ್ಯಾರ್ಥಿಗಳು ಕೂಡ ಏಕಾಗ್ರ ಚಿತ್ತದಿಂದ ಪಾಲ್ಗೊಂಡು ಸಮಾಜದ ಉನ್ನತ ಸ್ತರಕ್ಕೆ ಏರಬೇಕು ಎನ್ನುವುದೇ ನಮ್ಮ ಆಶಯ ಎಂದರು.
ನಂತರ ಶುಭಹಾರೈಸಿದ ಸಂಸ್ಥೆಯ ಪ್ರಾಂಶುಪಾ ಡಾ.ನವೀನ್ ಮರಿಕೆ, ಆರಂಭದಿಂದಲೇ ವಾಣಿಜ್ಯ ವಿಭಾಗದ ಮಕ್ಕಳಿಗೆ ಪೂರ್ಣ ಪ್ರಮಾಣದ ಸ್ಪರ್ಧಾತ್ಮಕ ಪರೀಕ್ಷೆ ತಯಾರು ಮಾಡುತ್ತಿರುವುದು ಬಹಳ ಸಂತಸದ ವಿಷಯ. ಕಲಿಕೆಯೊಂದಿಗೆ ಕ್ಲಪ್ತ ಸಮಯದಲ್ಲಿ ಅನುಭವಿ ಶಿಕ್ಷಕರೊಂದಿಗೆ ಕಲಿಕಾ ತರಬೇತಿ ಪಡೆಯುವ ಸಲುವಾಗಿ ನಿರಂತರ ಸಂಪರ್ಕವನ್ನಿಟ್ಟುಕೊಂಡು ವಿಧೇಯತೆಯಿಂದ ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳುವುದು ಒಳ್ಳೆಯದು ಎಂಬ ಅಭಿಪ್ರಾಯ ಪಟ್ಟರು.
ಸಿ.ಎ. ಪರೀಕ್ಷೆಯ ಕುರಿತಾಗಿ ಮಾತನಾಡಿದ ವಾಣಿಜ್ಯ ವಿಭಾಗ ಮುಖ್ಯಸ್ಥರಾದ ಪ್ರಸನ್ನ, ಸ್ಪರ್ಧಾತ್ಮಕ ಪರೀಕ್ಷೆಗಳ ವಿವಿಧ ಹಂತಗಳು, ಎದುರಿಸಲು ಬೇಕಾದ ಮಾರ್ಗೋಪಾಯ ಹಾಗೂ ಪರೀಕ್ಷಾ ವಿವರಣೆಗಳನ್ನು ನೀಡಿದರು.
ಸಿ.ಎಸ್ ಪರೀಕ್ಷೆ ಕುರಿತಾದ ಮಾಹಿತಿಗಳನ್ನು ವಾಣಿಜ್ಯ ವಿಭಾಗದ ಡೀನ್ ಸಂತೋಷ್ ಕೆ.ಕೆ. ನೀಡಿದರು.ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಅಭಿರಾಮ್ ಬಿ.ಎಸ್., ಉಪ-ಪ್ರಾಂಶುಪಾಲ ಪ್ರಜ್ವಲ್,ಆಡಳಿತಾಧಿಕಾರಿ ಕೀರ್ತಿನಿಧಿ ಜೈನ್, ಗಣಕ ವಿಭಾಗದ ಮುಖ್ಯಸ್ಥರಾದ ಶ್ರೀ ಪ್ರಭಾಕರ ಎನ್.ಕೆ. ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಂಸ್ಥೆಯ ವಿದ್ಯಾರ್ಥಿಗಳಾದ ಯಾನ ನಿರೂಪಿಸಿ, ಕು. ಯುಕ್ತಿ ಗೌಡ ಸ್ವಾಗತಿಸಿ, ಅದಿತಿ ವಂದಿಸಿದರು.