ಗುರುವಾಯನಕೆರೆ: ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವತಿಯಿಂದ ಕಾಲೇಜು ಮತ್ತು ಹಾಸ್ಟೆಲ್ ಗಳ ತ್ಯಾಜ್ಯ ನೀರು ಹಾಗೂ ಪರಿಸರದ ಕೊಳಚೆ ನೀರಿನ ಸಂಸ್ಕರಣೆಯ ನೂತನ ವಿಸ್ತರಿತ ಘಟಕಕ್ಕೆ ಇತ್ತೀಚಿಗೆ ಶಂಕು ಸ್ಥಾಪನೆ ನೆರವೇರಿಸಲಾಯಿತು.
ಪ್ರತಿದಿನ ಹತ್ತುಲಕ್ಷ ಲೀಟರ್ ನೀರಿನ ಶುದ್ಧೀಕರಣ ಸಾಮರ್ಥ್ಯವುಳ್ಳ, ಸುಮಾರು ಮೂರು ಕೋಟಿ ರೂಪಾಯಿಗಳ ವೆಚ್ಚ ತಗಲುವ, ತಾಲೂಕಿನ ಬೃಹತ್ ತ್ಯಾಜ್ಯ ನೀರು ಸಂಸ್ಕರಣಾ ಘಟಕ ಇದಾಗಿದೆ. ಘಟಕದಲ್ಲಿ ಸಂಸ್ಕರಿಸಿದ ನೀರನ್ನು ಸ್ಥಳೀಯ ಕೃಷಿ ಭೂಮಿಗೆ ಬಳಸುವ ಮೂಲಕ, ಕೃಷಿಗೆ ಬೆಂಬಲ ನೀಡುವ ಯೋಚನೆ ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯದ್ದಾಗಿದೆ.
ಎಕ್ಸೆಲ್ ವಿದ್ಯಾ ಸಂಸ್ಥೆಗಳ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಅವರ ಹೆತ್ತವರಾದ ಸತೀಶ್ ಕುಮಾರ್ ಆರಿಗ ಬೊಳ್ಳೂರು ಗುತ್ತು ಹಾಗೂ ಶುಭಲತಾ ಅವರು ನೂತನ ಘಟಕದ ಶಂಕು ಸ್ಥಾಪನೆ ನೆರವೇರಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್, ಕಾರ್ಯದರ್ಶಿಯವರು, ಪ್ರಾಂಶುಪಾಲರು, ಆಡಳಿತಾಧಿಕಾರಿ, ಕ್ಯಾಂಪಸ್ ಮ್ಯಾನೇಜರ್, ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು ಉಪಸ್ಥಿತರಿದ್ದರು.