ಜೂ.22: ಮಂಗಳೂರಿನ ನೃತ್ಯಭಾರತಿ ಸಹಯೋಗದಲ್ಲಿ ಧರ್ಮಸ್ಥಳದ ಮಲ್ಲರಮಾಡಿ ನಿವಾಸಿ ನೃತ್ಯಪಟು ವಿದುಷಿ ಚೈತ್ರ ಭಟ್ ರವರ ಭರತನಾಟ್ಯ ರಂಗಪ್ರವೇಶ ಸಮಾರಂಭ

0

ಉಜಿರೆ: ಧರ್ಮಸ್ಥಳ ಗ್ರಾಮದ ಮಲ್ಲರಮಾಡಿ ನಿವಾಸಿ ನೃತ್ಯಪಟು ವಿದುಷಿ ಕುಮಾರಿ ಚೈತ್ರ ಭಟ್ ಇವರ ಭರತನಾಟ್ಯ ರಂಗಪ್ರವೇಶ ಸಮಾರಂಭ ಮಂಗಳೂರಿನ ನೃತ್ಯಭಾರತಿ ಸಹಯೋಗದಲ್ಲಿ  ಜೂ.22ರಂದು ಶನಿವಾರ ಸಂಜೆ ಗಂಟೆ 6.15ರಿಂದ  ಧರ್ಮಸ್ಥಳದಲ್ಲಿ ಅಮೃತವರ್ಷಿಣಿ  ಸಭಾಭವನದಲ್ಲಿ ನಡೆಯಲಿದೆ.ಕುಮಾರಿ ಚೈತ್ರ ಭಟ್ ಅವರ ಗುರು ಗೀತಾ ಸರಳಾಯರ ನೃತ್ಯನಿರ್ದೇಶನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹಿಮ್ಮೇಳದಲ್ಲಿ ವಿದುಷಿ ರಶ್ಮಿ ಚಿದಾನಂದ (ನಟುವಾಂಗ), ಸ್ವರಾಗ್, ಮಾಹೆ (ಹಾಡುಗಾರಿಕೆ), ಉಡುಪಿಯ ವಿದ್ವಾನ್ ಬಾಲಚಂದ್ರಭಾಗವತ್ (ಮೃದಂಗ) ಬೆಂಗಳೂರಿನ ದೂರದರ್ಶನ ಕಲಾವಿದ ವಿದ್ವಾನ್ ಗಣೇಶ್ ಕೆ.ಎಸ್. (ಕೊಳಲು) ಹಿಮ್ಮೇಳದಲ್ಲಿ ಸಹಕರಿಸುವರು.

ಸಭಾ ಕಾರ್ಯಕ್ರಮ: ಶನಿವಾರ ರಾತ್ರಿ ಗಂಟೆ 7.30ರಿಂದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಸಭಾಕಾರ್ಯಕ್ರಮ ನಡೆಯಲಿದೆ.ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಮುಖ್ಯ ಅತಿಥಿಯಾಗಿ ಭಾಗವಹಿಸುವರು.ಉಳ್ಳಾಲ ಮೋಹನ್ ಕುಮಾರ್ ಮತ್ತು ಸುರತ್ಕಲ್ ಸುಧಾಕರ ರಾವ್ ಪೇಜಾವರ ಶುಭಾಶಂಸನೆ ಮಾಡುವರು.

ವಿದುಷಿ ಕುಮಾರಿ ಚೈತ್ರ ಭಟ್ ಪರಿಚಯ: ಧರ್ಮಸ್ಥಳ ಗ್ರಾಮದ ಮಲ್ಲರಮಾಡಿ ನಿವಾಸಿ ವಿದುಷಿ ಚೈತ್ರ ಭಟ್ ದಿವಂಗತ ಗೋಪಾಲಕೃಷ್ಣ ಭಟ್ ಮತ್ತು ಮೀನಾಕ್ಷಿ ಜಿ. ಭಟ್ ದಂಪತಿಯ ದ್ವಿತೀಯ ಪುತ್ರಿ.ಕಳೆದ 17 ವರ್ಷಗಳಿಂದ ಗುರು ಗೀತಾ ಸರಳಾಯ ಹಾಗೂ ವಿದುಷಿ ರಶ್ಮೀ ಚಿದಾನಂದ್ ಇವರ ಬಳಿ ನೃತ್ಯಾಭ್ಯಾಸ ಮಾಡಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಜೂನಿಯರ್, ಸೀನಿಯರ್ ಹಾಗೂ ವಿದ್ವತ್ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ದೇಶದೆಲ್ಲೆಡೆ ಈಗಾಗಲೆ 800ಕ್ಕೂ ಮಿಕ್ಕಿ ನೃತ್ಯ ಕಾರ್ಯಕ್ರಮಗಳನ್ನು ನೀಡಿ ಕಲಾಭಿಮಾನಿಗಳ ಮುಕ್ತ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಮೈಸೂರು ದಸರಾ, ಆಳ್ವಾಸ್ ವಿರಾಸತ್ ಮಾತ್ರವಲ್ಲದೆ ಚಂದನ, ಏಶ್ಯಾನೆಟ್ ಮೊದಲಾದ ವಾಹಿನಿಗಳಲ್ಲಿಯೂ ಇವರು ನೃತ್ಯ ಪ್ರದರ್ಶನ ನೀಡಿರುತ್ತಾರೆ.

ಪ್ರಸ್ತುತ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ನೃತ್ಯ ಕಲಾವಿದೆಯಾಗಿ ಮತ್ತು ಉಜಿರೆಯಲ್ಲಿರುವ ಎಸ್.ಡಿ.ಎಂ. ಕಾಲೇಜಿನ ಕಲಾಕೇಂದ್ರದಲ್ಲಿ ನೃತ್ಯ ಶಿಕ್ಷಕಿಯಾಗಿ  ಕಾರ್ಯನಿರ್ವಹಿಸುತ್ತಿದ್ದಾರೆ.

ಮೋಹಿನಿ ಅಟ್ಟಂ, ಕಥಕ್ ಮತ್ತು ಜನಪದ ನೃತ್ಯ ಪ್ರಕಾರಗಳಲ್ಲಿಯೂ ವಿಶೇಷ ಅನುಭವ, ಪರಿಣತಿ ಹೊಂದಿರುವ ಈಕೆ ಪ್ರಸಾಧನ, ನಟುವಾಂಗ ಮತ್ತು ನೃತ್ಯ ಸಂಯೋಜನೆಯಲ್ಲಿಯೂ ವಿಶೇಷ ಆಸಕ್ತಿ ಹೊಂದಿದ ಭರವಸೆಯ ನೃತ್ಯ ಕಲಾವಿದೆಯಾಗಿ ಬೆಳೆಯುತ್ತಿದ್ದಾರೆ, ಬೆಳಗುತ್ತಿದ್ದಾರೆ. ಇವರಿಗೆ ಉಜ್ವಲ ಭವಿಷ್ಯವಿದೆ.

ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ಹೆಗ್ಗಡೆಯವರ ನಿರಂತರ ಪ್ರೋತ್ಸಾಹ, ಪ್ರೇರಣೆ ಮತ್ತು ಮಾರ್ಗದರ್ಶನವನ್ನು ವಿದುಷಿ ಕುಮಾರಿ ಚೈತ್ರ ಭಟ್ ಸದಾ ಧನ್ಯತೆಯಿಂದ ಸ್ಮರಿಸುತ್ತಾರೆ.

LEAVE A REPLY

Please enter your comment!
Please enter your name here