ಶಾಸಕ ಹರೀಶ್ ಪೂಂಜರ ‘ಮಸೀದಿ‌ಗಳಲ್ಲಿ ಶಸ್ತ್ರಾಸ್ತ್ರ’ ಹೇಳಿಕೆ- ಬೆಳ್ತಂಗಡಿ ತಾ. ಜಮಾಅತ್ ಗಳ ಒಕ್ಕೂಟದಿಂದ ಠಾಣೆಗೆ, ಸ್ಪೀಕರ್ ಗೆ ದೂರು ಸಲ್ಲಿಕೆ

0

ಬೆಳ್ತಂಗಡಿ: ಮುಸ್ಲಿಂ ಸಮುದಾಯದ ಧಾರ್ಮಿಕ ಆರಾಧನಾ ಕೇಂದ್ರಗಳಾದ ಮಸೀದಿ ಮತ್ತು ಮದರಸಗಳಲ್ಲಿ ಅಕ್ರಮ ಚಟುವಟಿಕೆಗಳಿಗೆ ಶಸ್ತ್ರಾಸ್ತ್ರ ಗಳನ್ನು ಪೇರಿಸಿಡಲಾಗಿದೆ ಎಂದು ದ್ವೇಷಪೂರಿತವಾಗಿ ಹೇಳಿಕೆ ನೀಡಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಿರುದ್ಧ ಕ್ರಮ‌ಕೈಗೊಳ್ಳಬೇಕೆಂದು ಆಗ್ರಹಿಸಿ‌ ‘ಬೆಳ್ತಂಗಡಿ ತಾಲೂಕು ಜಮಾಅತ್ ಗಳ ಒಕ್ಕೂಟ’ದಿಂದ ಜೂ.15ರಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಗೂ ವಿಧಾನ ಸಭೆಯ ಸ್ಪೀಕರ್ ಅವರಿಗೆ ಲಿಖಿತ ದೂರು ಸಲ್ಲಿಸಲಾಯಿತು.

ತಾಲೂಕಿನ ಜಮಾಅತ್ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳು ಮತ್ತು ಆಯಾಯಾ ಪ್ರದೇಶದ ಜಮಾಅತ್ ಪ್ರಮುಖರನ್ನೊಳಗೊಂಡ ಪಕ್ಷ‌ ಮತ್ತು‌ ವಿವಿಧ ಸಂಘಟನಾ ಅತೀತವಾದ ‘ತಾಲೂಕು ಜಮಾಅತ್ ಗಳ ಒಕ್ಕೂಟ’ ಇದರ‌ ನೇತೃತ್ವದಲ್ಲಿ ಸಾಮೂಹಿಕ‌ ನಾಯಕತ್ವದೊಂದಿಗೆ ಜಮೀಯತುಲ್ ಫಲಾಹ್ ಸಭಾಂಗಣದಲ್ಲಿ ಸಮಾಲೋಚನಾ ಸಭೆ ನಡೆಸಿ ಬಳಿಕ ಈ ದೂರು ಸಲ್ಲಿಸಲಾಯಿತು.

“ಜಿಲ್ಲೆಯಲ್ಲಿರುವ ಎಲ್ಲಾ ಮಸೀದಿಗಳನ್ನು ತಪಾಸಣೆಗೆ ಒಳಪಡಿಸಬೇಕು. ಅನೇಕ ವರ್ಷಗಳಿಂದ ಬಜರಂಗದಳ, ವಿಶ್ವ ಹಿಂದೂ ಪರಿಷತ್, ಭಾರತೀಯ ಜನತಾ ಪಾರ್ಟಿ ಈ‌ ಬಗ್ಗೆ ಆಗ್ರಹವನ್ನು ಮಾಡುತ್ತಾ ಬರುತ್ತಿದೆ” ಎಂದು ಶಾಸಕರು ನೀಡಿರುವ ದ್ವೇಷಪೂರಿತ ಹೇಳಿಕೆಯ ವೀಡಿಯೋ ಎಲ್ಲೆಡೆ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಅವರ ನಡೆಯನ್ನು ಸಭೆ ತೀವ್ರವಾಗಿ ಖಂಡಿಸಿತು. ಶಾಸಕರ ಈ‌ ಹೇಳಿಕೆಯಿಂದ ಸಾರ್ವಜನಿಕವಾಗಿ ಆತಂಕ ಉಂಟಾಗಿದೆ. ಸಮಾಜದ ಶಾಂತಿ ಮತ್ತು ಸೌಹಾರ್ದತೆ ಕೆಡವಿ ಗಲಭೆ ಸೃಷ್ಟಿಸುವ ಹುನ್ನಾರ ಇದೆ. ಇದರ ಕಾರಣ ಮುಸ್ಲಿಂ ಸಮುದಾಯದ ವಿರುದ್ಧ ಜನ ಭಯಭೀತರಾಗಿದ್ದು, ರಾಜ್ಯದ ಕೋಮು ಸೌಹಾರ್ದತೆಯನ್ನು ಕೆಡಿಸುವ ಕೆಲಸಗಳಿಗೆ ಪ್ರಚೋದನೆ ನೀಡುವಂತಹಾ ಭಾಷಣ ಇದಾಗಿದೆ. ಅಲ್ಲದೆ ಇದು ಇಸ್ಲಾಂ ಸಮುದಾಯದ ಧಾರ್ಮಿಕ ಭಾವನೆಗೆ ಧಕ್ಕೆಯನ್ನುಂಟು ಮಾಡಿದೆ. ಶಾಸಕರು ಈ ಹಿಂದೆಯೂ ಇಸ್ಲಾಂ ನ ಮುಂಜಿ ಕರ್ಮ, ಮುಸಲ್ಮಾನರಿಗೆ ಜಾಗ ನೀಡಬಾರದು, ಮುಸ್ಲಿಮರ ಮತ ಬೇಡ ಎಂಬಿತ್ಯಾದಿಯಾಗಿ ನಿರಂತರ ಜನಾಂಗೀಯ ದ್ವೇಷ ಪ್ರದರ್ಶಿಸುತ್ತಲೇ ಬರುತ್ತಿದ್ದಾರೆ. ಆದ್ದರಿಂದ ಅವರ ವಿರುದ್ಧ ಶೀಘ್ರ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಲಾಯಿತು.

ಪೊಲೀಸ್ ಇನ್ಸ್‌ಪೆಕ್ಟರ್ ಬಿ.ಜಿ ಸುಬ್ಬಾಪುರಮಠ್ ಅವರು ದೂರು ಅರ್ಜಿ ಸ್ವೀಕರಿಸಿ, ಮೇಲಧಿಕಾರಿಗಳ ನಿರ್ದೇಶನದಂತೆ ಕ್ರಮ ಜರುಗಿಸುವ ಭರವಸೆ ನೀಡಿದರು.‌ಈ ನಿಯೋಗದಲ್ಲಿ ತಾಲೂಕಿನ ವಿವಿಧ ಜಮಾಅತ್ ಗಳ ಪದಾಧಿಕಾರಿಗಳು, ‌ಸಮುದಾಯ ಮುಖಂಡರುಗಳು ಉಪಸ್ಥಿತರಿದ್ದರು. ಕಾನೂನು ತಜ್ಞರು ಸಭೆಗೆ ಸೂಕ್ತ ಮಾಹಿತಿ ನೀಡಿದರು.‌

LEAVE A REPLY

Please enter your comment!
Please enter your name here