ಉಜಿರೆ: ವಿಜ್ಞಾನ ರಂಗದಲ್ಲಿನ ಮಹತ್ತರ ಬದಲಾವಣೆಗಳು ವೈಜ್ಞಾನಿಕ ಮನೋಧರ್ಮವನ್ನು ನೆಲೆಗೊಳಿಸಿದ್ದೇ ಅಲ್ಲದೇ ಆಹಾರವೂ ಸೇರಿದಂತೆ ವಿವಿಧ ವಲಯಗಳಲ್ಲಿ ಸ್ವಾವಲಂಬಿ ಆಗುವುದಕ್ಕೆ ಪೂರಕವಾಗಿವೆ ಎಂದು ಬೆಂಗಳೂರಿನ ಸೆಂಟರ್ ಫಾರ್ ನ್ಯಾನೋ ಆ್ಯಂಡ್ ಸಾಫ್ಟ್ ಮ್ಯಾಟರ್ ಸೈನ್ಸಸ್‌ನ ನಿರ್ದೇಶಕ, ನ್ಯಾನೋ ಜಾಥಾ ನೋಡಲ್ ಅಧಿಕಾರಿ ಡಾ.ಬಿ.ಎಲ್.ವಿ.ಪ್ರಸಾದ್ ನುಡಿದರು.
ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರದ ರಸಾಯನ ಶಾಸ್ತ ವಿಭಾಗವು ಬೆಂಗಳೂರಿನ ಸೆಂಟರ್ ಫೋರ್ ನ್ಯಾನೋ ಆ್ಯಂಡ್ ಸಾಫ್ಟ್ ಮ್ಯಾಟರ್ ಸೈನ್ಸ್ ಹಾಗೂ ಕರ್ನಾಟಕ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಪ್ರಮೋಷನ್ ಸೊಸೈಟಿ ಸಹಯೋಗದೊಂದಿಗೆ ಮಂಗಳವಾರ ಆಯೋಜಿಸಲಾಗಿದ್ದ ‘ನ್ಯಾನೋ ಜಾಥಾ’ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಈ ಹಿಂದೆ ಭಾರತಕ್ಕೆ ಎದುರಾದ ಭೀಕರ ಬರಗಾಲದ ಸಂದರ್ಭ ಧಾನ್ಯಗಳನ್ನು ಉಳಿಸಲು ಒಂದು ಹೊತ್ತು ಉಪವಾಸ ಮಾಡುವ ಪರಿಸ್ಥಿತಿ ಎದುರಾಗಿತ್ತು. ಆ ಕಠಿಣ ಸಂದರ್ಭವೇ ಭಾರತಕ್ಕೆ ವೈಜ್ಞಾನಿಕ ಅಭಿವೃದ್ಧಿಯ ಕಡೆಗೆ ಹೆಜ್ಜೆ ಹಾಕಲು ಉತ್ತೇಜಿಸಿತ್ತು. ಆಗ ಅಮೆರಿಕದಿಂದ ಹಂದಿಗಳಿಗೆ ಆಹಾರವಾಗಿ ನೀಡಲಾಗುತ್ತಿದ್ದ ಕಳಪೆ ಗೋಧಿಯನ್ನು ಆಮದಿಸಲಾಗುತ್ತಿತ್ತು. ಆಗ ನಮ್ಮ ದೇಶ ವೈಜ್ಞಾನಿಕವಾಗಿ ಹಿಂದಿತ್ತು ಎಂದು ನೆನಪಿಸಿಕೊಂಡರು.
ಭಾರತದಂತೆಯೇ ಆಗಸ್ಟ್ 15ರಂದು ಸ್ವಾತಂತ್ರ್ಯ ಪಡೆದ ದೇಶ ದಕ್ಷಿಣ ಕೊರಿಯಾ. ಪಾಕಿಸ್ತಾನವೂ ಆಗಸ್ಟ್ 14ರಂದು ಸ್ವಾತಂತ್ರ್ಯ ಪಡೆಯಿತು. ಆದರೆ, ಈ ಮೂರೂ ದೇಶಗಳಲ್ಲಿ ನಡೆದಿರುವ ಅಭಿವೃದ್ಧಿಯ ನಡುವೆ ಅಜಗಜಾಂತರ. ಒಂದು ದೇಶದ ಅಭಿವೃದ್ಧಿಯನ್ನು ಮಾಪನ ಮಾಡಲು ಸಾಧ್ಯವಾಗುವುದು ಅದು ವೈಜ್ಞಾನಿಕವಾಗಿ ಎಷ್ಟು ಮುಂದುವರೆದಿದೆ ಎನ್ನುವುದರ ಮೂಲಕ ಎಂದರು.
ನಮ್ಮಲ್ಲಿ ವಿವಿಧ ರಂಗಗಳಲ್ಲಿ ಆದ ವೈಜ್ಞಾನಿಕ ಅಭಿವೃದ್ಧಿಯಿಂದಾಗಿ ನಾವು ಹಾಲು, ಆಹಾರ ಧಾನ್ಯಗಳು ಸೇರಿದಂತೆ ಅನೇಕ ರೀತಿ ಆಹಾರೋತ್ಪನ್ನಗಳನ್ನು ರಫ್ತು ಮಾಡುವ ಹಂತಕ್ಕೆ ಏರಿದ್ದೇವೆ. ಇದು ಭಾರತದ ಒಟ್ಟಾರೆ ಸಾಧನೆಗೆ ಹಿಡಿದ ಕೈಗನ್ನಡಿ. ಭಾರತ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಪೈಕಿ ಮುಂಚೂಣಿಯಲ್ಲಿರಲು ವೈಜ್ಞಾನಿಕ ಅಭಿವೃದ್ಧಿಯೇ ಕಾರಣ. ಮಕ್ಕಳು, ವಿದ್ಯಾರ್ಥಿ ದೆಸೆಯಿಂದಲೇ ವೈಜ್ಞಾನಿಕ ಮನೋಧರ್ಮವನ್ನು ಬೆಳೆಸಿಕೊಳ್ಳುವುದರಿಂದ ಹೊಸ ಚಿಂತನೆಗಳು ಹುಟ್ಟುತ್ತವೆ. ಪ್ರತಿ ಪೀಳಿಗೆಯ ಹೊಸ ಚಿಂತನೆಯೇ ವ್ಶೆಜ್ಞಾನಿಕ ಆವಿಷ್ಕಾರಗಳಿಗೆ ಬುನಾದಿ ಆಗುತ್ತದೆ. ಇದರಿಂದಲೇ ದೇಶದ ಒಟ್ಟಾರೆ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮವನ್ನು ಎಸ್.ಡಿ.ಎಂ. ಸಂಸ್ಥೆಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಉದ್ಘಾಟಿಸಿ ಮಾತನಾಡಿದರು. ಭೂಮಿ, ಸೌರ ಮಂಡಲ, ಆಕಾಶಗಂಗೆ, ಭೌತಿಕ ವಿಶ್ವ ಎಲ್ಲವೂ ದೊಡ್ಡ ಗಾತ್ರದ ಭೌತಿಕ ವಸ್ತುಗಳು. ವಸ್ತುಗಳನ್ನು ಸಣ್ಣ ಗಾತ್ರಕ್ಕೆ ತುಂಡರಿಸುತ್ತಾ ಹೋದಾಗ ಸಿಗುವುದೇ ನ್ಯಾನೋ ಲೋಕ. ನ್ಯಾನೋ ಗಾತ್ರದಲ್ಲಿ ವಸ್ತುವನ್ನು ನಿಯಂತ್ರಿಸಲು ಸಾಧ್ಯವಾದರೆ ಒಂದು ವಸ್ತು ವರ್ತಿಸುವ ರೀತಿ ಬದಲಾಗುತ್ತದೆ. ಅದನ್ನು ಗಮನಿಸಿ ಅರ್ಥ ಮಾಡಿಕೊಳ್ಳುವ ಪ್ರಕ್ರಿಯೆಯೇ ನ್ಯಾನೋ ವಿಜ್ಞಾನ. ಈ ವಿಚಾರವನ್ನು ಕಳೆದ ಶತಮಾನದಲ್ಲೇ ವಿಜ್ಞಾನಿ ರಿಚರ್ಡ್ ಫೇಯ್ನ್ಮನ್ ಗುರುತಿಸಿದ್ದರು. ನ್ಯಾನೋ ಕ್ಷೇತ್ರದಲ್ಲಿ ಸಾಕಷ್ಟು ಬೆಳವಣಿಗೆಗಳು ಆಗಬೇಕಾಗಿದ್ದು ಅವಕಾಶಗಳೂ ಹೇರಳವಾಗಿವೆ” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎ.ಕುಮಾರ ಹೆಗ್ಡೆ ಮಾತನಾಡಿದರು. ಸಣ್ಣದೇ ಸುಂದರ, ಸಣ್ಣದಕ್ಕೇ ಮಹತ್ತೂ ಇರುತ್ತದೆ. ಸಣ್ಣದೂ ಅಪಾಯಕಾರಿ ಆಗಬಹುದು. ನ್ಯಾನೋ ಲೋಕ ಅಂದರೆ ಹೀಗೇ. ನ್ಯಾನೋ ಪ್ರಪಂಚವನ್ನು ಅರ್ಥ ಮಾಡಿಕೊಳ್ಳುವವರು ಈ ಆಯಾಮಗಳನ್ನು ಅರಿತುಕೊಳ್ಳಲೇಬೇಕು ಎಂದು ಸಲಹೆ ನೀಡಿದರು.
ನ್ಯಾನೋ ವಿಜ್ಞಾನ ಕೇವಲ ಭೌತಶಾಸ್ತ್ರ, ರಸಾಯನ ಶಾಸ್ತ್ರಕ್ಕೆ ಸೀಮಿತವಾಗದೇ ಇದ್ದು ಜೀವವಿಜ್ಞಾನದಲ್ಲೂ ನ್ಯಾನೋ ವಿಜ್ಞಾನ ಮಹತ್ತರ ಪಾತ್ರವನ್ನು ಹೊಂದಿದೆ. ನ್ಯಾನೋ ಗಾತ್ರದ ವಸ್ತುಗಳ ಗುಣಲಕ್ಷಣಗಳು ಸಂಪೂರ್ಣವಾಗಿ ಸಾಧಾರಣ ವಸ್ತುಗಳಿಗಿಂತ ವಿಭಿನ್ನವಾಗಿದ್ದು, ಆರೋಗ್ಯ, ಶಕ್ತಿ ಉತ್ಪಾದನೆ ಮುಂತಾದ ಕ್ಷೇತ್ರದಲ್ಲಿ ಬಳಸಬಹುದಾಗಿದೆ. ಹೀಗಾಗಿ ನ್ಯಾನೋ ವಿಜ್ಞಾನದ ಕಡೆಗೆ ಜಗತ್ತೇ ನೋಡುತ್ತಿದೆ ಎಂದರು.
ಈ ಎರಡು ದಿನದ ಕಾರ್ಯಕ್ರಮವು ಕೇವಲ ಭಾಷಣ, ಉಪನ್ಯಾಸಗಳಿಗೆ ಸೀಮಿತವಾಗದೇ ನ್ಯಾನೋ ವಿಜ್ಞಾನಕ್ಕೆ ಸಂಬಂಧಿಸಿದ ವಸ್ತು ಪ್ರದರ್ಶನವನ್ನೂ ಒಳಗೊಂಡದ್ದು ವಿಶೇಷವಾಗಿತ್ತು. ಈ ವಸ್ತು ಪ್ರದರ್ಶನದಲ್ಲಿ ಚಿನ್ನದ ನ್ಯಾನೋ ಪಾರ್ಟಿಕಲ್‌ಗಳು, ಲೋಹಗಳ ನಡುವಿನ ಗಾಲ್ವನೈಜೇಶನ್ ಪ್ರಯೋಗ, ಹಣ್ಣಿನ ರಸದಿಂದ ವಿದ್ಯುತ್ ಉತ್ಪಾದನೆ, ಲೀಥಿಯಂ ಬ್ಯಾಟರಿ ಮುಂತಾದ ಪ್ರಯೋಗಗಳು ಗಮನ ಸೆಳೆದವು.
ಕಾರ್ಯಕ್ರಮದ ಪ್ರಾರಂಭಕ್ಕೂ ಮುನ್ನ ವಿದ್ಯಾರ್ಥಿಗಳಾದ ಮಧುರಾ ಭಟ್ ಹಾಗೂ ತಂಡ ಪ್ರಾರ್ಥನೆ ಸಲ್ಲಿಸಿದರು. ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರದ ಡೀನ್, ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ವಿಶ್ವನಾಥ್.ಪಿ ಸ್ವಾಗತಿಸಿದರು. ಸಹ ಪ್ರಾಧ್ಯಾಪಕಿ ಡಾ. ನೆಫಿಸತ್ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕಿ ಡಾ.ಸೌಮ್ಯಾ ಬಿ.ಪಿ ವಂದಿಸಿದರು.