ಉಜಿರೆ: ಈಸುವುದು ಮತ್ತು ಜಯಿಸುವುದು ಈಸುವುದು ಎಂದರೆ ಸಂಸಾರವನ್ನು ನಡೆಸಿಕೊಂಡು ಹೋಗುವುದು ಅಂತೆಯೇ ಜಯಿಸುವುದು ಎಂದರೆ ಒಳ್ಳೆಯ ವಿಷಯಗಳನ್ನು ಇಟ್ಟುಕೊಂಡು ಕೆಟ್ಟ ವಿಚಾರಗಳನ್ನು ಬಿಟ್ಟು ಜಯಿಸುವುದು ಎಂದು ಅರ್ಥ. ಯಾವುದೇ ಮದ್ಯವ್ಯಸನಿಯ ಮದ್ಯಪಾನಕ್ಕೆ ಮೂಲ ಕಾರಣ ಸುಖ ಮತ್ತು ದುಃಖ ಆಗಿದ್ದು ಆ ವ್ಯಕ್ತಿ ಉತ್ತಮ ಜೀವನ ನಡೆಸಲು ಅಸಾಧ್ಯ. ಇಂದ್ರಿಯಗಳನ್ನು ಹತೋಟಿ ಮಾಡುವುದೇ ದೊಡ್ಡ ಕೆಲಸ, ಮನಸ್ಸಿನ ಚಂಚಲತೆಯನ್ನು ದೂರವಿರಿಸಿ ಇಂದ್ರಿಯಗಳನ್ನು ಹತೋಟಿಯಲ್ಲಿರಿಸಿದರೇ ಉತ್ತಮ ಮನುಷ್ಯರಾಗಿ ಜೀವನದಲ್ಲಿ ಬಹಳ ಎತ್ತರಕ್ಕೆ ಏರಲು ಸಾಧ್ಯವೆಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಅಭಿಪ್ರಾಯ ಪಟ್ಟರು.ಮದ್ಯವ್ಯಸನಿಗಳ ಮನಪರಿವರ್ತನೆ ಮಾಡುವುದರ ಮೂಲಕ ಹಳೆಯ ನೆನಪುಗಳನ್ನು ಮುಂದಿನ ಜೀವನಕ್ಕೆ ಎಚ್ಚರಿಕೆಯಾಗಿಸಿಕೊಂಡು ಸಂತೋಷದಿಂದ ಮದ್ಯಮುಕ್ತ ಜೀವನವನ್ನು ನಡೆಸಬೇಕೆಂದು ಉಜಿರೆ ಲಾಯಿಲ ಗ್ರಾಮದಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆಯುತ್ತಿರುವ 225ನೇ ವಿಶೇಷ ಮದ್ಯವರ್ಜನ ಶಿಬಿರದಲ್ಲಿ ಆಗಮಿಸಿ ಮಾತನಾಡಿದರು.
ಈ ವಿಶೇಷ 8 ದಿನದ ಶಿಬಿರದಲ್ಲಿ ರಾಜ್ಯಾದ್ಯಂತ 73 ಶಿಬಿರಾರ್ಥಿಗಳು ಭಾಗವಹಿಸಿರುತ್ತಾರೆ.ಕೆ.ಎಸ್ ಹೆಗ್ಡೆ ಆಸ್ಪತ್ರೆಯ ಡಾ.ಶ್ರೀನಿವಾಸ್ ಭಟ್ ನೇತೃತ್ವದಲ್ಲಿ ಮನೋವೈದ್ಯಕೀಯ ಚಿಕಿತ್ಸೆ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಮೂಲಕ ಯೋಗ ಮತ್ತು ದೈಹಿಕ ಚಟುವಟಿಕೆಗಳು, ಸಲಹಾ ಕಾರ್ಯಕ್ರಮ, ಸಾಂಸ್ಕೃತಿಕ, ಉಪಯುಕ್ತ ವಿಡಿಯೋ ಪ್ರದರ್ಶನ, ವಿಷಯಾಧಾರಿತ ಪ್ರವಚನ, ನವಜೀವನ ಸಮಿತಿ ಸದಸ್ಯರ ಅನಿಸಿಕೆ, ಆತ್ಮಾವಲೋಕನ, ಕುಟುಂಬದ ದಿನ ಮುಂತಾದ ಕಾರ್ಯಕ್ರಮಗಳ ಮೂಲಕ ಮನಪರಿವರ್ತನೆಗೆ ಆದ್ಯತೆ ನೀಡಲಾಗಿದೆ. ಕಾರ್ಯಕ್ರಮದಲ್ಲಿ ಜನಜಾಗೃತಿ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ. ಪಾಯಸ್, ಯೋಜನಾಧಿಕಾರಿ ಮಾಧವ ಗೌಡ, ಶಿಬಿರಾಧಿಕಾರಿಗಳಾದ ನಂದಕುಮಾರ್ ಕೆ.ಕೆ, ಆರೋಗ್ಯ ಸಹಾಯಕಿ ಜಯಲಕ್ಷ್ಮೀ ರವರು ಸಹಕರಿಸಿರುತ್ತಾರೆ. ಮುಂದಿನ ವಿಶೇಷ ಶಿಬಿರವು ದಿನಾಂಕ: 17.06.2024ರಂದು ನಡೆಯಲಿದೆ ಎಂದು ವೇದಿಕೆಯ ಪ್ರಕಟಣೆ ತಿಳಿಸಿದೆ.