ಬೆಳ್ತಂಗಡಿ : ‘ರಾಜಕಾರಣದಲ್ಲಿ ಲಾಲ್ ಬಹುದ್ದೂರು ಶಾಸ್ತ್ರಿಯಂತಹ ವ್ಯಕ್ತಿ ನಮ್ಮ ನಡುವೆ ಇದ್ದಿದ್ದರೆ ಅದು ಕೆ. ವಸಂತ ಬಂಗೇರರು. ಅವರು ರಾಜಕೀಯ ಕ್ಷೇತ್ರದ ಬೆಳ್ಳಿರೇಖೆಯಂತಿದ್ದರು. ಬಂಗೇರರಂತಹ ರಾಜಕಾರಣಿಯನ್ನು ಇನ್ನು ಪಡೆಯುವುದು ಅಸಾಧ್ಯ. ಪೀಳಿಗೆಯಿಂದ ಪೀಳಿಗೆಗೆ ಅವರ ಹೆಸರು, ವ್ಯಕ್ತಿತ್ವ ರವಾನೆಯಾಗಬೇಕು. ಅವರ ಬದುಕಿನ ಬಗ್ಗೆ ಕಾಲೇಜಿನಲ್ಲಿ ವರ್ಷ ವರ್ಷ ಗೋಷ್ಠಿಗಳನ್ನು ನಡೆಸಿ ವಿದ್ಯಾರ್ಥಿಗಳಿಗೆ ಪರಿಚಯಿಸಬೇಕು’ ಎಂದು ಬಂಟ್ವಾಳದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಸಂಸ್ಥಾಪಕ ತುಕರಾಂ ಪೂಜಾರಿ ಹೇಳಿದರು.
ಅವರು ಜೂ 10ರಂದು ಬೆಳ್ತಂಗಡಿ ಶ್ರೀ ಗುರುದೇವ ಕಾಲೇಜಿನಲ್ಲಿ ಶ್ರೀ ಗುರುದೇವ ಎಜುಕೇಶನಲ್ ಟ್ರಸ್ಟ್, ಶ್ರೀ ಗುರುದೇವ ಪದವಿಪೂರ್ವ ಕಾಲೇಜು, ಶ್ರೀ ಗುರುದೇವ ಪ್ರಥಮ ದರ್ಜೆ ಇದರ ವತಿಯಿಂದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರೂ ಆಗಿದ್ದ ಮಾಜಿ ಶಾಸಕ ಕೆ. ವಸಂತ ಬಂಗೇರರಿಗೆ ನಡೆದ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
‘ಲಾಲ್ ಬಹುದ್ದೂರು ಶಾಸ್ತ್ರಿಗಳು ಪ್ರಧಾನಿಯಾಗಿದ್ದರೂ ಅವರು ವೈಯಕ್ತಿಕ ಬದುಕಿಗೆ ಅಥವಾ ಕುಟುಂಬಕ್ಕೆ ಯಾವುದನ್ನೂ ಮಾಡಿಕೊಂಡವರಲ್ಲ. ಅವರು ಆ ಕಾಲಕ್ಕೆ ರೂ. 14 ಸಾವಿರದ ಕಾರು ಖರೀದಿ ಮಾಡಿದ್ದೂ ಕೂಡಾ ಬ್ಯಾಂಕ್ ಸಾಲ ಮಾಡಿಕೊಂಡು. ಅದೇ ರೀತಿ ವಸಂತ ಬಂಗೇರರು ಬದುಕನ್ನು ತನ್ನ ಸ್ವಾರ್ಥಕ್ಕಾಗಿ, ಹೆಂಡತಿ ಮಕ್ಕಳ ಏಳಿಗೆಗಾಗಿ ಅವರು ಮುಡುಪಾಗಿಟ್ಟವರಲ್ಲ. ಇಡೀ ಜೀವಮಾನವನ್ನು ಸಮಾಜದ ಸೇವೆಗಾಗಿ, ಸಾರ್ವಜನಿಕರ ಹಿತಾಸಕ್ತಿಗಾಗಿ ಮುಡುಪಾಗಿಟ್ಟವರು. ವಿದ್ಯಾ ಸಂಸ್ಥೆಯನ್ನು ಕಟ್ಟುವಲ್ಲಿಯೂ ಬಡವರಿಗೆ ಒಳ್ಳೆಯ ವಿದ್ಯಾಭ್ಯಾಸ ಸಿಗಬೇಕು ಎಂಬ ಕಾಳಜಿ ಅವರದಾಗಿತ್ತು. ಹಾಗಾಗಿ ಸಾಲ ಮಾಡಿ ವಿದ್ಯಾಸಂಸ್ಥೆಯನ್ನು ಕಟ್ಟಿ ಕಷ್ಟವಾದರೂ ಮುನ್ನಡೆಸಿಕೊಂಡು ಬಂದವರು ಅವರು’ ಎಂದರು.
ಒಬ್ಬ ಮನುಷ್ಯ ಇನ್ನೊಬ್ಬರ ಹೃದಯದಲ್ಲಿ ಮನೆ ಮಾಡಿದ್ದೇ ಆದರೆ ಅದು ಬದುಕಿನ ಸಾರ್ಥಕ್ಯವಾದುದು. ಬಂಗೇರರ ವ್ಯಕ್ತಿತ್ವ ಮೇಲ್ನೋಟಕ್ಕೆ ನಿಷ್ಠುರವಾಗಿದ್ದರೂ ಹೂವಿನಂತ ಮನಸ್ಸು ಅವರದಾಗಿತ್ತು. ಮಾತೃ ಹೃದಯವನ್ನು ಬೆಳೆಸಿಕೊಂಡವರಾಗಿದ್ದರು. ಎಷ್ಟೇ ಬೈದರೂ ಮತ್ತೆ ಕರೆದು ಪ್ರೀತಿಯಿಂದ ಮಾತನಾಡುವ ಮನಸ್ಸು ಅವರದಾಗಿತ್ತು ಎಂದು ಅವರು ಹೇಳಿದರು.
ಕಾಲೇಜಿನ ಆಡಳಿತ ಮಂಡಳಿ ಉಪಾಧ್ಯಕ್ಷ ಪದ್ಮನಾಭ ಮಾಣಿಂಜ ಮಾತನಾಡಿ, ‘ ಗುರುದೇವ ಕಾಲೇಜಿನಲ್ಲಿ ಎಷ್ಟೋ ಬಡ ವಿದ್ಯಾರ್ಥಿಗಳು ಶುಲ್ಕವಿಲ್ಲದೆ ವಿದ್ಯಾಭ್ಯಾಸ ಮಾಡಿದ್ದಾರೆಂದರೆ ಅದು ಬಂಗೇರರ ಹೃದಯವಂತಿಕೆಯಾಗಿದೆ. ಬಂಗೇರರಂತಹ ಧೈರ್ಯವಂತ ಮನುಷ್ಯ ಇಷ್ಟರವರೆಗೆ ಮತ್ತೊಬ್ಬರನ್ನು ಕಂಡಿಲ್ಲ. ಏನೇ ಸಂದರ್ಭ ಬಂದರೂ ಅವರು ದೃತಿಗೆಡುತ್ತಿರಲಿಲ್ಲ. ಅವರ ಕನಸು ಮತ್ತು ವ್ಯಕ್ತಿತ್ವವನ್ನು ಉಳಿಸುವುದೇ ನಮ್ಮ ಧ್ಯೇಯವಾಗಬೇಕು’ ಎಂದರು.
ಕಾಲೇಜಿನ ಆಡಳಿತ ಮಂಡಳಿ ಕಾರ್ಯದರ್ಶಿ ಧರ್ಮವಿಜೇತ್ ಎಂ, ಸದಸ್ಯರುಗಳಾದ ಪೀತಾಂಬರ ಹೇರಾಜೆ, ಭಗೀರಥ ಜಿ, ಪ್ರಿತಿತಾ ಧರ್ಮವಿಜೇತ್, ಬಿನುತಾ ಬಂಗೇರ, ಶ್ರೀ ಗುರುದೇವ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ಸವಿತಾ, ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಶಮೀವುಲ್ಲಾ ಬಿ.ಎ., ಇತಿಹಾಸ ಉಪನ್ಯಾಸಕ ಹರೀಶ್ ಪೂಜಾರಿ, ಕನ್ನಡ ಭಾಷಾ ಉಪನ್ಯಾಸಕ ಸತೀಶ್ ಸಾಲಿಯಾನ್, ಬಿ.ಎ. ವಿದ್ಯಾರ್ಥಿನಿ ಸಂಶೀನಾ ಹಾಗೂ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಶ್ರೀ ನಿತ್ಯ ನುಡಿ ನಮನ ಸಲ್ಲಿಸಿದರು.
ಕಾಲೇಜಿನ ಆಡಳಿತ ಮಂಡಳಿ ಕೋಶಾಧಿಕಾರಿ ಗಂಗಾಧರ ಮಿತ್ತಮಾರ್ ಉಪಸ್ಥಿತರಿದ್ದರು
ಶ್ರೀ ಗುರುದೇವ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸುಕೇಶ್ ಕುಮಾರ್ ಕೆ. ಸ್ವಾಗತಿಸಿದರು. ಕನ್ನಡ ಭಾಷಾ ಉಪನ್ಯಾಸಕ ರಾಕೇಶ್ ಕುಮಾರ್ ನಿರೂಪಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕ ಶಿವರಾಜ್ ಗಟ್ಟಿ ವಂದಿಸಿದರು.