ಬಳಂಜ: ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಬಳಂಜ, ಯುವ ಬಿಲ್ಲವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆ ಬಳಂಜ, ನಾಲ್ಕೂರು, ತೆಂಕಕಾರಂದೂರು ಇದರ ಆಶ್ರಯದಲ್ಲಿ ಧತ್ತಿನಿಧಿ ವತಿಯಿಂದ ಉಚಿತ ಪುಸ್ತಕ ವಿತರಣೆ, ಶೈಕ್ಷಣಿಕ ಸಾಧಕರಿಗೆ ಸನ್ಮಾನ, ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮವು ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನದ ಭಾಗಿ ಮುಂಡಪ್ಪ ಪೂಜಾರಿ ಸಭಾ ಭವನದಲ್ಲಿ ನಡೆಯಿತು.
ಬಳಂಜ ಶಾಲಾ ಬಹಳ ನಿವೃತ್ತ ಮುಖ್ಯೋಪಾಧ್ಯಾಯಿನಿ, ಹಿರಿಯರಾದ ಧರ್ಣಮ್ಮ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಕೋರಿದರು.ಶೈಕ್ಷಣಿಕ ಸಾಧಕರಾದ ಅನುಪ್ರಿಯಾ ಬಳಂಜ, ಶರಣ್ಯ ಬರಮೇಲು, ಶಿವಧ್ಯಾನ್ ಕಾಪಿನಡ್ಕಮನ್ವಿತಾ ಬಳಂಜ, ಧೃತಿ ಕಾಪಿನಡ್ಕ ಸಮೀಕ್ಷಾ ಹೇವ, ಸಮೀಕ್ಷಾ ತೆಂಕಕಾರಂದೂರು ಇವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.ಶೇ. 80ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು. 8, 9, 10 ನೇ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ವಹಿಸಿ ಮಾತನಾಡಿ ಯಾರು ಕದಿಯಲಾಗದ ದೊಡ್ಡ ಸಂಪತ್ತು ವಿದ್ಯೆ ಮಾತ್ರ. ಈ ನಿಟ್ಟಿನಲ್ಲಿ ಕಳೆದ 21 ವರ್ಷಗಳಿಂದ ವಿದ್ಯೆಗೆ ವಿಶೇಷವಾದ ಮಹತ್ವಪ್ರೋತ್ಸಾಹವನ್ನು ನೀಡುವ ನಿಟ್ಟಿನಲ್ಲಿ ಧತ್ತಿ ನಿಧಿಯಿಂದ ಪುಸ್ತಕ ವಿತರಣೆಯನ್ನು ಮಾಡುತ್ತ ಬರುತ್ತಿದ್ದೇವೆ ಎಂದರು.
ಮುಖ್ಯ ಅತಿಥಿ ನೆಲೆಯಲ್ಲಿ ಬಳಂಜ ಶಾಲಾ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಮನೋಹರ್ ಬಳಂಜ ಮಾತನಾಡಿ, ಬಳಂಜ ಸಂಘವು ಹಲವಾರು ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯವಾದುದು.ಮನೆ ಬೆಳಗಬೇಕಾದರೆ ಶಿಕ್ಷಣ ಮುಖ್ಯ ಇಲ್ಲಿ ಪುಸ್ತಕ ಪಡೆದ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಸಮಾಜದ ಆಸ್ತಿಯಾಗಬೇಕು ಎಂದರು.
ಸಂಘದ ಗೌರವಾಧ್ಯಕ್ಷ ಹೆಚ್. ಧರ್ಣಪ್ಪ ಪೂಜಾರಿ ಮಾತನಾಡಿ ಕಠಿನ ಪರಿಶ್ರಮ ಮತ್ತು ಶ್ರದ್ದೆ ವಿದ್ಯಾ ಸಂಪತ್ತಿನ ಉನ್ನತಿಗೆ ಅಡಿಗಲ್ಲಾಗುತ್ತದೆ. ಉತ್ತಮ ಜೀವನ ಹಾಗೂ ಸಮಾಜದಲ್ಲಿ ಗೌರವ ಸಂಪಾದಿಸಲು ಶಿಕ್ಷಣ ಮುಖ್ಯ ಎಂದರು.
ವೇದಿಕೆಯಲ್ಲಿ ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ ಭಾರತಿ ಸಂತೋಷ್, ಸಂಘದ ಕಾರ್ಯದರ್ಶಿ ಜಗದೀಶ್ ಬಳ್ಳಿದಡ್ಡ ಉಪಸ್ಥಿತರಿದ್ದರು.ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಶರತ್ ಅಂಚನ್ ಸ್ವಾಗತಿಸಿ, ಸಂಘದ ಸದಸ್ಯರಾದ ಚಂದ್ರಹಾಸ್ ಬಳಂಜ, ವಿಶಾಲ ಜಗದೀಶ್ ನಿರೂಪಿಸಿದರು. ಸಂಘದ ಪದಾಧಿಕಾರಿಗಳು, ಮಾಜಿ ಅಧ್ಯಕ್ಷರು, ಸದಸ್ಯರು ಸಹಕರಿಸಿದರು.