ಕಳೆಂಜ ಪ್ರಕರಣ: ಶಾಸಕ ಪೂಂಜ ವಿರುದ್ಧ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಚಾರ್ಚ್‌ಶೀಟ್ ಸಲ್ಲಿಕೆ- ಎಂಎಲ್‌ಸಿ ಪ್ರತಾಪಸಿಂಹ ನಾಯಕ್ ಸಹಿತ ೧೭ ಮಂದಿ ದೋಷಿಗಳು ಎಂದು ಆರೋಪಪಟ್ಟಿ ಸಲ್ಲಿಸಿದ ತನಿಖಾಧಿಕಾರಿ

0

ಬೆಳ್ತಂಗಡಿ: ಕಳೆಂಜದಲ್ಲಿ ಲೋಲಾಕ್ಷ ಎಂಬವರು ಅಕ್ರಮವಾಗಿ ನಿರ್ಮಿಸಿದ್ದ ಮನೆಯನ್ನು ತೆರವು ಮಾಡಲು ಮುಂದಾಗಿದ್ದ ವೇಳೆ ತನ್ನ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಜೀವ ಬೆದರಿಕೆ ಒಡ್ಡಲಾಗಿದೆ ಎಂದು ಆರೋಪಿಸಿ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್ ಕೆ.ಕೆ.ರವರು ನೀಡಿದ್ದ ದೂರಿನ ತನಿಖೆ ಮುಕ್ತಾಯಗೊಳಿಸಿರುವ ಧರ್ಮಸ್ಥಳ ಠಾಣಾ ಪೊಲೀಸರು ಶಾಸಕ ಹರೀಶ್ ಪೂಂಜ, ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಸಹಿತ ೧೭ ಮಂದಿಯ ವಿರುದ್ಧ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ. ಈ ಮೂಲಕ ಎರಡು ವಾರದ ಅವಧಿಯಲ್ಲಿ ಶಾಸಕ ಹರೀಶ್ ಪೂಂಜ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಮೂರನೇ ದೋಷಾರೋಪಣಾ ಪಟ್ಟಿ ಸಲ್ಲಿಕೆಯಾದಂತಾಗಿದೆ.
ಕಳೆಂಜ ಪ್ರಕರಣದಲ್ಲಿ ಶಾಸಕರ ವಿರುದ್ಧ ಸಲ್ಲಿಕೆಯಾಗಿರುವ ದೋಷಾರೋಪಣಾ ಪಟ್ಟಿಯ ವಿವರ: ಕಳೆಂಜದಲ್ಲಿ ಲೋಲಾಕ್ಷ ಎಂಬವರು ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ಕಟ್ಟಿದ್ದ ಮನೆಯನ್ನು ತೆರವು ಮಾಡುವ ವೇಳೆ ತನ್ನ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಜೀವ ಬೆದರಿಕೆ ಒಡ್ಡಲಾಗಿದೆ ಎಂದು ಆರೋಪಿಸಿ ಶಾಸಕ ಹರೀಶ್ ಪೂಂಜ ಮತ್ತಿತರರ ವಿರುದ್ಧ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್ ಕೆ.ಕೆ.ರವರು ನೀಡಿದ್ದ ದೂರಿನ ಆಧಾರದಲ್ಲಿ ಕೇಸು ದಾಖಲಿಸಿದ್ದ ಧರ್ಮಸ್ಥಳ ಠಾಣಾ ಪೊಲೀಸರು ಇದೀಗ ತನಿಖೆ ಪೂರ್ಣಗೊಳಿಸಿ ಬೆಂಗಳೂರಿನಲ್ಲಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ. ಶಾಸಕ ಹರೀಶ್ ಪೂಂಜ, ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಮತ್ತು ಇತರ ೧೭ ಮಂದಿಗಳನ್ನು ಆರೋಪಿಗಳು ಎಂದು ಚಾರ್ಚ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.
ತನಿಖಾಧಿಕಾರಿಯವರ ವಿವರ: ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪಣಾ ಪಟ್ಟಿಯಲ್ಲಿ ತನಿಖಾಧಿಕಾರಿಯವರು ಉಪ್ಪಿನಂಗಡಿ ವಲಯ ಅರಣ್ಯ ಇಲಾಖಾ ವ್ಯಾಪ್ತಿಗೆ ಒಳಪಡುವ ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಸರ್ವೆ ನಂಬ್ರ ೩೦೯ರ ರಸ್ತೆಯಲ್ಲಿ ಲೋಲಾಕ್ಷ ಗೌಡ ಎಂಬವರು ಮೀಸಲು ಅರಣ್ಯ ಪ್ರದೇಶಕ್ಕೆ ಅಕ್ರಮ ಪ್ರವೇಶ ಮಾಡಿ ಮನೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದರು. ಈ ಸ್ಥಳಕ್ಕೆ ಹಿರಿಯ ಅಧಿಕಾರಿಗಳ ಸೂಚನೆಯಂತೆ ಇಲಾಖೆಯ ಸಿಬ್ಬಂದಿಗಳೊಂದಿಗೆ ೨೦೨೩ರ ಅಕ್ಟೋಬರ್ ೯ರಂದು ಬೆಳಿಗ್ಗೆ ೭.೪೫ ಗಂಟೆಗೆ ದೂರುದಾರ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್‌ರವರು ಭೇಟಿ ನೀಡಿದ್ದ ವೇಳೆ ಲೋಲಾಕ್ಷ ಗೌಡರವರು ಮೀಸಲು ಅರಣ್ಯ ಪ್ರದೇಶದಲ್ಲಿ ಮನೆ ನಿರ್ಮಾಣ ಮಾಡಲು ಫೌಂಡೇಶನ್ ಹಾಕಿರುವುದು ಕಂಡು ಬಂದಿದ್ದು ಕೂಡಲೇ ನಿವೇಶನವನ್ನು ತೆರವು ಮಾಡುವಂತೆ ಲೋಲಾಕ್ಷ ಗೌಡ ಅವರಿಗೆ ಸೂಚಿಸಿದ್ದರು. ಅವರು ತೆರವುಗೊಳಿಸದೆ ಇರುವುದರಿಂದ ಫೌಂಡೇಶನನ್ನು ಇತರ ಅರಣ್ಯ ಇಲಾಖಾ ಅಧಿಕಾರಿ ಮತ್ತು ಸಿಬ್ಬಂದಿಗಳ ಮುಖಾಂತರ ತೆರವುಗೊಳಿಸಲು ಮುಂದಾಗಿದ್ದಾರೆ. ಆ ಸಮಯದಲ್ಲಿ ಬೆಳ್ತಂಗಡಿ ತಾಲೂಕಿನ ಶಾಸಕರಾದ ಹರೀಶ್ ಪೂಂಜರವರು ತಮ್ಮ ಬೆಂಬಲಿಗರೊಂದಿಗೆ ಸೇರಿ ಸದ್ರಿ ಫೌಂಡೇಶನ್ ತೆರವುಗೊಳಿಸದಂತೆ ತಡೆದಿದ್ದಾರೆ. ಶಾಸಕ ಹರೀಶ್ ಪೂಂಜರವರು ಅಧಿಕಾರಿಗಳ ಸಮ್ಮುಖದಲ್ಲಿ ದೂರುದಾರರಾದ ವಲಯ ಅರಣ್ಯಾಧಿಕಾರಿಯವರನ್ನು ಉzಶಿಸಿ ಲೋಫರ್ ನನ್ ಮಗ ಎಂಬ ಅಸಂಸದೀಯ ಪದಗಳನ್ನು ಬಳಸಿದ್ದಾರೆ. ಸದ್ರಿ ಕಟ್ಟಡವನ್ನು ತೆರವುಗೊಳಿಸಿದ್ದಲ್ಲಿ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ. ಕರ್ತವ್ಯಕ್ಕೆ ಅಡ್ಡಿ ಪಡಿಸಿ ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿ ಜೀವ ಬೆದರಿಕೆ ಒಡ್ಡಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಸಕ ಹರೀಶ್ ಪೂಂಜ ಮತ್ತಿತರರ ವಿರುದ್ಧ ಐಪಿಸಿ ೧೪೩, ೩೫೩, ೫೦೪ ಮತ್ತು ೧೪೯ರಡಿ ಪ್ರಕರಣ ದಾಖಲಿಸಲಾಗಿದ್ದು ಪ್ರಕರಣದ ತನಿಖೆ ಪೂರ್ಣಗೊಳಿಸಲಾಗಿದೆ. ದೂರಿನ ವಿಚಾರದಲ್ಲಿ ಸತ್ಯಾಂಶ ಕಂಡು ಬಂದಿದ್ದು ಶಾಸಕ ಹರೀಶ್ ಪೂಂಜ ಮತ್ತಿತರರು ಅಪರಾಧ ಎಸಗಿದ್ದಾರೆ ಎಂದು ತನಿಖಾಧಿಕಾರಿ ಚಾರ್ಚ್‌ಶೀಟ್‌ನಲ್ಲಿ ವಿವರ ನೀಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಘಟನೆಯ ಹಿನ್ನೆಲೆ: ಕಳೆಂಜದಲ್ಲಿ ಲೋಲಾಕ್ಷ ಎಂಬವರು ಮೀಸಲು ಅರಣ್ಯ ಇಲಾಖೆಯ ಜಾಗದಲ್ಲಿ ನಿರ್ಮಿಸಿದ್ದ ಮನೆಯನ್ನು ಉಪ್ಪಿನಂಗಡಿ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ೨೦೨೩ರ ಅಕ್ಟೋಬರ್ ೭ರಂದು ತೆರವು ಮಾಡಲು ಮುಂದಾದಾಗ ಶಾಸಕ ಹರೀಶ್ ಪೂಂಜ ಮತ್ತಿತರರು ತಡೆ ಹಿಡಿದು ಅದೇ ಸ್ಥಳದಲ್ಲಿ ಮತ್ತೆ ಮನೆ ನಿರ್ಮಾಣ ಮಾಡಿದ್ದರು. ನಂತರ ಅರಣ್ಯ ಇಲಾಖೆಯವರು ಆ ಮನೆಯನ್ನೂ ತೆರವು ಮಾಡಲು ೨೦೨೩ರ ಅಕ್ಟೋಬರ್ ೯ರಂದು ಮುಂದಾದಾಗ ಶಾಸಕ ಹರೀಶ್ ಪೂಂಜ, ವಿಧಾನಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್ ಮತ್ತು ಇತರ ಮುಖಂಡರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ನಡುವೆ ಚಕಮಕಿ ನಡೆದಿತ್ತು. ಈ ವೇಳೆ ಭಾರೀ ಪ್ರತಿಭಟನೆ ನಡೆದಿತ್ತು. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಡುವೆ ಚಕಮಕಿ, ತಳ್ಳಾಟ ಉಂಟಾಗಿತ್ತು. ಗೊಂದಲದ ಪರಿಸ್ಥಿತಿ ಉಂಟಾದ ಬಳಿಕ ಹಿರಿಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಡುವೆ ಮಾತುಕತೆ ನಡೆದು ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯ ಜಂಟಿ ಸರ್ವೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಗಿತ್ತು. ಲೋಲಾಕ್ಷರವರು ನಿರ್ಮಿಸಿರುವ ಮನೆ ಅರಣ್ಯ ಜಾಗದಲ್ಲಿ ಇರುವುದೇ ಹೌದಾದರೆ ತಾನೇ ತೆರವು ಮಾಡಿಸುತ್ತೇನೆ ಎಂದು ಶಾಸಕ ಹರೀಶ್ ಪೂಂಜ ಅವರು ಅರಣ್ಯ ಇಲಾಖಾಧಿಕಾರಿಗಳಿಗೆ ಲಿಖಿತವಾಗಿ ತಿಳಿಸಿದ್ದರು. ನಂತರ ಜಂಟಿ ಸರ್ವೆ ಆರಂಭಗೊಂಡಿತ್ತು. ಈ ಮಧ್ಯೆ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್ ಅವರು ಶಾಸಕ ಹರೀಶ್ ಪೂಂಜ ಮತ್ತಿತರರ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ಚಾರ್ಚ್‌ಶೀಟ್ ಇದೀಗ ಸಲ್ಲಿಕೆಯಾಗಿದೆ.

ಶಾಸಕ ಹರೀಶ್ ಪೂಂಜ ವಿರುದ್ಧ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ೩ನೇ ಚಾರ್ಚ್‌ಶೀಟ್ ಸಲ್ಲಿಕೆ: ಕಳೆಂಜದ ಪ್ರಕರಣಕ್ಕೆ ಸಂಬಂಧಿಸಿ ಚಾರ್ಚ್‌ಶೀಟ್ ಸಲ್ಲಿಕೆಯಾಗುವ ಮೂಲಕ ಬೆಂಗಳೂರಿನಲ್ಲಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಶಾಸಕ ಹರೀಶ್ ಪೂಂಜ ವಿರುದ್ಧ ಮೂರನೇ ದೋಷಾರೋಪಣಾ ಪಟ್ಟಿ ಸಲ್ಲಿಕೆಯಾದಂತಾಗಿದೆ. ಅಕ್ರಮ ಗಣಿಗಾರಿಕೆ ಮತ್ತು ಸ್ಫೋಟಕ ಕಾಯಿದೆಯಡಿ ಬಂಧಿತನಾಗಿರುವ ಬಿಜೆಪಿ ತಾಲೂಕು ಯುವಮೋರ್ಚಾದ ಅಧ್ಯಕ್ಷ ಶಶಿರಾಜ್ ಶೆಟ್ಟಿಯವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಮೇ ೧೮ರಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರತಿಭಟನೆ ನಡೆಸಿ ಪೊಲೀಸರಿಗೆ ಬೆದರಿಕೆ ಒಡ್ಡಿದ ಮತ್ತು ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ (ಐಪಿಸಿ ೩೫೩ ಮತ್ತು ೫೦೪)ದಲ್ಲಿ ಶಾಸಕ ಹರೀಶ್ ಪೂಂಜ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೇಸ್‌ಗೆ ಸಂಬಂಧಿಸಿ ಹರೀಶ್ ಪೂಂಜ ಮತ್ತು ೨೮ ಮಂದಿಯ ವಿರುದ್ಧ ಮತ್ತು ಶಶಿರಾಜ್ ಶೆಟ್ಟಿ ಬಂಧನ ಖಂಡಿಸಿ ಮೇ ೨೦ರಂದು ಬೆಳ್ತಂಗಡಿ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಪೂರ್ವಾನುಮತಿ ಪಡೆಯದೆ ಕಾನೂನುಬಾಹಿರವಾಗಿ ಜನರನ್ನು ಗುಂಪು ಸೇರಿಸಿ ಪ್ರತಿಭಟನಾ ಸಭೆ ನಡೆಸಿ ಪ್ರಸ್ತುತ ಅರೆಸ್ಟ್ ಆಗಿರುವ ಕಾರ್ಯಕರ್ತರಿಗಾಗಿ ಪೊಲೀಸರ ಕಾಲರ್ ಹಿಡಿಯಲೂ ಸಿದ್ಧ ಎಂದೂ ಬೆಂಗಳೂರಿನ ಡಿ.ಜೆ.ಹಳ್ಳಿ, ಕೆ.ಜಿ. ಹಳ್ಳಿಯ ಪೊಲೀಸ್ ಠಾಣೆಗೆ ಆದ ಗತಿಯನ್ನು ಬೆಳ್ತಂಗಡಿ ಠಾಣೆಗೂ ಕಾಣಿಸುತ್ತೇನೆ ಎಂದೂ ಬೆದರಿಸಿ ಸಾರ್ವಜನಿಕ ನೌಕರರಾದ ಬೆಳ್ತಂಗಡಿ ಠಾಣಾ ಪೊಲೀಸ್ ನಿರೀಕ್ಷಕರಿಗೆ, ಇತರ ಪೊಲೀಸ್ ಅಧಿಕಾರಿಗಳಿಗೆ, ಪೊಲೀಸ್ ಇಲಾಖೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಮಾನ ಮಾಡಿ ಜೀವ ಬೆದರಿಕೆ ಒಡ್ಡಿ ತಾಲೂಕು ಕಚೇರಿಗೆ ತಮ್ಮ ಕೆಲಸ ಕಾರ್ಯಗಳಿಗಾಗಿ ಬರುವ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಹೋಗದಂತೆ ತಡೆಯೊಡ್ಡಿದ ಆರೋಪದಡಿ (ಐಪಿಸಿ ೧೪೩, ೧೪೭, ೩೪೧, ೫೦೪, ೫೦೬ ಜೊತೆಗೆ ೧೪೯) ದಾಖಲಾದ ಕೇಸ್‌ಗೆ ಸಂಬಂಧಿಸಿ ಹರೀಶ್ ಪೂಂಜ ಮತ್ತು ೩೭ ಮಂದಿಯ ವಿರುದ್ಧ ಚಾರ್ಚ್‌ಶೀಟ್ ಸಲ್ಲಿಕೆಯಾಗಿತ್ತು. ಹರೀಶ್ ಪೂಂಜ ವಿರುದ್ಧ ದಾಖಲಾದ ಎರಡೂ ಕೇಸ್‌ಗಳ ತನಿಖೆಯನ್ನು ತ್ವರಿತವಾಗಿ ಪೂರ್ಣಗೊಳಿಸಿದ್ದ ಪೊಲೀಸ್ ಅಧಿಕಾರಿಗಳು ಶಾಸಕರು ಮತ್ತಿತರರ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಮೇ.೨೮ರಂದು ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ತನಿಖೆಗಾಗಿ ಎಸ್.ಪಿ. ರಿಷ್ಯಂತ್ ಸಿ.ಬಿ. ಅವರಿಂದ ನಿಯೋಜಿಸಲ್ಪಟ್ಟಿದ್ದ ವಿಶೇಷ ತನಿಖಾ ತಂಡದ ಮುಖ್ಯಸ್ಥರಾಗಿರುವ ಪುತ್ತೂರು ನಗರ ಠಾಣಾ ಪೊಲೀಸ್ ಇನ್ಸ್‌ಪೆಕ್ಟರ್ ಸತೀಶ್ ಜಿ.ಜೆ. ಅವರು ಶಾಸಕ ಹರೀಶ್ ಪೂಂಜ ಅವರನ್ನು ಪ್ರಮುಖ ಆರೋಪಿ ಎಂದು ಹೆಸರಿಸಿ ಬೆಂಗಳೂರಿನಲ್ಲಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ತನ್ನ ವಿರುದ್ಧ ದಾಖಲಾದ ಮೊದಲ ಕೇಸ್‌ಗೆ ಸಂಬಂಧಿಸಿ ಹರೀಶ್ ಪೂಂಜ ಅವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಜರಾಗಿ ಬಂಧನಕ್ಕೊಳಗಾಗಿ ಠಾಣಾ ಜಾಮೀನಿನ ಮೂಲಕ ಬಿಡುಗಡೆಗೊಂಡಿದ್ದರು. ಎರಡನೇ ಕೇಸ್‌ನ ವಿಚಾರಣೆಗೆ ಹಾಜರಾಗಲು ನೊಟೀಸ್ ಪಡೆದಿದ್ದ ಶಾಸಕ ಹರೀಶ್ ಪೂಂಜ ಅವರು ಮೊದಲ ಮತ್ತು ಎರಡನೇ ಪ್ರಕರಣವನ್ನು ರದ್ದುಗೊಳಿಸಲು ಆಗ್ರಹಿಸಿ ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ಈಗಾಗಲೇ ನಡೆದಿದ್ದು ಜೂನ್ ೭ಕ್ಕೆ ಮುಂದಿನ ವಿಚಾರಣೆ ನಿಗದಿಯಾಗಿದೆ.

ಏನೂ ಮಾಹಿತಿ ಇಲ್ಲ-ಪ್ರತಾಪಸಿಂಹ ನಾಯಕ್: ಕಳೆಂಜ ಪ್ರಕರಣದಲ್ಲಿ ಅವತ್ತು ಎಫ್‌ಐಆರ್ ದಾಖಲಾಗಿರುವುದು ಗೊತ್ತಿದೆ. ಆ ಬಳಿಕ ನಮ್ಮ ವಿಚಾರಣೆ ನಡೆದಿಲ್ಲ. ಏನೆಲ್ಲಾ ಬೆಳವಣಿಗೆ ನಡೆದಿದೆ ಎಂದು ಗಮನಕ್ಕೆ ಬಂದಿಲ್ಲ. ಇದೀಗ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ನಮ್ಮ ವಿರುದ್ಧ ಚಾರ್ಚ್‌ಶೀಟ್ ಸಲ್ಲಿಕೆಯಾಗಿರುವ ಬಗ್ಗೆ ಏನೂ ಮಾಹಿತಿ ಇಲ್ಲ. ಮಾಧ್ಯಮಗಳಲ್ಲಿ ನೋಡಿಯೇ ಈ ಬಗ್ಗೆ ಗೊತ್ತಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಪ್ರತಿಕ್ರಿಯಿಸಿದ್ದಾರೆ.

ಬಿ ರಿಪೋರ್ಟ್ ಮಾಡಲು ಸರಕಾರ ಸಿದ್ಧತೆ ನಡೆಸಿದ್ದ ಪ್ರಕರಣದಲ್ಲಿ ಚಾರ್ಚ್‌ಶೀಟ್ ಸಲ್ಲಿಕೆ: ಕಳೆಂಜ ಪ್ರಕರಣಕ್ಕೆ ಸಂಬಂಧಿಸಿ ಸರಕಾರ ಬಿ ರಿಪೋರ್ಟ್ ನೀಡಲು ಸಿದ್ಧತೆ ನಡೆಸಿದ್ದರೂ ಇದೀಗ ಚಾರ್ಚ್‌ಶೀಟ್ ಸಲ್ಲಿಕೆಯಾಗಿರುವುದು ಚರ್ಚೆಗೆ ಗ್ರಾಸ ಒದಗಿಸಿದೆ. ಕಳೆಂಜ ಪ್ರಕರಣದಲ್ಲಿ ತಮ್ಮ ಹಕ್ಕುಚ್ಯುತಿಯಾಗಿದೆ ಎಂದು ಶಾಸಕ ಹರೀಶ್ ಪೂಂಜ ಅವರು ಸಲ್ಲಿಸಿದ್ದ ಹಕ್ಕುಚ್ಯುತಿ ಮಂಡನೆಯ ವಿಚಾರ ವಿಧಾನಸಭಾ ಅಧಿವೇಶನದಲ್ಲಿ ಚರ್ಚೆಯಾಗಿದ್ದ ವೇಳೆ ಪ್ರತಿಕ್ರಿಯೆ ನೀಡಿದ್ದ ಸರಕಾರ ಶಾಸಕರ ಹಕ್ಕುಚ್ಯುತಿಯಾಗಲು ಅವಕಾಶ ನೀಡುವುದಿಲ್ಲ. ಅಧಿಕಾರಿಗಳು ತಪ್ಪೆಸಗಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿತ್ತು. ಆ ಬಳಿಕದ ಬೆಳವಣಿಗೆಯಲ್ಲಿ ಶಾಸಕರ ವಿರುದ್ಧ ವಲಯ ಅರಣ್ಯಾಧಿಕಾರಿ ನೀಡಿದ್ದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಪ್‌ಐಆರ್‌ಗೆ ಸಂಬಂಧಿಸಿ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಕೆಯಾಗಲಿದೆ ಎಂದು ಹೇಳಲಾಗುತ್ತಿತ್ತು. ಇದೀಗ ಅಚ್ಚರಿ ಎಂಬಂತೆ ಚಾರ್ಚ್‌ಶೀಟ್ ಸಲ್ಲಿಕೆಯಾಗಿದೆ.

LEAVE A REPLY

Please enter your comment!
Please enter your name here