ಬೆಳ್ತಂಗಡಿ: ನಮ್ಮ ಸಾಧನೆಯ ಬಗ್ಗೆ ಅಜ್ಞಾತ ಮೂಲದಿಂದ ಅರಿವಾಗುವವರಿಗೆ ಅರಿವಾಗಿ ಯಾವುದೇ ವಶೀಲಿಬಾಜಿಗಳಿಲ್ಲದೆ ಪ್ರಶಸ್ತಿಗಳು ನಮ್ಮನ್ನು ಅರಸಿ ಬರಬೇಕು. ಆಗ ಮಾತ್ರ ನಮ್ಮ ಸಾಧನೆಯ ಪರಿಣಾಮ ಇನ್ನೊಬ್ಬರಿಗೆ ತಟ್ಟಿದೆ ಎಂದು ನಾವು ಅರ್ಥೈಸಿಕೊಳ್ಳಬಹುದು ಎಂದು ಖ್ಯಾತ ಪತ್ರಕರ್ತರು ಹಾಗೂ ಲೇಖಕ ಜೋಗಿ ಅಭಿಪ್ರಾಯಪಟ್ಟರು.
ಎಕ್ಸೆಲ್ ಪದವಿಪೂರ್ವ ಕಾಲೇಜು ಗುರುವಾಯನಕೆರೆ ಇಲ್ಲಿ ಮೇ.22 ರಂದು ನಡೆದ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನದಲ್ಲಿ 2024 ನೇ ಸಾಲಿನ ಎಕ್ಸೆಲ್ ಅಕ್ಷರ ಗೌರವ ಪುರಸ್ಕಾರ ಸಮಾರಂಭದಲ್ಲಿ ಅವರು ಅಭಿನಂದನಾ ಭಾಷಣ ಮಾಡುತ್ತಿದ್ದರು.
ಈ ಸಮಾರಂಭದಲ್ಲಿ 2024 ನೇ ಸಾಲಿನ ಅಕ್ಷರ ಪುರಸ್ಕಾರವನ್ನು ಅನ್ಮದಾತ ಅಮೈ ಬಿ.ಕೆ ದೇವರಾವ್, ಸಾಹಿತ್ಯ ಪ್ರೀತಿಗಾಗಿ ಖ್ಯಾತ ಸಾಹಿತಿ ಹಾಗೂ ವಿಶ್ರಾಂತ ಪ್ರಾಂಶುಪಾಲ ಡಾ. ಬಿ ಜನಾರ್ದನ ಭಟ್, ಸಂಶೋಧನಾ ಪ್ರವೃತ್ತಿಗಾಗಿ ವಿಶ್ರಾಂತ ಪ್ರಾಧ್ಯಾಪಕ, ಇತಿಹಾಸ ತಜ್ಞ ಡಾ.ಉಮಾನಾಥ ಶೆಣೈ, ನಾಟಕದ ಹಿರಿಮೆಗಾಗಿ ಖ್ಯಾತ ನಾಟಕ ನಿರ್ದೇಶಕ ಗುರುರಾಜ ಮಾರ್ಪಲ್ಲಿ , ಯಕ್ಷಗಾನ ದಿಗ್ಗಜ ಅರುವ ಕೊರಗಪ್ಪ ಶೆಟ್ಟಿ, ದೈವ ನರ್ತನ ಪ್ರವೀಣ ಲೋಕಯ್ಯ ಸೇರ, ಮತ್ತು ಪುಸ್ತಕ ಪ್ರಕಾಶಕ ಅಂಕಿತ ಒ್ರಕಾಶನ ಬೆಂಗಳೂರು ಇದರ ಪ್ರಕಾಶ್ ಕಂಬತ್ತಳ್ಳಿ ಅವರಿಗೆ ನೀಡಿ ಗೌರವಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಎಕ್ಸೆಲ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ವಹಿಸಿದ್ದು, ನಮ್ಮಿಂದ ಪುರಸ್ಕಾರ ಪಡೆದಿರುವ ಈ ಸಾಧಕರನ್ನು ಅಕ್ಷರೋತ್ಸವ ವೇದಿಕೆಯಲ್ಲಿ ಈ ಮಟ್ಟದಲ್ಲಿ ಸನ್ಮಾನಿಸಿ ನಮ್ಮ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವ ಕಾರ್ಯ ಮಾಡುತ್ತಿದ್ದೇವೆ. ಇವರ ಸಾಧನೆ ಕಂಡು ಒಬ್ಬ ವಿದ್ಯಾರ್ಥಿ ದೃಢತೆ ಪಡೆದರೂ ಅದು ಈ ಕಾರ್ಯಕ್ರಮದ ಯಶಸ್ಸು ಎಂದರು.
ವೇದಿಕೆಯಲ್ಲಿ ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ, ವಿಜ್ಞಾನಿ ಅಭಿರಾಮ್ ಉಪಸ್ಥಿತರಿದ್ದರು.ಪ್ರಾಂಶುಪಾಲ ನವೀನ್ ಕುಮಾರ್ ಮರೀಕೆ ಸ್ವಾಗತಿಸಿದರು. ಶಿಕ್ಷಕ ಧರಣೇಂದ್ರ ಕೆ ಜೈನ್ ನಿರೂಪಿಸಿದರು. ಉಪನ್ಯಾಸಕಿ ಅಂಜನಿ ಎಂ ರಾವ್ ವಂದಿಸಿದರು.
ವಿದ್ಯಾರ್ಥಿಗೆ ಅಧ್ಯಯನಾ ಶೀಲತೆ ಬಹಳ ಮುಖ್ಯ. ಆದ್ದರಿಂದ ವಿದ್ಯಾರ್ಥಿ ಜೀವನ ಎಂದರೆ ಸುಖ ಪಡೆಯುವ ಸಮಯವಲ್ಲ. ಪಿಯುಸಿ ಯಲ್ಲಿ ಎರಡು ವರ್ಷ ಕಷ್ಟಪಟ್ಟರೆ ಜೀವನಪೂರ್ತಿ ಸುಖ ಪಡೆಯಬಹುದು. ನಮ್ಮ ಇತರ ಪ್ರತಿಭೆಗಳನ್ನು ಸಾಕಾರಗೊಳಿಸಲು ಆ ಬಳಿಕವೂ ಅವಕಾಶವಿದೆ. ಆದ್ದರಿಂದ ಕಲಿಕಾ ಅವಧಿಯಲ್ಲಿ ಇತರ ಎಲ್ಲಾ ಚಿಂತನೆಗಳನ್ನು ಬಿಟ್ಟುಬಿಡಬೇಕು ಎಂದು ಖ್ಯಾತ ಪತ್ರಕರ್ತ ಹಾಗೂ ಲೇಖಕ ಜೋಗಿ ತಿಳಿಸಿದರು.