ಬೆಳ್ತಂಗಡಿ: ಬಳೆಂಜ ಗ್ರಾಮದ ಮೂಡಾಯಿಬೆಟ್ಟ ಎಂಬಲ್ಲಿ ತಾಯಿ ಹಾಗೂ ಮಗನ ಮೇಲೆ ವ್ಯಕ್ತಿಯೋರ್ವ ಹಲ್ಲೆ ನಡೆಸಿದ ಘಟನೆ ನಡೆದಿದ್ದು ಆರೋಪಿಯ ವಿರುದ್ದ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬಳೆಂಜ ಗ್ರಾಮದ ನಿವಾಸಿ ಅಶ್ವಿನ್ ಪೂಜಾರಿ ಹಾಗೂ ಆತನ ತಾಯಿಯೇ ಹಲ್ಲೆಗೆ ಒಳಗಾದವರಾಗಿದ್ದಾರೆ. ಸ್ಥಳೀಯ ನಿವಾಸಿ ಪ್ರಕಾಶ್ ಶೆಟ್ಟಿ ಎಂಬಾತನೇ ಹಲ್ಲೆ ನಡೆಸಿದ ಆರೋಪಿಯಾಗಿದ್ದಾನೆ.
ಪೂರ್ವದ್ವೇಷದ ಹಿನ್ನಲೆಯಲ್ಲಿ ಹಲ್ಲೆ ನಡೆಸಲಾಗಿದೆ ಎಂದು ದೂರು ದಾಖಲಾಗಿದೆ. ಕಾಂಗ್ರೆಸ್ ಕಾರ್ಯಕರ್ತನಾಗಿರುವ ಆಶ್ವಿನ್ ಹಾಗೂ ಬಿಜೆಪಿ ಕಾರ್ಯ ಕರ್ತ ಪ್ರಕಾಶ್ ಶೆಟ್ಟಿ ನಡುವೆ ರಾಜಕೀಯ ವೈಷಮ್ಯವಿದ್ದು ಇದೂ ಹಲ್ಲೆಗೆ ಕಾರಣವಾಗಿದೆ ಎಂದು ಹಲ್ಲೆಗೆ ಒಳಗಾದ ಅಶ್ವಿನ್ ಆರೋಪಿಸಿದ್ದಾರೆ.
ಮೇ 20ರಂದು ರಾತ್ರಿ ಬಳೆಂಜ ಗ್ರಾಮದ ಮೂಡಾಯಿಬೆಟ್ಟು ಎಂಬಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ವಿದ್ಯುತ್ ಸ್ಥಗಿತಗೊಂಡ ವೇಳೆ ಜನರೇಟರ್ ಸ್ಟಾರ್ಟ್ ಮಾಡಲೆಂದು ಅಶಿನ್ ಹಾಗೂ ಮತ್ತೊಬ್ಬರು ತೆರಳಿದ ವೇಳೆ ಕತ್ತಲೆಯಲ್ಲಿ ಆಕಸ್ಮಿಕವಾಗಿ ಆರೋಪಿಗೆ ತಾಗಿರುತ್ತಾನೆ.
ಈ ವೇಳೆ ಆರೋಪಿ ಪ್ರಕಾಶ್ ಶೆಟ್ಟಿ ಅಶ್ವಿನ್ ಮೇಲೆ ಹಲ್ಲೆ ನಡೆಸಿ ಅವಾಚ್ಯವಾಗಿ ನಿಂದಿಸಿದ್ದಾನೆ.ಗಲಾಟೆ ಕೇಳಿ ಅಲ್ಲಿಗೆ ಬಂದ ಅಶ್ವಿನ್ ತಾಯಿಯ ಮೇಲೂ ಆರೋಪಿ ಹಲ್ಲೆ ನಡೆಸಿದ್ದಾನಲ್ಲದೆ ಸಾರ್ವಜನಿಕರ ಎದುರೇ ಅವಾಚ್ಯವಾಗಿ ನಿಂದಿಸಿ ಅನುಚಿತವಾಗಿ ವರ್ತಿಸುದ್ದಲ್ಲದೆ ಜೀವಬೆದರಿಕೆಯನ್ನೂ ಹಾಕಿರುವುದಾಗಿ ವೇಣೂರು ಪೊಲೀಸರಿಗೆ ದೂರು ನೀಡಲಾಗಿದೆ.
ಹಲ್ಲೆಗೆ ಒಳಗಾದವರಿಬ್ಬರೂ ಆಸ್ಪತ್ರೆಗೆ ದಾಖಲಾಗಿದ್ದಾರೆ.ವೇಣೂರು ಪೊಲೀಸ್ ಠಾಣೆಯಲ್ಲಿ ಕಲಂ 504, 323, 354, 506 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.