ಬೆಳ್ತಂಗಡಿ: ದಕ್ಷಿಣ ಭಾರತದ ಅಜ್ಮೀರ್ ಎಂದೇ ಪ್ರಖ್ಯಾತಿ ಪಡೆದಿರುವ ಸುಮಾರು 800 ವರ್ಷಗಳಿಗೂ ಅಧಿಕ ಇತಿಹಾಸ ಹೊಂದಿರುವ ನಾಡಿನ ಸರ್ವ ಧರ್ಮೀಯ ಸಮನ್ವಯ ಕೇಂದ್ರ ಕಾಜೂರು ದರ್ಗಾ ಶರೀಫ್ ನ 2024 ನೇ ಸಾಲಿನ ಉರೂಸ್ ಸಮಾರಂಭವು ಮೇ 12ರಂದು ರಾತ್ರಿ ಭಕ್ತಿ ಭಾವದೊಂದಿಗೆ ಸಮಾಪ್ತಿ ಗೊಂಡಿತು. ಮೇ 12ರ ಮಧ್ಯ ರಾತ್ರಿಯಿಂದ ಮೇ 13ರ ಸಂಜೆಯವರೆಗೂ ನಡೆದ ಮಹಾ ಅನ್ನದಾನದಲ್ಲಿ ಸಾವಿರಾರು ಮಂದಿ ಭಾಗಿಯಾದರು.
ಸಯ್ಯಿದ್ ಕುಂಬೋಳ್ ತಂಙಳ್, ಸಯ್ಯಿದ್ ಕೂರತ್ ತಂಙಳ್ ಮತ್ತು ಸಯ್ಯಿದ್ ಕಾಜೂರು ತಂಙಳ್ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ನಡೆದ 10 ದಿನಗಳ ಕಾರ್ಯಕ್ರಮದಲ್ಲಿ ನಾಡಿನುದ್ದಗಲದಿಂದ ಅಲ್ಲದೆ ಅನ್ಯ ರಾಜ್ಯಗಳಿಂದಲೂ ಸಾವಿರಾರು ಭಕ್ತರು ಹಾಗೂ ಔಲಿಯಾ ಪ್ರೇಮಿಗಳು ಭಾಗವಹಿಸಿದ್ದರು.
ಪ್ರತಿ ದಿನ ರಾತ್ರಿ ನಡೆಯುತ್ತಿದ್ದ ಧಾರ್ಮಿಕ ಪ್ರವಚನ ಹಾಗೂ ಉರೂಸಿನ ಎಲ್ಲಾ ಸಾಂಪ್ರದಾಯಿಕ ಕಾರ್ಯಕ್ರಮಗಳಿಗೆ ರವಿವಾರ ಮಧ್ಯ ರಾತ್ರಿಯೇ ತೆರೆಬಿತ್ತು.
ಕಾಜೂರು ಮತ್ತು ಕಿಲ್ಲೂರು ಜಮಾಅತ್ ಒಳಗೊಂಡ 50 ಮಂದಿಯ ಉರೂಸ್ ಸಮಿತಿಯ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಸ್ವಯಂ ಸೇವಕರಾಗಿ ಸೇವೆ ನೀಡಿದರು. ಪೊಲೀಸ್ ಇಲಾಖೆ, ಆರೋಗ್ಯ ಮತ್ತು ಅಗ್ನಿಶಾಮಕ ಇಲಾಖೆ ಸೇರಿದಂತೆ ವಿವಿಧ ಸರಕಾರಿ ಇಲಾಖೆಗಳ ಅಧಿಕಾರಿಗಳು ಸಂಪೂರ್ಣ ಸಹಕಾರ ನೀಡಿದರು.
ಉರೂಸ್ ಪ್ರಯುಕ್ತ ಮದನಿಯಂ ಮಜ್ಲಿಸ್, ದಿಕ್ರ್ ಮಜ್ಲಿಸ್, ಮಹಿಳಾ ಶರೀಅತ್ ಕಾಲೇಜು ‘ಅರ್ರಾಹಿಮಾ’ ಪದವಿ ಪ್ರದಾನ ಕಾರ್ಯಕ್ರಮ, ಬುರ್ದಾ ಮಜ್ಲಿಸ್ ಸುಂದರವಾಗಿ ಮೂಡಿಬಂತು. ಉರೂಸ್ ಕೊನೆಯ ದಿನ ಸರ್ವ ಧರ್ಮೀಯ ಸೌಹಾರ್ದ ಸಮಾರಂಭ ಮತ್ತು ಉರೂಸ್ ಸಮಾರೋಪ ಸಮಾರಂಭ ಜರುಗಿತು. ಕಾಜೂರು ತಂಙಳ್ ವಿಶೇಷ ಸಮಾರೋಪ ದುಆ ಕ್ಕೆ ನೇತೃತ್ವ ನೀಡಿದರು.
ವಿಶ್ವ ಶಾಂತಿಗಾಗಿ ಪ್ರತಿದಿನ ಔಲಿಯಾಗಳ ಸನ್ನಿದಾನದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆದವು.ಉರೂಸ್ ದಿನ ಖತ್ಮುಲ್ ಕುರ್ಆನ್ ಸಮರ್ಪಣೆ, ಬೆಲ್ಲದ ಗಂಜಿ ವಿತರಣೆ, ದಿಡುಪೆ ಯಂಗ್ ಮೆನ್ಸ್ ನೇತೃತ್ವದಲ್ಲಿ ಹತ್ತೂ ದಿನಗಳಲ್ಲಿ ತಂಪು ಪಾನೀಯ ವಿತರಣೆ ನಡೆಯಿತು.
ಕಾರ್ಯಕ್ರಮದುದ್ದಕ್ಕೂ ಜಾತಿ, ಧರ್ಮ ಬೇಧವಿಲ್ಲದೆ ಹಲವಾರು ಮಂದಿ ಭಕ್ತಿ ಶ್ರದ್ಧೆಯಿಂದ ಭಾಗವಹಿಸಿದರು. ಉರೂಸ್ ಪ್ರಯುಕ್ತ ಕಾಜೂರು ಪ್ರದೇಶವನ್ನು ವಿಶೇಷ ರೀತಿಯಲ್ಲಿ ಶೃಂಗರಿಸಲಾಗಿತ್ತು.
ಉರೂಸ್ ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ ಕಾಜೂರು, ಉಪಾಧ್ಯಕ್ಷ ಅಬ್ದುಲ್ ಅಝೀಝ್ ಝುಹುರಿ ಕಿಲ್ಲೂರು, ಪ್ರಧಾನ ಕಾರ್ಯದರ್ಶಿ ಜೆ.ಹೆಚ್ ಅಬೂಬಕ್ಕರ್ ಸಿದ್ದೀಕ್ ಕಾಜೂರು, ಜೊತೆ ಕಾರ್ಯದರ್ಶಿ ಶಾಹುಲ್ ಹಮೀದ್ ಕಿಲ್ಲೂರು, ಕೋಶಾಧಿಕಾರಿ ಕೆ.ಎಮ್ ಕಮಾಲ್ ಕಾಜೂರು ಸಹಿತ ಎಲ್ಲಾ ಪದಾಧಿಕಾರಿಗಳು ಸಂಪೂರ್ಣ ಯಶಸ್ಸಿನಲ್ಲಿ ತೊಡಗಿಸಿಕೊಂಡರು.