ಬೆಳ್ತಂಗಡಿ: ತಾಲೂಕಿನ ಹಲವು ಕಡೆಗಳಲ್ಲಿ ಮಂಗಳವಾರ ಸಾಯಂಕಾಲ ತುಂತುರು-ಸಾಧಾರಣ ಮಳೆಯಾಗಿದ್ದು, ಜನರು ವರುಣ ತಂಪನ್ನೀಯುವ ನಿರೀಕ್ಷೆಯಲ್ಲಿದ್ದಾರೆ.
ಮೇ 7ರಂದು ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದ್ದು, ಸಂಜೆ 4 ಗಂಟೆ ಸುಮಾರಿಗೆ ಬೆಳ್ತಂಗಡಿ, ಗುರುವಾಯನಕೆರೆ, ಮದ್ದಡ್ಕ, ನಾರಾವಿ, ಸುಲ್ಕೇರಿ ಮತ್ತಿತರ ಕಡೆಗಳಲ್ಲಿ ಸಣ್ಣಗೆ ಮಳೆ ಆರಂಭವಾಗಿದೆ. ಒಂದು ಗಂಟೆಗೂ ಅಧಿಕ ಕಾಲ ತುಂತುರು ಮಳೆಯಾಗಿದ್ದು, ನಂತರ ಮತ್ತಷ್ಟು ಚುರುಕಾಗಿ ಮಳೆ ಸುರಿದಿದೆ.
ವಾಹನ ಸವಾರರಿಗೆ ಸಮಸ್ಯೆ: ದಿಢೀರ್ ಮಳೆ ಬಂದ ಕಾರಣ ಜನರು, ರಸ್ತೆಯಲ್ಲಿ ಸಾಗುತ್ತಿದ್ದ ದ್ವಿಚಕ್ರ ವಾಹನ ಸವಾರರು ಒದ್ದೆಯಾದರು. ಅದರಲ್ಲೂ ಪುಂಜಾಲಕಟ್ಟೆ-ಚಾರ್ಮಾಡಿ ರಸ್ತೆ ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿ ಕೆಸರಿನಿಂದ ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ.
ಹವಾಮಾನ ವರದಿ: ಮೇ 8ರಂದು ಬೆಳಗ್ಗೆ 8 ಗಂಟೆಯವರೆಗಿನ ಹವಾಮಾನ ಮುನ್ಸೂಚನೆಯಂತೆ ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಅಲ್ಲಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. ಬೆಳಗ್ಗೆ, ತಡರಾತ್ರಿ ಅಥವಾ ಮೇ 8ರಂದು ಮುಂಜಾನೆ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ಈಗಿನ ವಿಶ್ಲೇಷಣೆ ಪ್ರಕಾರ, ದಕ್ಷಿಣ ಒಳನಾಡಿನಲ್ಲಿ ಮಳೆ ಮುಂದುವರಿಯುವ ಸಾಧ್ಯತೆ ಇದ್ದು, ಮೇ 9ರಿಂದ ಉತ್ತರ ಒಳನಾಡು ಭಾಗಗಳಲ್ಲಿಯೂ ಮಳೆಯಾಗುವ ಲಕ್ಷಣಗಳಿವೆ. ಕರಾವಳಿ ಭಾಗಗಳಲ್ಲಿ ಮೇ 10ರಿಂದ ಮಳೆಯ ವ್ಯಾಪ್ತಿ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ವಿಶ್ಲೇಷಕ ಸಾಯಿಶೇಖರ್ ತಿಳಿಸಿದ್ದಾರೆ.