ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ವಾರ್ಷಿಕ ವಿಷು ಜಾತ್ರಾ ಮಹೋತ್ಸವ ಸಂಪನ್ನ

0

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ವಾರ್ಷಿಕ ವಿಷು ಜಾತ್ರಾ ಮಹೋತ್ಸವವು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ, ವೇದಮೂರ್ತಿ ರಾಮಕೃಷ್ಣ ಕಲ್ಲೂರಾಯ ಅವರ ತಾಂತ್ರಿಕ ವಿಧಿ ವಿಧಾನಗಳೊಂದಿಗೆ ಎ.13ರಂದು ಧ್ವಜಾರೋಹಣದಿಂದ ಮೊದಲ್ಗೊಂದು ಎ.23ರಂದು ಶ್ರೀ ಮಂಜುನಾಥ ಸ್ವಾಮಿಯ ಉತ್ಸವ ಮೂರ್ತಿ ಓಕುಳಿಯಾಗಿ ನೇತ್ರಾವತಿ ನದಿಯಲ್ಲಿ ಅವಬೃತ ಸ್ನಾನ ಹಾಗು ಧ್ವಜಾವರೋಹಣದೊಂದಿಗೆ ಭಕ್ತಿ, ಸಂಭ್ರಮದಿಂದ ವಿದ್ಫ್ಯುಕ್ತವಾಗಿ ಸಂಪನ್ನಗೊಂಡಿತು.

ಎ.22ರಂದು ರಾತ್ರಿ ಶ್ರೀ ಸ್ವಾಮಿಯ ಮಹಾರಥೋತ್ಸವ ಪ್ರಯುಕ್ತ ಶ್ರೀ ಮಂಜುನಾಥಸ್ವಾಮಿ ದೇವಸ್ಥಾನದ ಒಳಾಂಗಣದಲ್ಲಿ ಉತ್ಸವ ಮೂರ್ತಿಯ ಉಡ್ಕು ಹಾಗು ವಿವಿಧ ವಾದ್ಯ ವೈಭವಗಳ ನಾಲ್ಕು ಸುತ್ತು ಬಲಿ ಉತ್ಸವ ನಡೆದು, ಹೊರಾಂಗಣದಲ್ಲಿ  ಚೆಂಡೆ, ನಾದಸ್ವರ, ಶಂಖ ಜಾಗಟೆ, ಬ್ಯಾಂಡ್ ವಾಲಗ, ಸರ್ವ ವಾದ್ಯ, ತಟ್ಟಿರಾಯ ಸಹಿತ  ಪ್ರದಕ್ಷಿಣೆ ಬಂದು  ಬ್ರಹ್ಮ ರಥಕ್ಕೆ ಸುತ್ತು ಪ್ರದಕ್ಷಿಣೆ ಬಂದು ರಥಾರೋಹಣ  ನಡೆಯಿತು. ಕ್ಷೇತ್ರದ ಸಕಲ  ಬಿರುದು ಬಾವಲಿಗಳೊಂದಿಗೆ  ಬಸವ, ಎರಡು ಆನೆಗಳು, ಸಹಸ್ರಾರು ಭಕ್ತಾದಿಗಳು ಮಹೋತ್ಸವದಲ್ಲಿ ಭಾಗಿಗಳಾಗಿದ್ದರು.

ರಥಕ್ಕೆ ಭಕ್ತರು ಬಾಳೆಹಣ್ಣು ಎಸೆದು ತಮ್ಮ ಭಕ್ತಿ ಸಮರ್ಪಿಸಿದರು.ರಥವನ್ನು ಪುಷ್ಪ ಹಾಗು ವಿದ್ದ್ಯುದ್ದೀಪಗಳಿಂದ  ಅಲಂಕರಿಸಲಾಗಿತ್ತು.ಶ್ರೀ ಸ್ವಾಮಿಗೆ ಮಹಾಮಂಗಳಾರತಿ ಬಳಿಕ ನೆರೆದ ಭಕ್ತರು ಗೋವಿಂದಾ ನಾಮಸ್ಮರಣೆಯೊಂದಿಗೆ ರಥವನ್ನು ಶ್ರೀ ಅಣ್ಣಪ್ಪ ಬೆಟ್ಟದ ಬುಡದವರೆಗೆ ಎಳೆತಂದು ಮರಳಿ ಸ್ವಸ್ಥಾನಕ್ಕೆ ತಂದರು.

ಕ್ಷೇತ್ರದ  ವಸಂತ ಮಂಟಪದಲ್ಲಿ ಶ್ರೀ ದೇವರಿಗೆ ವಸಂತ ಪೂಜೆ ನಡೆದು, ಅಷ್ಟಾವಧಾನ ಸೇವೆಯೊಂದಿಗೆ ಮಹೋತ್ಸವ ಸಂಪನ್ನಗೊಂಡಿತು.ಡಾ.ಡಿ.ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ಹೆಗ್ಗಡೆ, ಡಿ.ಸುರೇಂದ್ರ ಕುಮಾರ್, ಡಿ.ಹರ್ಷೇಂದ್ರ ಕುಮಾರ್, ಹೆಗ್ಗಡೆ ಕುಟುಂಬಸ್ಥರು, ಸೋನಿಯಾ ವರ್ಮಾ, ಕೆ.ಎನ್.ಜನಾರ್ದನ, ಜನಾರ್ದನ್ ಎಂ, ಡಾ.ಸತೀಶ್ಚಂದ್ರ ಎಸ್, ಡಾ.ಬಿ.ಎ ಕುಮಾರ ಹೆಗ್ಡೆ, ಡಾ.ಶ್ರೀನಾಥ್ ಎಂ.ಪಿ., ವೀರು ಶೆಟ್ಟಿ,  ಲಕ್ಷ್ಮೀನಾರಾಯಣ ರಾವ್, ಕ್ಷೇತ್ರದ ಅರ್ಚಕ ವೃಂದ, ಸಿಬ್ಬಂದಿಗಳು ಹಾಗು ಊರ ಪರಊರ ಭಕ್ತಾದಿಗಳು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here