ಪತ್ರಿಕಾಗೋಷ್ಠಿ: ಕೇಂದ್ರದಲ್ಲಿ ಸ್ಥಿರ ಸರಕಾರಕ್ಕಾಗಿ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕು: ಪ್ರತಾಪಸಿಂಹ ನಾಯಕ್

0

ಬೆಳ್ತಂಗಡಿ: ಲೋಕಸಭಾ ಚುನಾವಣೆ ಭಾರತದ ಭವಿಷ್ಯವನ್ನು ನಿರ್ಧಾರ ಮಾಡುವ ನಿರ್ಣಾಯಕ ಚುನಾವಣೆಯಾಗಲಿದೆ. ಅದಕ್ಕಾಗಿ ಕಳೆದ 10 ವರ್ಷಗಳಿಂದ ಕೇಂದ್ರದಲ್ಲಿ ಸ್ಥಿರ ಸರಕಾರ, ಗಟ್ಟಿಯಾದ ನಾಯಕತ್ವದಿಂದ ಸ್ಥಿರ ಸರಕಾರ ಬೇಕು ಎಂದು ಭಾರತ ಜಗತ್ತಿಗೆ ತೋರಿಸಿ ಕೊಟ್ಟಿದೆ. ಈ ಬಾರಿ 400ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಜಯ ಗಳಿಸಿ, ಮತ್ತೊಮ್ಮೆ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರಕಾರ ಅಧಿಕಾರಕ್ಕೆ ಬರಲಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಹೇಳಿದರು.

ಎ.23ರಂದು ಬೆಳ್ತಂಗಡಿ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ಆರ್ಥಿಕವಾಗಿ ಪ್ರಬಲವಾಗಿ ಮುನ್ನಡೆಯುತ್ತಿದೆ. ಐಎಂಎಫ್ ವರದಿ ಪ್ರಕಾರ ಜಾಗತಿಕ ಮಟ್ಟದಲ್ಲಿ ಪ್ರಗತಿಯತ್ತ ಸಾಗುತ್ತಿದೆ. 140 ಕೋಟಿ ಜನಸಂಖ್ಯೆ ಇರುವ ದೊಡ್ಡ ದೇಶ ಸ್ಥಿರ ಸರಕಾರದಿಂದ ನಿರಂತರ ಪ್ರಗತಿ ಕಾಣುತ್ತಿದೆ. ದೇಶದ 542 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಕೇವಲ 278 ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಿದ್ದು, ಭಾರತದ ಇತಿಹಾಸದಲ್ಲಿಯೇ ಈ ಬಾರಿ ಕಾಂಗ್ರೆಸ್ 300ಕ್ಕಿಂತ ಕಡಿಮೆ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಿದೆ. ಕಳೆದ ಬಾರಿ ಕೇವಲ 52 ಸ್ಥಾನ ಗೆದ್ದ ಕಾಂಗ್ರೆಸ್ ಈ ಬಾರಿ 40 ಸ್ಥಾನ ಗೆಲ್ಲುವುದೂ ಕಷ್ಟ. ಆದರೆ ಭಾರತೀಯ ಜನತಾ ಪರ‍್ಟಿ 400ಕ್ಕೂ ಮಿಕ್ಕಿ ಸ್ಥಾನ ಗೆಲ್ಲುವ ವಿಶ್ವಾಸ ಇದೆ. ತಮಿಳುನಾಡು, ಕೇರಳ, ತೆಲಂಗಾಣ, ಆಂಧ್ರ ಸಹಿತ ದಕ್ಷಿಣ ಭಾರತದಲ್ಲಿ ಈಗ ಬಿಜೆಪಿ ಬೆಳೆದಿದೆ ಎಂದು ಹೇಳಿದರು.

ಸ್ಥಿರ ಸರಕಾರ ಇದ್ದಾಗ ಗಟ್ಟಿ ನಿರ್ಧಾರಗಳನ್ನು ಕೈಗೊಳ್ಳುವುದು ಸಾಧ್ಯ. ನನೆಗುದಿಗೆ ಬಿದ್ದಿದ್ದ ಹಲವು ಸಮಸ್ಯೆಗಳನ್ನು ಪರಿಹಾರ ಮಾಡಲು ಸಾಧ್ಯವಾಗಿದೆ. ನೆಹರು ಪ್ರಧಾನಿಯಾಗಿದ್ದಾಗ ಶಂಕುಸ್ಥಾಪನೆ ಮಾಡಿದ ಕೆಲಸಗಳನ್ನು ಮೋದಿ ಸರಕಾರ ಮಾಡಿದೆ. ಅದಕ್ಕಾಗಿ ಮತದಾರರು ಸದೃಢ ಸರಕಾರ ಬಯಸಿದ್ದಾರೆ. ದೇಶದ ಆರ್ಧಿಕ ಪರಿಸ್ಥಿತಿ 10ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಬಂದಿದೆ. ಮುಂದೆ 3ನೇ ಸ್ಥಾನಕ್ಕೆ ಬರಲಿದೆ. ಇದು ರಾಷ್ಟ್ರದ ಭವಿಷ್ಯವನ್ನು ರೂಪಿಸುವ ಲೋಕಸಭಾ ಚುನಾವಣೆಯಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ಶ್ರೀನಿವಾಸ ರಾವ್, ಜಿಲ್ಲಾ ಉಪಾಧ್ಯಕ್ಷ ಜಯಂತ ಕೋಟ್ಯಾನ್, ಮಾಧ್ಯಮ ಪ್ರತಿನಿಧಿ ರಾಜೇಶ್ ಪರ‍್ಮುಡ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here