ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ಬಿ.ವೊಕ್ ವಿಭಾಗದದಿಂದ ರಾಷ್ಟ್ರಮಟ್ಟದ ಫ್ಯಾಕಲ್ಟಿ ಡೆವಲಪ್ಮೆಂಟ್ ಕಾರ್ಯಾಗಾರ

0

ಉಜಿರೆ: ನೂತನ ತಾಂತ್ರಿಕ ವೇದಿಕೆಗಳ ನೆರವಿನೊಂದಿಗೆ ಪಠ್ಯದ ಮಹತ್ವದ ಅಂಶಗಳನ್ನು ಮೊದಲೇ ತಿಳಿದುಕೊಳ್ಳುವ ಅವಕಾಶ ವಿದ್ಯಾರ್ಥಿಗಳಿಗೆ ಲಭ್ಯವಾಗಿರುವುದರಿಂದ ಅಧ್ಯಾಪಕರು ತರಗತಿ ಬೋಧನೆಯನ್ನು ಪ್ರತಿವರ್ಷವೂ ನವೀಕರಿಸಿಕೊಳ್ಳಬೇಕಾದ ಸವಾಲು ಎದುರಿಸುತ್ತಿದ್ದಾರೆ. ಬೌದ್ಧಿಕ ಮತ್ತು ತಾಂತ್ರಿಕ ಪರಿಣತಿಯ ಆಧಾರದಲ್ಲಿ ಈ ಸವಾಲನ್ನು ಯಶಸ್ವಿಯಾಗಿ ನಿರ್ವಹಿಸಬಹುದು ಎಂದು ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ಎ.ಕುಮಾರ ಹೆಗ್ಡೆ ಅಭಿಪ್ರಾಯಪಟ್ಟರು.

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಬಿ.ವೋಕ್ ರಿಟೇಲ್ ಮತ್ತು ಸಪ್ಲೈ ಚೇನ್ ಮ್ಯಾನೇಜ್‌ಮೆಂಟ್ ವಿಭಾಗವು ಕಲಿಕಾ ಪ್ರಕ್ರಿಯೆಯ ಪ್ರಾಯೋಗಿಕ ಸೃಜನಾತ್ಮಕ ಪರಿಕರಗಳ ಕುರಿತು ಆಯೋಜಿಸಿದ್ದ ಒಂದು ದಿನದ ರಾಷ್ಟ್ರಮಟ್ಟದ ಫ್ಯಾಕಲ್ಟಿ ಡೆವಲಪ್ಮೆಂಟ್ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತಂತ್ರಜ್ಞಾನದ ಆವಿಷ್ಕಾರಗಳ ಪ್ರಯೋಜನಗಳು ವಿಸ್ತಾರಗೊಂಡಂತೆಲ್ಲಾ ಹೊಸ ತಲೆಮಾರಿನ ವಿದ್ಯಾರ್ಥಿ ಸಮೂಹ ಜ್ಞಾನಾರ್ಜನೆಯ ವಿವಿಧ ಮಾರ್ಗಗಳನ್ನು ಕಂಡುಕೊAಡಿದ್ದಾರೆ. ತರಗತಿಗೆ ಹಾಜರಾಗುವ ಮುನ್ನವೇ ಪಠ್ಯದ ಕುರಿತು ತಿಳಿದುಕೊಂಡು ಬರುವ ಅವರಿಗೆ ಹೊಸದಾದ ಅಂಶಗಳನ್ನು ದಾಟಿಸಬೇಕಾಗುತ್ತದೆ. ಅವರು ತಿಳಿದುಕೊಂಡಿದ್ದನ್ನಷ್ಟೇ ಹೇಳುವುದರ ಬದಲು ಹೊಸತಾದುದನ್ನು ಹೇಳಿದಾಗ ಮಾತ್ರ ಬೋಧನೆ ಪರಿಣಾಮಕಾರಿಯೆನ್ನಿಸುತ್ತದೆ ಎಂದು ಹೇಳಿದರು.

ಬೌದ್ಧಿಕ ಸಾಮರ್ಥ್ಯ ಮತ್ತು ತಾಂತ್ರಿಕ ಪರಿಣತಿಯೊಂದಿಗೆ ಅಧ್ಯಾಪಕರು ತರಗತಿಗಳಲ್ಲಿ ಸೃಜನಶೀಲ ಅಭಿವ್ಯಕ್ತಿ ಸಾಧಿಸಬೇಕು. ತ್ವರಿತ ಗತಿಯಲ್ಲಿ ಅರ್ಥೈಸಿಕೊಳ್ಳುವವರು, ನಿಧಾನ ಗತಿಯಲ್ಲಿ ಕಲಿಕೆಯನ್ನು ಸಾಧ್ಯವಾಗಿಸಿಕೊಳ್ಳುವವರು ಮತ್ತು ಕಲಿಕೆಯ ಹಾದಿಯಲ್ಲಿ ಹಿಂದುಳಿದ ವಿದ್ಯಾರ್ಥಿಗಳು ಒಂದೇ ತರಗತಿಯಲ್ಲಿ ಕಾಣಸಿಗುತ್ತಾರೆ. ಅಂಥವರನ್ನು ದೃಷ್ಟಿಯಲ್ಲಿರಿಸಿಕೊಂಡು ಎಲ್ಲರಿಗೂ ಅನ್ವಯವಾಗುವಂತೆ ಬೋಧನೆಯನ್ನು ಪ್ರಭಾವೀಯಾಗಿಸಿಕೊಳ್ಳಬೇಕು ಎಂದರು.ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿ, ಚೆನ್ನೈನ ಎನ್.ಎಲ್.ಪಿ ತರಬೇತುದಾರ, ಮಾರಾಟ ತಂತ್ರಜ್ಞ ಸಲಹೆಗಾರ ರಮಣಿ ವೆಂಕಟ್ ಅವರು ವಿದ್ಯಾರ್ಥಿಗಳ ಗಮನ ಬೋಧನೆಯೊಂದಿಗೆ ನಿರಂತರವಾಗಿ ಕೇಂದ್ರೀಕೃತವಾಗುವಂತಹ ಕಾರ್ಯತಂತ್ರಗಳನ್ನು ಅನುಸರಿಸಿದಾಗ ಮಾತ್ರ ತರಗತಿಯ ಯಶಸ್ವಿ ನಿರ್ವಹಣೆ ಸಾಧ್ಯವಾಗುತ್ತದೆ ಎಂದರು.

ಎಸ್. ಡಿ. ಎಂ. ಕಾಲೇಜಿನ ಉಪ ಪ್ರಾಂಶುಪಾಲ ಶಶಿಶೇಖರ ಎನ್. ಕಾಕತ್ಕರ್ ಅಧ್ಯಕ್ಷೀಯ ನುಡಿಗಳನ್ನಾಡಿದರು. ಉತ್ತಮ ಬೋಧಕ ಬೋಧಿಸುತ್ತಾನೆ. ಅತ್ಯುತ್ತಮ ಬೋಧಕ ವಿದ್ಯಾರ್ಥಿಯ ತಿಳುವಳಿಕೆಯನ್ನು ವಿಸ್ತರಿಸುವ ಹಾಗೆ ಸ್ಫೂರ್ತಿ ನೀಡುತ್ತಾನೆ. ಈ ನಿಟ್ಟಿನಲ್ಲಿ ಆಲೋಚಿಸುವಂತೆ ಫ್ಯಾಕಲ್ಟಿ ಡೆವೆಲೆಪ್‌ಮೆಂಟ್ ಕಾರ್ಯಾಗಾರಗಳು ಬೋಧಕರಿಗೆ ಮಾರ್ಗದರ್ಶನ ನೀಡುತ್ತವೆ. ತಂತ್ರಜ್ಞಾನದ ಜ್ಞಾನದೊಂದಿಗೆ ಬೋಧನೆಯ ವಿಧಾನವನ್ನು ಉನ್ನತೀಕರಿಸಿಕೊಳ್ಳುವುದರ ಕಡೆಗೆ ಬೋಧಕರು ಗಮನಹರಿಸುವುದಕ್ಕೆ ಸ್ಫೂರ್ತಿ ನೀಡುತ್ತವೆ ಎಂದರು.

ಬಿ.ವೋಕ್ ರಿಟೇಲ್ ಮತ್ತು ಸಪ್ಲೈ ಚೇನ್ ಮ್ಯಾನೇಜ್‌ಮೆಂಟ್ ವಿಭಾಗದ ಮುಖ್ಯಸ್ಥ ಅಶ್ವಿತ್ ಹೆಚ್.ಆರ್ ಸ್ವಾಗತಿಸಿದರು. ಬಿ.ವೋಕ್ ಸಂಯೋಜಕರಾದ ಸುವೀರ್ ಜೈನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮ ಸಂಯೋಜಕರಾದ ಪ್ರವೀಣ್ ಡಿ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿ ರಮಣಿ ವೆಂಕಟ್ ಅವರನ್ನು ಪರಿಚಯಿಸಿದರು. ಸಹಾಯಕ ಪ್ರಾಧ್ಯಾಪಕರಾದ ಶಶಾಂಕ್ ಬಿ.ಎಸ್ ವಂದಿಸಿದರು. ಸಹಾಯಕ ಪ್ರಾಧ್ಯಾಪಕಿ ಮಾಧುರಿ ಗೌಡ ನಿರೂಪಿಸಿದರು.

LEAVE A REPLY

Please enter your comment!
Please enter your name here