ಕುತ್ಲೂರು: ಶ್ರೀ ಕೊಡಮಣಿತ್ತಾಯ ದೈವದ ವರ್ಷಾವಧಿ ಜಾತ್ರೆ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಎ.13ರಿಂದ ಎ.17ರ ವರೆಗೆ ನಡೆಯಿತು.
ಎ.13ರಂದು ಮೇಷ ಸಂಕ್ರಮಣ ದಿನ ಬೆಳಿಗ್ಗೆ ಪರುಷಗುಡ್ಡೆ ಬಸದಿ ಶ್ರೀ ಶಾಂತಿನಾಥ ಸ್ವಾಮಿಗೆ ಕ್ಷೀರಾಭಿಷೇಕ, ಮಹಾಮಾತೆ ಪದ್ಮಾವತಿ ದೇವಿಗೆ ಮಹಾಪೂಜೆ ಹಾಗೂ ದೈವಸ್ಥಾನದಲ್ಲಿ ಗಣಹೋಮ ಮತ್ತು ಪರ್ವ ಸಂಕ್ರಾಂತಿ, ಸಂಜೆ ಪಾಂಡ್ಯಪ್ಪರೆ ಗುತ್ತಿನಿಂದ ಶ್ರೀ ಕೊಡಮಣಿತ್ತಾಯ ದೈವದ ಭಂಡಾರ ಇಳಿಯುವುದು, ದೈವಸ್ಥಾನಕ್ಕೆ ಆಗಮನ, ಧ್ವಜಾರೋಹಣ, ಬಲಿ, ಚೆಂಡು, ರಾತ್ರಿ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ, ಸುಂಕದಕಟ್ಟೆ ಬಜ್ಪೆ ಇವರಿಂದ ಶ್ರೀ ಕೃಷ್ಣ ಲೀಲಾ ಮೃತ ಮತ್ತು ಕೋಟಿ ಚೆನ್ನಯ ಪುಣ್ಯ ಕಥಾಭಾಗ ನಡೆಯಿತು.
ಎ.14ರಂದು ಭೂತಬಲಿ, ಉತ್ಸವ ಇತ್ಯಾದಿ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ರಾತ್ರಿ ಶಬರಿ ಕಲಾವಿದೆರ್ ನಾರಾವಿ ಇವರಿಂದ ತುಳು ಜಾನಪದ ಹಾಸ್ಯಮಯ ನಾಟಕ ಡೆನ್ನಾನ ನಡೆಯಿತು.
ಎ.15ರಂದು ಮಧ್ಯಾಹ್ನ ಮಹಾಪೂಜೆ, ಹೂವಿನ ಪೂಜೆ, ಅನ್ನಸಂತರ್ಪಣೆ, ಸಾಯಂಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದು, ಧಾರ್ಮಿಕ ಸಭೆ ನಡೆದು ಎನ್.ಜೀವಂಧರ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದರು.ಬಳಿಕ ಧಾರ್ಮಿಕ ಉಪನ್ಯಾಸ ಮೂಡುಬಿದ್ರೆ ಎಕ್ಸ್ಲೆಂಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್, ಮುಖ್ಯ ಅತಿಥಿಗಳಾಗಿ ಅಳದಂಗಡಿ ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾನ ಸಮಿತಿ ಅಧ್ಯಕ್ಷ ಗಂಗಾಧರ್ ಮಿತ್ತಮಾರ್, ಮೀಯರು ಉದ್ಯಮಿ ಮಹಮ್ಮದ್ ಗೌಸ್ ಭಾಗವಹಿಸಿದ್ದರು.
ರಾತ್ರಿ ಉತ್ಸವ ಮತ್ತು ಕೊಡಮಣಿತ್ತಾಯ ದೈವದ ಹಾಗೂ ಪರಿವಾರ ದೈವಗಳ ನೇಮೋತ್ಸವ, ಎ.16ರಂದು ಧ್ವಜಾವರೋಹಣ, ಭಂಡಾರ ಹಿಂತಿರುಗುವುದು. ಎ.17ರಂದು ಬೆಳಿಗ್ಗೆ ಪಾಂಡ್ಯಪ್ಪರೆ ಗುತ್ತಿನಿಂದ ಶ್ರೀ ಕೊಡಮಣಿತ್ತಾಯ ದೈವದ ಭಂಡಾರ ಇಳಿಯುವುದು. ದೈವಸ್ಥಾನಕ್ಕೆ ಆಗಮನ ಕುರುಸಂಬಿಲ ನೇಮ ನಡೆದು ಜಾತ್ರೆ ಸಂಪನ್ನಗೊಂಡಿತು.