ಗುರುವಾಯನಕೆರೆ: ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ‘ಯೂಥ್ ಡೇ’ ಕಾರ್ಯಕ್ರಮ

0

ಗುರುವಾಯನಕೆರೆ: ಇಲ್ಲಿನ ವಿದ್ಯಾಸಾಗರ ಕ್ಯಾಂಪಸ್ ನಲ್ಲಿ ಸ್ಥಾಪಿತವಾಗಿರುವ ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭಾರ್ಥವಾಗಿ ‘ಯೂಥ್ ಡೇ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಮಂಗಳೂರು ಕಿಟ್ಟಲ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಿಠಲ್ ಅಬುರರವರು ಮಾತನಾಡಿ, ದ್ವಿತೀಯ ಪಿಯೂಸಿ ಫಲಿತಾಂಶದಲ್ಲಿ ಶೇ.100 ಫಲಿತಾಂಶವನ್ನು ತಂದುಕೊಟ್ಟದ್ದು ಮಾತ್ರವಲ್ಲದೇ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ತೇರ್ಗಡೆಹೊಂದಿರುವುದು ಈ ವಿದ್ಯಾಸಂಸ್ಥೆಗೆ ಕೊಡಮಾಡಲ್ಪಡುವ ಅತ್ಯಂತ ದೊಡ್ಡ ಬೀಳ್ಕೊಡುಗೆಯ ಉಡುಗೊರೆಯಾಗಿದೆ. ದಕ್ಷಿಣ ಕನ್ನಡದ ಶಿಕ್ಷಣ ಕಾಶಿಯಲ್ಲಿ ಗುರುವಾಯನಕೆರೆಯ ಎಕ್ಸೆಲ್ ಸಂಸ್ಥೆಯು ತನ್ನದೇ ಆದ ಗುರುತರವನ್ನು ಇಟ್ಟುಕೊಂಡು ಛಾಪು ಮೂಡಿಸಿದೆ.

ಈ ನಿಟ್ಟಿನಲ್ಲಿ ಸಮಾಜಕ್ಕೆ ತೆರೆದುಕೊಳ್ಳುತ್ತಿರುವ , ಸಮಾಜ ನಿರ್ಮಾಣ ಕೈಂಕರ್ಯದಲ್ಲಿ ತೊಡಗಿಕೊಳ್ಳುವ ವಿದ್ಯಾರ್ಥಿಗಳು ಜೀವನ ಕೌಶಲ್ಯವನ್ನು ವೃದ್ಧಿಸಿಕೊಳ್ಳಬೇಕು. ಜಗತ್ತಿನ ಮಾಹಿತಿ ಸಂಗ್ರಹವನ್ನು ಹಿಡಿದಿಟ್ಟುಕೊಂಡು ಆಳುತ್ತಿರುವ ಮೊಬೈಲ್ ಗಳ ಕಡೆಗೆ ಹೆಚ್ಚು ಆಕರ್ಷಿತರಾಗದೆ ನಮ್ಮದೇ ಆದ ಸಾಧನೆಯತ್ತ ನಿದ್ದೆಯನ್ನು ತೊರೆದು ನಿರಂತರವಾದ ಪರಿಶ್ರಮದೊಂದಿಗೆ ಸಾಗಬೇಕು. ಸಾಧಕರ ಜೀವನದಲ್ಲಿ ನಿದ್ದೆಯೆಂಬುದು ನಗಣ್ಯ. ನಿದ್ದೆಗೆ ಪ್ರಾಧಾನ್ಯತೆಯಿಲ್ಲ. ಆಧುನಿಕ ತಂತ್ರಜ್ಞಾನದ ಅತಿಯಾದ ಬಳಕೆಯಿಂದ ನಾವು ನಮ್ಮ ಗುರಿಯ ಪಥವನ್ನು ಕಳೆದುಕೊಳ್ಳುವಂತಾಗುವುದು. ಇಂದು ಅತಿಯಾಗಿ ಮೋಸ ಹೋಗುತ್ತಿರುವುದು ಮತ್ತು ಮೋಸ ಮಾಡುತ್ತಿರುವುದು ಹೆಚ್ಚಿನ ಶಿಕ್ಷಣ ಪಡೆದುಕೊಂಡವರು. ಅನಕ್ಷರಸ್ಥ ಜನರಿಂದ ಸಮಾಜದ ಸ್ವಾಸ್ಥ್ಯ ಕೆಡಲಿಲ್ಲ. ಭಾರತ ಸಾಫ್ಟ್ವೇರ್ ಕ್ಷೇತ್ರದಲ್ಲಿ ವೇಗವಾದ ಬೆಳವಣಿಗೆ ಪಡೆದಿದೆ. ಆದರೆ ಇಂದು ಅತಿಯಾಗಿ ವ್ಯಯಿಸುತ್ತಿರುವುದು ಅದರ ಸುರಕ್ಷತೆಗಾಗಿ. ಜೀವನದ ಸುಖಾನುಭವಕ್ಕೆ ಪರಿಶ್ರಮ ಅತ್ಯಗತ್ಯ ಎಂದು ತಿಳಿಸಿದರು. ಬಳಿಕ ಅತಿಥಿಯಾಗಿ ಆಗಮಿಸಿದ ಡಾ. ಪ್ರದೀಪ್ ನಾವೂರರವರು ಮಾತನಾಡಿ, ನಾವು ಪ್ರೇರಣೆಯನ್ನು ಪಡೆಯಲು ಅನೇಕ ದೃಷ್ಟಾಂತಗಳು ಇಂದು ನಮ್ಮ ಕಣ್ಣ ಮುಂದೆ ಇವೆ. ಹನುಮಂತನ ಉಪದೇಶದಂತೆ ಹಗಲು ರಾತ್ರಿ ಎಂದೆನಿಸದೇ ಘನತತ್ತ್ವದ ಸಾಧನೆಗಾಗಿ ನಮ್ಮ ಜೀವನದ ಬಹುಪಾಲು ಸಮಯವನ್ನು ವ್ಯಯಿಸಬೇಕು. ಈ ಮಧ್ಯೆ ಎದುರಾಗುವ ಸವಾಲುಗಳನ್ನು ಗೆಲ್ಲುವ ಮೆಟ್ಟಿಲುಗಳನ್ನಾಗಿ ರೂಪಿಸಿಕೊಳ್ಳಬೇಕು.

ಮನಸ್ಸನ್ನು ವಿಚಲಿತಗೊಳಿಸುವ ಯಾವುದೇ ಸಂಗತಿಯಾದರೂ ತಡೆ ಹಿಡಿದು ಪರಿಶ್ರಮ ಪಡಬೇಕು. ದೊರೆತ ಕಾರ್ಯವನ್ನು ಸಾವಧಾನದಿಂದ ನಮ್ಮ ಪಾಲಿನ ಕರ್ತವ್ಯ ಎಂದು ನಿಭಾಯಿಸಬೇಕು. ಅನೇಕ ಸಾಧಕರ ಜೀವನದಲ್ಲಿ ಕರ್ತವ್ಯ ಪಾಲನೆ ಎಂಬುದು ಕೊನೆ ಘಳಿಗೆಯ ಗೆಲುವಿನ ಶಿಖರವಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ ನೀಟ್ ಪರೀಕ್ಷೆಗೆ ಕ್ಷಣಗಣನೆ ಎದುರಿಸುತ್ತಿರುವ ವಿದ್ಯಾರ್ಥಿಗಳು ಧೃತಿಗೆಡದೆ ಧೈರ್ಯದಿಂದ ಎದುರಿಸಿ ಗೆಲುವಿನ ಹಾದಿ ತಲುಪಬೇಕು ಎಂದು ಶುಭ ಹಾರೈಸಿದರು. ನಂತರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಸಂಸ್ಥೆಯ ಸ್ಥಾಪಕರಾದ ಸುಮಂತ್ ಕುಮಾರ್ ಜೈನ್ ರವರು ಮಾತನಾಡಿ, ಎಕ್ಸೆಲ್ ಸಂಸ್ಥೆಯು ಶಿಕ್ಷಣ ಕ್ಷೇತ್ರದಲ್ಲೇ ಅಭೂತಪೂರ್ವವಾದ ಸಾಧನೆ ಗೈದು ಗೆಲುವಿನ ಮೈಲುಗಲ್ಲನ್ನೂ ದಾಟಿ ವಿಜಯದ ಪತಾಕೆಯನ್ನು ನಾಡಿನಾದ್ಯಂತ ಹಾರಿಸಿರುವುದು ಸಂತಸ ತಂದಿದೆ. ಈ ತರನಾದ ಫಲಿತಾಂಶಕ್ಕೆ ಶಿಕ್ಷಣ ಸಂಸ್ಥೆಯು ಹೊಂದಿದ ವ್ಯವಸ್ಥೆಯೇ ಪ್ರಮುಖ ಕಾರಣವಾಗಿದೆ.

ವಿದ್ಯಾರ್ಥಿ ಜೀವನದಲ್ಲಿ ಹಾಸ್ಟೆಲ್ ಜೀವನವೆಂಬುವುದು ಒಂದು ಭವಿಷ್ಯದಲ್ಲಿ ಕಷ್ಟ ಒದಗಿಬಂದರೂ ನಿರ್ಭೀತಿಯಿಂದ ಬದುಕಲು ಬೇಕಾದ ಜೀವನ ಪಾಠವನ್ನು ಕಲಿಸಿಕೊಡುತ್ತದೆ. ಹಾಸ್ಟೆಲ್ ನಿಯಮಗಳು ಹಾಗೂ ಸಂಸ್ಥೆಯು ರೂಪಿಸಿಕೊಂಡ ವ್ಯವಸ್ಥೆಯು ಇಂದು ವಿದ್ಯಾರ್ಥಿಗಳು ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳುವುದಲ್ಲದೇ ಅತ್ಯುತ್ತಮವಾದ ಫಲಿತಾಂಶವನ್ನು ಪಡೆಯಲು ಸಾಧ್ಯವಾಯಿತು ಎಂದರು. ಈ ಬಾರಿಯ ದ್ವಿತೀಯ ಪಿಯೂಸಿ ಫಲಿತಾಂಶದಲ್ಲಿ ರಾಜ್ಯ ಮಟ್ಟದಲ್ಲೇ ಅತ್ಯುತ್ತಮವಾಗಿ ವಿಜಯ ಸಾಧಿಸಿದ ಮಕ್ಕಳಿಗೆ ಹೆತ್ತವರ ಸಮ್ಮುಖದಲ್ಲಿ ಸನ್ಮಾನ ಮಾಡಲಾಯಿತು.ಒಟ್ಟು 459 ಮಕ್ಕಳು ಪರೀಕ್ಷೆಯಲ್ಲಿ ಭಾಗವಹಿಸಿದ್ದು 359 ಮಕ್ಕಳು ಡಿಸ್ಟಿಂಕ್ಷನ್ ಪಡೆದಿದ್ದು ಉಳಿದೆಲ್ಲಾ ಮಕ್ಕಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಗೊಂಡು ಶೇ.100 ಫಲಿತಾಂಶಕ್ಕೆ ಕಾರಣೀಭೂತರಾಗಿರುತ್ತಾರೆ.

ಮುಖ್ಯವಾಗಿ ಅನುಪ್ರಿಯಾ 594 (ರಾಜ್ಯಕ್ಕೆ 5ನೇ ಸ್ಥಾನ , ತಾಲೂಕಿಗೆ ಪ್ರಥಮ ಸ್ಥಾನ), ಆಶ್ರಿತಾ ಜೈನ್ 592 ( ರಾಜ್ಯಕ್ಕೆ 7ನೇ ಸ್ಥಾನ, ತಾಲೂಕಿಗೆ ದ್ವಿತೀಯ ) ಅಭಿಷೇಕ್ ವೈ ಎಸ್, ಧನ್ವಿ ಭಟ್ , ತನ್ಮಯಿ ಶ್ಯಾನ್ ಭಾಗ್, ಕೃತ್ತಿಕಾ ಸಿ. ಬಿ. ತಲಾ 591 ( ರಾಜ್ಯಕ್ಕೆ 8ನೇ ಸ್ಥಾನ, ತಾಲೂಕಿಗೆ ತೃತೀಯ ) ಪಡೆದಿರುತ್ತಾರೆ. ಇದರೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ಹಾಗೂ ಪ್ರತಿ ವಿಷಯದಲ್ಲೂ ನೂರು ಅಂಕಗಳನ್ನು ಪಡೆದ ವಿದ್ಯಾಥಿಗಳನ್ನೂ ಗುರುತಿಸಲಾಯಿತು.

ಈ ಸಂಭ್ರಮಾಚರಣೆಯ ಜೊತೆಯಲ್ಲಿಯೇ ಸಂಸ್ಥೆಯ ಸಂಸ್ಥಾಪಕರಾದ ಸುಮಂತ್ ಕುಮಾರ್ ಜೈನ್ ರವರ ಜನ್ಮದಿನದ ಆಚರಣೆಯನ್ನು ಶಿಕ್ಷಕರೆಲ್ಲರೂ ಜೊತೆಗೂಡಿ ಸಂಭ್ರಮಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಂಸ್ಥೆಯ ಪ್ರಾಂಶುಪಾಲರಾದ ಡಾ. ನವೀನ್ ಮರಿಕೆ ಸ್ವಾಗತ ಮಾಡಿದರು. ಹಾಗೆಯೇ ಶಿಕ್ಷರಾದ ಈಶ್ವರ್ ಶರ್ಮಾ ಮತ್ತು ಅಂಜನಿ ಕಾರ್ಯಕ್ರಮವನ್ನು ನಿರೂಪಿಸಿ, ಪ್ರಜ್ವಿತ್ ರೈ ರವರು ಧನ್ಯವಾದ ಸಮರ್ಪಿಸಿದರು.

LEAVE A REPLY

Please enter your comment!
Please enter your name here