ಬೆಳಾಲು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಶಿಕ್ಷಕ ರಕ್ಷಕ ಸಂಘ ಮತ್ತು ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಕ್ರೀಡೆ ಮತ್ತು ಮನೋಲ್ಲಾಸ ಶಿಬಿರ ಆರಂಭವಾಯಿತು.
ಶಿಬಿರದ ಉದ್ಘಾಟನೆಯನ್ನು ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಶೇಖರ ಗೌಡ ಕೊಲ್ಲಿಮಾರ್ ರವರು ನೆರವೇರಿಸಿ ಮಾತನಾಡುತ್ತಾ, ಬೆಳಾಲು ಪ್ರೌಢಶಾಲೆಯಲ್ಲಿ ನಿರಂತರವಾಗಿ ಬೇಸಿಗೆ ಶಿಬಿರವು ಆಯೋಜನೆಗೊಳ್ಳುತ್ತಿದೆ.ಶಿಬಿರದ ಮೂಲಕ ವಿದ್ಯಾರ್ಥಿಗಳು ವಿಶೇಷ ತರಬೇತಿ ಮತ್ತು ಜ್ಞಾನವನ್ನು ಪಡೆದು, ಬದುಕಿನ ಸವಾಲುಗಳನ್ನು ಎದುರಿಸುವ ಆತ್ಮವಿಶ್ವಾಸ ಪಡೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಚರು. ಅತಿಥಿಗಳಾಗಿ ಆಗಮಿಸಿದ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಣೇಶ ಕನಿಕ್ಕಿಲ ಶುಭಕೋರಿದರು.
ಒಂದು ವಾರದ ಶಿಬಿರದಲ್ಲಿ ರಂಗಕಲೆ, ಗಾಯನ, ಕರಕುಶಲ, ಉಜಿರೆ ಶ್ರೀ ಧ ಮ ಕಾಲೇಜು ಭೇಟಿ, ಆರೋಗ್ಯ ಮಾಹಿತಿ, ಕತೆಗಳಲ್ಲಿ ಜೀವನ ಮೌಲ್ಯ, ಬರವಣಿಗೆ ಕಲೆ ಮೊದಲಾದ ವಿಷಯಗಳಲ್ಲಿ ತರಬೇತಿ ನಡೆಯಲಿದೆ. ವಿವಿಧ ಸಂಪನ್ಮೂಲ ವ್ಯಕ್ತಿಗಳು ಆಗಮಿಸಲಿದ್ದಾರೆ.
ಮೊದಲ ದಿನದ ಶಿಬಿರದಲ್ಲಿ ಕರಕುಶಲ ತಯಾರಿಯ ಬಗ್ಗೆ ಚಿತ್ರಕಲಾ ಶಿಕ್ಷಕ ಉಜಿರೆಯ ಶ್ರೀರಾಮ್ ಮತ್ತು ಕಾದಂಬರಿ ಧರ್ಮಸ್ಥಳ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿಯನ್ನು ನೀಡಿದರು.
ಉದ್ಘಾಟನಾ ಸಮಾರಂಭದಲ್ಲಿ ಶಿಬಿರದ ಸಂಯೋಜಕ ಕೃಷ್ಣಾನಂದ, ಸುಮನ್ ಯು ಎಸ್, ಕೋಕಿಲ, ಚಿತ್ರಾ ಉಪಸ್ಥಿತರಿದ್ದರು.ವಿದ್ಯಾರ್ಥಿಗಳಾದ ರಕ್ಷಾ ಸ್ವಾಗತಿಸಿ, ಚಿನ್ಮಯಿ ವಂದಿಸಿದರು, ಇಂದುಮತಿ ಕಾರ್ಯಕ್ರಮ ನಿರೂಪಿಸಿದರು.